ಪಿಟಿಐ ನವದೆಹಲಿ(ಡಿ.26): ‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ರೈತರು 2 ವರ್ಷ ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳಬೇಕು. ಒಂದು ವೇಳೆ ಅವು ಲಾಭದಾಯಕ ಎನ್ನಿಸದಿದ್ದಲ್ಲಿ ಸರ್ಕಾರವು ಕಾಯ್ದೆಗಳ ತಿದ್ದುಪಡಿಗೆ ಸಿದ್ಧ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಭರವಸೆ ನೀಡಿದ್ದಾರೆ.

ಶುಕ್ರವಾರ ರೈತರ ರಾರ‍ಯಲಿಯಲ್ಲಿ ಮಾತನಾಡಿದ ಅವರು, ‘ಧರಣಿನಿರತರೆಲ್ಲ ರೈತರು ಹಾಗೂ ರೈತರ ಮಕ್ಕಳು. ಅವರ ಬಗ್ಗೆ ನಮಗೆ ತುಂಬಾ ಗೌರವವಿದೆ. ನಾನೂ ಒಬ್ಬ ರೈತನ ಮಗ. ಮೋದಿ ಸರ್ಕಾರವು ಯಾವುದೇ ರೈತ ವಿರೋಧಿ ನಿರ್ಣಯ ಕೈಗೊಳ್ಳುವುದಿಲ್ಲ’ ಎಂದರು.

9 ಕೋಟಿ ರೈತರ ಖಾತೆಗೆ ತಲಾ 2000: ಬಟನ್‌ ಒತ್ತಿ ಏಕಕಾಲಕ್ಕೆ 18 ಸಾವಿರ ಕೋಟಿ ಬಿಡುಗಡೆ

‘ಕೆಲವರು ರೈತರ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ. ಇವರು ಹೇಳುವಂತೆ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ನಿಲ್ಲಲ್ಲ. ಈ ಕಾಯ್ದೆಗಳಾವುವೂ ರೈತ ವಿರೋಧಿಗಳಲ್ಲ’ ಎಂದು ಸ್ಪಷ್ಟಪಡಿಸಿದರು.

‘1-2 ವರ್ಷ ಈ ಕಾಯ್ದೆಗಳ ಜಾರಿಗೆ ಅವಕಾಶ ಕೊಡಿ. ಇವುಗಳು ಹೇಗಿವೆ ಎಂದು ಪ್ರಾಯೋಗಿಕವಾಗಿ ನೋಡಿ. ಇವು ರೈತರ ಪರ ಕಾನೂನುಗಳಲ್ಲ ಎಂದು ನಿಮಗೆ ಅನ್ನಿಸಿದರೆ ನಮ್ಮ ಪ್ರಧಾನಿ ಮೋದಿ ಅವರು ಈ ಕಾಯ್ದೆಗಳ ತಿದ್ದುಪಡಿ ಮಾಡೇ ಮಾಡುತ್ತಾರೆ ಎಂದು ದೃಢಸ್ವರದಲ್ಲಿ ಹೇಳಬಯಸುತ್ತೇನೆ’ ಎಂದು ರಾಜನಾಥ್‌ ನುಡಿದರು. ಅಲ್ಲದೆ, ‘ರೈತರ ಜತೆ ಮಾತುಕತೆಗೆ ಈಗಲೂ ಸರ್ಕಾರ ಸಿದ್ಧವಿದೆ. ಅದಕ್ಕೇ ಮಾತುಕತೆಗೆ ಮತ್ತೆ ಆಮಂತ್ರಣ ಕಳಿಸಿದ್ದೇವೆ’ ಎಂದರು.