ಕೇರಳ ವಿಧಾನಸಭೆಯ ಪ್ರಮಾಣ ವಚನ ಸಮಾರಂಭದಲ್ಲಿ, ಕಾಸರಗೋಡಿನ ಮಂಜೇಶ್ವರ ಕ್ಷೇತ್ರದ ಶಾಸಕ ಎ.ಕೆ.ಎಂ ಅಶ್ರಫ್ ಅವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದರು. ಇದೇ ವೇಳೆ, ದೇವಿಕುಲಂ ಶಾಸಕರು ತಮಿಳಿನಲ್ಲಿ ಶಪಥ ಸ್ವೀಕರಿಸಿದ್ದು, ಈ ಘಟನೆಯು ರಾಜ್ಯದ ಭಾಷಾ ವೈವಿಧ್ಯತೆಯನ್ನು ಪ್ರತಿಬಿಂಬಿಸಿತು.
ತಿರುವನಂತಪುರಂ (ಮೇ.22): ಕೇರಳ ವಿಧಾನಸಭೆಯಲ್ಲಿ ಗುರುವಾರ ಹೊಸದಾಗಿ ಆಯ್ಕೆಯಾದ ಶಾಸಕರ ಪ್ರಮಾಣ ವಚನ ಸ್ವೀಕಾರ ಸಮಾರಂಭವು ನಡೆಯಿತು. ಈ ಕಾರ್ಯಕ್ರಮವು ರಾಜಕೀಯದಷ್ಟೇ ಅಲ್ಲ, ಭಾಷಾ ವೈವಿಧ್ಯತೆ ಮತ್ತು ಸಂಸ್ಕೃತಿಯ ಸಂಯೋಜನೆಯಿಂದಲೂ ಗಮನ ಸೆಳೆದಿತು. ಗಡಿ ಜಿಲ್ಲೆ ಕಾಸರಗೋಡಿನ ಮಂಜೇಶ್ವರ ಕ್ಷೇತ್ರದ ಶಾಸಕ ಎ.ಕೆ.ಎಂ ಅಶ್ರಫ್ ಅವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ವಿಶೇಷ ಗಮನ ಸೆಳೆದರು.

ಮೊದಲ ಬಾರಿ ಶಾಸಕರಾದಾಗಲೂ ಕನ್ನಡಲ್ಲೇ ಪ್ರಮಾಣ
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಪಕ್ಷದ ಶಾಸಕರಾದ ಅಶ್ರಫ್ ಅವರು ಈ ಬಾರಿ ಮಲಯಾಳಂ ಜೊತೆಗೆ ಕನ್ನಡದಲ್ಲಿಯೂ ಶಪಥ ಸ್ವೀಕರಿಸಿದರು. ಅವರು 2021ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾಗಲೂ ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ್ದರು. ಗಡಿ ಪ್ರದೇಶವಾದ ಕಾಸರಗೋಡಿನಲ್ಲಿ ಕನ್ನಡ ಮತ್ತು ಮಲಯಾಳಂ ಭಾಷೆಗಳ ಸಹಅಸ್ತಿತ್ವ ಇರುವ ಹಿನ್ನೆಲೆಯಲ್ಲಿ ಅವರ ಈ ನಡೆಗೆ ಸ್ಥಳೀಯವಾಗಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅದೇ ವೇಳೆ, ದೇವಿಕುಲಂ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಫ್. ರಾಜಾ ಅವರು ತಮಿಳಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ತಮ್ಮ ಭಾಷಾ ಗುರುತನ್ನು ಪ್ರತಿಬಿಂಬಿಸಿದರು. ಕಾರ್ಯಕ್ರಮದಲ್ಲಿ ಹಲವಾರು ಶಾಸಕರು ಸಾಂಪ್ರದಾಯಿಕವಾಗಿ ನಡೆದು ಸಭಾಂಗಣಕ್ಕೆ ಆಗಮಿಸಿದರೆ, ಕೆಲವು ಶಾಸಕರು ಸೈಕಲ್‌ಗಳಲ್ಲಿ ಆಗಮಿಸಿದ್ದು ವಿಶೇಷ ಆಕರ್ಷಣೆಯಾಯಿತು.
ಈ ಪ್ರಮಾಣ ವಚನ ಸಮಾರಂಭವು ಕೇರಳದ ಬಹುಭಾಷಾ ಮತ್ತು ಬಹುಸಂಸ್ಕೃತಿಯ ವೈಶಿಷ್ಟ್ಯವನ್ನು ಮತ್ತೊಮ್ಮೆ ತೋರಿಸಿತು. ವಿವಿಧ ಭಾಷೆಗಳಲ್ಲಿ ಶಪಥ ಸ್ವೀಕಾರವು ರಾಜ್ಯದ ವೈವಿಧ್ಯತೆಯನ್ನು ಗೌರವಿಸುವ ಸಂದೇಶವನ್ನು ನೀಡಿದೆ ಎಂದು ರಾಜಕೀಯ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಕಾರ್ಯಕ್ರಮದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ್ದು, ಜನರ ಗಮನ ಸೆಳೆಯುತ್ತಿದೆ.


