ಪಬ್‌ಜಿಗೆ ಮತ್ತೊಂದು ಬಲಿ, ಹೆಚ್ಚಾಗುತ್ತಿದೆ ಹುಚ್ಚು ಆತ್ಮಹತ್ಯೆ ಮಾಡಿಕೊಂಡ 16 ವಯಸ್ಸಿನ ಬಾಲಕ ಪಬ್‌ಜಿ ಆಟದಲ್ಲಿ ಸೋಲು, ಹೀಯಾಳಿಸಿದ ಗೆಳೆಯರ   

ವಿಜಯವಾಡ(ಜೂ.12): ಪಬ್‌ಜಿ ಮೊಬೈಲ್ ಗೇಮ್ ಭಾರತದಲ್ಲಿ ಮತ್ತಷ್ಟು ಮಾರಕವಾಗುತ್ತಿದೆ. ದಿನದಿಂದ ದಿನಕ್ಕೆ ಪಬ್‌ಜಿಯಿಂದ ಬಲಿಯಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಪಬ್‌ಜಿ ಆಟದಲ್ಲಿ ಸೋತ ಕಾರಣಕ್ಕೆ ಗೆಳೆಯರು ಹೀಯಾಳಿಸಿದ್ದಾರೆ. ಇದರಿಂದ ಮನನೊಂದು 16 ವಯಸ್ಸಿನ ಬಾಲಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಮಾಚಿಲಿಪಟ್ನಂನಲ್ಲಿ ನಡೆದಿದೆ.

ಸ್ಥಳೀಯ ಕಾಂಗ್ರೆಸ್ ನಾಯಕ ಶಾಂತಿರಾಜು ಪುತ್ರ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಶಾಂತಿರಾಜು ಅವರ 16 ವಯಸ್ಸಿನ ಪುತ್ರ ಭಾನುವಾರ ಗೆಳೆಯರ ಜೊತೆ ಪಬ್‌ಜಿ ಆಡಿದ್ದಾನೆ. ಮೊಬೈಲ್ ಗೇಮಿಂಗ್‌ನಲ್ಲಿ ಸೋಲು ಕಂಡಿದ್ದಾನೆ. ಇದೇ ವಿಚಾರ ಮುಂದಿಟ್ಟುಕೊಂಡು ಗೆಳೆಯರು ಹೀಯಾಳಿಸಿದ್ದಾರೆ.

PUBGಗಾಗಿ ಅಮ್ಮನ ಕೊಲೆ, ಶವದ ಬಳಿ 3 ದಿನ, ಭಯಾನಕ ಕ್ಷಣಗಳನ್ನು ಬಿಚ್ಚಿಟ್ಟ ಮಗಳು!

ಇಷ್ಟಕ್ಕೆ ಸುಮ್ಮನಾಗದ ಗೆಳೆಯರು, ಪಬ್‌ಜಿ ಗೆಲ್ಲಲಾಗದಿದ್ದರೆ ಸಾಯುವುದೇ ಮೇಲು ಎಂದು ಪದೇ ಪದೇ ಹೇಳಿದ್ದಾರೆ. ಒಂದೆಡೆ ಪಬ್‌ಜಿ ಆಟದಲ್ಲಿ ಸೋಲು, ಗೆಳೆಯರ ಮಾತುಗಳಿನಂದ ಬಾಲಕ ಮನನೊಂದಿದ್ದಾನೆ. ನೇರವಾಗಿ ಮನೆಗೆ ಬಂದು ಫ್ಯಾನ್‌ಗೆ ನೇಣು ಹಾಕಿದ್ದಾನೆ. 

ಘಟನೆಯಿಂದ ಶಾಂತಿರಾಜು ಕುಟುಂಬ ಆಘಾತಕ್ಕೊಳಗಾಗಿದೆ. ಮಗನನ್ನು ಕಳೆದುಕೊಂಡು ಪೋಷಕರು ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇದೇ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ತಾಂತಿಯಾ ಕುಮಾರಿ, ಶಾಂತರಾಜು ಮನೆಗೆ ಭೇಟಿ ನೀಡು ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಇಷ್ಟೇ ಅಲ್ಲ ಕೇಂದ್ರ ಸರ್ಕಾರ ಪಬ್‌ಜಿ ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಇತ್ತೀಚೆಗೆ ಭಾರತದಲ್ಲಿ ಪಬ್‌ಜಿಗೆ ಬಲಿಯಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಮುಗ್ದ ಮಕ್ಕಳು, ಪೋಷಕರು ಕೂಡ ಬಲಿಯಾಗಿದ್ದಾರೆ. ಹೀಗಾಗಿ ಪಬ್‌ಜಿ ನಿಷೇಧಿಸಲು ಆಗ್ರಹ ಹೆಚ್ಚಾಗುತ್ತಿದೆ.

PUB-G ಆಡಲು ಬಿಡಲಿಲ್ಲವೆಂದು ಅಮ್ಮನನ್ನೇ ಕೊಂದ ಮಗ: ಮಕ್ಕಳ ಮಾನಸಿಕ ಆರೋಗ್ಯದ ಮೇಲಿರಲಿ ಗಮನ

ಪಬ್ಜಿ ಆಡಲು ಬಿಡದ ಅಮ್ಮನ ಗುಂಡಿಕ್ಕಿ ಹತ್ಯೆಗೈದ 16ರ ಪುತ್ರ
ಪಬ್ಜಿ ಆಟ ತಡೆದ ತಾಯಿಯನ್ನು 16 ವರ್ಷದ ಪುತ್ರನೇ ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಖನೌನ ಯಮುನಾಪುರ ಕಾಲೋನಿಯಲ್ಲಿ ಶನಿವಾರ ನಡೆದಿದೆ. ಜೊತೆಗೆ ತಾಯಿಯ ಶವವನ್ನು ಮನೆಯಲ್ಲಿ ಇಟ್ಟುಕೊಂಡೇ ಸ್ನೇಹಿತರನ್ನು ಮನೆಗೆ ಕರೆದು ಬಾಲಕ ಪಾರ್ಟಿಯನ್ನೂ ಮಾಡಿದ್ದಾನೆ ಎಂಬ ಕಳವಳಕಾರಿ ಅಂಶ ಬೆಳಕಿಗೆ ಬಂದಿದೆ.ಪ್ರಕರಣದ ಸಂಬಂಧ ಬಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು, ವಿಚಾರಣೆ ನಡೆಸಿದ್ದಾರೆ.

ಪಬ್‌ಜಿ ಆಟದಲ್ಲಿ ಮೈಮರೆತ ಅಣ್ಣತಮ್ಮಂದಿರ ಮೇಲೆ ಹರಿದ ರೈಲು
ರೈಲ್ವೆ ಹಳಿ ಮೇಲೆ ಕುಳಿತು ಪಬ್‌ಜಿ ಆಡುವುದರಲ್ಲಿ ನಿರತರಾಗಿದ್ದ ಅಣ್ಣತಮ್ಮಂದಿರ ಮೇಲೆ ರೈಲು ಹರಿದು ಇಬ್ಬರೂ ಸಾವನ್ನಪ್ಪಿರುವ ದುರ್ಘಟನೆ ರಾಜಸ್ಥಾನದ ಜೈಪುರದಲ್ಲಿ ಶನಿವಾರ ನಡೆದಿದೆ. ಮೃತರನ್ನು ಲೋಕೇಶ್‌ ಮೀನಾ (22) ಹಾಗೂ ರಾಹುಲ್‌ (19) ಎಂದು ಗುರುತಿಸಲಾಗಿದೆ. ಅಳ್ವರ್‌ ನಿವಾಸಿಗಳಾದ ಇವರಿಬ್ಬರೂ ರೂಪ್‌ಬಾಸ್‌ ಪ್ರದೇಶದಲ್ಲಿನ ತಮ್ಮ ಅಕ್ಕನ ಮನೆಯಲ್ಲಿದ್ದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸುವುದಾಗಿ ಎಎಸ್‌ಐ ಮನೋಹರ್‌ ಲಾಲ್‌ ತಿಳಿಸಿದ್ದಾರೆ.