ಗುಜರಾತ್‌ನ ಭಾವನಗರದಲ್ಲಿ ಸಿಂಹವೊಂದು ಬೇಟೆಯಾಡಿ ತಿನ್ನುತ್ತಿದ್ದಾಗ ವ್ಯಕ್ತಿಯೊಬ್ಬ ವಿಡಿಯೋ ಮಾಡಲು ಹೋಗಿ ಸಿಂಹದ ಕೋಪಕ್ಕೆ ಗುರಿಯಾಗಿದ್ದಾನೆ. ಸಿಂಹ ಆತನನ್ನು ಓಡಿಸಿಕೊಂಡು ಬಂದಿದ್ದು ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ರೆಕಾರ್ಡ್ ಆಗಿದೆ.

ಗುಜರಾತ್‌: ಗುಜಾರತ್‌ನಲ್ಲಿ ಏಷ್ಯಾಟಿಕ್ ಟೈಗರ್‌ಗಳು ಸಾಮಾನ್ಯವಾಗಿವೆ. ಇಲ್ಲಿನ ಗಿರ್ ರಾಷ್ಟ್ರೀಯ ಉದ್ಯಾನದಲ್ಲಿ ಹಾಗೂ ಅದರ ಸುತ್ತಮುತ್ತಲಿನ ಕೆಲ ಪ್ರದೇಶಗಳಲ್ಲಿ ಈ ಸಿಂಹಗಳು ಹೊಲ ಸೇರಿದಂತೆ ಜನರಿರುವ ಪ್ರದೇಶಗಳಲ್ಲಿ ಸಾಮಾನ್ಯ ಎಂಬಂತೆ ಓಡಾಡುತ್ತವೆ. ಜನರ ಮೇಲೆ ಇವು ಕೆರಳಿಸದ ಹೊರತು ದಾಳಿ ಮಾಡುವುದಿಲ್ಲ, ಹೀಗಾಗಿ ಇಲ್ಲಿನ ಜನ ಹೊಲದಲ್ಲಿ ಸಿಂಹಗಳು ಓಡಾಡುತ್ತಿದ್ದರು ತಮ್ಮ ಪಾಡಿಗೆ ತಾವು ಕೆಲಸದಲ್ಲಿ ಮಗ್ನರಾಗಿರುವ ಹಲವು ವೀಡಿಯೋಗಳು ಈ ಹಿಂದೆಯೂ ವೈರಲ್ ಆಗಿವೆ.

ತನ್ನ ವೀಡಿಯೋ ರೆಕಾರ್ಡ್ ಮಾಡಿದ್ದಕ್ಕೆ ಸಿಂಹದ ಆಕ್ರೋಶ:

ಆದರೆ ಈಗ ಅಲ್ಲಿನ ಮತ್ತೊಂದು ವೀಡಿಯೋ ವೈರಲ್ ಆಗಿದ್ದು ಈ ವೀಡಿಯೋ ಸ್ವಲ್ಪ ಭಯಾನಕವಾಗಿದೆ. ಸಿಂಹವೊಂದು ಬೇಟೆಯಾಡಿ ತನ್ನ ಬೇಟೆಯನ್ನು ತಿನ್ನುತ್ತಿದ್ದ ವೇಳೆ ಅಲ್ಲೇ ಸಮೀಪದಲ್ಲಿ ವ್ಯಕ್ತಿಯೊಬ್ಬ ಆ ದೃಶ್ಯವನ್ನು ತನ್ನ ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡುತ್ತಾ ನಿಂತಿದ್ದಾನೆ. ಇದನ್ನು ನೋಡಿದ ಸಿಂಹ ಸಿಟ್ಟಿಗೆದ್ದಿದ್ದು, ಈತನನ್ನು ಹೆದರಿಸಲು ಓಡಿಸಿಕೊಂಡು ಬಂದಿದೆ. ಈ ವೀಡಿಯೋ ಈಗ ಮೊಬೈಲ್‌ನಲ್ಲಿ ರೆಕಾರ್ಡ್‌ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುಜರಾತ್‌ನ ಭಾವನಗರದಲ್ಲಿ ಈ ದೃಶ್ಯ ಸೆರೆಯಾಗಿದೆ. ಇದು ವನ್ಯಜೀವಿಗಳ ಸುರಕ್ಷತೆಯ ಜೊತೆಗೆ ಮನುಷ್ಯನ ಸುರಕ್ಷತೆಯ ಬಗ್ಗೆಯೂ ಕಳವಳ ಹೆಚ್ಚಿಸಿದೆ.

ರೆಕಾರ್ಡ್ ಮಾಡ್ತಿದ್ದ ವ್ಯಕ್ತಿಯ ಓಡಿಸಿಕೊಂಡು ಹೋದ ಸಿಂಹ:

ಆದರೆ ಈ ವೀಡಿಯೋದಲ್ಲಿ ಯಾವುದೇ ಅನಾಹುತ ನಡೆದಿಲ್ಲ, ಆದರೆ ತನ್ನಷ್ಟಕ್ಕೆ ತನ್ನ ಕೆಲಸದಲ್ಲಿ ತೊಡಗಿರುವ ಕಾಡುಪ್ರಾಣಿಗಳನ್ನು ಕೆರಳಿಸಲು ಹೋಗಿ ಜನರು ಅಪಾಯವನ್ನು ಮೈಮೇಲೆ ಎಳೆದುಕೊಂಡು ಕಾಡುಪ್ರಾಣಿಗಳಿಗೂ ಸಂಕಷ್ಟ ತಂದೊಡ್ಡುತ್ತಿದ್ದಾರೆ ಎಂದು ವೀಡಿಯೋ ನೋಡಿದ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೀಡಿಯೋದಲ್ಲಿ ಕಾಣುವಂತೆ ಸಿಂಹವೊಂದು ತನ್ನ ಬೇಟೆಯನ್ನು ತಿನ್ನುವುದರಲ್ಲಿ ಬ್ಯುಸಿಯಾಗಿದ್ದರೆ ವ್ಯಕ್ತಿಯೊಬ್ಬ ಹಿಂದಿನಿಂದ ಈ ದೃಶ್ಯವನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದಾನೆ. ಇದು ಕೂಡಲೇ ಸಿಂಹದ ಗಮನಕ್ಕೆ ಬಂದಿದ್ದು, ಸಿಂಹ ತಿರುಗಿ ಬಿದ್ದು, ಆತನನ್ನು ಓಡಿಸಿಕೊಂಡು ಬಂದಿದೆ. ಆದರೆ ಆ ವ್ಯಕ್ತಿ ಬುದ್ಧಿವಂತಿಕೆ ಮೆರೆದಿದ್ದು, ಅಲ್ಲೇ ನಿಂತಿದ್ದರಿಂದ ಸಿಂಹದ ದಾಳಿಯಿಂದ ಪಾರಾಗಿದ್ದಾನೆ.

ಈ ವೀಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಪ್ರಿಯಾ ಸಿಂಗ್ ಎಂಬುವವರು ಪೋಸ್ಟ್ ಮಾಡಿದ್ದು, ಸಾವಿರಾರು ಜನ ವೀಕ್ಷಿಸಿದ್ದಾರೆ. ಸಿಂಹವು ತನ್ನ ಬೇಟೆಯನ್ನು ಆನಂದಿಸುತ್ತಿರುವಾಗ ಈ ಯುವಕ ಸಿಂಹದ ಬಳಿಗೆ ಹೋಗಿ ಫೋಟೋ ತೆಗೆಯಲು ಹೋಗಿದ್ದಾನೆ. ಆಗ ಸಿಂಹವು ಸ್ವಲ್ಪ ಕೋಪವನ್ನು ತೋರಿಸಿತು. ಈ ವಿಡಿಯೋ ಗುಜರಾತ್‌ನ ಭಾವನಗರದಿಂದ ಬಂದಿದೆ ಎಂದು ಅವರು ವೀಡಿಯೋ ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ.

ನೆಟ್ಟಿಗರಿಂದಲೂ ಯುವಕನ ಕೃತ್ಯಕ್ಕೆ ಅಸಮಾಧಾನ

ಈ ವೀಡಿಯೋ ನೋಡಿದ ನೆಟ್ಟಿಗರು ಹಲವು ಕಾಮೆಂಟ್ ಮಾಡಿದ್ದಾರೆ. ಈ ಸಿಂಹ ಹೆಚ್ಚು ಸಿಟ್ಟುಗೊಂಡಿಲ್ಲ, ಒಂದು ವೇಳೆ ಹೆಚ್ಚು ಸಿಟ್ಟುಗೊಂಡಿದ್ದರೆ, ಮಧ್ಯಾಹ್ನದ ಊಟದ ಜೊತೆಗೆ ರಾತ್ರಿಯ ಊಟವನ್ನು ಮುಗಿಸಿಬಿಡುತ್ತಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆತ ತನ್ನ ಮೊಬೈಲ್‌ನಲ್ಲಿ ಏನು ರೆಕಾರ್ಡ್ ಮಾಡಿದ್ದಾನೆ ಎಂದು ನನಗೆ ನೋಡಬೇಕೆನಿಸುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಯಾರಾದರೂ ಇವನನ್ನು ಸಿಂಹಕ್ಕೆ ತಿನ್ನಿಸಿಬಿಡಿ ಎಂದು ಮತ್ತೊಬ್ಬರು ಆತನ ಕೃತ್ಯಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಆತ ಹಿಂದೆ ತಿರುಗಿ ಓಡಲು ಶುರು ಮಾಡಿದ್ದಾರೆ ಪಕ್ಕಾ ಹೆಣವಾಗುತ್ತಿದ್ದ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ವನ್ಯಜೀವಿಗಳ ವರ್ತನೆ ಹೇಗೆ ಬದಲಾಗುತ್ತದೆ ಎಂದು ಹೇಳಲಾಗದು. ಅವುಗಳ ತಾವಿರುವ ಜಾಗಕ್ಕೆ ಮನುಷ್ಯರು ಪ್ರವೇಶಿಸುವುದನ್ನು ಸ್ವಲ್ಪವೂ ಇಷ್ಟಪಡುವುದಿಲ್ಲ ಹೀಗಿರುವಾಗ ಮನುಷ್ಯರು ಕೂಡ ತಮ್ಮ ಮಿತಿಯನ್ನು ಅರಿತು ವರ್ತಿಸಿದರೆ ಉತ್ತಮ ಇಲ್ಲದೇ ಹೋದರೆ ಅನಾಹುತ ಕಟ್ಟಿಟ್ಟಬುತ್ತಿ.

Scroll to load tweet…