ಉಕ್ರೇನ್-ರಷ್ಯಾ ಯುದ್ಧದ ನಡುವೆ, ಒಡೆಸಾ ಬಳಿ ರಷ್ಯಾ ನಡೆಸಿದ ಹಡಗು ದಾಳಿಯಲ್ಲಿ ಕಾಸರಗೋಡಿನ ಯುವ ನಾವಿಕ ಅಖಿಲ್ ಜೋಯನ್ ಮೃತಪಟ್ಟಿದ್ದಾರೆ. ಮದುವೆಗೆ ಸಿದ್ಧತೆ ನಡೆಸುತ್ತಿದ್ದ ಅಖಿಲ್, ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದರು.

ಕಾಸರಗೋಡು: ಉಕ್ರೇನ್ ಮತ್ತು ರಷ್ಯಾ ನಡುವಿನ ಭೀಕರ ಯುದ್ಧವು ಮತ್ತೊಬ್ಬ ಭಾರತೀಯನ ಬಲಿಯನ್ನು ಪಡೆದಿದೆ. ಉಕ್ರೇನ್‌ನ ಒಡೆಸಾ ನಗರದ ಸಮೀಪವಿರುವ ಎಂವಿ ಗೋಲ್ಡನ್ ಲಿಯೋ (MV Golden Leo) ಎಂಬ ಸರಕು ಸಾಗಣೆ ಹಡಗಿನ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಕೇರಳದ ಯುವ ನಾವಿಕ ಅಖಿಲ್ ಜೋಯನ್ ಸೇರಿದಂತೆ ನಾಲ್ವರು ಭಾರತೀಯರು ಮೃತಪಟ್ಟಿದ್ದಾರೆ.

ಕಣ್ಣೀರಲ್ಲಿ ಮುಳುಗಿದ ಸಂಬಂಧಿಗಳು

ಮೃತ ಅಖಿಲ್ ಜೋಯನ್ (26) ಕೇರಳದ ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡು ನಿವಾಸಿ. ಕೇವಲ ಮೂರು ತಿಂಗಳ ಹಿಂದೆಯಷ್ಟೇ ಅಖಿಲ್ ಅವರ ನಿಶ್ಚಿತಾರ್ಥ ಅಲೆಪ್ಪಿಯ ಯುವತಿಯೊಂದಿಗೆ ಅದ್ಧೂರಿಯಾಗಿ ನಡೆದಿತ್ತು. ಇನ್ನು ಎರಡು ತಿಂಗಳಲ್ಲಿ ಮದುವೆ ನಿಶ್ಚಯವಾಗಿತ್ತು. ಮದುವೆಗಾಗಿ ಸಿದ್ಧತೆಗಳು ನಡೆಯುತ್ತಿದ್ದವು, ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಒಂದು ತಿಂಗಳ ಹಿಂದೆಯಷ್ಟೇ ಅವರು ರಜೆ ಮುಗಿಸಿ ಮತ್ತೆ ಕೆಲಸಕ್ಕೆ ತೆರಳಿದ್ದರು.

ಅಖಿಲ್ ಅವರ ತಂದೆ ಜೋಯನ್ ಎಲೆಕ್ಟ್ರಿಕಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ಸ್ಯಾಲಿ ಇನ್ಶೂರೆನ್ಸ್ ಏಜೆಂಟ್ ಆಗಿದ್ದಾರೆ. ಈ ಸಾಮಾನ್ಯ ಕುಟುಂಬಕ್ಕೆ ಅಖಿಲ್ ಏಕೈಕ ಮಗನಾಗಿದ್ದರು. ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಅವರು 19ನೇ ವಯಸ್ಸಿನಲ್ಲೇ ಮರ್ಚೆಂಟ್ ನೇವಿಗೆ ಸೇರಿದ್ದರು. ಇತ್ತೀಚೆಗಷ್ಟೇ ಒಂದು ಹೊಸ ಮನೆಯನ್ನು ಕೂಡ ಕಟ್ಟಿಸಿದ್ದರು. ಶೀಘ್ರದಲ್ಲೇ ಈ ಕೆಲಸ ಬಿಟ್ಟು ಬೇರೆ ಉತ್ತಮ ಕೆಲಸಕ್ಕೆ ಸೇರುವ ಕನಸು ಅವರದ್ದಾಗಿತ್ತು.

ಸ್ಥಳೀಯವಾಗಿ ಜನಪ್ರಿಯರಾಗಿದ್ದರು

ಅಖಿಲ್ ಕೇವಲ ನಾವಿಕನಾಗಿ ಮಾತ್ರವಲ್ಲದೆ, ಸ್ಥಳೀಯವಾಗಿ ಉತ್ತಮ ಕ್ರೀಡಾಪಟುವಾಗಿಯೂ ಗುರುತಿಸಿಕೊಂಡಿದ್ದರು. ಅವರು ಕೇರಳದ ಜನಪ್ರಿಯ ಕ್ರೀಡೆಯಾದ ಹಗ್ಗಜಗ್ಗಾಟ (Tug-of-war) ಪಂದ್ಯದ ಉತ್ತಮ ಆಟಗಾರರಾಗಿದ್ದರು. ಶಿಸ್ತುಬದ್ಧ ಜೀವನ ನಡೆಸುತ್ತಿದ್ದ ಅಖಿಲ್ ಅಕಾಲಿಕ ಮರಣವು ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.

ವಿದೇಶಿ ಮಾಧ್ಯಮಗಳ ವರದಿಯ ಪ್ರಕಾರ, ಪಶ್ಚಿಮ ಆಫ್ರಿಕಾದ ಗಿನಿಯಾ-ಬಿಸ್ಸೌ ಧ್ವಜ ಹೊತ್ತ ಈ ಹಡಗು ಉಕ್ರೇನ್‌ನಿಂದ ಕಾರ್ನ್ (Corn) ಹೊತ್ತು ಒಡೆಸಾ ಬಂದರಿನಿಂದ ಹೊರಬರುತ್ತಿದ್ದಾಗ ರಷ್ಯಾದ ಪಡೆಗಳು ದಾಳಿ ನಡೆಸಿವೆ. ಈ ದಾಳಿಯಲ್ಲಿ ಒಟ್ಟು 10 ಮಂದಿ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ ನಾಲ್ವರು ಭಾರತೀಯರು ಹಾಗೂ ಐವರು ಸಿರಿಯಾದ ನಾವಿಕರಾಗಿದ್ದಾರೆ. 8 ಮಂದಿಯನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.

ಸೋಮವಾರ ಸಂಜೆ ಹಡಗು ಕಂಪನಿಯಿಂದ ಇಮೇಲ್ ಬಂದಾಗ ಕುಟುಂಬಕ್ಕೆ ಅಖಿಲ್ ಸಾವಿನ ಸುದ್ದಿ ತಿಳಿದಿದೆ. ಕೇರಳ ಮುಖ್ಯಮಂತ್ರಿ ಕಚೇರಿಯು ಈಗಾಗಲೇ ಅನಿವಾಸಿ ಕೇರಳೀಯರ ವ್ಯವಹಾರಗಳ ಇಲಾಖೆ (NORKA)ಗೆ ಸೂಚನೆ ನೀಡಿದ್ದು, ರಷ್ಯಾ ರಾಯಭಾರ ಕಚೇರಿ ಮತ್ತು ವಿದೇಶಾಂಗ ಸಚಿವಾಲಯದೊಂದಿಗೆ ಸಂಪರ್ಕ ಸಾಧಿಸಿ ಮೃತದೇಹವನ್ನು ತಾಯ್ನಾಡಿಗೆ ತರಲು ವ್ಯವಸ್ಥೆ ಮಾಡುತ್ತಿದೆ.