ಚೆನ್ನಪಟ್ಟಣದಲ್ಲಿ ಅಮಿತ್ ಶಾ ರೋಡ್ ಶೋ, ಡಿಕೆಶಿ ಕೋಟೆಯಲ್ಲಿ ಕೇಸರಿ ಸುನಾಮಿ!
ಡಿಕೆ ಶಿವಕುಮಾರ್ ಭದ್ರಕೋಟೆಯಲ್ಲಿ ಅಮಿತ್ ಶಾ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಚನ್ನಪಟ್ಟಣದಲ್ಲಿ ತೆರೆದ ವಾಹನದ ಮೂಲಕ ಅಮಿತ್ ಶಾ ಒಂದೂವರೆ ಕಿಲೋಮೀಟರ್ ಸಾಗಲಿರುವ ಈ ರೋಡ್‌ಶೋನಲ್ಲಿ ಭಾರಿ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದಾರೆ.
ಚನ್ನಪಟ್ಟಣ(ಏ.02) ಕರ್ನಾಟಕದಲ್ಲಿ ಬಿಜೆಪಿಯ ಅಬ್ಬರದ ಪ್ರಚಾರ ಆರಂಭಗೊಂಡಿದೆ. ಇಂದು ರಾಜ್ಯಕ್ಕೆ ಆಗಮಿಸುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಸತತ ಸಭೆ, ಸಮಾವೇಶಗಳ ಬಳಿಕ ಇದೀಗ ಚನ್ನಪಟ್ಟಣದಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಬೆಂಗಳೂರು ಗ್ರಾಮಂತರ ಅಭ್ಯರ್ಥಿ ಡಾ.ಸಿಎನ್ ಮಂಜುನಾಥ್ ಪರ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಅಮಿತ್ ಶಾ, ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದ್ದಾರೆ. ಒಂದೂವರೆ ಕಿಲೋಮೀಟರ್ ಸಾಗಲಿರುವ ಈ ರೋಡ್‌ಶೋನಲ್ಲಿ ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದಾರೆ.
ತೆರೆದ ವಾಹನದಲ್ಲಿ ಅಮಿತ್ ಶಾ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ, ಬೆಂಗಳೂರು ಗ್ರಾಮಂತರ ಅಭ್ಯರ್ಥಿ ಸಿಎನ್ ಮಂಜುನಾಥ್ ಮೊದಲ ಸಾಲಿನಲ್ಲಿ ಕಾಣಿಸಿಕೊಂಡಿದ್ದಾರೆ. ವಾಹನದ ಹಿಂಭಾಗದಲ್ಲಿ ನಿಖಿಲ್ ಕುಮಾರಸ್ವಾಮಿ, ಸಿಪಿ ಯೋಗೇಶ್ವರ್, ಅಶ್ವತ್ ನಾರಾಯಣ್ ಸೇರಿದಂತೆ ಇತರ ಕೆಲ ಮುಖಂಡರು ರೋಡ್ ಶೋ ನಡೆಸಿದ್ದಾರೆ.
ಡಿ.ಕೆ. ಶಿವಕುಮಾರ್‌ಗೆ ಭ್ರಷ್ಟಾಚಾರಿಗಳೆಂದರೆ ಭಾರೀ ಅಚ್ಚುಮೆಚ್ಚು: ಕೇಂದ್ರ ಸಚಿವ ಅಮಿತ್ ಶಾ ವಾಗ್ದಾಳಿ!
ರೋಡ್ ಶೋನಲ್ಲಿ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆ ಮೊಳಗಿಸಿದ್ದಾರೆ. ವಂದೇ ಮಾತಾರಂ, ಭಾರತ್ ಮಾತಾ ಕಿ ಜೈ ಘೋಷಣೆಗಳು ಮೊಳಗಿದೆ. ಭಾರಿ ಸಂಖ್ಯೆಯಲ್ಲಿ ಜನರು ಸೇರಿರುವ ಕಾರಣ ರೋಡ್ ಶೋ ಮಂದಗತಿಯಲ್ಲಿ ಸಾಗುತ್ತಿದೆ. ರಸ್ತೆಯ ಇಕ್ಕೆಲಗಳಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ನಿಂತು ಅಮಿತ್ ಶಾಗೆ ಭರ್ಜರಿ ಸ್ವಾಗತ ನೀಡಿದ್ದಾರೆ.
ಇಂದು ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ ಅಮಿತ್ ಶಾ, 9 ಗಂಟೆಗೆ ಬಿಜೆಪಿ ಹಾಗೂ ಮೈತ್ರಿ ಪಕ್ಷ ಜೆಡಿಎಸ್ ನಾಯಕರ ಜೊತೆ ಉಪಹಾರ ಸೇವಿಸಿದ್ದಾರೆ. ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಬೆಂಗಳೂರಿನ ವಿಜಯ ಸಂಕಲ್ಪ ಸಮಾವೇಶ: ಗೆಲುವಿನ ರಣತಂತ್ರ ಬಿಚ್ಚಿಟ್ಟ ಪಂಚ ಲೋಕಸಭಾ ಬಿಜೆಪಿ ಅಭ್ಯರ್ಥಿಗಳು!
ಬೆಂಗಳೂರಿನಲ್ಲಿ ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ, ಚಿತ್ರದುರ್ಗ ಕ್ಷೇತ್ರಗಳ ಪ್ರಮುಖರ ಜೊತೆ ಪ್ರತ್ಯೇಕವಾದ ಸಭೆ ನಡೆಸಿ ಚನ್ನಪಟ್ಟಣಕ್ಕೆ ಆಗಮಿಸಿದ ಅಮಿತ್ ಶಾ, ಬೃಹತ್ ರೋಡ್ ಶೋ ಮೂಲಕ ಮತಭೇಟೆ ಆರಂಭಿಸಿದ್ದಾರೆ. ಬೆಂಗಳೂರು ಗ್ರಾಮಂತರ ಕ್ಷೇತ್ರ ಡಿಕೆಶಿ ಭದ್ರಕೋಟೆ ಎಂದೇ ಬಿಂಬಿತವಾಗಿದೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿರುವ ಏಕೈಕ ಕ್ಷೇತ್ರ ಕೂಡ ಇದಾಗಿದೆ. ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ಈ ಬಾರಿಯೂ ಸ್ಪರ್ಧಿಸುತ್ತಿದ್ದು, ಬಿಜೆಪಿ ದೇಶದಲ್ಲೇ ಜನಪ್ರೀಯತೆ ಹೊಂದಿರುವ ವೈದ್ಯ ಡಾ. ಸಿಎನ್ ಮಂಜುನಾಥ್ ಕಣಕ್ಕಿಳಿಸಿದೆ. ಬೆಂಗಳೂರು ಗ್ರಾಮಂತರದಿಂದಲೇ ಅಮಿತ್ ಶಾ ಕರ್ನಾಟದ ಪ್ರಚಾರ ಆರಂಭಿಸಿದ್ದಾರೆ.