ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ರೋಗಿಯೊಬ್ಬರ ಪಿತ್ತಕೋಶದಿಂದ ವೈದ್ಯರು 4000ಕ್ಕೂ ಹೆಚ್ಚು ಕಲ್ಲುಗಳನ್ನು ಯಶಸ್ವಿಯಾಗಿ ತೆಗೆದಿದ್ದಾರೆ. ಲ್ಯಾಪರೊಸ್ಕೋಪಿಕ್ ವಿಧಾನದಲ್ಲಿ ನಡೆದ ಈ ಶಸ್ತ್ರಚಿಕಿತ್ಸೆಯ ನಂತರ ರೋಗಿಯು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.
ಚಂಡೀಗಢ: ರೋಗಿಯೊಬ್ಬರ ಪಿತ್ತಕೋಶದಲ್ಲಿದ್ದ 4 ಸಾವಿರಕ್ಕೂ ಅಧಿಕ ಸಣ್ಣ ಕಲ್ಲುಗಳನ್ನು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊರಗೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹರಿಯಾಣದ ಫರಿದಾಬಾದ್‌ನ ನೀಲಂ ಚೌಕ್‌ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆದಿದೆ. ಗಿರಿರಾಜ್ ಸಿಂಗ್ (ಹೆಸರು ಬದಲಾಯಿಸಲಾಗಿದೆ) ಎಂಬವರು ತೀವ್ರ ಹೊಟ್ಟೆನೋವು, ಅಜೀರ್ಣತೆ ಸೇರಿದಂತೆ ಹಲವು ಅನಾರೋಗ್ಯ ಸಮಸ್ಯೆಗಳಿಂದಾಗಿ ಫರಿದಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಪರಿಶೀಲನೆ ನಡೆಸಿದ ವೈದ್ಯರು, ಪಿತ್ತಕೋಶದಿಂದ 4000 ಕ್ಕೂ ಹೆಚ್ಚು ಕಲ್ಲುಗಳನ್ನು ತೆಗೆದಿದ್ದಾರೆ.
ಆಸ್ಪತ್ರೆಗೆ ಬಂದಾಗ ರೋಗಿ ಆರೋಗ್ಯ ಹೇಗಿತ್ತು?
ಗಿರಿರಾಜ್ ಸಿಂಗ್ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಅವರ BMI (Body Mass Index) ಲೆವೆಲ್ 46 ಆಗಿತ್ತು. ಟೈಪ್ 2 ಮಧುಮೇಹ, ನಿದ್ರಾಹೀನತೆ, ಅಧಿಕ ರಕ್ತದೊತ್ತಡ, ಮೂತ್ರಪಿಂಡದಲ್ಲಿ ಸಣ್ಣದಾದ ಗಾಯ ಮತ್ತು ನಿದ್ರಾಹೀನತೆಯಿಂದ ಬಳಲುತ್ತಿದ್ದರು. ಹಾಗೆಯೇ ಒಂದು ವಾರದಿಂದ ಗಿರಿರಾಜ್ ಸಿಂಗ್, ತೀವ್ರ ಹೊಟ್ಟೆ ನೋವು, ವಾಂತಿ ಮತ್ತು ತೀವ್ರ ಅಜೀರ್ಣದಿಂದ ಬಳಲುತ್ತಿದ್ದರು. ಈ ಸಂಬಂಧ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಪಿತ್ತಕೋಶದಲ್ಲಿ ತೀವ್ರ ಊತ, ಸಾವಿರಾರು ಸೂಕ್ಷ್ಮ ಕಲ್ಲುಗಳು ಮತ್ತು ದಪ್ಪ ಪಿತ್ತರಸ ಸ್ಲಡ್ ಕಂಡುಬಂತು ಎಂದು ವೈದ್ಯರು ಹೇಳಿದ್ದಾರೆ.
ಆಧುನಿಕ ತಂತ್ರಜ್ಞಾನ ಆಧರಿತ 45 ನಿಮಿಷದ ಶಸ್ತ್ರಚಿಕಿತ್ಸೆ
ರೋಗಿಯ ಆರೋಗ್ಯ ದೃಷ್ಟಿಯಿಂದಾಗಿ ಆಸ್ಪತ್ರೆಯ ಹಿರಿಯ ವೈದ್ಯ ಬಿ.ಡಿ.ಪಾಠಕ್ ನೇತೃತ್ವದ ಶಸ್ತ್ರಚಿಕಿತ್ಸ ತಂಡ, ಲ್ಯಾಪರೊಸ್ಕೋಪಿಕ್ ವಿಧಾನದಲ್ಲಿ 45 ನಿಮಿಷದಲ್ಲಿಯೇ ಯಶಸ್ವಿಯಾಗಿ ಸರ್ಜರಿ ನಡೆಸಿದೆ. ಈ ವೇಳೆ ಪಿತ್ತಕೋಶದಲ್ಲಿದ್ದ 4,000 ಕ್ಕೂ ಅಧಿಕ ಕಲ್ಲುಗಳನ್ನು ಹೊರಗೆ ತೆಗೆಯಲಾಗಿದೆ. ಈ ಶಸ್ತ್ರಚಿಕಿತ್ಸೆ ಕೆಲ ದಿನಗಳ ನಂತರ ಗಿರಿರಾಜ್ ಸಿಂಗ್ ಸಂಪೂರ್ಣ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಆಧುನಿಕ ತಂತ್ರಜ್ಞಾನ ಬಳಕೆಯಿಂದ ಕಡಿಮೆ ಅರವಳಿಕೆ ಮದ್ದು ಬಳಕೆ ಮಾಡಿದ್ದಿರಂದ ರೋಗಿಗೆ ವರದಾನವಾಯ್ತು ಎಂದು ಡಾ. ಪಾಠಕ್ ಹೇಳುತ್ತಾರೆ. ತೀವ್ರವಾದ ಹೊಟ್ಟೆನೋವಿನಿಂದ ಬಳಲುತ್ತಿದ್ದಯ ಆರೋಗ್ಯದಲ್ಲಿ ಕ್ಷಿಪ್ರ ಸುಧಾರಣೆ ಕಂಡು ಬಂದಿದೆ. ಸದ್ಯ ಗುಣಮುಖರಾಗಿರುವ ಗಿರಿರಾಜ್ ಸಿಂಗ್ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಮೊದಲಿಗೆ ನಡೆದಾಡಲು ಗಿರಿರಾಜ್ ಅವರಿಗೆ ಸಹಾಯಕರು ಬೇಕಿದ್ರು. ಇದೀಗ ಸ್ವತಂತ್ರವಾಗಿ ಗಿರಿರಾಜ್ ಓಡಾಡುತ್ತಾರೆ. ಇದರಿಂದ ಅವರ ಕುಟುಂಬಸ್ಥರು ಸಂತೋಷವಾಗಿದ್ದಾರೆ ಎಂದು ಡಾಕ್ಟರ್ ಪಾಠಕ್ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತೀಯ ಮಾರ್ಕೆಟ್‌ಗೆ Gen Z ಜನಾಂಗ ಎಷ್ಟು ದೊಡ್ಡ ಆಸ್ತಿ? ಅವರು ಶಾಪಿಂಗ್ ಮಾಡೋದು ಹೇಗೆ ಗೊತ್ತಾ?

