ಕುವೈತ್ ಅಗ್ನಿ ದುರಂತ: 3ನೇ ಮಹಡಿಯಿಂದ ನೀರಿನ ಟ್ಯಾಂಕ್‌ಗೆ ಹಾರಿ ಪಾರಾದ ಕೇರಳಿಗ : ಮುರಿದ ಪಕ್ಕೆಲುಬು
ಕುವೈತ್‌ನಲ್ಲಿ ನಡೆದ ಬೆಂಕಿ ದುರಂತದ ವೇಳೆ ಮೂರನೇ ಮಹಡಿಯಿಂದ ಕೆಳಗೆ ಹಾರಿ ಕೇರಳದ ವ್ಯಕ್ತಿಯೊಬ್ಬರು ಜೀವ ಉಳಿಸಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಿರುವನಂತಪುರ: ಕುವೈತ್‌ನಲ್ಲಿ ನಡೆದ ಬೆಂಕಿ ದುರಂತ ಪ್ರಕರಣದಲ್ಲಿ 45 ಭಾರತೀಯರು ಸಾವನ್ನಪ್ಪಿರುವ ವಿಚಾರ ಗೊತ್ತೆ ಇದೆ. ಇಂದು ಅವರೆಲ್ಲರ ಶವ ತಾಯ್ನಾಡು ತಲುಪಿದೆ. ಆದರೆ ಈ ಭಯಾನಕ ಸ್ಥಿತಿಯಲ್ಲಿ ಮೂರನೇ ಮಹಡಿಯಿಂದ ಕೆಳಗೆ ಹಾರಿ ಕೇರಳದ ವ್ಯಕ್ತಿಯೊಬ್ಬರು ಜೀವ ಉಳಿಸಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಎರಡು ದಿನಗಳ ಹಿಂದೆ ಕುವೈತ್‌ನ ದಕ್ಷಿಣದ ಮಂಗಾಫ್ ಜಿಲ್ಲೆಯಲ್ಲಿ ಭಾರತೀಯ ವಲಸೆ ಕಾರ್ಮಿಕರು ನೆಲೆಸಿದ್ದ ಕಟ್ಟಡದಲ್ಲಿ ಬೆಂಕಿ ದುರಂತವೊಂದು ಕಾಣಿಸಿಕೊಂಡು ಸುಮಾರು 45 ಭಾರತೀಯರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಈ ಪರಿಸ್ಥಿತಿಯಲ್ಲಿ ಸಮಯಪ್ರಜ್ಞೆ ಮೆರೆದ ವ್ಯಕ್ತಿಯೊಬ್ಬರು ಬೆಂಕಿ ಬಿದ್ದ ಕಟ್ಟಡದ ಮೂರನೇ ಮಹಡಿಯಿಂದ ಕೆಳಗ ಇದ್ದ ನೀರಿನ ಟ್ಯಾಂಕ್‌ಗೆ ಹಾರಿ ಜೀವ ಉಳಿಸಿಕೊಂಡಿದ್ದಾರೆ.
ಕುವೈತ್ ಬೆಂಕಿ ದುರಂತದಲ್ಲಿ ಮಡಿದ 45 ಭಾರತೀಯರ ಶವದೊಂದಿಗೆ ಕೊಚ್ಚಿಗೆ ಆಗಮಿಸಿದ ಐಎಎಫ್ ವಿಶೇಷ ವಿಮಾನ
ಕೇರಳದ ತ್ರಿಕಾರಿಪುರ ಮೂಲದ ನಳಿನಾಕ್ಷನ್ ಎಂಬುವವರೇ ಹೀಗೆ ನೀರಿನ ಟ್ಯಾಂಕ್‌ಗೆ ಹಾರಿ ಜೀವ ಉಳಿಸಿಕೊಂಡ ಕೇರಳಿಗ, ಥಝಥು ನಳಿನಾಕ್ಷನ್ ಅವರ ಕುಟುಂಬದವರು ಹೇಳುವ ಪ್ರಕಾರ, ನಳಿನಾಕ್ಷನ್ ಅವರು ಕುವೈತ್‌ನ ಎನ್‌ಬಿಟಿಸಿ ಸಂಸ್ಥೆಯಲ್ಲಿ ಕಳೆದ 25 ವರ್ಷಗಳಿಂದ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಇವರು ಕಟ್ಟಡಕ್ಕೆ ಬೆಂಕಿ ಬಿದ್ದ ಸಂದರ್ಭದಲ್ಲಿ ಕಟ್ಟಡದ 3ನೇ ಮಹಡಿಯಲ್ಲಿ ಸಿಲುಕಿಕೊಂಡಿದ್ದರು. ಬೆಂಕಿ ಹಾಗೂ ಹೊಗೆ ಕಟ್ಟಡವನ್ನು ಆವರಿಸುತ್ತಿದ್ದಂತೆ ಸಮಯಪ್ರಜ್ಞೆ ಮೆರೆದ ಅವರು ಕಟ್ಟಡದ ಪಕ್ಕದಲ್ಲಿ ಕೆಳಗೆ ಇದ್ದ ಶೀಟಿನ ರೂಪ್ ಅಳವಡಿಸಲಾಗಿದ್ದ ನೀರಿನ ಟ್ಯಾಂಕ್‌ಗೆ ಮೇಲಿನಿಂದ ಹಾರಿದ್ದಾರೆ.
ಕಟ್ಟಡದಿಂದ ನೀರಿನ ಟ್ಯಾಂಕ್‌ಗೆ ಹಾರಿ ಅಗ್ನಿ ಅನಾಹುತದಿಂದ ಪಾರಾಗಿದ್ದಾನೆ ಎಂಬ ಮಾಹಿತಿ ಬುಧವಾರ ಜೂನ್ 12 ರಂದು ಬೆಳಗ್ಗೆ 11 ಗಂಟೆಗೆ ನಮಗೆ ಸಿಕ್ಕಿತ್ತು ಎಂದು ಟಿವಿ ಚಾನೆಲ್‌ವೊಂದಕ್ಕೆ ನಳಿನಾಕ್ಷನ್ ಅವರ ಅಂಕಲ್ ಬಾಲಕೃಷ್ಣನ್ ಹೇಳಿದ್ದಾರೆ. ಮೂರನೇ ಮಹಡಿಯಿಂದ ನೀರಿನ ಟ್ಯಾಂಕ್ ರೂಫ್ ಮೇಲೆ ಹಾರಿದ್ದರಿಂದ ಆತನ ಪಕ್ಕೆಲುಬುಗಳು ಮುರಿತಕ್ಕೊಳಗಾಗಿದ್ದು, ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಮಾಹಿತಿ ಇದೆ ಎಂದು ಕುಟುಂಬದವರು ಹೇಳಿದ್ದಾರೆ.
ಘಟನೆ ನಡೆದ ಎರಡೇ ದಿನದಲ್ಲಿ ತಾಯ್ನಾಡು ತಲುಪಿದ ಮೃತದೇಹಗಳು
ಈ ದುರಂತದಲ್ಲಿ ಮಡಿದ 45 ಭಾರತೀಯರ ಶವಗಳನ್ನು ಹೊತ್ತ ಐಎಎಫ್ ವಿಮಾನ ಇಂದು ಮುಂಜಾನೆ ಕೇರಳದ ಕೊಚ್ಚಿಗೆ ಬಂದು ತಲುಪಿದೆ. ಈ ಕಾರ್ಯಾಚರಣೆಯ ನೇತೃತ್ವ ವಹಿಸಿದ ವಿದೇಶಾಂಗ ಇಲಾಖೆ ರಾಜ್ಯ ಸಚಿವ ಕೀರ್ತಿವರ್ಧನ್ ಅವರು ಕುವೈತ್ ಹಾಗೂ ಇತರ ಅಧಿಕಾರಿಗಳಿಗೆ ಶೀಘ್ರವಾಗಿ ಸಂತ್ರಸ್ತರ ಶವ ತಾಯ್ನಾಡು ತಲುಪುವುದಕ್ಕೆ ಸಹಕರಿಸಿದಕ್ಕೆ ಧನ್ಯವಾದ ತಿಳಿಸಿದರು. ಹಾಗೂ ಹೀಗೆ ಆದಷ್ಟು ಬೇಗ ಸಂತ್ರಸ್ತರ ಶವ ಭಾರತಕ್ಕೆ ತಲುಪಲು ಪ್ರಧಾನಿ ನರೇಂದ್ರ ಮೋದಿಯವರ ಸುಗಮ ಸಂವಹನ ಕಾರಣ ಎಂದು ಹೇಳಿದರು.
ಘಟನೆ ನಡೆದ ಕೂಡಲೇ ಸಭೆ ಕರೆದು ಕುವೈತ್‌ಗೆ ಹೊರಡುವಂತೆ ಸೂಚಿಸಿದ್ದ ಪ್ರಧಾನಿ
ಈ ಘಟನೆ ನಡೆದಿದೆ ಎಂಬ ವಿಚಾರ ಸರ್ಕಾರಕ್ಕೆ ತಿಳಿದ ಕೂಡಲೇ ಪ್ರಧಾನಿ ಮೋದಿ ಕೂಡಲೇ ಸಭೆ ನಡೆಸಿದರು. ಹಾಗೂ ಕೂಡಲೇ ಕುವೈತ್‌ಗೆ ಹೊರಡುವಂತೆ ಸೂಚಿಸಿದ್ದರು. ಹಾಗೆಯೇ ಮೃತರಾದವರ ಶವಗಳನ್ನು ಶೀಘ್ರ ತಾಯ್ನಾಡಿಗೆ ತಲುಪುವಂತೆ ಮಾಡಲು ಎಲ್ಲ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ನಾವು ಕುವೈತ್ ತಲುಪುವ ವೇಳೆಗಾಗಲೇ ಅಲ್ಲಿನ ಅಧಿಕಾರಿಗಳ ಜೊತೆ ವಿದೇಶಾಂಗ ಜೊತೆ ಅಲ್ಲಿನ ಅರಸರ ಜೊತೆ ಪ್ರಧಾನಿ ಮೋದಿ ಮಾತನಾಡಿ ಆಗಿತ್ತು ಎಂದು ಸಚಿವ ಕೀರ್ತಿ ವರ್ಧನ್ ಹೇಳಿದ್ದಾರೆ.
ಕುವೈತ್ ಅಗ್ನಿ ದುರಂತ: ಕನ್ನಡಿಗೆ ಸೇರಿ 45 ಭಾರತೀಯರು ಬಲಿ
ಕುವೈತ್ ಅಗ್ನಿ ದುರಂತದಲ್ಲಿ ಮೃತರಾದ 45 ಭಾರತೀಯರಲ್ಲಿ 23 ಜನ ಕೇರಳದವರೇ ಆಗಿದ್ದಾರೆ. ಈ ದುರಂತವೂ ಕುವೈತ್ ಹಾಗೂ ಭಾರತದಲ್ಲಿ ಇರುವ ಅವರ ಸಂಬಂಧಿಗಳು ಆಘಾತಕ್ಕೀಡಾಗುವಂತೆ ಮಾಡಿದೆ. ಕೇರಳದವರ ಜೊತೆಗೆ ತಮಿಳುನಾಡಿನ 7 ಜನ ಆಂಧ್ರ ಪ್ರದೇಶದ ಮೂವರು ಹಾಗೂ ಬಿಹಾರ, ಒಡಿಶಾ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಜಾರ್ಖಂಡ್, ಹರ್ಯಾಣ ಪಂಜಾಬ್‌ನ ಹಾಗೂ ಪಶ್ಚಿಮ ಬಂಗಾಳದ ತಲಾ ಒಬ್ಬರು ಈ ದುರಂತದಲ್ಲಿ ಮಡಿದಿದ್ದಾರೆ.