Asianet Suvarna News Asianet Suvarna News

ಮೋದಿ 3.0 ಸರ್ಕಾರದ 100 ದಿನದ ಅಜೆಂಡಾ ಸಿದ್ಧ

ಲೋಕಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ನಡುವೆಯೇ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ 8 ಗಂಟೆಗಳ ಕಾಲ ಮಂತ್ರಿಮಂಡಲದ ಸಭೆ ನಡೆಸಿದ್ದು, ‘ಮೋದಿ-3 ಸರ್ಕಾರ’ ಅಧಿಕಾರಕ್ಕೆ ಬಂದರೆ ಮೊದಲ 100 ದಿನಗಳ ಆಡಳಿತ ಹೇಗಿರಬೇಕು ಎಂಬ ಕಾರ್ಯಸೂಚಿಯನ್ನು ಸಚಿವರಿಗೆ ನೀಡಿದ್ದಾರೆ. 

Loksabha election 2024 100 day agenda of Modi 3.0 government is ready akb
Author
First Published Mar 4, 2024, 6:39 AM IST

ನವದೆಹಲಿ: ಲೋಕಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ನಡುವೆಯೇ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ 8 ಗಂಟೆಗಳ ಕಾಲ ಮಂತ್ರಿಮಂಡಲದ ಸಭೆ ನಡೆಸಿದ್ದು, ‘ಮೋದಿ-3 ಸರ್ಕಾರ’ ಅಧಿಕಾರಕ್ಕೆ ಬಂದರೆ ಮೊದಲ 100 ದಿನಗಳ ಆಡಳಿತ ಹೇಗಿರಬೇಕು ಎಂಬ ಕಾರ್ಯಸೂಚಿಯನ್ನು ಸಚಿವರಿಗೆ ನೀಡಿದ್ದಾರೆ. ಅಲ್ಲದೆ, 2047ಕ್ಕೆ ದೇಶವು ‘ಅಭಿವೃದ್ಧಿ ಹೊಂದಿದ ರಾಷ್ಟ್ರ’ (ವಿಕಸಿತ ಭಾರತ) ಆಗಲು ಏನೇನು ಮಾಡಬೇಕು ಎಂಬ ದೂರದೃಷ್ಟಿ ಯೋಜನೆಯನ್ನು ಮಂಡಿಸಿದರು.

ಲೋಕಸಭೆ ಚುನಾವಣೆಗೂ ಮುನ್ನ ಕಡೆಯದಾದ ಹಾಗೂ ಮಧ್ಯಾಹ್ನದಿಂದಲೇ ಆರಂಭವಾದ ಸಭೆಯಲ್ಲಿ ಸಚಿವರು ತಮ್ಮ ಇಲಾಖೆಯ ಕುರಿತ ಹಲವು ಅಭಿಪ್ರಾಯಗಳನ್ನು ಹಾಗೂ ಕಾರ್ಯಸೂಚಿಗಳನ್ನು ಮಂಡಿಸಿದರು. ಇದಕ್ಕೆ ಬಳಿಕ ತಮ್ಮ 1 ತಾಸಿನ ಸುದೀರ್ಘ ಭಾಷಣದಲ್ಲಿ ಉತ್ತರ ನೀಡಿ ‘ವಿಕಸಿತ ಭಾರತ’ದ ಅಜೆಂಡಾ ಮಂಡಿಸಿದ ಮೋದಿ, ‘ತಂತ್ರಜ್ಞಾನ ಹಾಗೂ ಆವಿಷ್ಕಾರ ವಿಷಯದಲ್ಲಿ ಭಾರತ ವಿಶ್ವದಲ್ಲೇ ಮುಂಚೂಣಿಯಲ್ಲಿರಬೇಕು. ಯೋಜನೆಯು ಸೂಕ್ತ ರೀತಿಯಲ್ಲಿ ಕಾರ್ಯಗತವಾದರೆ ನಾಗರಿಕರನ್ನು ಸಬಲೀಕರಣಗೊಳಿಸುವುದರ ಜತೆಗೆ ಸುಸ್ಥಿರ ಆರ್ಥಿಕತೆಯನ್ನು ಸೃಷ್ಟಿಸುತ್ತದೆ.

ಪ್ರಧಾನಿ ಮೋದಿ ಜನರ ಹೃದಯಗಳನ್ನೇ ಹ್ಯಾಕ್ ಮಾಡಿದ್ದಾರೆ: ಚಕ್ರವರ್ತಿ ಸೂಲಿಬೆಲೆ

25 ವರ್ಷಗಳ ಯೋಜನೆಯು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುತ್ತದೆ’ ಎಂದರು ಎಂದು ಮೂಲಗಳು ಹೇಳಿವೆ.

ಡಿಸೆಂಬರ್ 2021ರಿಂದ ಜನವರಿ 2024 ರವರೆಗೆ ಎಲ್ಲ ಸಚಿವಾಲಯಗಳು 2700ಕ್ಕೂ ಹೆಚ್ಚು ಸಭೆಗಳು, ಕಾರ್ಯಾಗಾರಗಳು ಮತ್ತು ವಿಚಾರ ಸಂಕಿರಣಗಳನ್ನು ನಡೆಸಿದ್ದು, 20 ಲಕ್ಷ ಯುವಕರ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಈ ದೂರದೃಷ್ಟಿ ವರದಿ ಸಿದ್ಧಪಡಿಸಲು ಸರ್ಕಾರವು 450 ಶಿಫಾರಸುಗಳನ್ನು ಪರಿಶೀಲಿಸಿದೆ ಮತ್ತು 15 ತಜ್ಞರನ್ನು ಸಂಪರ್ಕಿಸಿದೆ. ರಾಜ್ಯ ಸರ್ಕಾರಗಳು, ಶೈಕ್ಷಣಿಕ ಸಂಸ್ಥೆಗಳು, ಉದ್ಯಮ ಸಂಸ್ಥೆಗಳು, ನಾಗರಿಕ ಸಮಾಜ, ವೈಜ್ಞಾನಿಕ ವಲಯದ ಸಮಾಲೋಚನೆ ಬಳಿಕ ಇದನ್ನು ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವಿಕಸಿತ ಭಾರತ ಮಾರ್ಗಸೂಚಿಯು ಸ್ಪಷ್ಟವಾಗಿ ಸ್ಪಷ್ಟವಾದ ರಾಷ್ಟ್ರೀಯ ದೃಷ್ಟಿ ಹೊಂದಿದ್ದು, ಮುಂದಿನ ಆಕಾಂಕ್ಷೆಗಳು, ಗುರಿಗಳು ಮತ್ತು ಅನುಷ್ಠಾನ ಕುರಿತ ಸಮಗ್ರ ನೀಲನಕ್ಷೆಯನ್ನು ಹೊಂದಿದೆ.

ಇದೇ ವೇಳೆ, ಮೇ ತಿಂಗಳಲ್ಲಿ ಹೊಸ ಸರ್ಕಾರ ರಚನೆಯಾದ ನಂತರ ತೆಗೆದುಕೊಳ್ಳಬೇಕಾದ ತಕ್ಷಣದ ಕ್ರಮಗಳಿಗಾಗಿ 100 ದಿನಗಳ ಕಾರ್ಯಸೂಚಿಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಸಭೆ ಚರ್ಚಿಸಿತು. ಅಲ್ಲದೆ, ಮುಂದಿನ 5 ವರ್ಷಗಳ ವಿವರವಾದ ಕ್ರಿಯಾ ಯೋಜನೆ ಕುರಿತು ಮೋದಿ ವಿಚಾರ ಮಂಥನ ನಡೆಸಿದರು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

‘ಭವಿಷ್ಯದ ತಂತ್ರಜ್ಞಾನಗಳು ಮತ್ತು ಆವಿಷ್ಕಾರದಲ್ಲಿ ಭಾರತವು ಮುಂದಾಳತ್ವ ಹೊಂದಬೇಕು. ಈ ಕ್ಷೇತ್ರಕ್ಕೇ 1 ಲಕ್ಷ ಕೋಟಿ ರು. ಬಜೆಟ್‌ ಮೀಸಲಿರಿಸಬೇಕು’ ಎಂದ ಮೋದಿ, ‘ವಯಸ್ಸಿಗೆ ಸಂಬಂಧಿಸಿದ ಜನಸಂಖ್ಯಾ ಬದಲಾವಣೆಗಳ ಬಗ್ಗೆ ಕೂಡ ಮಾತನಾಡಿದರು. ಅಂದರೆ ವಯಸ್ಸಾದವರ ಜನಸಂಖ್ಯೆ ಏರಿಕೆ ಹಾಗೂ ಯುವಕರ ಸಂಖ್ಯೆ ಇಳಿಕೆಯಿಂದ ಆಗುವ ಸವಾಲುಗಳ ಬಗ್ಗೆ ಅವರು ಪರಿಹಾರ ಬಯಸಿದರು. ಇದೇ ವೇಳೆ, ಪ್ರತಿ ಇಲಾಖೆಯ ಕಾರ್ಯಸೂಚಿಯಲ್ಲಿ ವಿಕಸಿತ ಭಾರತದ ಕಲ್ಪನೆ ಇರಬೇಕು. ಅದಕ್ಕೆ ತಕ್ಕಂತೆ ಕ್ರಿಯಾ ಯೋಜನೆಗಳನ್ನು ತಯಾರಿಸಬೇಕು’ ಎಂದು ಸೂಚಿಸಿದರು ಎಂದು ಮೂಲಗಳು ವಿವರ ನೀಡಿವೆ.

News Hour: ಲೋಕಸಭಾ ಸಮರಕ್ಕೆ ಬಿಜೆಪಿ ಮೊದಲ ಪಟ್ಟಿ ರಿಲೀಸ್​

‘ಸಿಐಐ (ಭಾರತೀಯ ಕೈಗಾರಿಕೆಗಳ ಒಕ್ಕೂಟ) ಮತ್ತು ಎಫ್‌ಐಸಿಸಿಐ (ಭಾರತೀಯ ವಾಣಿಜ್ಯ ಮತ್ತು ಕೈಗಾರಿಕೆಗಳ ಒಕ್ಕೂಟ) ನಂತಹ ವ್ಯಾಪಾರ ಸಂಸ್ಥೆಗಳು ಸಹ ಈ ಕುರಿತು ಸಂವಾದ ನಡೆಸುವಂತೆ ಪ್ರೇರೇಪಿಸಬೇಕು. ಜತೆಗೆ ಆಡಳಿತದಲ್ಲಿ ಖಾಸಗಿ ತಜ್ಞರನ್ನೂ ಹೆಚ್ಚು ಒಳಗೊಳ್ಳುವಂತೆ ಮಾಡಬೇಕು’ ಎಂದು ಸಚಿವರಿಗೆ ಮೋದಿ ನಿರ್ದೇಶಿಸಿದರು ಎಂದು ತಿಳಿದುಬಂದಿದೆ.

ಚುನಾವಣೆ ಎದುರಿಸಿ, ಗೆದ್ದು ಬನ್ನಿ: ಮೋದಿ

ಮಂತ್ರಿಮಂಡಲದ ಎಲ್ಲ ಸದಸ್ಯರಿಗೆ ಪ್ರಧಾನಿ ನರೇಂದ್ರ ಮೋದಿ ಅವರು, ‘ಹೋಗಿ. ಗೆಲ್ಲಿ. ಮರಳಿ ಬನ್ನಿ’ (ಗೋ, ವಿನ್‌ ಆ್ಯಂಡ್‌ ಕಮ್‌ಬ್ಯಾಕ್‌) ಎಂದು ಹುರಿದುಂಬಿಸಿದರು. ತನ್ಮೂಲಕ ಲೋಕಸಭೆ ಚುನಾವಣೆ ಎದುರಿಸುವ ಆತ್ಮಸ್ಥೈರ್ಯ ತುಂಬಿದರು ಎಂದು ಮೂಲಗಳು ಹೇಳಿವೆ.

ಇದಲ್ಲದೆ, ಸಂಸದರು ತಮ್ಮ ಮಾತುಗಳ ಬಗ್ಗೆ ಎಚ್ಚರವಾಗಿರಬೇಕು. ವಿವಾದಗಳಿಂದ ದೂರ ಉಳಿಯಬೇಕು. ಇತ್ತೀಚೆಗೆ ಡೀಪ್‌ಫೇಕ್‌ ತಂತ್ರಜ್ಞಾನ ಹೆಚ್ಚುತ್ತಿದ್ದು, ಆ ಬಗ್ಗೆಯೂ ಎಚ್ಚರಿಕೆ ವಹಿಸಬೇಕು. ವಿಪಕ್ಷಗಳು ಸರ್ಕಾರದ ಹೆಸರು ಹಾಳು ಮಾಡಲು ನಡೆಸುವ ಯತ್ನ ತಡೆಯಬೇಕು. ಜನರ ನಡುವೆ ಬೆರೆತು ಸರ್ಕಾರದ ಯೋಜನೆಗಳನ್ನು ಜನತೆಗೆ ತಲುಪಿಸಬೇಕು ಎಂದು ಮೋದಿ ಸೂಚಿಸಿದರು ಎಂದು ಅವು ಹೇಳಿವೆ.

Follow Us:
Download App:
  • android
  • ios