Adani ಕೇಸ್‌: ಇ.ಡಿ. ಕಚೇರಿ ಮುತ್ತಿಗೆಗೆ ವಿಪಕ್ಷಗಳ ಯತ್ನ; ತನಿಖೆ ಕೋರಿ ಇ - ಮೇಲ್‌ನಲ್ಲೇ ದೂರು

 ಅದಾನಿ ಕೇಸ್‌ ವಿಚಾರದಲ್ಲಿ ಇ.ಡಿ. ಕಚೇರಿ ಮುತ್ತಿಗೆಗೆ ವಿಪಕ್ಷಗಳು ಯತ್ನ ನಡೆಸಿವೆ. 200 ಸಂಸದರಿಗೆ ವಿಜಯ್‌ ಚೌಕದಲ್ಲೇ ಪೊಲೀಸರು ತಡೆ ನೀಡಿದ್ದು, ತನಿಖೆ ಕೋರಿ ಇ.ಡಿ.ಗೆ ಇ-ಮೇಲ್‌ ಮೂಲಕ ವಿಪಕ್ಷಗಳು ದೂರು ನೀಡಿವೆ. 

16 opposition parties file ed complaint over adani ash

ನವದೆಹಲಿ (ಮಾರ್ಚ್‌ 16, 2023) : ಅದಾನಿ ಸಮೂಹದ ಕಂಪನಿಗಳು ನಡೆಸಿವೆ ಎನ್ನಲಾದ ಹಣಕಾಸು ಅಕ್ರಮಗಳ ಬಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ನಡೆಸಬೇಕೆಂದು ಕೋರಿ ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಬುಧವಾರ ಸಂಸತ್ತಿನ ಹೊರಗೆ ಬೃಹತ್‌ ಪ್ರತಿಭಟನೆ ನಡೆಸಿದವು. ಅದಾನಿ ಸಮೂಹದ ವಿರುದ್ಧ ದೂರು ನೀಡುವ ಉದ್ದೇಶದಿಂದ ಇ.ಡಿ. ಕಚೇರಿಗೆ ಮುತ್ತಿಗೆ ಹಾಕಲು ಹೊರಟ 18 ರಾಜಕೀಯ ಪಕ್ಷಗಳ 200 ಸಂಸದರನ್ನು ಪೊಲೀಸರು ವಿಜಯ್‌ ಚೌಕದಲ್ಲೇ ತಡೆದರು. ನಂತರ ವಿಪಕ್ಷಗಳು ಇ-ಮೇಲ್‌ ಮೂಲಕ ಇ.ಡಿ. ನಿರ್ದೇಶಕರಿಗೆ ದೂರು ನೀಡಿದವು.

ಸಂಸತ್ತಿನಿಂದ ಮಧ್ಯಾಹ್ನ 12.30ರ ವೇಳೆಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸುಮಾರು 200 ಸಂಸದರು ಇ.ಡಿ. ಕಚೇರಿಗೆ ರ‍್ಯಾಲಿಯಲ್ಲಿ ಹೊರಟರು. ಇ.ಡಿ. ಕಚೇರಿಗೆ ಮುತ್ತಿಗೆ ಹಾಕಿ, ಅದಾನಿ ವಿರುದ್ಧ ದೂರು ನೀಡುವುದು ಅವರ ಉದ್ದೇಶವಾಗಿತ್ತು. ಆದರೆ, ಸಂಸತ್‌ ಅಧಿವೇಶನದ ಕಾರಣ ಸ್ಥಳದಲ್ಲಿ ಸೆಕ್ಷನ್‌ 144 ಜಾರಿಯಲ್ಲಿದೆ ಎಂಬ ಕಾರಣ ನೀಡಿ ಪೊಲೀಸರು ಅವರನ್ನು ತಡೆದರು. ನಂತರ ಅಲ್ಲೇ ಪ್ರತಿಭಟನೆ ನಡೆಸಿದ ಸಂಸದರು, ಕೊನೆಗೆ ಇ-ಮೇಲ್‌ ಮೂಲಕ ಇ.ಡಿ. ನಿರ್ದೇಶಕ ಎಸ್‌.ಕೆ.ಮಿಶ್ರಾ ಅವರಿಗೆ ದೂರು ನೀಡಿದರು.

ಇದನ್ನು ಓದಿ: ಅದಾನಿ ಸಮೂಹ ಷೇರುಗಳ ಜಿಗಿತ: 2 ದಿನದಲ್ಲಿ 3,102 ಕೋಟಿ ರೂ. ಲಾಭ ಮಾಡಿಕೊಂಡ ಎನ್‌ಆರ್‌ಐ

ಇ.ಡಿ. ಬೇಕಂತಲೇ ತನಿಖೆ ನಡೆಸುತ್ತಿಲ್ಲ:
ಪ್ರತಿಭಟನೆಯ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ‘ಅದಾನಿ ಪ್ರಕರಣದಲ್ಲಿ ವಿಸ್ತೃತ ತನಿಖೆ ನಡೆಸುವಂತೆ ಕೋರಿ ಇ.ಡಿ.ಗೆ ದೂರು ನೀಡಲು ಸರ್ಕಾರ ನಮಗೆ ಬಿಡುತ್ತಿಲ್ಲ. ಅದಾನಿ ಪ್ರಕರಣದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದರೂ ಇ.ಡಿ. ಬೇಕಂತಲೇ ತನಿಖೆ ನಡೆಸುತ್ತಿಲ್ಲ. ನಾವು ಈ ವಿಷಯದಲ್ಲಿ ನಮ್ಮ ಬೇಡಿಕೆಯನ್ನು ಹೀಗೇ ಮುಂದುವರೆಸುತ್ತೇವೆ’ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್‌, ಸಿಪಿಐ, ಸಿಪಿಎಂ, ಜೆಡಿಯು, ಆರ್‌ಜೆಡಿ, ಡಿಎಂಕೆ, ಜೆಎಂಎಂ, ಆಪ್‌, ಐಯುಎಂಎಲ್‌, ವಿಸಿಕೆ, ಕೇರಳ ಕಾಂಗ್ರೆಸ್‌ ಸೇರಿ 16 ಪಕ್ಷಗಳು ಪಾಲ್ಗೊಂಡಿದ್ದವು. ಟಿಎಂಸಿ ಮತ್ತು ಎನ್‌ಸಿಪಿ ಪಾಲ್ಗೊಂಡಿರಲಿಲ್ಲ.

ವಿಪಕ್ಷಗಳ ದೂರಿನಲ್ಲಿ ಏನಿದೆ?
‘ಇತ್ತೀಚಿನ ದಿನಗಳಲ್ಲಿ ಇ.ಡಿ. ಹೇಗೆ ರಾಜಕೀಯ ಕಾರಣಕ್ಕೆ ತನ್ನ ವ್ಯಾಪ್ತಿ ಮೀರಿ ದಾಳಿಗಳನ್ನು ನಡೆಸುತ್ತಿದೆ ಎಂಬುದು ನಮಗೆ ತಿಳಿದಿದೆ. ಆದರೆ, ಅದಾನಿ ಪ್ರಕರಣದಲ್ಲಿ ಸಾಕಷ್ಟು ದಾಖಲೆಗಳಿದ್ದರೂ ತನಿಖೆ ನಡೆಸುತ್ತಿಲ್ಲ. ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ನಾವು ಆಗ್ರಹಿಸುತ್ತೇವೆ’ ಎಂದು ಪತ್ರದಲ್ಲಿ ವಿಪಕ್ಷಗಳು ಉಲ್ಲೇಖಿಸಿವೆ.

ಇದನ್ನೂ ಓದಿ: ಮರಳಿ ಹಳಿಗೆ ಅದಾನಿ ಗ್ರೂಪ್‌: 2 ಗಂಟೆಗಳಲ್ಲಿ 5 ಬಿಲಿಯನ್ ಡಾಲರ್‌ ಜಿಗಿದ ಗೌತಮ್‌ ಅದಾನಿ ಆಸ್ತಿ

ಸಂಸತ್‌ ಕಲಾಪ ಬಲಿ
‘ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂದ ರಾಹುಲ್‌ ಗಾಂಧಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಸಂಸದರು ನಡೆಸಿದ ಗದ್ದಲ ಹಾಗೂ ಅದಕ್ಕೆ ಪ್ರತಿಯಾಗಿ ಅದಾನಿ ಬಗ್ಗೆ ಇ.ಡಿ. ತನಿಖೆ ಕೋರಿ ವಿಪಕ್ಷ ಗದ್ದಲ ನಡೆಸಿದ ಕಾರಣ ಸಂಸತ್‌ ಕಲಾಪ ಬಲಿ ಆಯಿತು. 

ಇದನ್ನೂ ಓದಿ: ಸಂಕಷ್ಟದಲ್ಲೂ ಲಖನೌ ಏರ್‌ಪೋರ್ಟ್‌ ನವೀಕರಣಕ್ಕೆ 5 ಸಾವಿರ ಕೋಟಿ ಹೂಡಿಕೆ ಮಾಡಲಿರೋ ಅದಾನಿ ಸಮೂಹ..! 

Latest Videos
Follow Us:
Download App:
  • android
  • ios