ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು(ಆ.29): ಆನ್‌ಲೈನ್‌ ಪ್ರಖ್ಯಾತ ಸಂವಹನ ಆ್ಯಪ್‌ ಆದ ‘ಥ್ರಿಮಾ’ (Th್ಟಛಿಛಿಞa app) ಆ್ಯಪ್‌ನ್ನೇ ತನ್ನ ಐಸಿಸ್‌ ಸಹವರ್ತಿಗಳ ಜತೆ ಸಂವಹನಕ್ಕಾಗಿ ಇತ್ತೀಚಿಗೆ ಬೆಂಗಳೂರಿನಲ್ಲಿ ಸೆರೆಯಾದ ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಶಂಕಿತ ಉಗ್ರ ಡಾ.ಅಬ್ದುರ್‌ ರೆಹಮಾನ್‌ ಬಳಸಿದ್ದ ಎಂಬ ಸಂಗತಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಪತ್ತೆ ಹಚ್ಚಿದೆ.

ಈ ಆ್ಯಪ್‌ ಬಳಕೆಗೆ ಸಂವಹನ ನಡೆಸುವ ವ್ಯಕ್ತಿಗಳು ಐಡಿ ಹೊಂದಿರಬೇಕು. ಐಡಿ ಇಲ್ಲದೆ ಕರೆ ಅಥವಾ ಸಂದೇಶ ಕಳುಹಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಸಂದೇಶ ಸ್ವೀಕರಿಸಿದ ವ್ಯಕ್ತಿ ಅದನ್ನು ಓದಿದ ಕೆಲವೇ ನಿಮಿಷಗಳಲ್ಲಿ ತಾನಾಗಿಯೇ ಶಾಶ್ವತವಾಗಿ ಅಳಿಸಿಹೋಗುತ್ತದೆ. ಹಾಗಾಗಿ ರಹಸ್ಯ ಮಾತುಕತೆಗೆ ಅಬ್ದುರ್‌ ಸಂಗಡಿಗರು ಥ್ರಿಮಾ ಬಳಸಿರಬಹುದು ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಟೆರರ್‌ ಡಾಕ್ಟರ್‌ ಗೆಳೆಯರಿಂದ ‘ಐಸಿಸ್‌’ ಉಗ್ರರ ಸೇವೆ?

ಥ್ರಿಮಾ ಮಾದರಿಯಲ್ಲೇ ಪ್ರಪಂಚದಲ್ಲೆಡೆ ಐಸಿಸ್‌ ಅನುಕಂಪ ಹೊಂದಿರುವರನ್ನು ಒಂದೇ ವೇದಿಕೆ ತಂದು, ಐಸಿಸ್‌ ಉಗ್ರರಿಗೆ ವೈದ್ಯಕೀಯ ಸೇವೆ ಹಾಗೂ ಶಸ್ತ್ರಾಸ್ತ್ರ ಪೂರೈಕೆ ಕಲ್ಪಿಸುವ ಸಲುವಾಗಿ ರಹಸ್ಯವಾಗಿ ಸಂವಹನ ನಡೆಸುವಂಥ ಪ್ರತ್ಯೇಕ ‘ಆ್ಯಪ್‌’ಗಳನ್ನು ರೂಪಿಸಲು ಅಬ್ದುರ್‌ ರೆಹಮಾನ್‌ ತಯಾರಿ ನಡೆಸಿದ್ದ ಎಂದು ತಿಳಿದು ಬಂದಿದೆ.

ಗೂಗಲ್‌ ಸ್ಟೋರ್‌ನಲ್ಲಿ ಥ್ರಿಮಾ ಡೌನ್‌ಲೋಡ್‌ಗೆ ಲಭ್ಯವಿದೆ. ವಾಟ್ಸಾಪ್‌ ಹಾಗೂ ಫೇಸ್‌ಬುಕ್‌ ಮೆಸೆಂಜರ್‌ನಲ್ಲಿ ಸಂದೇಶ ವಿನಿಮಿಯವಾದರೆ ತನಿಖಾ ಸಂಸ್ಥೆಗಳಿಗೆ ಸಿಕ್ಕಿ ಹಾಕಿಕೊಳ್ಳುವ ಭೀತಿಯಿಂದ ಐಸಿಸ್‌ ಸೇರಿದಂತೆ ಭಯೋತ್ಪಾದಕ ಸಂಘಟನೆಗಳು, ಆನ್‌ಲೈನ್‌ನಲ್ಲಿ ಅವಿಷ್ಕಾರಗೊಳ್ಳುವ ಹೊಸ ಹೊಸ ಆ್ಯಪ್‌ಗಳ ಮೊರೆ ಹೋಗುತ್ತಾರೆ. 2015ರಲ್ಲಿ ಬೆಂಗಳೂರಿನ ಎಂಜಿ ರಸ್ತೆ ಹತ್ತಿರದ ಚಚ್‌ರ್‍ ಸ್ಟ್ರೀಟ್‌ ಬಾಂಬ್‌ ಸ್ಫೋಟದ ವೇಳೆ ಸಂವಹನಕ್ಕೆ ಇಂಡಿಯನ್‌ ಮುಜಾಹಿದ್ದೀನ್‌ (ಐಎಂ) ಶಂಕಿತ ಉಗ್ರರು ‘ಕಿಕ್‌’ ಆ್ಯಪ್‌ ಬಳಸಿದ್ದರು. ಅಂತೆಯೇ ಇದೇ ವರ್ಷದ ಆರಂಭದಲ್ಲಿ ಸದ್ದುಗುಂಟೆಪಾಳ್ಯದಲ್ಲಿ ಬಂಧಿತರಾದ ದಕ್ಷಿಣ ಭಾರತದ ಐಸಿಸ್‌ ಸಂಘಟನೆಯ ಶಂಕಿತ ಉಗ್ರ ಮೆಹಬೂಬ್‌ ಪಾಷ ತಂಡವು ‘ಸಿಗ್ನಲ್‌’ ಆ್ಯಪ್‌ ಬಳಸಿತ್ತು. ಈಗ ಥ್ರಿಮಾ ಉಪಯೋಗವಾಗಿದೆ. ಹೀಗೆ ಪದೇ ಪದೇ ಸಂವಹನಕ್ಕೆ ಸಂಘಟನೆಗಳು ಹೊಸ ಹಾದಿ ಹುಡುಕಿಕೊಳ್ಳುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಐಸಿಸ್‌ ಉಗ್ರರ ಚಿಕಿತ್ಸೆಗಾಗಿ ಬೆಂಗ್ಳೂರು ಡಾಕ್ಟರ್‌ ಆ್ಯಪ್‌: ಶಸ್ತ್ರಾಸ್ತ್ರ ಪೂರೈಕೆಗೂ ಬಳಕೆ!

ಥ್ರಿಮಾ ಐಡಿ ಕೊಟ್ಟಿದ್ದು ಐಸಿಸ್‌:

ಐಸಿಸ್‌ ಸೋದರ ಸಂಘಟನೆ ಐಎಸ್‌ಕೆಪಿನಲ್ಲಿ ಕಾಶ್ಮೀರ ಮೂಲದ ಜಹಾನ್‌ಝೈಬ್‌ ಸಾಮಿ ವಾನಿ ಹಾಗೂ ಆತನ ಪತ್ನಿ ಹೀನಾ ಬಶೀರ್‌ ಬೇಗ್‌ ಗುರುತಿಸಿಕೊಂಡಿದ್ದರು. 2014ರಲ್ಲಿ ಸಿರಿಯಾದ ಐಸಿಸ್‌ ವೈದ್ಯಕೀಯ ತರಬೇತಿ ಶಿಬಿರದಲ್ಲಿ ಅಬ್ದುರ್‌ಗೆ ಮಹಿಳೆಯೊಬ್ಬಳ ಮೂಲಕ ಕಾಶ್ಮೀರ ದಂಪತಿ ವಿಷಯ ತಿಳಿಯಿತು. ಆ ವೇಳೆಗೆ ಆಕೆ ಥ್ರಿಮಾ ಆ್ಯಪ್‌ನ ಕಾಶ್ಮೀರದ ದಂಪತಿ ಐಡಿ ಕೊಟ್ಟಿದ್ದಳು. ಭಾರತಕ್ಕೆ ಮರಳಿದ ಬಳಿಕ ಆ ಐಡಿ ಬಳಸಿ ಅಬ್ದುರ್‌, ಜಹಾನ್‌ಝೈಬ್‌ ಜತೆ ನಿರಂತರ ಸಂಪರ್ಕದಲ್ಲಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದಲ್ಲಿ ಪೌರತ್ವ ತಿದ್ದುಪಡ್ಡಿ ಕಾಯ್ದೆ ವಿರೋಧಿಸಿ ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯ ಎಸಗಲು ಕಾಶ್ಮೀರದ ದಂಪತಿ ತಯಾರಿ ನಡೆಸಿದ್ದರು. ಸಿರಿಯಾದಿಂದ ಮರಳಿದ ಅಬ್ದುರ್‌ ರೆಹಮಾನ್‌, ಕಾಶ್ಮೀರದ ದಂಪತಿ ರೂಪಿಸುವ ದುಷ್ಕೃತ್ಯಕ್ಕೆ ಶಸ್ತ್ರಾಸ್ತ್ರಗಳ ಪೂರೈಕೆಗೆ ಸಹಕರಿಸಲು ಶ್ರಮಿಸುತ್ತಿದ್ದ. ಅದೇ ರೀತಿ ಘಟನೆಯಲ್ಲಿ ಅಪಾಯಕ್ಕೆ ಸಿಲುಕಿದರೆ ಅಂತಹವರಿಗೆ ವೈದ್ಯಕೀಯ ಸೇವೆಗೆ ವೈದ್ಯ ಮಿತ್ರರನ್ನು ಕಲೆ ಹಾಕುತ್ತಿದ್ದ ಎಂದು ತಿಳಿದು ಬಂದಿದೆ.

ಥ್ರಿಮಾ ಆ್ಯಪ್‌ ಬಳಸಿದ್ದು ಏಕೆ?

ಥ್ರಿಮಾ ರಹಸ್ಯ ಸಂವಹನಕ್ಕೆ ಭಯೋತ್ಪಾದಕ ಸಂಘಟನೆಗಳ ಸದ್ಯದ ನೆಚ್ಚಿನ ಆ್ಯಪ್‌ ಆಗಿದೆ. ಸ್ವಿಸ್‌ ದೇಶದ ಕಂಪನಿಯ ಆ್ಯಪ್‌ ಇದಾಗಿದೆ. ಥ್ರಿಮಾ ತುಂಬಾ ಸುರಕ್ಷಿತವಾಗಿದ್ದು, ಸಂವಹನದ ರಹಸ್ಯ, ಖಾಸಗಿತನ ಕಾಪಾಡಲಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಟೆರರರ್ ಡಾಕ್ಟರನ್ನ ಐಸಿಸ್‌ಗೆ ಸೇರಿಸಿದ್ದು ಇನ್ನೊಬ್ಬ ಡಾಕ್ಟರ್!

ಹ್ಯಾಕ್‌ ಮಾಡಲು ಸಾಧ್ಯವಿಲ್ಲ. ಮೊಬೈಲ್‌ ನಂಬರ್‌ ಅಥವಾ ಇಮೇಲ್‌ ಐಡಿ ನಮೂದಿಸದೆ ಗ್ರಾಹಕರು ಥ್ರಿಮಾ ಆ್ಯಪ್‌ ಬಳಸಬಹುದು. ಆದರೆ ತನ್ನ ಗ್ರಾಹಕರಿಗೆ ಪ್ರತ್ಯೇಕವಾಗಿ ಥ್ರಿಮಾ ಐಡಿ ನೀಡುತ್ತದೆ. ಮೊಬೈಲ್‌ ಸಂಖ್ಯೆ ಹಾಗೂ ಇಮೇಲ್‌ ದಾಖಲಿಸದ ಕಾರಣ ಗ್ರಾಹಕರ ಮೇಲೆ ತನಿಖಾ ಸಂಸ್ಥೆಗಳ ಕಣ್ಗಾವಲು ಕಷ್ಟವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಹಾಗಾಗಿ ಸಿರಿಯಾದಲ್ಲಿ ತನಗೆ ಸಿಕ್ಕಿದ ಕಾಶ್ಮೀರದ ದಂಪತಿಯ ಥ್ರಿಮಾ ಐಡಿ ಬಳಸಿ ಅವರನ್ನು ಅಬ್ದುರ್‌ ರೆಹಮಾನ್‌ ಸಂಪರ್ಕಿಸಿದ್ದ ಎಂದು ಗೊತ್ತಾಗಿದೆ.

ಇ ಮೇಲ್‌ನಲ್ಲಿ ಈ ಹಿಂದೆ ಸಂವಹನ

ಆ್ಯಪ್‌ಗಳಿಲ್ಲದ ಕಾಲದಲ್ಲಿ ಶಂಕಿತರು, ಇಮೇಲ್‌ ಮೂಲಕವೇ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದರು. ಹೇಗೆಂದರೆ ಸಾಮಾನ್ಯವಾಗಿ ಒಂದೇ ಮೇಲ್‌ ಐಡಿ ಕ್ರಿಯೆಟ್‌ ಮಾಡುತ್ತಿದ್ದರು. ಒಬ್ಬಾತ ತನ್ನ ಸಂಗಡಿಗೆ ಹೇಳಬೇಕಾದ ಮಾಹಿತಿಯನ್ನು ಮೇಲ್‌ ಬರೆದು ಡ್ರಾಪ್‌ನಲ್ಲಿಡುತ್ತಿದ್ದ. ಮತ್ತೊಬ್ಬ, ಬೇರೆಡೆ ಮೇಲ್‌ ಓಪನ್‌ ಮಾಡಿಕೊಂಡು ಓದಿಕೊಳ್ಳುತ್ತಿದ್ದ. ಬಳಿಕ ಡ್ರಾಪ್‌ ಮಾಡುತ್ತಿದ್ದರು. ಆ ಮೇಲ್‌ಗಳನ್ನು ಪರಿಶೀಲಿಸಿದಾಗ ಎರಡು ಕಡೆ ಐಪಿಯಲ್ಲಿ ಪತ್ತೆಯಾಗುತ್ತಿದ್ದವು. ಇದರಿಂದ ಒಂದೇ ಮೇಲ್‌ ಐಡಿಯನ್ನು ಶಂಕಿತರು ಸಂವನಹಕ್ಕೆ ಬಳಸಿರುವುದು ಗೊತ್ತಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.