ರಾತ್ರಿ ವೇಳೆ ಫುಡ್ ಡೆಲಿವರಿ ಮಾಡಲು ತೆರಳಿದ ಬ್ಲಿಂಕಿಟ್ ಎಜೆಂಟ್ ಮೇಲೆ ಚಿರತೆ ದಾಳಿ ಮಾಡಿದ ಘಟನೆ ನಡೆದಿದೆ. ರಸ್ತೆ ಮೂಲಕ ಸಾಗಿ ಬಂದ ಚಿರತೆ ಡೆಲಿವರಿ ಎಜೆಂಟ್ ಮೇಲೆ ದಾಳಿ ಮಾಡಿದೆ. ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. 

ಇಂದೋರ್ (ಜು.08) ಆನ್‌ಲೈನ್ ಆರ್ಡರ್ ಹಾಗೂ ಡೆಲಿವರಿ ಈಗ ಸಾಮಾನ್ಯ. ತಡ ರಾತ್ರಿಯಾದರೂ ಆರ್ಡರ್ ಮಾಡಿದ ವಸ್ತುಗಳು ಕೆಲವೇ ನಿಮಿಷಗಳಲ್ಲಿ ಮನೆಗೆ ತಲುಪಿರುತ್ತದೆ. ಹೀಗೆ ಬ್ಲಿಂಕಿಟ್ ಡೆಲಿವರಿ ಎಜೆಂಟ್ ಗ್ರಾಹಕರು ಆರ್ಡರ್ ಮಾಡಿದ ವಸ್ತುಗಳನ್ನು ಹಿಡಿದು ಬೈಕ್‌ನಲ್ಲಿ ಡೆಲಿವರಿ ಮಾಡಲು ತೆರಳಿದ್ದಾನೆ. ಈ ವೇಳೆ ರಸ್ತೆಯಲ್ಲಿ ಚಿರತೆ ಆಗಮಿಸುತ್ತಿರುವುದನ್ನು ಗಮನಿಸಿದ್ದಾನೆ. ಹೀಗಾಗಿ ಬೈಕ್ ನಿಲ್ಲಿಸಿದ ಡೆಲಿವರಿ ಎಜೆಂಟ್ ಮೇಲೆ ಚಿರತೆ ದಾಳಿ ಮಾಡಿದೆ. ಅದೃಷ್ಠವಶಾತ್ ಚಿರತೆ ಭಯದಿಂದ ಓಡಿ ಹೋಗಿದೆ. ಪರಿಣಾಮ ಸಣ್ಣ ಗಾಯಗಳಿಂದ ಡೆಲಿವರಿ ಎಜೆಂಟ್ ಪ್ರಾಣಾಪಾಯದಿಂದ ಪಾರಾದ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಸ್ತೆಯಲ್ಲಿ ಓಡಿ ಬಂದ ಚಿರತೆ

ಈ ಘಟನೆ ಮಧ್ಯಪ್ರದೇಶದ ಬಿಚೋಲಿ ಮರ್ದಾನ ವಲಯದಲ್ಲಿ ನಡೆದಿದೆ. ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಡೆಲಿವರಿ ಎಜೆಂಟ್ ತೆರಳಿದ್ದಾನೆ. ರಸ್ತೆಯ ಎರಡು ಬದಿಗಳಲ್ಲಿ ಮನೆ, ಕಟ್ಟಡಗಳಿವೆ. ಕೆಲವೇ ದೂರದಲ್ಲಿರು ಮುಖ್ಯ ರಸ್ತೆಯಲ್ಲಿ ವಾಹನಗಳು ಸಾಗುತ್ತಿದೆ. ಇತ್ತ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬೆರೆಳೆಣಿಕೆ ವಾಹನಗಳು ಸಾಗುತ್ತಿದೆ. ಡೆಲಿವರಿ ಎಜೆಂಟ್ ಸಾಗುತ್ತಿದ್ದ ವೇಳೆ ಇತರ ಯಾವುದೇ ವಾಹನ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಇರಲಿಲ್ಲ. ಮುಖ್ಯ ರಸ್ತೆ ಕಡೆಯಿಂದ ಚಿರತೆ ಗಾಬರಿಗೊಂಡು ಓಡಿ ಬಂದಿದೆ. ಬೈಕ್ ಮೂಲಕ ತೆರಳುತ್ತಿದ್ದ ಡೆಲಿವರಿ ಎಜೆಂಟ್ ಚಿರತೆ ಗಮನಸಿ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿದ್ದಾನೆ.

ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಎಜೆಂಟ್

ಆದರೆ ಮತ್ತಷ್ಟು ಗಾಬರಿಗೊಂಡ ಚಿರತೆ ಏಕಾಏಕಿ ಡೆಲಿವರಿ ಎಜೆಂಟ್ ಮೇಲೆ ದಾಳಿ ಮಾಡಿದೆ. ಡೆಲಿವರಿ ಎಜೆಂಟ್ ಚಿರತೆಯಿಂದ ತಪ್ಪಿಸಿಕೊಂಡು ಓಡಿದ್ದಾನೆ. ಮೊದಲೇ ಗಾಬರಿಗೊಂಡಿದ್ದ ಚಿರತೆ ಬೈಕ್ ರಸ್ತೆಗೆ ಬೀಳುತ್ತಿದ್ದಂತೆ ಮತ್ತಷ್ಟು ಗಾಬರಿಕೊಂಡು ಓಡಿ ಹೋಗಿದೆ. ಇತ್ತ ಎಜೆಂಟ್ ಬೈಕ್ ಅಲ್ಲೆ ಬಿಟ್ಟು ಓಡಿ ಹೋಗಿದ್ದಾನೆ. ಚಿರತೆ ಪರಚಿದ ಗಾಯಗಳಿಂದ ಎಜೆಂಟ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ಆತಂಕಗೊಂಡಿದ್ದಾರೆ. ಕಳೆದ ಕೆಲ ದಿನಗಳಿಂದ ಚಿರತೆ ಓಡಾಡುತ್ತಿದೆ ಅನ್ನೋ ಸುಳಿವು ಸಿಕ್ಕಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿದ್ದಾರೆ. ಸದ್ಯ ಚಿರತೆ ಪತ್ತೆ ಹಚ್ಚಿ ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಗೊಂಡಿದೆ. ಇದೇ ವೇಳೆ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.