ಕೇರಳದ ಅರಣ್ಯ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು 16 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಜಿ.ಎಸ್. ರೋಶ್ನಿ ಎಂಬುವವರು ಈ ಸಾಹಸ ಮೆರೆದಿದ್ದಾರೆ.

ಹಾವು ಎಂದರೆ ಬಹುತೇಕ ಎಲ್ಲರೂ ಹೆದರಿ ಓಡುತ್ತಾರೆ. ಆದರೆ ಕೇರಳದಲ್ಲಿ ಅರಣ್ಯ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು 16 ಅಡಿ ಉದ್ದದ ಹಾವನ್ನು ಸುರಕ್ಷಿತವಾಗಿ ಹಿಡಿದು ರಕ್ಷಣೆ ಮಾಡಿದ್ದು, ಅದರ ವೀಡಿಯೋ ಈಗ ವೈರಲ್ ಆಗಿದೆ. ನಿವೃತ್ತ ಐಎಫ್‌ಎಸ್ ಅಧಿಕಾರಿ ಸುಸಾಂತ್ ನಂದಾ ಅವರು ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿದ್ದು, ಮಹಿಳಾ ಅಧಿಕಾರಿಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಹಸಿರು ರಾಣಿಯರಿಗೆ ಮತ್ತು ಕಾಡಿನಲ್ಲಿ ಅವರು ತೋರಿಸಿದ ಧೈರ್ಯಕ್ಕೆ ನನ್ನ ನಮನಗಳು. ಕೇರಳದ ಅರಣ್ಯ ಇಲಾಖೆಯ ಕ್ಷಿಪ್ರ ಪ್ರತಿಕ್ರಿಯೆ ತಂಡದ ಭಾಗವಾಗಿರುವ ಅರಣ್ಯ ಅಧಿಕಾರಿ ಜಿ ಎಸ್ ರೋಶ್ನಿ ಅವರು 16 ಅಡಿ ಎತ್ತರದ ಕಾಳಿಂಗ ಸರ್ಪವನ್ನು ರಕ್ಷಿಸಿದ್ದಾರೆ. ಅವರು ಇದುವರೆಗೆ 800 ಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿದ ಕೀರ್ತಿಗೆ ಪಾತ್ರರಾಗಿದ್ದರೂ, ಅವರು ರಾಜ ನಾಗರಹಾವನ್ನು ಎದುರಿಸುತ್ತಿರುವುದು ಇದೇ ಮೊದಲು ಎಂದು ಸುಸಾಂತ್ ನಂದಾ ಅವರು ಟ್ವಿಟ್ಟರ್‌ನಲ್ಲಿ ಬರೆದು ಈ ಹಾವಿನ ರಕ್ಷಣೆಯ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ಈ ಹಾವು ಸ್ಥಳೀಯರು ಹೆಚ್ಚಾಗಿ ಸ್ನಾನ ಮಾಡುವ ಹೊಳೆಯ ಸಮೀಪದಲ್ಲಿ ಕಾಣಿಸಿಕೊಂಡಿತ್ತು. ಹೀಗಾಗಿ ಸ್ಥಳೀಯರ ಕರೆಯ ಮೇರೆಗೆ ಕೂಡಲೇ ಕಾರ್ಯಪ್ರವೃತ್ತರಾದ ಅಧಿಕಾರಿ ಈ ಹಾವನ್ನು ಹಿಡಿದಿದ್ದಾರೆ. ವಿಷಪೂರಿತ ಸರೀಸೃಪವನ್ನು ಮೇಲಕ್ಕೆತ್ತಲು ಅವರು ಹಾವು ಹಿಡಿಯುವ ಕೋಲನ್ನು ಎಚ್ಚರಿಕೆಯಿಂದ ಬಳಸಿ ಹಾವನ್ನು ರಕ್ಷಿಸಿ ಚೀಲವೊಂದಕ್ಕೆ ತುಂಬಿಸಿದ್ದು, ನಂತರ ಅದನ್ನು ಕಾಡಿನೊಳಗೆ ಸೂಕ್ತವಾದ ಆವಾಸಸ್ಥಾನಕ್ಕೆ ಬಿಟ್ಟಿದ್ದಾರೆ ಎಂದು ವರದಿಯಾಗಿದೆ. ಈ ರಕ್ಷಣಾ ಕಾರ್ಯಾಚರಣೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಹಾವಿನ ಉಪಸ್ಥಿತಿ ಇರುವ ಪರಿಸ್ಥಿತಿಯನ್ನು ಶಾಂತವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸುವುದನ್ನು ವೀಡಿಯೋದಲ್ಲಿ ನೋಡಬಹುದು.

ಈ ವಿಡಿಯೋ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರು ಮಹಿಳಾ ಅಧಿಕಾರಿ ರೋಶ್ನಿ ಅವರ ಧೈರ್ಯ ಮತ್ತು ಅವರು ಶಾಂತವಾಗಿ ಪರಿಸ್ಥಿತಿಯನ್ನು ನಿಯಂತ್ರಿಸಿದ ರೀತಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ರಾಣಿ ರಾಜನನ್ನು ನಿಭಾಯಿಸುತ್ತಾಳೆ, ಪರಿಸ್ಥಿತಿ ಏನೇ ಇರಲಿ ತನ್ನ ಕರ್ತವ್ಯಗಳನ್ನುಅವರು ಪೂರೈಸುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಅರಣ್ಯ ಅಧಿಕಾರಿಗಳು, ಕೆಳಹಂತದ ಸಿಬ್ಬಂದಿ(ground staff) ಮತ್ತು ಭದ್ರತಾ ಸಿಬ್ಬಂದಿ ಮಾತ್ರ ತಮ್ಮ ಕೆಲಸವನ್ನು ನಿಜವಾಗಿಯೂ ಮಾಡುತ್ತಾರೆ. ಐಎಫ್‌ಎಸ್ ಅಧಿಕಾರಿಗಳು ಐಎಎಸ್ ಬಾಬುಗಳಿಗಿಂತ ಹೆಚ್ಚಿನ ಗೌರವಕ್ಕೆ ಅವರು ಅರ್ಹರು ಎಂದು ವೀಡಿಯೋ ನೋಡಿದ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅವರು ನಿಜವಾಗಿಯೂ ಧೈರ್ಯಶಾಲಿ ಮಹಿಳೆ ಆಕೆಯ ಕಾರ್ಯವನ್ನು ಗುರುತಿಸಿ ಗೌರವಿಸಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದೊಂತರ ಅದ್ಭುತವಾದ ಕೆಲಸ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಸುದ್ದಿಸಂಸ್ಥೆ ಪಿಟಿಐ ವರದಿಯ ಪ್ರಕಾರ, ಅಧಿಕಾರಿ ಜಿಎಸ್ ರೋಶ್ನಿ ಅವರು ಕೇರಳ ಅರಣ್ಯ ಇಲಾಖೆಯಲ್ಲಿ ಸುಮಾರು ಎಂಟು ವರ್ಷಗಳ ತಮ್ಮ ವೃತ್ತಿಜೀವನದಲ್ಲಿ 800 ಕ್ಕೂ ಹೆಚ್ಚು ವಿಷಕಾರಿ ಮತ್ತು ವಿಷಕಾರಿಯಲ್ಲದ ಹಾವುಗಳನ್ನು ರಕ್ಷಿಸಿದ್ದಾರೆ. ಆದರೂ ಕಾಳಿಂಗ ಹಾವನ್ನುಅವರು ಮುಖಾಮುಖಿಯಾಗಿದ್ದು ಇದೇ ಮೊದಲು, ಕೆಲವೇ ನಿಮಿಷಗಳಲ್ಲಿ ಅವರು ಅದನ್ನು ಯಶಸ್ವಿಯಾಗಿ ಸೆರೆಹಿಡಿದು ಚೀಲಕ್ಕೆ ತುಂಬಿಸಿದರು. ಜನಪ್ರಿಯ ಸ್ನಾನದ ಸ್ಥಳದ ಬಳಿ ಹಾವನ್ನು ಗುರುತಿಸಿದ ಸ್ಥಳೀಯರಿಂದ ಬಂದ ಸಂಕಷ್ಟದ ಕರೆಗೆ ಸ್ಪಂದಿಸಿದ 5 ಸದಸ್ಯರ ಕ್ಷಿಪ್ರ ಪ್ರತಿಕ್ರಿಯೆ ತಂಡದ ಭಾಗವಾಗಿ ಅಧಿಕಾರಿ ಇದ್ದರು.

Scroll to load tweet…