ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಅನರ್ಹತೆಯ ಸೇಡು ತೀರಿಸಿಕೊಳ್ಳುವ ಮಾತನ್ನು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಕರ್ನಾಟಕ ಚುನಾವಣೆಯಲ್ಲಿ ಅನರ್ಹತೆ ವಿಷಯ ದೊಡ್ಡದು ಮಾಡಿ ಅನುಕಂಪ ಗಿಟ್ಟಿಸಿಕೊಳ್ಳುವುದು ಕಾಂಗ್ರೆಸ್‌ ಯೋಜನೆ ಎಂಬುದು ಈಗ ಸಾಬೀತಾದಂತಾಗಿದೆ’ ಎಂದರು.

ನವದೆಹಲಿ (ಮಾರ್ಚ್‌ 26, 2023): ಮಾನನಷ್ಟ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಅನರ್ಹಗೊಳಿಸಿದ ನಿರ್ಧಾರದ ವಿರುದ್ಧ ಆಕ್ರೋಶಗೊಂಡಿರುವ ಕಾಂಗ್ರೆಸ್‌ ಮುಂದೇನು ಮಾಡಬೇಕು ಎಂಬ ಬಗ್ಗೆ ಗಂಭೀರ ಚಿಂತನೆಯಲ್ಲಿ ತೊಡಗಿದೆ. ಕಾಂಗ್ರೆಸ್ಸಿನ ಎಲ್ಲ ಸಂಸದರು ಸಾಮೂಹಿಕ ರಾಜೀನಾಮೆ ನೀಡಬೇಕು ಎಂದು ನಾಯಕರೊಬ್ಬರು ಸಲಹೆ ಮಾಡಿದ್ದರೆ, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸುವುದು ನಾವು ನೀಡುವ ತಕ್ಕ ತಿರುಗೇಟಾಗಿರುತ್ತದೆ ಎಂದು ಪಕ್ಷದ ನಾಯಕ ಪ್ರಿಯಾಂಕಾ ಗಾಂಧಿ ವಾದಿಸಿದ್ದಾರೆ.

ರಾಹುಲ್‌ ಅನರ್ಹತೆಯ ಆದೇಶ ಹೊರಬಿದ್ದ ಬೆನ್ನಲ್ಲೇ ಶುಕ್ರವಾರ ಕಾಂಗ್ರೆಸ್‌ ನಾಯಕರು ಸಭೆ ಸೇರಿದಾಗ ಈ ಎರಡೂ ವಿಷಯಗಳು ಚರ್ಚೆಯಾಗಿವೆ. ಹೀಗಾಗಿ ಮುಂದೆ ಏನು ಮಾಡಬೇಕು ಎಂಬುದನ್ನು ನಿರ್ಧಾರ ಕೈಗೊಳ್ಳಲು ಪಕ್ಷ ಸಮಿತಿಯೊಂದನ್ನು ರಚಿಸಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನು ಓದಿ: ಕೈ ನಾಯಕನಿಗೆ ಶಾಕ್: ರಾಹುಲ್‌ ಗಾಂಧಿ ಮನೆಗೆ ದೌಡಾಯಿಸಿದ ದೆಹಲಿ ಪೊಲೀಸರು..!

ಪಕ್ಷದ ಎಲ್ಲ ಸಂಸದರು ಸಾಮೂಹಿಕವಾಗಿ ರಾಜೀನಾಮೆ ನೀಡಬೇಕು ಎಂದು ಒಬ್ಬ ಸಂಸದರು ಸಭೆಯಲ್ಲಿ ಸಲಹೆ ಮಾಡಿದರು. ಆ ಬಗ್ಗೆ ಅಂತಿಮ ನಿರ್ಧಾರ ಏನೂ ಆಗಲಿಲ್ಲ. ಇದೇ ವೇಳೆ, ಕರ್ನಾಟಕ ಚುನಾವಣೆಯಲ್ಲಿನ ಗೆಲುವಿನ ಮೂಲಕ ಇದಕ್ಕೆ ಉತ್ತರ ನೀಡಬೇಕು ಎಂದು ಪ್ರಿಯಾಂಕಾ ಹೇಳಿದರು. ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇಂದು ದೇಶವ್ಯಾಪಿ ಕಾಂಗ್ರೆಸ್‌ ಸತ್ಯಾಗ್ರಹ
ರಾಹುಲ್‌ ಗಾಂಧಿ ಅವರನ್ನು ಸಂಸತ್‌ ಸ್ಥಾನದಿಂದ ಅನರ್ಹಗೊಳಿಸಿದ ಹೊತ್ತಿನಲ್ಲಿ ಅವರ ಬೆಂಬಲಕ್ಕೆ ನಿಲ್ಲುವ ಸಲುವಾಗಿ ಭಾನುವಾರ ದೇಶವ್ಯಾಪಿ ಒಂದು ದಿನದ ಸತ್ಯಾಗ್ರಹ ನಡೆಸಲು ಕಾಂಗ್ರೆಸ್‌ ನಿರ್ಧರಿಸಿದೆ. ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ಈ ಸತ್ಯಾಗ್ರಹ ನಡೆಯಲಿದೆ.

ಇದನ್ನೂ ಓದಿ: ರಾಹುಲ್‌ ಗಾಂಧಿ ಸಂಸತ್‌ ಸದಸ್ಯತ್ವ ರದ್ದತಿಗೆ ಬಿಜೆಪಿ ಬಿಗಿಪಟ್ಟು ; ಕ್ಷಮೆ ಕೇಳೋವರೆಗೂ ಮಾತಾಡಲು ಬಿಡಲ್ಲ ಎಂದ ಕೇಸರಿ ಪಕ್ಷ

ದೆಹಲಿಯ ರಾಜ್‌ಘಾಟ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ವಾದ್ರಾ ಸೇರಿ ಪಕ್ಷದ ಹಿರಿಯರು, ರಾಜ್ಯಗಳ ರಾಜಧಾನಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಸ್ಥಳೀಯ ಗಾಂಧಿ ಪ್ರತಿಮೆಯ ಎದುರು ಸತ್ಯಾಗ್ರಹಕ್ಕೆ ನಿರ್ಧರಿಸಲಾಗಿದೆ.

ಕರ್ನಾಟಕದಲ್ಲಿ ಲಾಭಕ್ಕಾಗಿ ರಾಹುಲ್‌ ಶಿಕ್ಷೆಗೆ ತಡೆ ಕೋರದ ‘ಕೈ’: ಬಿಜೆಪಿ
ಮಾನಹಾನಿ ದಾವೆಯಲ್ಲಿ ತಪ್ಪಿತಸ್ಥರಾಗಿದ್ದರೂ ಅದರ ವಿರುದ್ಧ ಗುಜರಾತ್‌ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಕಾಂಗ್ರೆಸ್‌ಗೆ ಅವಕಾಶವಿತ್ತು. ಆದರೆ ಅನರ್ಹತೆ ವಿಷಯವನ್ನು ಕರ್ನಾಟಕ ಚುನಾವಣೆಯಲ್ಲಿ ಬಂಡವಾಳ ಮಾಡಿಕೊಳ್ಳುವ ಉದ್ದೇಶವನ್ನು ಕಾಂಗ್ರೆಸ್‌ ಹೊಂದಿದೆ. ಹೀಗಾಗಿಯೇ ಬೇಕೆಂದೇ ಮೇಲ್ಮನವಿ ಸಲ್ಲಿಸಲಿಲ್ಲ ಎಂದು ಬಿಜೆಪಿ ಆರೋಪಿಸಿದೆ.

ಇದನ್ನೂ ಓದಿ: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಮೊದಲ ಪಟ್ಟಿ ರಿಲೀಸ್‌: 124 ವಿಧಾನಸಭಾ ಕ್ಷೇತ್ರಗಳ ಲಿಸ್ಟ್‌ ಹೀಗಿದೆ ನೋಡಿ..

ಅಲ್ಲದೆ, ‘ಉದ್ಯಮಿ ಗೌತಮ್‌ ಅದಾನಿ ವಿರುದ್ಧ ಆರೋಪ ಮಾಡಿದ್ದಕ್ಕಾಗಿ ತನ್ನನ್ನು ಅನರ್ಹ ಮಾಡಲಾಯಿತು ಎಂಬ ರಾಹುಲ್‌ ಹೇಳಿಕೆ ಕಪೋಲಕಲ್ಪಿತ. ಇದಕ್ಕೂ ಅನರ್ಹತೆಗೂ ಸಂಬಂಧವಿಲ್ಲ. 2019ರಿಂದಲೇ ಗುಜರಾತ್‌ ಕೋರ್ಟಿನಲ್ಲಿ ನಡೆದ ಮಾನಹಾನಿ ದಾವೆಯ ತೀರ್ಪು ಈಗಷ್ಟೇ ಹೊರಬಿದ್ದಿದೆ. ಇದು ನ್ಯಾಯ ಸಹಜ ಪ್ರಕ್ರಿಯೆ’ ಎಂದು ಸ್ಪಷ್ಟಪಡಿಸಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾನತಾಡಿದ ಬಿಜೆಪಿ ಮುಖಂಡ ರವಿಶಂಕರ್‌ ಪ್ರಸಾದ್‌, ‘ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಅನರ್ಹತೆಯ ಸೇಡು ತೀರಿಸಿಕೊಳ್ಳುವ ಮಾತನ್ನು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಕರ್ನಾಟಕ ಚುನಾವಣೆಯಲ್ಲಿ ಅನರ್ಹತೆ ವಿಷಯ ದೊಡ್ಡದು ಮಾಡಿ ಅನುಕಂಪ ಗಿಟ್ಟಿಸಿಕೊಳ್ಳುವುದು ಕಾಂಗ್ರೆಸ್‌ ಯೋಜನೆ ಎಂಬುದು ಈಗ ಸಾಬೀತಾದಂತಾಗಿದೆ’ ಎಂದರು.

ಇದನ್ನೂ ಓದಿ: ಕಾಂಗ್ರೆಸ್‌ ಸೇರ್ತಾರಾ ‘ಸೈನಿಕ’ ಸಿ.ಪಿ. ಯೊಗೇಶ್ವರ್‌? ಎಚ್‌ಡಿಕೆ ಮಣಿಸಲು ಡಿಕೆ ಬ್ರದರ್ಸ್ ಜೊತೆ ಕೈ ಜೋಡಿಸ್ತಾರಾ ಸಿಪಿವೈ?

‘ಅದಾನಿ ವಿವಾದಕ್ಕೂ ರಾಹುಲ್‌ ಅನರ್ಹತೆಗೂ ಸಂಬಂಧವಿಲ್ಲ. ಅದಾನಿ ಯುಪಿಎ ಅವಧಿಯಲ್ಲೂ ಗುತ್ತಿಗೆ ಪಡೆದಿದ್ದರು. ರಾಜಸ್ಥಾನದಲ್ಲಿ ಈಗಲೂ ಅವರು ಕಾಂಗ್ರೆಸ್‌ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ. ಅದಾನಿ ವ್ಯವಹಾರಕ್ಕೂ ಮೋದಿ ಸರ್ಕಾರಕ್ಕೂ ನಂಟಿದೆ ಎಂಬ ರಾಹುಲ್‌ ಆರೋಪ ನಿರಾಧಾರ’ ಎಂದರು.

‘ಅನೇಕ ಪ್ರಕರಣಗಳಲ್ಲಿ ಬಿಜೆಪಿಯವರು ಸೇರಿ ಅನೇಕ ಪಕ್ಷದವರೂ ಅನರ್ಹರಾಗಿದ್ದಾರೆ. ಹೀಗಿದ್ದಾಗ ರಾಹುಲ್‌ ಅನರ್ಹತೆ ವಿಷಯದಲ್ಲಿ ಮಾತ್ರ ಸಂಚು ನಡೆದಿದೆ ಎಂಬುದು ನಿರಾಧಾರ. ಟೀಕೆ ತಪ್ಪಲ್ಲ. ಆದರೆ ರಾಹುಲ್‌ ಅನೇಕ ಬಾರಿ ಅವಮಾನಕಾರಿ ಹೇಳಿಕೆ ನೀಡಿದ್ದಾರೆ. ಇದರ ವಿರುದ್ಧ ಅವರ ವಿರುದ್ಧ ಇನ್ನೂ 7 ಕೇಸು ನಡೆಯುತ್ತಿವೆ’ ಎಂದು ರವಿಶಂಕರ್‌ ಪ್ರಸಾದ್‌ ನುಡಿದರು.
‘ಅಲ್ಲದೆ, ಕಾಂಗ್ರೆಸ್‌ನಲ್ಲೇ ರಾಹುಲ್‌ ಕಂಡರಾಗದ ಅನೇಕರು ಇದ್ದಾರೆ. ಅವರು ಬೇಕಂತೇ ರಾಹುಲ್‌ ಶಿಕ್ಷೆ ವಿರುದ್ಧ ಮೇಲ್ಮನವಿ ಸಲ್ಲಿಸದೇ ಇರಬಹುದು’ ಎಂದೂ ಅವರು ಚಟಾಕಿ ಹಾರಿಸಿದರು.