ಬಿಹಾರ ಚುನಾವಣಾ ಫಲಿತಾಂಶದ ನಂತರ, ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ರಾಜಕೀಯ ಮತ್ತು ಕುಟುಂಬ ಸಂಬಂಧಗಳನ್ನು ತ್ಯಜಿಸುವುದಾಗಿ ಘೋಷಿಸಿದ್ದಾರೆ. ಈ ನಿರ್ಧಾರದ ಹಿಂದೆ ತೇಜಸ್ವಿ ಯಾದವ್ ಅವರ ಸಲಹೆಗಾರರ ಪಾತ್ರವಿದೆ ಎಂದು ಉಲ್ಲೇಖ. ಯಾದವ್ ಕುಟುಂಬದ ಆಂತರಿಕ ಕಲಹದ ಬಗ್ಗೆ ಚರ್ಚೆ.
ಪಟ್ನಾ (ನ. 15): ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದ ಬೆನ್ನಲ್ಲೇ ಆರ್‌ಜೆಡಿ (ರಾಷ್ಟ್ರೀಯ ಜನತಾ ದಳ) ಅಧ್ಯಕ್ಷ ಲಾಲು ಪ್ರಸಾದ್ ಯಾದವ್‌ರ ಪುತ್ರಿ ರೋಹಿಣಿ ಆಚಾರ್ಯ ಅವರು ಶನಿವಾರ ರಾಜಕೀಯ ಜೀವನ ತ್ಯಜಿಸುತ್ತಿದ್ದೇನೆ ಎಂದು ಘೋಷಿಸಿದ್ದಾರೆ. ಅಲ್ಲದೆ, ಕುಟುಂಬ ಸದಸ್ಯರೊಂದಿಗಿನ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಳ್ಳುತ್ತಿದ್ದೇನೆ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಈ ಘೋಷಣೆಗೆ ನಿತೀಶ್ ಕುಮಾರ್ ಅವರ ಜನತಾ ದಳ (ಯುನೈಟೆಡ್) ಪಕ್ಷ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ತಂದೆಯ ಜೀವ ಉಳಿಸಿದ ಪುತ್ರಿ ರೋಹಿಣಿ ಆಚಾರ್ಯ ಈಗ ರಾಜಕೀಯ ಮತ್ತು ಸಂಬಂಧದಿಂದಲೂ ಕಡಿದುಕೊಂಡಿದ್ದು, ಯಾದವ್ ಕುಟುಂಬದ ಆಂತರಿಕ ಕಲಹ ಬಹಿರಂಗವಾಗಿದೆ ಎಂದು ಟೀಕಿಸಿದೆ.
ರೋಹಿಣಿ ಆಚಾರ್ಯ ಟ್ವಿಟರ್ ಎಕ್ಸ್‌ನಲ್ಲಿ ಏನಿದೆ?
ರೋಹಿಣಿ ಆಚಾರ್ಯ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, 'ನಾನು ರಾಜಕೀಯವನ್ನು ತೊರೆಯುತ್ತಿದ್ದೇನೆ ಮತ್ತು ನನ್ನ ಕುಟುಂಬದೊಂದಿಗಿನ ಸಂಬಂಧವನ್ನು ಕೊನೆಗೊಳಿಸುತ್ತಿದ್ದೇನೆ' ಎಂದು ಬರೆದಿದ್ದಾರೆ. ಈ ಪೋಸ್ಟ್‌ನಲ್ಲಿ ಆರ್‌ಜೆಡಿ ನಾಯಕ ಸಂಜಯ್ ಯಾದವ್ ಮತ್ತು ರಮೀಜ್ ಅವರನ್ನು ಉಲ್ಲೇಖಿಸಿ, 'ಅವರು ನನ್ನನ್ನು ಹೀಗೆ ಮಾಡಲು ಕೇಳಿಕೊಂಡಿದ್ದಾರೆ. ಎಲ್ಲಾ ಆಪಾದನೆಗಳನ್ನು ನಾನೇ ತೆಗೆದುಕೊಳ್ಳುತ್ತಿದ್ದೇನೆ' ಎಂದು ಹೇಳಿದ್ದಾರೆ. ಇನ್ನೂ ಆಸಕ್ತಿಯ ವಿಷಯ ಎಂದರೆ ಈ ಪೋಸ್ಟ್ ಆರಂಭದಲ್ಲಿ ಕುಟುಂಬ ಸಂಬಂಧ ಕಡಿತದ ಬಗ್ಗೆ ಮಾತ್ರ ಇತ್ತು. ನಂತರ ಅದನ್ನು ಎಡಿಟ್ ಮಾಡಿ ಸಂಜಯ್ ಯಾದವ್ ಮತ್ತು ರಮೀಜ್ ಅವರ ಹೆಸರುಗಳನ್ನು ಸೇರಿಸಲಾಗಿತ್ತು. ಈ ಎರಡು ಪೋಸ್ಟ್fಗಳನ್ನ ಅಟ್ಯಾಚ್ ಮಾಡಲಾದ ಫೋಟೋದಲ್ಲಿ ಸ್ಪಷ್ಟವಾಗಿ ಕಾಣಬಹುದು.
ತಂದೆ ಲಾಲು ಯಾದವ್‌ಗಾಗಿ ಕಿಡ್ನಿ ದಾನ ಮಾಡಿದ್ದ ರೋಹಿಣಿ:
ರೋಹಿಣಿ ಅವರು ಲಾಲು ಯಾದವ್‌ರ ಕಿಡ್ನಿ ದಾನ ಮಾಡಿ ಅವರ ಜೀವ ಉಳಿಸಿದ್ದರು. ಆದರೂ, ಈಗ ಆ ಕುಟುಂಬದೊಂದಿಗೆ ಸಂಬಂಧ ಕಡಿದುಕೊಳ್ಳುವಷ್ಟು ಗಂಭೀರವಾಗಿದೆ. ಚುನಾವಣೆಯಲ್ಲಿ ಆರ್‌ಜೆಡಿ ಹೀನಾಯ ಸೋಲು ಎದುರಿಸಿದ್ದು, ಇದು ಕುಟುಂಬದ ಆಂತರಿಕ ಸಮಸ್ಯೆಗಳನ್ನು ಉಲ್ಬಣಿಸಿದೆ ಎಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಸಂಜಯ್ ಮತ್ತು ರಮೀಜ್‌ರ ಪಾತ್ರ ಏನು?
ಸಂಜಯ್ ಯಾದವ್ ತೇಜಸ್ವಿ ಯಾದವ್‌ರ (ಲಾಲು ಅವರ ಪುತ್ರ) ಪ್ರಮುಖ ಸಲಹೆಗಾರ ಎಂದೇ ಕರೆಯಲಾಗುತ್ತದೆ. ರಾಜ್ಯಸಭಾ ಸದಸ್ಯರಾಗಿ ಆರ್‌ಜೆಡಿಯ ನೀತಿ ನಿರ್ಧಾರದಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ.
ಇನ್ನು ರಮೀಜ್ ತೇಜಸ್ವಿ ಅವರ 'ನೆರಳಿನಂತೆ' ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಲಾಗುತ್ತದೆ. ಆದರೆ, ಆರ್‌ಜೆಡಿಯಲ್ಲಿ ಯಾವುದೇ ಅಧಿಕೃತ ಹುದ್ದೆ ಇಲ್ಲ ಎಂಬುದು ಗಮನಿಸಬೇಕು.
ಈ ವರ್ಷದ ಆರಂಭದಲ್ಲಿ (ಸೆಪ್ಟೆಂಬರ್‌ನಲ್ಲಿ) ರೋಹಿಣಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಕುಟುಂಬ ಸದಸ್ಯರನ್ನು ಅನ್‌ಫಾಲೋ ಮಾಡಿದ್ದರು. ಅವರು ಕೇವಲ ಐದು ಜನರನ್ನು (ಸಹೋದರಿ ರಾಜಲಕ್ಷ್ಮಿ ಯಾದವ್ ಸೇರಿದಂತೆ) ಮಾತ್ರ ಫಾಲೋ ಮಾಡುತ್ತಿದ್ದಾರೆ. ಈ ಘಟನೆ ಬಿಹಾರ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.


