Asianet Suvarna News Asianet Suvarna News

ದೇಶಾದ್ಯಂತ ವೈದ್ಯರು ಮುಷ್ಕರ ನಡೆಸುತ್ತಿರುವುದೇಕೆ?: ಕೋಲ್ಕತಾ ಆಸ್ಪತ್ರೆಯಲ್ಲಿ ಆ.9 ರಂದು ಆಗಿದ್ದೇನು?

ದುರ್ಗಾ ದೇವಿಯನ್ನು ಬಹುವಾಗಿ ಆರಾಧಿಸುವ ಪಶ್ಚಿಮ ಬಂಗಾಳದಲ್ಲಿ ದೇವತೆಯೆಂದೇ ಪೂಜಿಸುವ ಮಹಿಳಾ ವೈದ್ಯೆ ಮೇಲೆ ಭೀಕರ ಅತ್ಯಾಚಾರ ನಡೆದು ಆಕೆ ಹತ್ಯೆಗೈಯಲಾಗಿದೆ. ಈ ಘಟನೆ ಕರ್ತವ್ಯ ಸ್ಥಳದಲ್ಲಿ ಮಹಿಳೆಯರ ಸುರಕ್ಷತೆಯ ಕುರಿತು ಮತ್ತೊಮ್ಮೆ ಪ್ರಶ್ನೆ ಏಳುವಂತೆ ಮಾಡಿದೆ. 

kolkata doctor case What happened on August 9 in a Kolkata hospital gvd
Author
First Published Aug 18, 2024, 9:21 AM IST | Last Updated Aug 18, 2024, 9:21 AM IST

ಕೋಲ್ಕತಾ (ಆ.18): ದುರ್ಗಾ ದೇವಿಯನ್ನು ಬಹುವಾಗಿ ಆರಾಧಿಸುವ ಪಶ್ಚಿಮ ಬಂಗಾಳದಲ್ಲಿ ದೇವತೆಯೆಂದೇ ಪೂಜಿಸುವ ಮಹಿಳಾ ವೈದ್ಯೆ ಮೇಲೆ ಭೀಕರ ಅತ್ಯಾಚಾರ ನಡೆದು ಆಕೆ ಹತ್ಯೆಗೈಯಲಾಗಿದೆ. ಈ ಘಟನೆ ಕರ್ತವ್ಯ ಸ್ಥಳದಲ್ಲಿ ಮಹಿಳೆಯರ ಸುರಕ್ಷತೆಯ ಕುರಿತು ಮತ್ತೊಮ್ಮೆ ಪ್ರಶ್ನೆ ಏಳುವಂತೆ ಮಾಡಿದೆ. ಈ ಘಟನೆ ಮತ್ತೊಮ್ಮೆ ದೇಶವ್ಯಾಪಿ ಮಹಿಳಾ ಸುರಕ್ಷತೆ, ವೈದ್ಯರ ಸುರಕ್ಷತೆಯ ಬಗ್ಗೆ ಜನರು ಬೀದಿಗಿಳಿದು ಹೋರಾಡುವಂತೆ ಮಾಡಿದೆ. ಈ ಹಿನ್ನೆಲೆ ಇಡೀ ಘಟನೆ ಕುರಿತು ಒಂದು ಹಿನ್ನೋಟ.

ಕೋಲ್ಕತಾ ಆಸ್ಪತ್ರೆಯಲ್ಲಿ ಆ.9 ರಂದು ಆಗಿದ್ದೇನು?: ಆ.9ರಂದು ಕೋಲ್ಕತಾದ ಆರ್‌ಜಿ ಸರ್ಕಾರಿ ಮೆಡಿಕಲ್‌ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಅರೆನಗ್ನ ಸ್ಥಿತಿಯಲ್ಲಿ 31 ವರ್ಷದ ಕಿರಿಯ ವೈದ್ಯೆಯ ಶವ ಪತ್ತೆಯಾಗಿತ್ತು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯೆ, ತನ್ನ ಜೂನಿಯರ್ಸ್‌ಗಳ ಜೊತೆಗೆ ಮಾತನಾಡಿ, ಮುಂಜಾನೆ 2 ಗಂಟೆ ವೇಳೆಗೆ ವಿಶ್ರಾಂತಿಗೆ ತೆರಳಿದ್ದರು. ಕಾಲೇಜಲ್ಲಿ ಹೆಚ್ಚಿನ ಜಾಗವಿರದಿದ್ದರಿಂದ ಆಕೆ ಸೆಮಿನಾರ್‌ ಹಾಲ್‌ನಲ್ಲಿ ಮಲಗಿದ್ದಳು. ಆದರೆ ಬೆಳಗಾಗುವುದರೊಳಗೆ ಶವವಾಗಿದ್ದಳು.

ವೈದ್ಯೆಯ ಮೇಲಿನ ಅತ್ಯಾಚಾರ, ಹತ್ಯೆ: 10 ಲಕ್ಷ+ ವೈದ್ಯರಿಂದ ಮುಷ್ಕರ, ದೇಶಾದ್ಯಂತ ಆಸ್ಪತ್ರೆಗಳು ಬಂದ್‌

ಬ್ಲೂಟೂತ್‌ ನೀಡಿತ್ತು ಆರೋಪಿ ಸುಳಿವು: ಆ.9ರ ಮುಂಜಾನೆ 3 ರಿಂದ 6 ಗಂಟೆ ಅವಧಿಯಲ್ಲಿ ಮಹಿಳಾ ವೈದ್ಯೆ ಮೇಲೆ ಅತ್ಯಾಚಾರ ಎಸಗಲಾಗಿತ್ತು. ವೈದ್ಯೆಯ ಮೂಗು ಮತ್ತು ಬಾಯಿ ಮುಚ್ಚಿ ಆರೋಪಿ ಅತ್ಯಾಚಾರ ಎಸಗಿ, ಆಕೆಯ ತಲೆಯನ್ನು ಬಲವಂತದಿಂದ ಗೋಡೆಗೆ ದಬ್ಬಿ ಕ್ರೌರ್ಯ ಎಸಗಾಗಿತ್ತು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಆಸ್ಪತ್ರೆ ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲನೆ ನಡೆಸಿ , ಘಟನೆಗೆ ಸಂಬಂಧಿಸಿದಂತೆ 33 ವರ್ಷದ ಸಂಜಯ್ ರಾಯ್‌ನನ್ನು ಬಂಧಿಸಿದ್ದರು. ಪೊಲೀಸ್‌ ಇಲಾಖೆಯಲ್ಲಿ ನಾಗರಿಕ ಸ್ವಯಂಸೇವಕನಾಗಿದ್ದ ರಾಯ್‌ ಅದೇ ಸಂಪರ್ಕದಿಂದ ಆಸ್ಪತ್ರೆಗೆ ಹೋಗಿ ಬರುತ್ತಿದ್ದ. ವೈದ್ಯೆ ಶವ ಪತ್ತೆಯಾದ ಶವದ ಬಳಿ ಸಿಕ್ಕಿದ್ದ ಬ್ಲೂಟೂತ್‌ನಿಂದ ಆರೋಪಿ ಸುಳಿವು ಸಿಕ್ಕಿತ್ತು.

ವೈದ್ಯೆ ಮೇಲೆ ಗ್ಯಾಂಗ್ ರೇಪ್ ಶಂಕೆ: ವೈದ್ಯೆ ಮೇಲೆ ರೇಪ್ ಆರೋಪದಲ್ಲಿ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಮರಣೋತ್ತರ ಪರೀಕ್ಷೆ ಬೆಚ್ಚಿ ಬೀಳಿಸುವ ಸಂಗತಿಯನ್ನು ಹೊರ ಹಾಕಿದೆ. ಆಕೆಯ ಮೇಲೆ ಗ್ಯಾಂಗ್ ರೇಪ್ ನಡೆದಿರಬಹುದು ಎನ್ನುವ ಸಂಶಯವನ್ನು ಹುಟ್ಟಿಸಿದೆ. ಯಾಕೆಂದರೆ ಶವ ಪರೀಕ್ಷೆ ವೇಳೆ ಆಕೆಯ ಯೋನಿಯಿಂದ 151ಮಿ.ಗ್ರಾಂ ವೀರ್ಯ ಸಂಗ್ರಹವಾಗಿದ್ದು, ಇದು ಸಾಮೂಹಿಕ ಅತ್ಯಾಚಾರ ನಡೆದರೆ ಮಾತ್ರ ಸಾಧ್ಯವೆಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.

ಶವಪರೀಕ್ಷೆಯಲ್ಲಿದಿದ್ದೇನು?: ವೈದ್ಯೆ ಶವ ಪತ್ತೆಯಾದ ಬಳಿಕ ಇದೊಂದು ಆತ್ಮಹತ್ಯೆ ಎನ್ನುವ ಮಾತುಗಳೂ ಹರಿದಾಡಿತ್ತು. ಆದರೆ ಆಕೆಯ ದೇಹದ ಮೇಲೆ, ಮುಖದಲ್ಲಿನ ಗಾಯಗಳು ಬೇರೆಯದ್ದೇ ಹೇಳಿತ್ತು. ಆದರೆ ಶವ ಪರೀಕ್ಷೆಯಲ್ಲಿ ವೈದ್ಯೆ ಮೇಲೆ ಅತ್ಯಾಚಾರ ನಡೆದಿರುವುದು ದೃಢವಾಗಿತ್ತು. ಆಕೆಯ ಮೇಲೆ ರೇಪ್ ಮಾಡಿ ಆ ಬಳಿಕ ಕೊಲೆ ಮಾಡಲಾಗಿದೆ ಎನ್ನುವ ವಿಚಾರ ಬಯಲಾಗಿತ್ತು.

ಹೈಕೋರ್ಟ್‌ ಚಾಟಿ, ಸಿಬಿಐಗೆ ತನಿಖೆ ಹೊಣೆ: ಘಟನೆ ನಡೆದ ಬಳಿಕ ಈ ಕೃತ್ಯ ನಡೆಸಿದ ಆರೋಪಿಗೆ ಮರಣ ದಂಡನೆ ಶಿಕ್ಷೆ ವಿಧಿಸುವುದಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದರು. ಅಲ್ಲದೇ ಆರ್‌ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ಸಿಬ್ಬಂದಿಗಳ ಭದ್ರತೆಗಾಗಿ ಪೊಲೀಸ್ ಪಡೆಗಳನ್ನು ನಿಯೋಜಿಸಿತ್ತು. ಅವಾರದೊಳಗೆ ಪೊಲೀಸರು ಪ್ರಕರಣದ ತನಿಖೆ ನಡೆಸಲು ವಿಫಲರಾದ್ದಲ್ಲಿ ಸಿಬಿಐ ತನಿಖೆಗೆ ನೀಡುವುದಾಗಿ ದೀದಿ ಘೋಷಿಸಿದ್ದರು. ಈ ಘಟನೆಗೆ ದೇಶಾದ್ಯಂತ ಆಕ್ರೋಶದ ಕಿಚ್ಚು ಹೆಚ್ಚಾದಂತೆ ಕೋಲ್ಕತಾ ಹೈಕೋರ್ಟ್‌ ದಿಟ್ಟ ಹೆಜ್ಜೆಯನ್ನು ಇರಿಸಿತ್ತು. ಪ್ರಕರಣದ ತನಿಖೆಯಲ್ಲಿ ಯಾವುದೇ ಬೆಳವಣಿಗೆ ಕಂಡು ಬಾರದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು.

ಘಟನೆ ಖಂಡಿಸಿ ವೈದ್ಯರ ಮುಷ್ಕರ: ಸಹದ್ಯೋಗಿ ಮೇಲೆ ಅತ್ಯಾಚಾರ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮೆಡಿಕಲ್ ಕಾಲೇಜಿನ ವೈದ್ಯರು, ತುರ್ತು ಚಿಕಿತ್ಸೆಯನ್ನು ಹೊರತು ಪಡಿಸಬೇಕೆಂದು ಸೇವೆಗಳನ್ನು ತಕ್ಷಣದಿಂದಲೇ ನಿಲ್ಲಿಸಿದ್ದರು. ಅಲ್ಲದೇ ಆರೋಪಿ ಬಂಧನಕ್ಕೆ ಒತ್ತಾಯಿಸಿದ್ದರು. ಬಂಗಾಳ ಬಿಜೆಪಿ ಸೇರಿದಂತೆ ವಿಪಕ್ಷ ನಾಯಕರು ಪ್ರಕರಣದ ಬಗ್ಗೆ ಪ್ರಕರಣದ ಬಗ್ಗೆ ಸ್ವತಂತ್ರ ಮ್ಯಾಜಿಸ್ಟ್ರೇಟ್‌ ತನಿಖೆಗೆ ಒತ್ತಾಯಿಸಿದರು.

ದೇಶಾದ್ಯಂತ ಭುಗಿಲೆದ್ದ ಆಕ್ರೋಶ: ವೈದ್ಯೆ ಮೇಲಿನ ಅತ್ಯಾಚಾರ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ದೇಶವ್ಯಾಪಿ ಪ್ರತಿಭಟನೆ ಜೋರಾಯಿತು ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹ ಕೇಳಿ ಬಂತು. ಮೆಡಿಕಲ್ ಕಾಲೇಜಿನಲ್ಲಿ ವೈದ್ಯೆ, ಅತ್ಯಾಚಾರ ಖಂಡಿಸಿ, ವೈದ್ಯರು, ಒಪಿಡಿಗಳನ್ನು ಬಂದ್‌ ಮಾಡಿ ಬೀದಿಗಿಳಿದು ಪ್ರತಿಭಟಿಸಿದರು. ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರ ನಡೆಸಿದರು. ವೈದ್ಯರು ಸೇರಿದಂತೆ ಆರೋಗ್ಯ ಸಿಬ್ಬಂದಿಗಳು ನಡೆಸುತ್ತಿರುವ ಪ್ರತಿಭಟನೆ ಇಂದಿಗೂ ಮುಂದುವರೆದಿದೆ.

ಹಿಂಸಾಚಾರಕ್ಕೆ ತಿರುಗಿದ ಮೊಂಬತ್ತಿ ಪ್ರತಿಭಟನೆ: ವೈದ್ಯೆ ಮೇಲಿನ ರೇಪ್‌ ಖಂಡಿಸಿ, ಬುಧವಾರ ರಾತ್ರಿ ಆರ್‌ಜಿ ಕರ್‌ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಗಳು ಮೊಂಬತ್ತಿ ಮೆರವಣಿಗೆಯನ್ನು ನಡೆಸುತ್ತಿದ್ದರು. ಈ ವೇಳೆ ಕೆಲ ಸಿಬ್ಬಂದಿಗಳು ಆಸ್ಪತ್ರೆಗೆ ನುಗ್ಗಿ ದಾಂಧಲೆ ನಡೆಸಿದರು, ಆಸ್ಪತ್ರೆಯ ನಾಲ್ಕನೆ ಮಹಡಿಗೆ ನುಗ್ಗಿ ಅಲ್ಲಿದ್ದ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿದ್ದರು. 40 ಜನರ ಗುಂಪು ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದ್ದರು. ಈ ಪೈಕಿ 25 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಅತಿಹೆಚ್ಚು ರೇಪ್‌: ಟಾಪ್‌ 3 ರಾಜ್ಯಗಳು
ರಾಜಸ್ಥಾನ 5399
ಉ.ಪ್ರದೇಶ 3690
ಮಧ್ಯಪ್ರದೇಶ 3029
ಪ್ರತಿ ವರ್ಷ 30000ಕ್ಕೂ ಹೆಚ್ಚು ಅತ್ಯಾಚಾರ
ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಅತ್ಯಾಚಾರ ಪ್ರಕರಣಗಳು ಏರಿಕೆ ಆಗುತ್ತಲೇ ಇವೆ. 2022ರಲ್ಲಿ ಭಾರತದಲ್ಲಿ 31,516 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.

10 ವರ್ಷಗಳಲ್ಲಿ 3.50 ಲಕ್ಷ ರೇಪ್‌ ಕೇಸ್‌: ಕಳೆದ 10 ವರ್ಷಗಳಿಂದ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಏರಿಕೆ ಆಗುತ್ತಲೇ ಇವೆ. ಅಂಕಿ ಅಂಶಗಳ ಪ್ರಕಾರ, 2012ರಲ್ಲಿ 24923, 2013ರಲ್ಲಿ 33707, 2014ರಲ್ಲಿ 34735, 2015ರಲ್ಲಿ 34651, 2016ರಲ್ಲಿ 38947, 2017ರಲ್ಲಿ 32559, 2018ರಲ್ಲಿ 33356, 2019ರಲ್ಲಿ 32032, 2020ರಲ್ಲಿ 28046, 2021ರಲ್ಲಿ 31677 ಹಾಗೂ 2022ರಲ್ಲಿ 31516 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 2016ರಲ್ಲಿ ಅತಿಹೆಚ್ಚು ಪ್ರಕರಣಗಳು ವರದಿಯಾಗಿವೆ.

ರಸ್ತೆ ಸಂಪರ್ಕ, ಆರೋಗ್ಯ ಸೌಕರ್ಯಗಳು ಇಲ್ಲದ ದುರ್ಗಮ ಸ್ಥಳಕ್ಕೆ ‘ಮಿನಿ ಆಸ್ಪತ್ರೆ’ ಏರ್‌ಡ್ರಾಪ್‌ ಮಾಡಿದ ಸೇನಾಪಡೆ!

ಭಾರತದಲ್ಲಿ ವೈದ್ಯರ ಮೇಲೆ ದಾಳಿ: ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ, ಪ್ರಪಂಚದಾದ್ಯಂತ ಶೇ.8 ರಿಂದ ಶೇ.38ರಷ್ಟು ವೈದ್ಯಕೀಯ ಸಿಬ್ಬಂದಿಗಳು ತಮ್ಮ ವೃತ್ತಿ ಜೀವನದಲ್ಲಿ ದೈಹಿಕ ಹಿಂಸೆಗೆ ಒಳಗಾಗುತ್ತಿದ್ದಾರೆ. ಅಂಕಿ-ಅಂಶಗಳ ಪ್ರಕಾರ, ಚೀನಾದಲ್ಲಿ ಶೇ.85, ಭಾರತದಲ್ಲಿ ಶೇ.75, ಅಮೆರಿಕದಲ್ಲಿ ಶೇ.47ರಷ್ಟು ವೈದ್ಯರು ಕರ್ತವ್ಯದ ಸ್ಥಳಗಳಲ್ಲಿ ದೈಹಿಕ ಹಿಂಸೆ ಅನುಭವಿಸಿದ್ದಾರೆ. ಈ ಪೈಕಿ ಅಮೆರಿಕದಲ್ಲಿ ಶೇ. 97ರಷ್ಟು ವೈದ್ಯರು ರೋಗಿಗಳಿಂದಲೇ ದಾಳಿಗೆ ಒಳಗಾಗಿದ್ದಾರೆ. ಇದರಲ್ಲಿ ಶೇ.39ರಷ್ಟು ಹಿಂಸೆಯು ಪ್ರಸೂತಿ ಮತ್ತು ಸ್ತ್ರೀ ರೋಗ,ಶೇ.30 ರಷ್ಟು ಶಸ್ತ್ರ ಚಿಕಿತ್ಸೆ, ಶೇ.27ರಷ್ಟು ಔಷಧಿ, ಶೇ.4ರಷ್ಟು ದಾಳಿಗಳು ಇತರ ವಿಚಾರಗಳಿಗೆ ನಡೆದಿದೆ. ಈ ದಾಳಿಗಳು ಕಿರಿಯ ವೈದ್ಯರು, ಅನಾನುಭವಿ ವೈದ್ಯರ ಮೇಲೆಯೇ ನಡೆದಿರುವುದು ಹೆಚ್ಚು.

Latest Videos
Follow Us:
Download App:
  • android
  • ios