Asianet Suvarna News Asianet Suvarna News

ಖಲಿಸ್ತಾನ ನಾಯಕ ಅಮೃತ್ ಪಾಲ್ ಸಿಂಗ್ ಅರೆಸ್ಟ್, ಪಂಜಾಬ್‌ನಲ್ಲಿ ಇಂಟರ್ನೆಟ್ ಸ್ಥಗಿತ!

ದೇಶಕ್ಕೆ ಮತ್ತೆ ಖಲಿಸ್ತಾನ ಉಗ್ರ ಸಂಘಟನೆ ಬೆದರಿಕೆ ಹೆಚ್ಚಾಗುತ್ತಿದೆ. ದೇಶ ವಿದೇಶಗಳಿಂದ ಭಾರತದ ವಿರುದ್ಧ ಕೂಗು ಹೆಚ್ಚಾಗುತ್ತಿದೆ. ಇದರ ನಡುವೆ ವಾರಿಸ್ ಪಂಜಾಬ್ ದೆ ಮುಖ್ಯಸ್ಥ ಅಮೃತ್ ಪಾಲ್ ಸಿಂಗ್ ಖಲಿಸ್ತಾನ ಹೋರಾಟಕ್ಕೆ ಮತ್ತಷ್ಟು ವೇಗ ನೀಡಿದ್ದರು. ಇದರ ಪರಿಣಾಮ ಪಂಜಾಬ್‌ನಲ್ಲಿ ಖಲಿಸ್ತಾನ ಹೋರಾಟ ತೀವ್ರಗತಿ ಪಡೆದುಕೊಂಡಿದೆ. ಇದೀಗ ಅಮೃತ್ ಪಾಲ್ ಸಿಂಗ್ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Khalistani leader amritpal singh arrested by police Internet shuts in Punjab for security ckm
Author
First Published Mar 18, 2023, 6:08 PM IST

ಪಂಜಾಬ್(ಮಾ.18): ಖಲಿಸ್ತಾನ ಉಗ್ರ ಸಂಘಟನೆ ಅಪಾಯ ಭಾರತಕ್ಕೆ ಸ್ಪಷ್ಟ ಅರಿವಿದೆ. ಕಾರಣ 1980ರ ದಶಕದಲ್ಲಿ ಸರ್ಕಾರ ಹಾಲೆರೆದು ಬೆಳೆಸಿದ ಇದೇ ಖಲಿಸ್ತಾನ ಉಗ್ರ ಸಂಘಟನೆಯನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹತ್ತಿಕ್ಕಿದ್ದರು. ಸ್ವರ್ಣ ಮಂದಿರದೊಳಗೆ ಸೇರಿಕೊಂಡ ಖಲಿಸ್ತಾನ ಉಗ್ರರನ್ನು ಸೇನೆ ಬಳಸಿ ಹತ್ತಿಕ್ಕಲಾಗಿತ್ತು. ಬಳಿಕ ನಿಷೇಧಿತ ಖಲಿಸ್ತಾನಿ ಉಗ್ರ ಸಂಘಟನೆ ಕೆನಡಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಬೇರೂರಿತ್ತು. ಇದೀಗ ಪಂಜಾಬ್‌ನಲ್ಲಿ ಮತ್ತೆ ಖಲಿಸ್ತಾನ ಹೋರಾಟ ತೀವ್ರಗತಿಯಲ್ಲಿ ಸಾಗಿತ್ತು. ಈ ಹೋರಾಟಕ್ಕೆ ದುಬೈನಿಂದ ಭಾರತಕ್ಕೆ ಬಂದ ಅಮೃತ್ ಪಾಲ್ ಸಿಂಗ್ ಮತ್ತಷ್ಟು ವೇಗ ನೀಡಿದರು. ಇದರ ಪರಿಣಾಮ ಪಂಜಾಬ್‌ನಲ್ಲಿ ಮತ್ತೆ ಪ್ರತ್ಯೇಕತೆ ಕೂಗು ಬಹಿರಂಗವಾಗಿ ಕಾಣಿಸಿಕೊಂಡಿತು. ಖಲಿಸ್ತಾನ ಉಪಟಳ ಕೈಮೀರುತ್ತಿದ್ದಂತೆ ಪಂಜಾಬ್ ಸರ್ಕಾರ ಕೇಂದ್ರ ಸರ್ಕಾರದ ನೆರವು ಪಡೆದು, ವಾರಿಸ್ ಪಂಜಾಬ್ ದೇ ಸಂಘಟನೆ ಮುಖ್ಯಸ್ಥ ಅಮೃತ್ ಪಾಲ್ ಸಿಂಗ್‌ನನ್ನು ಬಂಧಿಸಿದ್ದಾರೆ. 

ಅಮೃತಪಾಲ್ ಸಿಂಗ್ ಬಂಧನದ ಮೇಲೆ ಹೈಡ್ರಾಮ ನಡೆದಿದೆ. ಬೆಂಬಲಿಗರು ಅಮೃತ್ ಪಾಲ್ ಸಿಂಗ್ ಮನೆ ಸುತ್ತ ಜಮಾಯಿಸಿ ಪೊಲೀಸರ ಕಾರ್ಯಾಚರಣೆಗೆ ತಡೆ ಒಡ್ಡಿದ್ದರು. ಇದೇ ವೇಳೆ ಮನೆಯಿಂದ ಬೆಂಬಲಿಗರ ನಡುವೆ ಪರಾರಿಯಾದ ಅಮೃತ್ ಪಾಲ್ ಸಿಂಗ್, ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಮುಂದಾಗಿದ್ದ. ಆದರೆ 100ಕ್ಕೂ ಹೆಚ್ಚು ಪೊಲೀಸ್ ವಾಹನಗಳು ಅಮೃತ್ ಪಾಲ್ ಸಿಂಗ್ ಚೇಸ್ ಮಾಡಿತ್ತು. ಜಲಂಧರ್‌ನ ನಾಕೋಡಾರ್ ಸಮೀಪ ಅಮೃತ್ ಪಾಲ್ ಸಿಂಗ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಖಲಿಸ್ತಾನ ಹೋರಾಟದ ನೇತೃತ್ವದ ವಹಿಸಿದ ಅಮೃತ್ ಪಾಲ್ ಸಿಂಗ್ ಯಾರು?

ಪಂಜಾಬ್‌ನಲ್ಲಿ ಪರಿಸ್ಥಿತಿ ಕೈಮೀರುತ್ತಿದ್ದಂತೆ ಸರ್ಕಾರ ಕೇಂದ್ರ ಸರ್ಕಾರದ ಮೊರೆ ಹೋಗಿದೆ. ಕಳೆದೆರಡು ದಿನದಿಂದ ಪಂಜಾಬ್ ಸರ್ಕಾರದ ಜೊತೆ ನಿಕಟ ಸಂಪರ್ಕದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಗತ್ಯ ನೆರವು ನೀಡಿದ್ದಾರೆ. ಇಂದು ಬೆಳಗ್ಗೆಯಿಂದಲೇ ಪಂಜಾಬ್‌ನಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ. 

ಅಮೃತಸರದಲ್ಲಿ ಜಿ20 ಶೃಂಗಸಭೆಯ ಅಂತ್ಯಗೊಂಡ ಬೆನ್ನಲ್ಲೇ ಕೇಂದ್ರ ಸರ್ಕಾರ ಅಮೃತ್ ಪಾಲ್ ಸಿಂಗ್ ಬಂಧನಕ್ಕೆ ಸೂಚನೆ ನೀಡಿದೆ. ಹೀಗಾಗಿ ಇಂದು ಕಾರ್ಯಪ್ರವೃತ್ತರಾದ ಪೊಲೀಸರು ಖಲಿಸ್ತಾನ ಹೋರಾಟದ ನಾಯಕನನ್ನು ಬಂಧಿಸಿದ್ದಾರೆ. 

ಕೆನಡಾದ ರಾಮಮಂದಿರ ಮೇಲೆ ಮೋದಿ ವಿರೋಧಿ, ಭಾರತ ವಿರೋಧಿ ಬರಹ

ಇತ್ತೀಚೆಗೆ ಪಂಜಾಬ್ ಪೊಲೀಸರು ಇದೇ ಅಮೃತ್‌ಪಾಲ್ ಸಿಂಗ್ ನೇತೃತ್ವದ ವಾರಿಸ್ ಪಂಜಾಬ್ ದೇ ಬೆಂಬಲಿಗರು ದಾಳಿಗೆ ಬೆದರಿ ಖಲಿಸ್ತಾನ ಉಗ್ರನನ್ನು ಜೈಲಿನಿಂದ ಬಿಡುಗಡೆ ಮಾಡಿತ್ತು. ಖಲಿಸ್ತಾನ ಹೋರಾಟಗಾರರ ಭಾರೀ ಹಿಂಸಾಚಾರದ ಬೆನ್ನಲ್ಲೇ, ಖಲಿಸ್ತಾನ್‌ ಉಗ್ರ ಅಮೃತ್‌ ಪಾಲ್‌ ಸಿಂಗ್‌ನ ಬಲಗೈ ಬಂಟ, ಅಪಹರಣ ಪ್ರಕರಣದ ಆರೋಪಿ ಲವ್‌ಪ್ರೀತ್‌ ಸಿಂಗ್‌ನನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.

ಲವ್‌ಪ್ರೀತ್‌ನನ್ನು ಬಿಡುಗಡೆ ಮಾಡುವಂತೆ ಪೊಲೀಸರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಅಜ್ನಾಲಾ ಕೋರ್ಚ್‌ ಬಿಡುಗಡೆಗೆ ಆದೇಶಿಸಿದೆ. ಲವ್‌ಪ್ರೀತ್‌ನನ್ನು ಅಪಹರಣ ಪ್ರಕರಣವೊಂದರ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದರು. ಆದರೆ ಬಂಧನದ ಬಳಿಕ ಅಮೃತ್‌ಪಾಲ್‌ ಬೆಂಬಲಿಗರು ಠಾಣೆ ಮೇಲೆ ದಾಳಿ ನಡೆಸಿ ಭಾರೀ ಹಿಂಸೆ ನಡೆಸಿದ್ದರು. ಅದರ ಬೆನ್ನಲ್ಲೇ, ಅಪಹರಣ ನಡೆದ ವೇಳೆ ಲವ್‌ಪ್ರೀತ್‌ ಸ್ಥಳದಲ್ಲಿ ಇರಲಿಲ್ಲ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿರುವುದರಿಂದ ಆತನನ್ನು ಬಿಡುಗಡೆ ಮಾಡುವಂತೆ ಕೋರಿ ಪೊಲೀಸರು ಕೋರ್ಚ್‌ಗೆ ಅರ್ಜಿ ಸಲ್ಲಿಸಿದ್ದರು.

ಖಲಿಸ್ತಾನಿ ಬೆಂಬಲಿಗ ಅಮೃತ್‌ಪಾಲ್‌ ಸಿಂಗ್‌ನ ಸಹಚರರ ಬಂಧನ ವಿರೋಧಿಸಿ, ಸಿಂಗ್‌ನ ಬೆಂಬಲಿಗರು ಗನ್‌, ಕತ್ತಿ ಹಾಗೂ ಇತರ ಆಯುಧಗಳನ್ನು ಹಿಡಿದು ಅಮೃತಸರದ ಅಜ್ನಾಲಾ ಪೊಲೀಸ್‌ ಠಾಣೆಯ ಮೇಲೆ ದಾಳಿ ಮಾಡಿದ್ದರು. 

Follow Us:
Download App:
  • android
  • ios