Boy kills mother over PUB-G: ಪಬ್‌ಜಿ ಗೇಮ್‌ ಆಡಲು ಬಿಡಲಿಲ್ಲವೆಂಬ ಕಾರಣಕ್ಕೆ ತಾಯಿಯನ್ನೇ ಗುಂಡಿಕ್ಕಿ ಕೊಂದ ಘಟನೆ ಲಖನೌನಲ್ಲಿ ನಡೆದಿದೆ. ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪೋಷಕರು ತೋರಿಸಬೇಕಾದ ಕಾಳಜಿಯ ಬಗ್ಗೆ ಈ ಪ್ರಕರಣ ಮತ್ತೆ ಪ್ರಶ್ನೆ ಮೂಡುವಂತೆ ಮಾಡಿದೆ. 

ಲಖನೌ: 16 ವರ್ಷದ ಹುಡುಗ ತಾಯಿ ಪಬ್‌ಜಿ ಆಡಲು ಬಿಡಲಿಲ್ಲವೆಂಬ ಕಾರಣಕ್ಕೆ ತಂದೆಯ ಸರ್ವಿಸ್‌ ರಿವಾಲ್ವರ್‌ನಿಂದ ಗುಂಡಿಕ್ಕಿ ಕೊಂದ ಘಟನೆ ಉತ್ತರ ಪ್ರದೇಶದ ಲಖನೌನಲ್ಲಿ ನಡೆದಿದೆ. ಅಮ್ಮನನ್ನು ಕೊಂದ ಬಳಿಕ ರೂಮಿನೊಳಗೆ ದೇಹವನ್ನು ಲಾಕ್‌ ಮಾಡಿ ಇಟ್ಟಿದ್ದಾನೆ. ನಂತರ ಸ್ನೇಹಿತರನ್ನು ಮನೆಗೆ ಗೇಮ್‌ ಆಡಲು, ಸಿನೆಮಾ ನೋಡಲು ಕರೆಸಿಕೊಂಡಿದ್ದಾನೆ. ಸುಮಾರು ಮೂರು ದಿನಗಳ ಬಳಿಕ ಅಕ್ಕಪಕ್ಕದ ಮನೆಯವರಿಗೆ ಹೆಣದ ಕೊಳೆತ ವಾಸನೆ ಬಂದಿದೆ. ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಕೊಲೆಯ ವಿಚಾರ ಬೆಳಕಿಗೆ ಬಂದಿದೆ. 

ಅಮ್ಮನನ್ನು ಕೊಂದ ಬಳಿಕ ಸ್ನೇಹಿತರಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದಾನೆ. ಆನ್‌ಲೈನ್‌ನಲ್ಲಿ ಎಗ್‌ ಕರಿ ಆರ್ಡರ್‌ ಮಾಡಿ ಸ್ನೇಹಿತರ ಜೊತೆ ತಿಂದಿದ್ದಾನೆ. ಹಿಂದಿ ಸಿನೆಮಾ ಫುಕ್ರೆಯನ್ನು ಕೂಡ ಎಲ್ಲರೂ ಸೇರಿ ನೋಡಿದ್ದಾರೆ. ಸ್ನೇಹಿತರಿಗೂ ಈತ ಮಾಡಿದ ಕೆಲಸದ ಬಗ್ಗೆ ಅರಿವಿರಲಿಲ್ಲ. ಅಮ್ಮ ಮನೆಯಲ್ಲಿಲ್ಲ ಬೇರೆ ಊರಿಗೆ ಹೋಗಿದ್ದಾರೆ ಎಂದು ಸುಳ್ಳು ಹೇಳಿದ್ದಾನೆ. ಪೊಲೀಸರು ಮನೆಗೆ ಬಂದು ವಿಚಾರಿಸಿದಾಗ ತಾಯಿಯನ್ನು ಕೊಂದ ಸತ್ಯವನ್ನು ಹುಡುಗ ಒಪ್ಪಿಕೊಂಡಿದ್ದಾನೆ. "ಅಮ್ಮ ನನಗೆ ಪಬ್‌ಜಿ ಗೇಮ್‌ ಆಡಲು ಬಿಡಲಿಲ್ಲ. ಇದರಿಂದ ನನಗೆ ಸಿಟ್ಟು ಬಂತು. ಅಪ್ಪನ ರಿವಾಲ್ವರ್‌ ಮನೆಯಲ್ಲೇ ಇತ್ತು, ಅದರಿಂದ ಅಮ್ಮನನ್ನು ಶೂಟ್‌ ಮಾಡಿ ಸಾಯಿಸಿದೆ," ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. 

ಇದನ್ನೂ ಓದಿ: ಹೈದರಾಬಾದ್ ರೇಪ್‌: ಬೀದರ್‌ನಲ್ಲಿ 5ನೇ ಆರೋಪಿ ವಶಕ್ಕೆ?

ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಅದಾದ ನಂತರ ಆತ ತರಗತಿಗಳಿಗೂ ಹೋಗಿಲ್ಲ. ಮನೆಯಲ್ಲೇ ಸಿನೆಮಾ ನೋಡಿಕೊಂಡು, ಗೇಮ್‌ ಆಡಿಕೊಂಡು ಇದ್ದನಂತೆ. ಅಮ್ಮನ ಶವವನ್ನು ಒಂದು ಕೋಣೆಗೆ ಹಾಕಿ ಲಾಕ್‌ ಮಾಡಿದ ನಂತರ, ತಂಗಿಯನ್ನು ಇನ್ನೊಂದು ಕೋಣೆಯಲ್ಲಿ ಕೂಡಿಹಾಕಿದ್ದಾನೆ. ಅದಾದ ನಂತರ ಮನೆಯಲ್ಲಿ ಇವನದ್ದೇ ಸಾಮ್ರಾಜ್ಯ. ಮೃತದೇಹ ಕೊಳೆತ ವಾಸನೆ ಬರಲು ಶುರುವಾದಾಗ ಕೋಣೆಗೆ ಮತ್ತು ಮನೆ ತುಂಬಾ ಸುಗಂಧದ್ರವ್ಯ ಹೊಡೆದಿದ್ದಾನೆ. ಆದರೂ ಎರಡು ದಿನಗಳ ಬಳಿಕ ವಾಸನೆ ಪಕ್ಕದ ಮನೆಯವರಿಗೆ ಬಂದಿದೆ. ನಂತರ ಅವರು ಪೊಲೀಸರಿಗೆ ಅನುಮಾನಾಸ್ಪದ ವಾಸನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಮನೆಗೆ ಬಂದು ನೋಡಿದ ಪೊಲೀಸರಿಗೆ ಆಶ್ಚರ್ಯವಾಗಿತ್ತು. ಹದಿನಾರು ವರ್ಷದ ಬಾಲಕ ತನ್ನ ತಾಯಿಯನ್ನೇ ಕೊಲ್ಲುವ ಮಟ್ಟಕ್ಕೆ ಹೋಗಿದ್ದು ಪೊಲೀಸರಿಗೂ ನಂಬಲು ಸಾಧ್ಯವಾಗಲಿಲ್ಲ. 

ಹುಡುಗ ತನ್ನ ತಾಯಿ ಮತ್ತು ತಂಗಿಯ ಜೊತೆ ವಾಸವಾಗಿದ್ದ. ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ಬಾರಿ ಬಂದು ವಾಪಸ್ ಹೋಗುವಾಗ ಪರವಾನಗಿ ಇರುವ ಸರ್ವಿಸ್‌ ರಿವಾಲ್ವರ್‌ ಮನೆಯಲ್ಲೇ ಬಿಟ್ಟು ಹೋಗಿದ್ದರು. ತಂದೆಯ ಆ ಮರೆವು ಇಂದು ಇಷ್ಟು ದುಬಾರಿಯಾಗಿದೆ. 

ಇದನ್ನೂ ಓದಿ: ದಕ್ಷಿಣ ಕನ್ನಡ: ಅಪ್ರಾಪ್ತ ಬಾಲಕಿಯ ಮೇಲೆ ಕಾಮುಕನ ಅಟ್ಟಹಾಸ

ಇತ್ತೀಚೆಗೆ ಸಣ್ಣ ಸಣ್ಣ ವಿಚಾರಗಳಿಗೆ ಮಕ್ಕಳು ಸಿಟ್ಟು ಮಾಡಿಕೊಳ್ಳುತ್ತಾರೆ. ತಮಗೆ ತಾವೇ ಹಿಂಸೆ ನೀಡಿಕೊಳ್ಳುವುದು, ಬೇರೆಯವರ ಮೇಲೆ ಹರಿಹಾಯುವುದು ಮುಂತಾದ ರೀತಿಯ ವಿಚಿತ್ರ ಕೆಲಸಗಳನ್ನು ಮಾಡುತ್ತಿದ್ದಾರೆ. ಮಕ್ಕಳ ತಾಳ್ಮೆ ಮಟ್ಟ ತಂತ್ರಜ್ಞಾನದ ಯುಗದಲ್ಲಿ ಕಡಿಮೆಯಾಗುತ್ತಿದೆ. ಇದಕ್ಕೆ ಪುರಾವೆ ಒದಗಿಸುವ ಹಲವಾರು ಪ್ರಕರಣಗಳು ದಿನನಿತ್ಯ ನಮ್ಮ ಸುತ್ತಲೇ ನಡೆಯುತ್ತಿವೆ. ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಪೋಷಕರು ಮತ್ತು ಶಿಕ್ಷಕರು ಹೆಚ್ಚಿನ ಗಮನ ಹರಿಸುವ ಅನಿವಾರ್ಯತೆ ದಿನೇ ದಿನೇ ಹೆಚ್ಚುತ್ತಿದೆ.