ನವದೆಹಲಿ(ಆ.30): 2007ರಲ್ಲಿ ನಡೆದಿದ್ದ ಬ್ರಿಟನ್‌ನ ಗ್ಲಾಸ್ಗೋ ಏರ್‌ಪೋರ್ಟ್‌ ದಾಳಿಯಲ್ಲಿ ಪಾತ್ರ ವಹಿಸಿದ್ದ ಬೆಂಗಳೂರು ಮೂಲದ ಲಷ್ಕರ್‌ ಎ ತೊಯ್ಬಾ ಭಯೋತ್ಪಾದಕನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿದೆ. 2010-11ರಲ್ಲಿ ಬೆಂಗಳೂರಿನಿಂದ ಸೌದಿ ಅರೇಬಿಯಾಗೆ ಪರಾರಿಯಾಗಿದ್ದ ಈತನನ್ನು ಸ್ವದೇಶಕ್ಕೆ ವಾಪಸ್‌ ಕರೆಸಿಕೊಂಡು ಬಂಧಿಸಲಾಗಿದೆ.

ಶಬೀಲ್‌ ಅಹ್ಮದ್‌ ಎಂಬಾತನೇ ಬಂಧಿತ. ಶುಕ್ರವಾರ ರಾತ್ರಿ ಭಾರತಕ್ಕೆ ಮರಳಿದ ನಂತರ ಈತನನ್ನು ಎನ್‌ಐಎ ತನ್ನ ವಶಕ್ಕೆ ತೆಗೆದುಕೊಂಡಿದೆ. ವೈದ್ಯಕೀಯ ಪದವೀಧರನಾಗಿರುವ ಶಬೀಲ್‌ ಅಹ್ಮದ್‌, ಗ್ಲಾಸ್ಗೋ ವಿಮಾನ ನಿಲ್ದಾಣ ದಾಳಿಯ ಪ್ರಮುಖ ರೂವಾರಿ ಕಫೀಲ್‌ ಅಹ್ಮದ್‌ನ ಸೋದರ. ಪ್ರಕರಣವೊಂದರಲ್ಲಿ ಘೋಷಿತ ಅಪರಾಧಿಯಾಗಿರುವ ಹಿನ್ನೆಲೆಯಲ್ಲಿ ಹಾಗೂ ಅಲ್‌ಖೈದಾ ಜತೆ ನಂಟಿನ ಕುರಿತು ಮಾಹಿತಿ ಸಂಗ್ರಹಿಸುವ ಸಲುವಾಗಿ ಈತನನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ. ತನಿಖೆಗೆಂದು ಬೆಂಗಳೂರು ಸೇರಿದಂತೆ ದೇಶದ ವಿವಿಧ ಕಡೆ ಶಬೀಲ್‌ ಅಹ್ಮದ್‌ನನ್ನು ಎನ್‌ಐಎ ಕರೆದೊಯ್ಯುವ ಸಾಧ್ಯತೆ ಇದೆ.

ಪುಲ್ವಾಮಾದಲ್ಲಿ ಮೂವರು ಉಗ್ರರ ಹತ್ಯೆ, ಓರ್ವ ಯೋಧ ಹುತಾತ್ಮ!

ಅಲ್‌ಖೈದಾ ಉಗ್ರ ಈತನ ಭಾವ!:

2015ರಲ್ಲಿ ದಿಲ್ಲಿಯಲ್ಲಿ ಶಬೀಲ್‌ ಮೇಲೆ ಪ್ರಕರಣವೊಂದು ದಾಖಲಾಗಿತ್ತು. ಈ ಕೇಸಿನಲ್ಲಿ ಆತನನ್ನು ಘೋಷಿತ ಅಪರಾಧಿ ಎಂದು 2016ರಲ್ಲೇ ಕೋರ್ಟ್‌ ಘೋಷಿಸಿತ್ತು.

ಅಲ್‌ ಖೈದಾ ಭಾರತ ಉಪಖಂಡ (ಎಕ್ಯುಎಎಸ್‌) ಸಂಘಟನೆಯ ಶಂಕಿತ ಉಗ್ರ ಸಯ್ಯದ್‌ ಮೊಹಮ್ಮದ್‌ ಜೀಶನ್‌ ಅಲಿ ಎಂಬಾತನನ್ನು 2017ರಲ್ಲಿ ಭಾರತಕ್ಕೆ ಸೌದಿ ಅರೇಬಿಯಾದಿಂದ ಕರೆತರಲಾಗಿತ್ತು. ಅಹ್ಮದ್‌ನ ಸೋದರಿಯನ್ನೇ ಜೀಶನ್‌ ಅಲಿ ಮದುವೆಯಾಗಿದ್ದ ಎನ್ನಲಾಗಿದೆ.

ಐಸಿಸ್‌ ‘ರಹಸ್ಯ ಸಂವಹನ’ಕ್ಕೆ ಥ್ರಿಮಾ ಆ್ಯಪ್‌ ಬಳಕೆ!

2015ರಲ್ಲಿ ಒಡಿಶಾದ ಕಟಕ್‌ನಲ್ಲಿ ಅಬ್ದುಲ್‌ ರೆಹಮಾನ್‌ ಎಂಬ ಮೌಲ್ವಿಯ ಬಂಧನದ ನಂತರ ಭಾರತದಲ್ಲಿ ಅಲ್‌ ಖೈದಾ ಸಂಘಟನೆಯ ಕುರುಹುಗಳು ಲಭಿಸಿದ್ದವು. ವಿಚಾರಣೆ ಸಂದರ್ಭದಲ್ಲಿ ಮೌಲ್ವಿಯು ತಾನು ಬೆಂಗಳೂರಿನಲ್ಲಿ ಶಬೀಲ್‌ ಅಹ್ಮದ್‌ನನ್ನು 2009ರಲ್ಲಿ ಭೇಟಿಯಾಗಿದ್ದೆ ಎಂದು ಬಾಯಿಬಿಟ್ಟಿದ್ದ ಎಂದು ಹೇಳಲಾಗಿತ್ತು.

2009ರಲ್ಲಿ ಬ್ರಿಟನ್‌ನಲ್ಲಿ ಆಗಷ್ಟೇ ಗ್ಲಾಸ್ಗೋ ಪ್ರಕರಣದಲ್ಲಿ ಶಿಕ್ಷೆ ಪೂರೈಸಿ ಅಹ್ಮದ್‌ ಸ್ವದೇಶಕ್ಕೆ ಮರಳಿದ್ದ. ಹೀಗಾಗಿ 2015ರಲ್ಲಿ ಮೌಲ್ವಿ ಬಂಧನದ ನಂತರ ಅಲ್‌ಖೈದಾ ಚಟುವಟಿಕೆಯಲ್ಲಿ ಶಬೀಲ್‌ ಅಹ್ಮದ್‌ನ ಪಾತ್ರವೇನಿದೆ ಎಂಬ ನಿಟ್ಟಿನಲ್ಲಿ ಎನ್‌ಐಎ ತನಿಖೆ ನಡೆಸುತ್ತಿತ್ತು.

2007ರಲ್ಲಿ ಬೆಂಗಳೂರು ಮೂಲದ ಕಫೀಲ್‌ ಅಹಮದ್‌ ಹೊತ್ತಿ ಉರಿಯುತ್ತಿದ್ದ ಜೀಪ್‌ ಅನ್ನು ಗ್ಲಾಸ್ಗೋ ಏರ್‌ಪೋರ್ಟ್‌ಗೆ ನುಗ್ಗಿಸಿ ದಾಳಿ ನಡೆಸಲು ಯತ್ನಿಸಿದ್ದ. ಆತ ಸೆರೆ ಸಿಕ್ಕನಾದರೂ ಸುಟ್ಟಗಾಯಗಳಿಂದಾಗಿ ಒಂದು ವಾರದ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಆತನ ದಾಳಿ ಕುರಿತು ಮಾಹಿತಿ ಇದ್ದರೂ ಬಹಿರಂಗಪಡಿಸಿರಲಿಲ್ಲ ಎಂಬ ಕಾರಣಕ್ಕೆ ಶಬೀಲ್‌ಗೆ 18 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಬಳಿಕ ಭಾರತಕ್ಕೆ ಗಡೀಪಾರು ಮಾಡಲಾಗಿತ್ತು.

ಯಾರು ಈ ಶಬೀಲ್‌?

- ಬೆಂಗಳೂರಿನ ಡಾ| ಬಿ.ಆರ್‌. ಅಂಬೇಡ್ಕರ್‌ ವೈದ್ಯ ಕಾಲೇಜಿನ ಪದವೀಧರ ಶಬೀಲ್‌

- 1998ರಿಂದ 2003ರವರೆಗೆ ವೈದ್ಯಕೀಯ ಶಿಕ್ಷಣ ಮುಗಿಸಿದ್ದ

- ಉನ್ನತ ಶಿಕ್ಷಣಕ್ಕಾಗಿ 2004ರಲ್ಲಿ ಬ್ರಿಟನ್‌ಗೆ ತೆರಳಿದ್ದ

- ಈತನ ಸೋದರ ಕಫೀಲ್‌ ಅಹಮದ್‌ ಗ್ಲಾಸ್ಗೋ ವಿಮಾನ ನಿಲ್ದಾಣ ಸ್ಫೋಟಕ್ಕೆ ಯತ್ನಿಸಿ, ಸಾವಿಗೀಡಾಗಿದ್ದ

- ಆ ವಿಚಾರವನ್ನು ಮುಚ್ಚಿಟ್ಟಕಾರಣಕ್ಕೆ ಶಬೀಲ್‌ಗೆ 18 ತಿಂಗಳ ಶಿಕ್ಷೆಯಾಗಿತ್ತು

- ಶಿಕ್ಷೆ ಮುಗಿದ ಬಳಿಕ ಬ್ರಿಟನ್‌ ಸರ್ಕಾರ ಭಾರತಕ್ಕೆ ಈತನನ್ನು ಗಡೀಪಾರು ಮಾಡಿತ್ತು

- ಭಾರತಕ್ಕೆ ಮರಳಿದ ಮೇಲೆ ಮತ್ತೆ ಉಗ್ರಗಾಮಿಗಳ ಜತೆ ನಂಟು ಹೊಂದಿದ್ದ

- 2010-11ರಲ್ಲಿ ಸೌದಿ ಅರೇಬಿಯಾಗೆ ಪರಾರಿಯಾಗಿದ್ದ