ಹೈದರಾಬಾದ್‌(ಜ.21): ಕಳೆದ 6 ವರ್ಷಗಳಿಂದ ತೆಲಂಗಾಣ ಮುಖ್ಯಮಂತ್ರಿಯಾಗಿರುವ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಪರಮೋಚ್ಚ ನಾಯಕ ಕೆ. ಚಂದ್ರಶೇಖರರಾವ್‌ (ಕೆಸಿಆರ್‌) ಅವರು ಮುಖ್ಯಮಂತ್ರಿ ಹುದ್ದೆಯನ್ನು ತಮ್ಮ ಪುತ್ರನಿಗೆ ಬಿಟ್ಟುಕೊಟ್ಟು, ರಾಷ್ಟ್ರ ರಾಜಕಾರಣದತ್ತ ಗಮನ ಕೇಂದ್ರೀಕರಿಸಲಿದ್ದಾರೆ ಎಂಬ ದಟ್ಟವದಂತಿ ತೆಲಂಗಾಣದಲ್ಲಿ ಹರಡಿದೆ.

ಚಂದ್ರಶೇಖರರಾವ್‌ ಅವರ ಪುತ್ರ ಕೆ.ಟಿ. ರಾಮರಾವ್‌ (ಕೆಟಿಆರ್‌), ಹಾಲಿ ತೆಲಂಗಾಣದ ಮಂತ್ರಿಯಾಗಿದ್ದಾರೆ. ಅವರನ್ನು ಮುಂದಿನ ತಿಂಗಳು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸುವ ಸಂಭವ ಇದೆ ಎಂದು ವರದಿಗಳು ತಿಳಿಸಿವೆ.

ಇದಕ್ಕೆ ಪುಷ್ಟಿನೀಡುವಂತೆ, ‘ಮುಂದಿನ ಸಿಎಂ ಕೆಟಿಆರ್‌ ಅವರೇ. ಬಹುತೇಕ ಫೆಬ್ರವರಿಯಲ್ಲಿ ಅಧಿಕಾರ ಹಸ್ತಾಂತರ ನಡೆಯಬಹುದು. ಕೆಸಿಆರ್‌ ಕುಟುಂಬದೊಳಗೆ ಈ ಕುರಿತು ಚರ್ಚೆ ನಡೆಯುತ್ತಿದೆ. ಸಂಪುಟದ ಸ್ಥಾನಗಳಲ್ಲೂ ಬದಲಾವಣೆಗಳು ಆಗಲಿವೆ’ ಎಂದು ತೆಲಂಗಾಣದ ಹಿರಿಯ ಸಚಿವರೊಬ್ಬರು ತಿಳಿಸಿದ್ದಾರೆ ಎಂದು ಟೀವಿ ವಾಹಿನಿಯೊಂದು ವರದಿ ಮಾಡಿದೆ.

ಕೊರೋನಾ ಲಾಕ್‌ಡೌನ್‌ ಆರಂಭವಾದಾಗಿನಿಂದ 66 ವರ್ಷದ ಕೆಸಿಆರ್‌ ಅವರು ಸಾರ್ವಜನಿಕ ಜೀವನದಿಂದ ದೂರವೇ ಉಳಿದಿದ್ದಾರೆ. ತಂದೆಯ ಜವಾಬ್ದಾರಿಗಳನ್ನೆಲ್ಲಾ ಕೆಟಿಆರ್‌ ಅವರೇ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಪಕ್ಷದ ಜವಾಬ್ದಾರಿ ಹೊತ್ತುಕೊಂಡು, ರಾಷ್ಟ್ರ ರಾಜಕಾರಣದ ಮೇಲೆ ಗಮನ ಕೇಂದ್ರೀಕರಿಸಲು ಕೆಸಿಆರ್‌ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ತೆಲಂಗಾಣ ವಿಧಾನಸಭೆಯ ಅವಧಿ 2023ಕ್ಕೆ ಮುಕ್ತಾಯಗೊಳ್ಳಲಿದೆ. ಅದಾದ ನಂತರ ಕೆಟಿಆರ್‌ ಸಿಎಂ ಆಗಬಹುದು ಎನ್ನಲಾಗುತ್ತಿತ್ತು. ಆದರೆ ಇತ್ತೀಚೆಗೆ ಹೈದರಾಬಾದ್‌ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ತೋರಿದ ಹಿನ್ನೆಲೆಯಲ್ಲಿ ಕೆಟಿಆರ್‌ ಅವರನ್ನು ಮುಂದೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಲಾಗಿದೆ.