'ಆಸ್ಪತ್ರೆ ನಡೆಸಲು ಸಾಧ್ಯವಾದ್ರೆ ನಡೆಸಿ, ಇಲ್ಲವಾದಲ್ಲಿ ಮುಚ್ಚಿ..' ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಹೈಕೋರ್ಟ್ ಚಾಟಿ!
Kolkata Doctor Rape Case ವೈದ್ಯ ವಿದ್ಯಾರ್ಥಿನಿಯ ರೇಪ್ ಹಾಗೂ ಹತ್ಯೆ ಪ್ರಕರಣದಲ್ಲಿ ಕೋಲ್ಕತ್ತಾ ಹೈಕೋರ್ಟ್ ಮತ್ತೊಮ್ಮೆ ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸಿದೆ. ನಿಮ್ಮಿಂದ ಆಸ್ಪತ್ರೆ ನಡೆಸಲು ಸಾಧ್ಯವಾದರೆ ಮಾತ್ರ ನಡೆಸಿ, ಇಲ್ಲವಾದಲ್ಲಿ ಅದನ್ನು ಮುಚ್ಚಿ ಎಂದು ಖಡಕ್ ಆಗಿ ತಿಳಿಸಿದೆ.
ನವದೆಹಲಿ (ಆ.16): ಕೋಲ್ಕತ್ಥಾದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ವಿದ್ಯಾರ್ಥಿನಿಯ ರೇಪ್ & ಮರ್ಡರ್ ಕೇಸ್ ಹಾಗೂ ಆ ಬಳಿಕ ಕಾಲೇಜಿನ ಬಳಿ ನಡೆದ ಪ್ರತಿಭಟನೆ ಹೆಸರಿನ ಸಾಕ್ಷ್ಯ ನಾಶದ ಯತ್ನದ ಬಗ್ಗೆ ಕೋಲ್ಕತ್ತಾ ಹೈಕೋರ್ಟ್ ಕಿಡಿಕಾರಿದ್ದು, ರಾಜ್ಯ ಸರ್ಕಾರ ಏನು ಮಾಡುತ್ತಿದೆ ಎಂದು ನೇರವಾಗಿ ಪ್ರಶ್ನೆ ಮಾಡಿದೆ. ಸ್ಥಳದಲ್ಲಿ ಪೊಲೀಸ್ ಇದ್ದರೂ, ದುಷ್ಕರ್ಮಿಗಳನ್ನ ತಡೆಯಲು ಆಗಲಿಲ್ಲವೇ, ಈ ದುಷ್ಕೃತ್ಯದಿಂದ ವೈದ್ಯರು ನಿರ್ಭಯವಾಗಿ ಹೇಗೆ ಕೆಲಸ ಮಾಡ್ತಾರೆ? ನೀವು ಯಾವ ಕಾರಣಕ್ಕಾಗಿ CrPC ಆದೇಶ ಸೆಕ್ಷನ್ 144 ಹಾಕುತ್ತೀರಿ. ಗಲಾಟೆ ನಡೆಯುತ್ತಿರುವಾಗ ನೀವು ಆ ಪ್ರದೇಶವನ್ನ ಸುತ್ತುವರಿದಿರಬೇಕು. ಪೊಲೀಸರ ಪ್ರಕಾರ 40 ಜನ ಮುಖವಾಡ ಧರಿಸಿ ಆಸ್ಪತ್ರೆಗೆ ನುಗ್ಗಿದ್ದಾರೆ.ಆಸ್ಪತ್ರೆಯ ಆವರಣಕ್ಕೆ 7 ಸಾವಿರ ಜನರು ನುಗ್ಗಲು ಸಾಧ್ಯವಿಲ್ಲ ಅಲ್ಲವೇ... ಆಸ್ಪತ್ರೆ, ಸುತ್ತಮುತ್ತಲಿನ ಹಲವಾರು ಸಿಸಿಟಿವಿ ಕ್ಯಾಮೆರಾ ನಾಶವಾಗಿದೆ ನಿಮ್ಮಿಂದ ಆಸ್ಪತ್ರೆ ನಡೆಸಲು ಸಾಧ್ಯವಾದ್ರೆ ಮಾತ್ರ ನಡೆಸಿ, ಇಲ್ಲವೇ ಮುಚ್ಚಿ ಎಂದು ಹೈಕೋರ್ಟ್ ಖಡಕ್ ಆಗಿ ಹೇಳಿದೆ.
ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಸಿಬಿಐ ವಶಕ್ಕೆ: ಇನ್ನೊಂದೆಡೆ ಕೇಸ್‌ನಲ್ಲಿ ಸಿಬಿಐ ತನಿಖೆ ತೀವ್ರವಾಗಿದೆ. ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್‌ರನ್ನು ಸಿಬಿಐ ವಶಕ್ಕೆ ಪಡೆದಿದ್ದು, ತನ್ನ ಕಚೇರಿಯಲ್ಲಿ ತೀವ್ರ ವಿಚಾರಣೆ ನಡೆಸಿದೆ. ಇದರೊಂದಿಗೆ ಆರ್‌ಜಿ ಕರ್ ಆಸ್ಪತ್ರೆ 9 ವೈದ್ಯರಿಗೆ ಸಿಬಿಐ ನೋಟಿಸ್ ನೀಡಿದೆ. ಎದೆ ವಿಭಾಗದ ಮುಖ್ಯಸ್ಥ ಡಾ.ಅರುಣ್ ದತ್ತಾ ಅವರನ್ನೂ ವಿಚಾರಿಸಲಾಗಿದೆ. ಆರ್‌ಜಿ ಕರ್ ಆಸ್ಪತ್ರೆ ವೈದ್ಯರಿಂದ ಸಿಬಿಐ ಟೀಮ್ ಹಲವು ಮಾಹಿತಿಯನ್ನು ಪಡೆದುಕೊಂಡಿದೆ.
ಆರ್‌ಜಿ ಕರ್ ಆಸ್ಪತ್ರೆಗೆ ಸಿಬಿಐ ನೀಡಿದ್ದಲ್ಲದೆ, ಕೆಲವು ಮಹತ್ವದ ದಾಖಲೆ ಜಪ್ತಿ ಮಾಡಿಕೊಂಡಿದೆ. ಆಸ್ಪತ್ರೆಗೆ ನುಗ್ಗಿ ದಾಂಧಲೆ ಕೇಸ್‌ಗೆ ಬಂಧಿಸಿದಂತೆ ಈವರೆಗೂ 24 ಜನರನ್ನು ಬಂಧಿಸಲಾಗಿದೆ. ಸಾಕ್ಷ್ಯ ನಾಶಕ್ಕೆ ಯತ್ನ ಹಿನ್ನೆಲೆಯಲ್ಲಿ ಇವರನ್ನೂ ಸಿಬಿಐನಿಂದ ತೀವ್ರ ತನಿಖೆ ಮಾಡಲಾಗುತ್ತಿದೆ.
ಸಿಎಂ ಮಮತಾ ಬ್ಯಾನರ್ಜಿಯಿಂದ ಪ್ರತಿಭಟನೆ: ಈ ಮಧ್ಯೆ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿಯಿಂದಲೇ ಪ್ರತಿಭಟನೆ ನಡೆದಿದೆ. ಆರೋಪಿಗೆ ಮರಣದಂಡನೆ ವಿಧಿಸುವಂತೆ ಮಮತಾ ಬೃಹತ್ ಮೆರವಣಿಗೆ ಮಾಡಿದ್ದಾರೆ. ಸಿಎಂ ಮಮತಾ ಮೆರವಣಿಗೆಯಲ್ಲಿ ಟಿಎಂಸಿ ಮಹಿಳಾ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಇನ್ನೊಂಧೆಡೆ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಲೇಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಅತ್ಯಾಚಾರ ಪ್ರಕರಣ ಮುಚ್ಚಿ ಹಾಕಲು ಮಮತಾ ಯತ್ನ ಮಾಡುತ್ತಿದ್ದಾರೆ. ‘ಅತ್ಯಾಚಾರ ಆರೋಪಿಗಳನ್ನ ರಕ್ಷಿಸೋದು ಹೀನ ಕೃತ್ಯ’ ಎಂದು ಬಿಜೆಪಿ ಹೇಳಿದೆ.
ನಿಲ್ಲದ ವೈದ್ಯಕೀಯ ಸಂಘದ ಪ್ರತಿಭಟನೆ: ಇನ್ನೊಂದೆಡೆ ದೇಶಾದ್ಯಂತ ಭಾರತೀಯ ವೈದ್ಯಕೀಯ ಸಂಘದ ಪ್ರತಿಭಟನೆ ತೀವ್ರವಾಗಿದೆ. 3 ದಿನದಿಂದ ಪ.ಬಂಗಾಳದಲ್ಲಿ ಒಪಿಡಿ ಸೇವೆ ಸಂಪೂರ್ಣವಾಗಿ ಸ್ತಗಿತವಾಗಿದೆ. ನಾಳೆ ದೇಶಾದ್ಯಂತ ಒಪಿಡಿ ಸೇವೆಗಳ ಬಂದ್ಗೆ ಸ್ವತಃ ಐಎಂಎ ಕರೆ ನೀಡಿದೆ. ನಾಳೆ ಕರ್ನಾಟಕದಲ್ಲಿಯೂ OPD ಬಂದ್ ಮಾಡಿ ವೈದ್ಯರು ಪ್ರತಿಭಟನೆ ಮಾಡಲಿದ್ದಾರೆ. ನಾಳೆ ಬೆಳಿಗ್ಗೆ 6ರಿಂದ ಭಾನುವಾರ ಬೆಳಿಗ್ಗೆ 6ರವರೆಗೆ ರಾಷ್ಟ್ರವ್ಯಾಪಿ ಮುಷ್ಕರ ನಡೆಯಲಿದೆ. ಆಸ್ಪತ್ರೆಯಲ್ಲಿ ತುರ್ತು ಮತ್ತು ಅಪಘಾತ ಸೇವೆಗಳು ಮಾತ್ರವೇ ಲಭ್ಯವಿರಲಿದೆ.
ವೈದ್ಯರ ಮೇಲೆ ಹಲ್ಲೆಯಾದ್ರೆ 6 ಗಂಟೆಯೊಳಗೆ FIR..!: ಈ ಘಟನೆ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಪ್ರತಿಕ್ರಿಯೆ ನೀಡಿದೆ. ಕರ್ತವ್ಯದಲ್ಲಿರುವ ಯಾವುದೇ ಆರೋಗ್ಯ ಸಿಬ್ಬಂದಿ ಮೇಲೆ ದಾಳಿ ನಡೆದರೆ, ಹಿಂಸಾಚಾರ ನಡೆದ ಆರು ಗಂಟೆಯೊಳಗೆ ಎಫ್‌ಐಆರ್ ದಾಖಲಿಸಬೇಕು. ಇದು ಸಂಸ್ಥೆಯ ಮುಖ್ಯಸ್ಥರ ಜವಾಬ್ದಾರಿ ಎಂದ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಆಸ್ಪತ್ರೆಗಳಲ್ಲಿ ವೈದ್ಯರು ಮೇಲೆ ದಾಳಿ ಈಗ ಸಾಮಾನ್ಯ ಎಂಬಂತಾಗಿದೆ. ಕರ್ತವ್ಯದ ವೇಳೆ ಆರೋಗ್ಯ ಸಿಬ್ಬಂದಿ ಹಲ್ಲೆ, ಮೌಖಿಕ ದಾಳಿಗೆ ಒಳಗಾಗುತ್ತಾರೆ. ಬಹುತೇಕ ಪ್ರಕರಣಗಳಲ್ಲಿ ರೋಗಿಗಳ ಸಂಬಂಧಿಕರೇ ದಾಳಿ ಮಾಡುತ್ತಾರೆ ಎಂದು ಆರೋಗ್ಯ ಸೇವೆ ಮಹಾ ನಿರ್ದೇಶಕ ಡಾ.ಅತುಲ್ ಗೋಯಲ್ ಹೇಳಿದ್ದಾರೆ.
ಕೋಲ್ಕತ್ತಾ ಟ್ರೈನಿ ವೈದ್ಯೆಯ ಅತ್ಯಾಚಾರ-ಕೊಲೆ ಕೇಸ್ ಬೆನ್ನಲ್ಲಿಯೇ ದನಿ ಎತ್ತಿದ ನಮ್ರತಾ ಗೌಡ!
ಈ ಕೇಸ್‌ನ ಬಗ್ಗೆ ಮಾತನಾಡಿರುವ ಸಿಎಂ ಮಮತಾ ಬ್ಯಾನರ್ಜಿ, 'ನನಗೆ ತಿಳಿದಿದೆ, ಬಿಜೆಪಿ ಮತ್ತು ಸಿಪಿಎಂ ಆರ್‌ಜಿ ಕರ್ ಮೆಡಿಕಲ್ ಕಾಲೇಜಿಗೆ ಕಾರ್ಯಕರ್ತರನ್ನು ಕಳಿಸಿ ಧ್ವಂಸಗೊಳಿಸಿ, ಗಲಾಟೆ ಎಬ್ಬಿಸಿದ್ದಾರೆ. ಬಂಗಾಳದಲ್ಲಿ ಅಶಾಂತಿಯನ್ನು ಸೃಷ್ಟಿಸಲು ಬಯಸುತ್ತಾರೆ. ಅದಕ್ಕಾಗಿಯೇ ಇಬ್ಬರೂ ಒಟ್ಟಾಗಿದ್ದಾರೆ. ಅವರು ರಾತ್ರಿ 12-1 ಗಂಟೆಗೆ ಅಲ್ಲಿಗೆ ಹೋದರು. ಸಿಪಿಎಂ ಕಾರ್ಯಕರ್ತರು ಡಿವೈಎಫ್‌ಐ ಧ್ವಜವನ್ನು, ಬಿಜೆಪಿ ರಾಷ್ಟ್ರಧ್ವಜವನ್ನು ತೆಗೆದುಕೊಂಡಿದೆ ಎಂದು ವಿಡಿಯೋ ತೋರಿಸುತ್ತದೆ. ಅವರು ರಾಷ್ಟ್ರಧ್ವಜವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಅವರಿಗೆ ಶಿಕ್ಷೆಯಾಗಬೇಕು ಇದು ಕ್ರಿಮಿನಲ್. ನಿಮ್ಮ ಗೂಂಡಾಗಿರಿಗೆ ನಾನು ಭಯ ಪಡುವುದಿಲ್ಲ. ಮಣಿಪುರದಲ್ಲಿ ಘಟನೆ ನಡೆದಾಗ ಬಿಜೆಪಿ ಮತ್ತು ಸಿಪಿಎಂ, ಎಷ್ಟು ತಂಡಗಳನ್ನು ಅಲ್ಲಿಗೆ ಕಳುಹಿಸಿದ್ದವು? ಹತ್ರಾಸ್, ಉನ್ನಾವೋಗೆ ಎಷ್ಟು ತಂಡ ಕಳುಹಿಸಲಾಗಿದೆ..? ಎಂದು ಪ್ರಶ್ನೆ ಮಾಡಿದ್ದಾರೆ.
Breaking: ಕೋಲ್ಕತ್ತಾ ವೈದ್ಯೆ ಅತ್ಯಾಚಾರ ಪ್ರಕರಣ, ಆ. 17ಕ್ಕೆ ದೇಶಾದ್ಯಂತ ಒಪಿಡಿ ಸೇವೆ ಬಂದ್!