ನವದೆಹಲಿ(ಡಿ.26): ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ದಿಲ್ಲಿ ಗಡಿಯಲ್ಲಿ ರೈತರ ಅಹೋರಾತ್ರಿ ಪ್ರತಿಭಟನೆ ಮುಂದುವರಿಯುತ್ತಿರುವಾಗಲೇ, ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ(ಪಿಎಂ-ಕಿಸಾನ್‌) ಯೋಜನೆಯ 9 ಕೋಟಿಗೂ ಹೆಚ್ಚು ಫಲಾನುಭವಿ ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಅವರು 18 ಸಾವಿರ ಕೋಟಿ ರು. ಬಿಡುಗಡೆ ಮಾಡಿದ್ದಾರೆ. ಶುಕ್ರವಾರ ಪ್ರಧಾನಿ ಮೋದಿ ಅವರು ಗುಂಡಿಯನ್ನು ಒತ್ತುವುದರೊಂದಿಗೆ ಫಲಾನುಭವಿ ರೈತರ ಖಾತೆಗಳಿಗೆ ತಲಾ 2000 ರು. ಏಕಕಾಲದಲ್ಲಿ ಸಂದಾಯವಾಗಿದೆ.

ಪಿಎಂ-ಕಿಸಾನ್‌ ಯೋಜನೆಯಡಿ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ 3 ಕಂತುಗಳಲ್ಲಿ ವಾರ್ಷಿಕ 6 ಸಾವಿರ ರು. ನೆರವು ನೀಡಲಾಗುತ್ತದೆ. ಈ ಪೈಕಿ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜಯಂತಿ ಪ್ರಯುಕ್ತ ‘ಉತ್ತಮ ಆಡಳಿತದ ದಿನಾಚರಣೆ’ಯಾದ ಡಿ.25ರಂದು 9 ಕೋಟಿ ಅನ್ನದಾತರ ಖಾತೆಗಳಿಗೆ ತಲಾ 2 ಸಾವಿರ ರು.ನಂತೆ 18 ಸಾವಿರ ಕೋಟಿ ರು. ಬಿಡುಗಡೆ ಮಾಡಲಾಗಿದೆ. ಈ ವೇಳೆ ಮೋದಿ ಅವರು ರೈತರ ಜೊತೆ ಸಂವಾದ ನಡೆಸಿದರು. ಇದಕ್ಕಾಗಿ ದೇಶಾದ್ಯಂತ 19 ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ನೇರಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು.

ದೀದಿ ಸರ್ಕಾರದ ವಿರುದ್ಧ ಗರಂ:

ರೈತರಿಗೆ ಕೇಂದ್ರದ ಸಹಾಯ ಧನ ಬಿಡುಗಡೆ ಬಳಿಕ ರೈತರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮುಂದಿನ ವರ್ಷದಲ್ಲಿ ವಿಧಾನಸಭೆ ಚುನಾವಣೆಗೆ ಹಣಿಯಾಗುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಗುರಿಯಾಗಿಸಿಕೊಂಡರು. ಪಶ್ಚಿಮ ಬಂಗಾಳದ 70 ಲಕ್ಷ ರೈತರು ಪಿಎಂ-ಕಿಸಾನ್‌ ಯೋಜನೆ ವ್ಯಾಪ್ತಿಗೆ ಬರದಂತೆ ದೀದಿ ಸರ್ಕಾರ ತಡೆದಿದೆ ಎಂದು ಕಿಡಿಕಾರಿದರು.

ಕೃಷಿ ಕಾಯ್ದೆಗಳಿಂದ ರೈತರ ಜಮೀನು ಖಾಸಗಿ ಪಾಲಾಗಲ್ಲ

ಅಲ್ಲದೆ ಕಳೆದ 3 ದಶಕಗಳಿಂದ ರಾಜ್ಯದ ಆಳ್ವಿಕೆ ನಡೆಸುತ್ತಿರುವವರು ರಾಜ್ಯವನ್ನು ಹೀನಾಯ ಸ್ಥಿತಿಗೆ ತಂದಿದ್ದು, ರೈತರ ಅಭ್ಯುದಯಕ್ಕಾಗಿ ಏನನ್ನೂ ಮಾಡಿಲ್ಲ ಎಂದು ಎಡಪಕ್ಷಗಳ ವಿರುದ್ಧವೂ ಪರೋಕ್ಷ ವಾಗ್ದಾಳಿ ನಡೆಸಿದರು.