ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಪುನರುಚ್ಚರಿಸಿ, ದಾಳಿಕೋರರಿಗೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ಭರವಸೆ ನೀಡಿದರು. ಈ ಘಟನೆಯ ಬಗ್ಗೆ ಉನ್ನತ ಮಟ್ಟದ ಭದ್ರತಾ ಸಭೆಗಳು ನಡೆದಿವೆ.
ನವದೆಹಲಿ (ಏ.23): ಜಮ್ಮು ಕಾಶ್ಮೀರ್ ಪಹಲ್ಗಾಮ್‌ನಲ್ಲಿ ನಾಗರೀಕರ ಮೇಲೆ ಅತ್ಯಂತ ಪೈಶಾಚಿಕ ಹಾಗೂ ಹೇಯ ದಾಳಿ ನಡೆದ ಅಂದಾಜು 24 ಗಂಟೆಗಳ ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿದ್ದಾರೆ. ಘಟನೆಯ ಬಳಿಕ ನೀಡಿದ ಅವರ ಮೊದಲ ಹೇಳಿಕೆಯಲ್ಲಿಯೇ ಪ್ರತೀಕಾರದ ಮಾತನ್ನು ಆಡಿದ್ದು, ಶೀಘ್ರದಲ್ಲಿಯೇ ಅತ್ಯಂತ ಬಲವಾದ ಹಾಗೂ ಸ್ಪಷ್ಟ ಪ್ರತಿಕ್ರಿಯೆ ಸಿಗಲಿದೆ ಎಂದು ಎಚ್ಚರಿಸಿದ್ದಾರೆ.
'ಉಗ್ರವಾದಿಗಳ ಅತ್ಯಂತ ಹೇಯ ಕೃತ್ಯದಲ್ಲಿ ನಮ್ಮ ದೇಶ ಅಮಾಯನಕ ನಾಗರೀಕರನ್ನು ಕಳೆದುಕೊಂಡಿದೆ. ಈ ಘೋರ ಹಾಗೂ ಅಮಾನವೀಯ ಕೃತ್ಯದಿಂದ ನಾವೆಲ್ಲರೂ ಬಹಳ ಶೋಕ ಹಾಗೂ ನೋವಿನಲ್ಲಿದ್ದೇವೆ. ಮೊದಲಿಗೆ ಈ ಘಟನೆಯಲ್ಲಿ ಸಾವು ಕಂಡ ಎಲ್ಲರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸುತ್ತೇನೆ. ಅವರಿಗೆ ಈ ದುಃಖ ಭರಿಸುವ ಶಕ್ತಿ ನೀಡಲಿ. ಈ ನೋವಿನ ಸಮಯದಲ್ಲಿ, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳುತ್ತೇನೆ' ಎಂದಿದ್ದಾರೆ.
ಇಲ್ಲಿ ನಾನು ಭಾರತದ ಸಂಕಲ್ಪವನ್ನು ತಿಳಿಸಲು ಬಯಸುತ್ತೇನೆ. ಭಯೋತ್ಪಾದನೆ ವಿರುದ್ಧ ನಮ್ಮದು ಶೂನ್ಯ ಸಹಿಷ್ಣುತೆ ನೀತಿ. ಭಾರತದ ಪ್ರತಿ ನಾಗರೀಕರಿಗೆ ತಿಳಿಸೋದು ಏನೆಂದರೆ, ಈ ಘಟನೆಯಲ್ಲಿ ಭಾಗಿಯಾದವರ ಪ್ರತಿಯೊಬ್ಬರನ್ನು ಹುಡುಕುತ್ತೇವೆ. ಸರ್ಕಾರವು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಾನು ದೇಶವಾಸಿಗಳಿಗೆ ಭರವಸೆ ನೀಡಲು ಬಯಸುತ್ತೇನೆ. ಈ ಕೃತ್ಯದ ಅಪರಾಧಿಗಳನ್ನು ಮಾತ್ರವಲ್ಲದೆ ತೆರೆಮರೆಯಲ್ಲಿರುವ ಮಾಸ್ಟರ್‌ಮೈಂಡ್‌ಗಳನ್ನೂ ಸಹ ನಾವು ತಲುಪುತ್ತೇವೆ. ಕೃತ್ಯದ ಆರೋಪಿಗಳಿಗೆ ಶೀಘ್ರದಲ್ಲೇ ಬಲವಾದ ಮತ್ತು ಸ್ಪಷ್ಟವಾದ ಪ್ರತಿಕ್ರಿಯೆ ಸಿಗಲಿದೆ ಎಂದು ನಾನು ದೇಶಕ್ಕೆ ಭರವಸೆ ನೀಡಲು ಬಯಸುತ್ತೇನೆ' ಎಂದು ತಿಳಿಸಿದ್ದಾರೆ.
ಮಂಗಳವಾತ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 26 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಈ ದಾಳಿಯ ಹೊಣೆಗಾರಿಕೆಯನ್ನು ಪಾಕಿಸ್ತಾನ ಆಧಾರಿತ ಲಷ್ಕರ್-ಎ-ತೈಬಾ ಸಂಘಟನೆಯ ಶಾಖೆಯಾದ 'ದಿ ರೆಸಿಸ್ಟೆನ್ಸ್ ಫ್ರಂಟ್' (TRF) ಹೊತ್ತಿದೆ.
ಈ ದಾಳಿ 2019 ರ ಪುಲ್ವಾಮಾ ದಾಳಿಯ ನಂತರದ ಅತ್ಯಂತ ಭೀಕರ ಘಟನೆಗಳಲ್ಲಿ ಒಂದಾಗಿದೆ. ಭದ್ರತಾ ಪಡೆಗಳು ದಾಳಿಕೋರರಿಗಾಗಿ ಹುಡುಕಾಟ ನಡೆಸುತ್ತಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಸೌದಿ ಪ್ರವಾಸವನ್ನು ಅರ್ಧಕ್ಕೆ ಮೊಟಕು ಮಾಡಿ ಇಂದು ಬೆಳಗ್ಗೆ ಭಾರತಕ್ಕೆ ವಾಪಸಾಗಿದ್ದಾರೆ. ವಾಪಾಸು ಬಂದವರೆ ಮೊದಲಿಗರಾಗಿ ಭದ್ರತಾ ಅಧಿಕಾರಿಗಳು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಜೊತೆ ಸಮಾಲೋಚನೆ ನಡೆಸಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರು ಶ್ರೀನಗರಕ್ಕೆ ಭೇಟಿ ನೀಡಿ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.
ದೇಶದ ಚೈತನ್ಯದ ಮೇಲೆ ಮಾಡಿದ ದಾಳಿ, ಪಹಲ್ಗಾಮ್ ಟೆರರಿಸ್ಟ್ ದಾಳಿ ಖಂಡಿಸಿದ ಕಿಚ್ಚ ಸುದೀಪ್!
ಇನ್ನೊಂದೆಡೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್, ಭಾರತೀಯ ವಾಯುಪಡೆಯ ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಎಪಿ ಸಿಂಗ್, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮತ್ತು ನೌಕಾಪಡೆಯ ಮುಖ್ಯಸ್ಥ ದಿನೇಶ್ ತ್ರಿಪಾಠಿ ಅವರೊಂದಿಗೆ ಪ್ರಮುಖ ಸಭೆ ನಡೆಸಿದರು.ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪರಿಸ್ಥಿತಿಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ತಿಳಿಸಿದೆ. ಇಂದು ನಡೆಯಲಿರುವ ಭದ್ರತೆ ಕುರಿತ ಸಂಪುಟ ಸಮಿತಿ ಸಭೆಯಲ್ಲಿ ಈ ವಿಷಯವನ್ನು ಇನ್ನಷ್ಟು ವಿವರವಾಗಿ ಚರ್ಚಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
'ಭಯೋತ್ಪಾದನೆಗೆ ಧರ್ಮ ಇಲ್ಲ' ಎಂದವರಿಗೆ ಚಪ್ಪಲಿಯಲ್ಲಿ ಹೊಡಿಬೇಕು: ಮುತಾಲಿಕ್ ಆಕ್ರೋಶ
