Land For Job Scam: ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ಗೆ ಸಿಬಿಐ ಸಮನ್ಸ್ ಜಾರಿ!
ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ಕುಟುಂಬಕ್ಕೆ ಸಂಕಷ್ಟ ತಂದಿರುವ ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಸಿಬಿಐ, ಬಿಹಾರ ಉಪಮುಖ್ಯಮಂತ್ರಿ ಹಾಗೂ ಲಾಲೂಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್‌ಗೆ ಸಮನ್ಸ್ ಜಾರಿ ಮಾಡಿದೆ. ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ನವದೆಹಲಿ (ಮಾ.11): ಮೇವು ಹಗರಣದ ಬಳಿಕ ಲಾಲೂ ಪ್ರಸಾದ್ ಯಾದವ್ ಅವರ ಕುಟುಂಬಕ್ಕೆ ಇನ್ನೊಂದು ಹಗರಣ ಸಂಕಷ್ಟ ತಂದಿಟ್ಟಿದೆ. ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ಹಾಗೂ ಸಂಬಂಧಿಕರಿಗೆ ಸೇರಿದ 15 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಈ ನಡುವೆ ಕೇಂದ್ರ ತನಿಖಾ ದಳ (ಸಿಬಿಐ) ಶನಿವಾರ ವಿಚಾರಣೆಗೆ ಹಾಜರಾಗುವಂತೆ ಬಿಹಾರ ಉಪಮುಖ್ಯಮಂತ್ರಿ ಹಾಗೂ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್‌ಗೆ ಸಮನ್ಸ್ ಜಾರಿ ಮಾಡಿದೆ. ಶುಕ್ರವಾರ ಜಾರಿ ನಿರ್ದೇಶನಾಲಯ ತೇಜಸ್ವಿ ಯಾದವ್ ಅವರಿಗೆ ಸಂಬಂಧಪಟ್ಟ ದೆಹಲಿ ನಿವಾಸದ ಮೇಲೂ ದಾಳಿ ನಡೆಸಿತ್ತು. ಇನ್ನೊಂದೆಡೆ ಇಡಿ ಶುಕ್ರವಾರ ಲಾಲೂ ಪ್ರಸಾದ್ ಯಾದವ್ ಅವರ ಸಂಬಂಧಿಕರು ಹಾಗೂ ಆಪ್ತರ ನಿವಾಸ ಮತ್ತು ಕಚೇರಿಯ ಮೇಲೆ ನಡೆಸಿದ ದಾಳಿಯಲ್ಲಿ 53 ಲಕ್ಷ ರೂಪಾಯಿ ನಗದು, 2 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ. ಇದರಲ್ಲಿ 1.5 ಕೆಜಿ ಆಭರಣ ಚಿನ್ನವಾಗಿದ್ದರೆ, 540 ಗ್ರಾಂ ಇತರ ಚಿನ್ನವಾಗಿದೆ. ದೆಹಲಿ, ಮುಂಬೈ, ನೋಯ್ಡಾ ಮತ್ತು ಪಾಟ್ನಾದಲ್ಲಿ ಲಾಲು ಯಾದವ್ ಅವರ ನಿಕಟವರ್ತಿಗಳ 15 ಸ್ಥಳಗಳ ಮೇಲೆ ಇಡಿ ಶುಕ್ರವಾರ ದಾಳಿ ನಡೆಸಲಾಗಿತ್ತು. ಇವುಗಳಲ್ಲಿ ದೆಹಲಿ ತೇಜಸ್ವಿ ಯಾದವ್ ಅವರ ಮನೆ, ಲಾಲು ಅವರ ಮೂವರು ಪುತ್ರಿಯರಾದ ಹೇಮಾ, ರಾಗಿಣಿ ಮತ್ತು ಚಂದಾ ಅವರ ಮನೆ ಸೇರಿದೆ. ಇವುಗಳಲ್ಲದೆ ಲಾಲು ಅವರ ಸೋದರ ಮಾವ ಜಿತೇಂದ್ರ ಯಾದವ್ ಅವರ ಗಾಜಿಯಾಬಾದ್ ನಿವಾಸದ ಮೇಲೂ ದಾಳಿ ನಡೆಸಲಾಗಿದೆ.
ಸಂಘ ಮತ್ತು ಬಿಜೆಪಿ ವಿರುದ್ಧ ನನ್ನ ಸೈದ್ಧಾಂತಿಕ ಹೋರಾಟ ಹಿಂದೆಯೂ ಇತ್ತು ಮತ್ತು ಮುಂದುವರಿಯಲಿದೆ ಎಂದು ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ. ನಾನು ಯಾವತ್ತೂ ಮಂಡಿಯೂರಿಲ್ಲ. ನಿಮ್ಮ ರಾಜಕೀಯಕ್ಕೆ ನನ್ನ ಕುಟುಂಬ ಮತ್ತು ಪಕ್ಷದ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಲಾಲು ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ಇಡಿ ಕ್ರಮದ ವೀಡಿಯೊವನ್ನು ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ, 'ಸೆಪ್ಟಿಕ್ ಟ್ಯಾಂಕ್ ಅಗೆಯುವಾಗ ಅನಿಲ ಪತ್ತೆಯಾಗಿದೆ. ಮೋದಿ ಸಾಹೇಬರಿಗೆ ಚಹಾ ಮಾಡಲು ಲೋಡ್ ಟ್ರಕ್‌ಗಳನ್ನು ತೆಗೆದುಕೊಂಡು ಹೋಗಲಾಗಿದೆ' ಎಂದು ಲೇವಡಿ ಮಾಡಿದ್ದಾರೆ.
Land For Job Scam: ಲಾಲೂ ಪ್ರಸಾದ್ ಯಾದವ್‌ಗೆ ಸೇರಿದ 15 ಸ್ಥಳಗಳಲ್ಲಿ ಇಡಿ ದಾಳಿ!
'ಕಳೆದ 14 ಗಂಟೆಗಳಿಂದ ಮೋದಿ ಜಿ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಮನೆಯಲ್ಲಿ ಇಡಿ ಅಧಿಕಾರಿಗಳನ್ನು ಇರಿಸಿದ್ದಾರೆ. ಗರ್ಭಿಣಿ ಪತ್ನಿ ಹಾಗೂ ಸಹೋದರಿಯರಿಗೆ ಕಿರುಕುಳ ನೀಡಲಾಗುತ್ತಿದೆ. ಲಾಲು ಪ್ರಸಾದ್ ಯಾದವ್ ಅವರಿಗೆ ವಯಸ್ಸಾಗಿದೆ, ಅನಾರೋಗ್ಯವಿದೆ, ಆದರೂ ಮೋದಿ ಸರ್ಕಾರ ಅವರ ಬಗ್ಗೆ ಮಾನವೀಯತೆ ತೋರಲಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 2017ರಲ್ಲೂ ದಾಳಿ ಆಗಿತ್ತು, ಆ ನಂತರ ನಾವು ಬೇರೆಯಾಗಿದ್ದೆವಯ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಇದಾಗಿ ಐದು ವರ್ಷ ಕಳೆದಿದೆ. ಈಗ ಮತ್ತೆ ನಾವು ಒಂದಾಗಿದ್ದರೆ ಆಕ್ರೋಶ ವ್ಯಕ್ತವಾಗಿದೆ. ಈ ದಾಳಿಯ ಬಗ್ಗೆ ನಾನೇನು ಹೇಳಬಲ್ಲೆ ಎಂದು ಪ್ರಶ್ನಿಸಿದ್ದಾರೆ.
ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಮನೆ ಮೇಲೆ ಸಿಬಿಐ ರೇಡ್: ರಾಬ್ಢಿ ದೇವಿ ವಿಚಾರಣೆ
ಲಾಲು ಅವರ ಸೋದರ ಮಾವ ಜಿತೇಂದ್ರ ಯಾದವ್ ಅವರ ಗಾಜಿಯಾಬಾದ್ (ಯುಪಿ) ನಿವಾಸದಲ್ಲಿ ಇಡಿ 16 ಗಂಟೆಗಳ ಶೋಧ ಕಾರ್ಯ ನಡೆಸಿತು. ಶುಕ್ರವಾರ ಬೆಳಗ್ಗೆ 8 ಗಂಟೆಗೆ ಆರಂಭವಾದ ತನಿಖೆ ಮಧ್ಯರಾತ್ರಿ 12 ಗಂಟೆಗೆ ಮುಕ್ತಾಯವಾಯಿತು. ತನಿಖಾ ಸಂಸ್ಥೆಯು 3 ದೊಡ್ಡ ಬಾಕ್ಸ್‌ಗಳಲ್ಲಿ ದಾಖಲೆಗಳನ್ನು ತುಂಬಿಕೊಂಡಿದೆ. 10ಕ್ಕೂ ಹೆಚ್ಚು ಇಡಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಶುಕ್ರವಾರ ಬೆಳಗ್ಗೆ ಮನೆಯ ಮುಖ್ಯ ಗೇಟ್ ಮುಚ್ಚಲಾಗಿತ್ತು. ಯಾವುದೇ ಹೊರಗಿನವರಿಗೆ ಪ್ರವೇಶಿಸಲು ಅಥವಾ ಮನೆಯ ಸದಸ್ಯರಿಗೆ ಹೊರಗೆ ಹೋಗಲು ಅವಕಾಶವಿರಲಿಲ್ಲ. ಕುಟುಂಬದ ಎಲ್ಲ ಸದಸ್ಯರ ಫೋನ್‌ಗಳು ಸ್ವಿಚ್ ಆಫ್ ಆಗಿದ್ದವು ಎಂದು ಮೂಲಗಳು ತಿಳಿಸಿವೆ. ಜಿತೇಂದ್ರ ಯಾದವ್ ಎಸ್‌ಪಿಯ ಮಾಜಿ ಎಂಎಲ್‌ಸಿ ಮತ್ತು ಗಾಜಿಯಾಬಾದ್‌ನ ಆರ್‌ಡಿಸಿ ರಾಜನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.