ವೈದ್ಯೆ ಮೇಲೆ ನಡೆದ ಅತ್ಯಾಚಾರ, ಹತ್ಯೆ: ಆಸ್ಪತ್ರೆಗಳಿಗೂ ವಿಮಾನ ನಿಲ್ದಾಣ ರೀತಿ ಸುರಕ್ಷತೆ ವಹಿಸುವಂತೆ ಬೇಡಿಕೆ
ಕೋಲ್ಕತಾದಲ್ಲಿ ವೈದ್ಯೆ ಮೇಲೆ ನಡೆದ ಅತ್ಯಾಚಾರ, ಹತ್ಯೆ ಬಳಿಕ ಆಸ್ಪತ್ರೆ ಮೇಲೆ ದಾಳಿಯ ಘಟನೆ ಬೆನ್ನಲ್ಲೇ, ತಮ್ಮ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವೈದ್ಯಕೀಯ ಸಮುದಾಯ, ಆಸ್ಪತ್ರೆಗಳಿಗೂ ವಿಮಾನ ನಿಲ್ದಾಣ ರೀತಿ ಸುರಕ್ಷತೆ ವಹಿಸುವಂತೆ ಕೋರಿದೆ.
ನವದೆಹಲಿ (ಆ.18): ಕೋಲ್ಕತಾದಲ್ಲಿ ವೈದ್ಯೆ ಮೇಲೆ ನಡೆದ ಅತ್ಯಾಚಾರ, ಹತ್ಯೆ ಬಳಿಕ ಆಸ್ಪತ್ರೆ ಮೇಲೆ ದಾಳಿಯ ಘಟನೆ ಬೆನ್ನಲ್ಲೇ, ತಮ್ಮ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವೈದ್ಯಕೀಯ ಸಮುದಾಯ, ಆಸ್ಪತ್ರೆಗಳಿಗೂ ವಿಮಾನ ನಿಲ್ದಾಣ ರೀತಿ ಸುರಕ್ಷತೆ ವಹಿಸುವಂತೆ ಕೋರಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಭಾರತೀಯ ವೈದ್ಯಕೀಯ ಸಂಘ (ಐಎಂಎ), 5 ಬೇಡಿಕೆಗಳನ್ನು ಈಡೇರಿಸುವಂತೆ ಕೋರಿದೆ. ಅದರಲ್ಲಿ ‘ದೇಶದ ಎಲ್ಲ ಆಸ್ಪತ್ರೆಗಳನ್ನು ಸುರಕ್ಷಿತ ವಲಯಗಳೆಂದು ಘೋಷಿಸಬೇಕು. ವಿಮಾನ ನಿಲ್ದಾಣಗಳಲ್ಲಿರುವಂತೆಯೇ ಭದ್ರತಾ ವ್ಯವಸ್ಥೆಯನ್ನ ಒದಗಿಸಬೇಕು. ಎಲ್ಲ ವೈದ್ಯರಿಗೂ ಭದ್ರತೆ ನೀಡಬೇಕು. ವಿಮಾನ ನಿಲ್ದಾಣಗಳ ರೀತಿ ಸಿಸಿಟಿವಿ, ಭದ್ರತಾ ಸಿಬ್ಬಂದಿಗಳ ನಿಯೋಜನೆ ಮತ್ತು ಪ್ರೋಟೋಕಾಲ್‌ಗಳನ್ನು ಆಸ್ಪತ್ರೆಗೆ ಒದಗಿಸಬೇಕು’ ಎಂದು ಎಂದು ಐಎಂಎ ಪತ್ರದಲ್ಲಿ ಉಲ್ಲೇಖಿಸಿದೆ.
ಐಎಂಎ ಬೇಡಿಕೆಗಳೇನು?
1. ವೈದ್ಯರ ಮೇಲಿನ ಹಿಂಸಾಚಾರವನ್ನುತಡೆಗಟ್ಟಲು ಮಹತ್ವದ ನೀತಿ ಜಾರಿಗೆ ತರಬೇಕು. 1897ರ ಸಾಂಕ್ರಾಮಿಕ ರೋಗ ಕಾಯ್ದೆಗೆ 2019ರ ಆಸ್ಪತ್ರೆ ಸಂರಕ್ಷಣಾ ಮಸೂದೆ 2023ರ ತಿದ್ದುಪಡಿ ಸೇರಿಸಿ ಕಾಯ್ದೆ ತರಬೇಕು.
2. ಆಸ್ಪತ್ರೆಗಳನ್ನು ಸುರಕ್ಷಿತ ವಲಯಗಳೆಂದು ಘೋಷಿಸಬೇಕು. ವಿಮಾನ ನಿಲ್ದಾಣದ ರೀತಿ ಭದ್ರತೆ ನೀಡಬೇಕು.
3. ಭದ್ರತಾ ಕಾಳಜಿ ಜೊತೆಗೆ 36 ಗಂಟೆಗಳ ಕರ್ತವ್ಯ ಪಾಳಿಯಲ್ಲಿರುವ ವೈದ್ಯಕೀಯ ಸಿಬ್ಬಂದಿಗಳಿಗೆ ಸುರಕ್ಷಿತ ಸ್ಥಳಗಳು, ವಿಶ್ರಾಂತಿಗೆ ಸುರಕ್ಷಿತ ಸ್ಥಳ ಸಮಸ್ಯೆಯನ್ನು ತುರ್ತಾಗಿ ಬಗೆ ಹರಿಸಬೇಕು
4. ನಿರ್ದಿಷ್ಟ ಕಾಲಮಿತಿಯೊಳಗೆ ಅಪರಾಧ ಪ್ರಕರಣಗಳನ್ನು ವೃತ್ತಿಪರ ತನಿಖೆಗೆ ಒಳಪಡಿಸಬೇಕು
5. ವಿಧ್ವಂಸಕ ಕೃತ್ಯದ ಗೂಂಡಾಗಳನ್ನು ಗುರುತಿಸಿ, ಶಿಕ್ಷೆ ನೀಡಬೇಕು. ಜೊತೆಗೆ ಕ್ರೌರ್ಯಕ್ಕೆ ಅನುಗುಣವಾಗಿ ದುಃಖಿತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು
ದೇಶದಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆಗೆ ಸಲಹೆ ನೀಡಲು ಕೇಂದ್ರದಿಂದ ಸಮಿತಿ ರಚನೆ: ದೇಶದಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆಗೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸಲಹೆ ನೀಡಲು ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸುವುದಾಗಿ ಪ್ರಕಟಿಸಿದೆ. ಈ ಸಮಿತಿಯ ಬಳಿ ವೈದ್ಯರು, ವೈದ್ಯಕೀಯ ಸಂಘಗಳ ಪ್ರತಿನಿಧಿಗಳು ಹಾಗೂ ಎಲ್ಲಾ ರಾಜ್ಯ ಸರ್ಕಾರಗಳು ತಮ್ಮ ಸಲಹೆಯನ್ನು ಹಂಚಿಕೊಳ್ಳಲು ಅವಕಾಶ ನೀಡುವುದಾಗಿ ತಿಳಿಸಿದೆ. ಕೋಲ್ಕತಾದ ಆರ್.ಜಿ.ಕರ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ದೇಶಾದ್ಯಂತ ಶನಿವಾರ ವೈದ್ಯರು ಕೆಲಸ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ದೇಶಾದ್ಯಂತ ವೈದ್ಯರು ಮುಷ್ಕರ ನಡೆಸುತ್ತಿರುವುದೇಕೆ?: ಕೋಲ್ಕತಾ ಆಸ್ಪತ್ರೆಯಲ್ಲಿ ಆ.9 ರಂದು ಆಗಿದ್ದೇನು?
ಈ ವೇಳೆ, ಮುಷ್ಕರ ನಿರತ ವೈದ್ಯರ ಪ್ರತಿನಿಧಿಯಾಗಿ ರೆಸಿಡೆಂಟ್ ಡಾಕ್ಟರ್‌ಗಳ ಸಂಘ ಹಾಗೂ ಭಾರತೀಯ ವೈದ್ಯಕೀಯ ಸಂಘದ ಸದಸ್ಯರು ಕೇಂದ್ರ ಆರೋಗ್ಯ ಸಚಿವರನ್ನು ಭೇಟಿಯಾಗಿ ಚರ್ಚಿಸಿದರು. ಬಳಿಕ ಆರೋಗ್ಯ ಸಚಿವಾಲಯ ಪ್ರಕಟಣೆ ಹೊರಡಿಸಿದ್ದು, ಅದರಲ್ಲಿ, ‘ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆಯ ಬಗ್ಗೆ ಸಲಹೆಗಳನ್ನು ನೀಡಲು ಸಮಿತಿ ರಚಿಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಲಾಗಿದೆ. ‘ಆರೋಗ್ಯ ಸಿಬ್ಬಂದಿಯ ಸುರಕ್ಷತೆಗಾಗಿ ಈಗಾಗಲೇ 26 ರಾಜ್ಯಗಳು ಪ್ರತ್ಯೇಕ ಕಾಯ್ದೆಯನ್ನು ಪಾಸು ಮಾಡಿವೆ’ ಎಂದೂ ಆರೋಗ್ಯ ಸಚಿವಾಲಯ ಹೇಳಿದೆ.