ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಹೇಳಿಕೆಯಿಂದ ಪ್ರೇರಿತರಾಗಿ ಜೆನ್‌ಝೀ ಯುವಕರು 'ಕಾಕ್ರೋಚ್‌ ಜನತಾ ಪಾರ್ಟಿ' ಎಂಬ ಆಂದೋಲನವನ್ನು ಆರಂಭಿಸಿದ್ದಾರೆ. ಈ ರಾಜಕೀಯ ವ್ಯವಸ್ಥೆಯ ವಿರುದ್ಧದ ಹೋರಾಟಕ್ಕೆ ಮಹುವಾ ಮೊಯಿತ್ರಾ, ಅಖಿಲೇಶ್ ಯಾದವ್ ಸೇರಿದಂತೆ ಹಲವು ವಿಪಕ್ಷ ನಾಯಕರು ಮತ್ತು ಸೆಲೆಬ್ರಿಟಿಗಳು ಬೆಂಬಲ.

- ಜೆನ್‌ಝೀ ಹೋರಾಟಕ್ಕೆ ಮಹುವಾ, ಅಖಿಲೇಶ್, ಆಜಾದ್‌, ಕನಿಮೋಳಿ, ಮುಫ್ತಿ ಸಹಮತ

- ಆಡಳಿತ, ವಿಪಕ್ಷ ವಿರುದ್ಧ ಆಕ್ರೋಶ ಎದ್ದಿರುವ ಪ್ರತಿಬಿಂಬ ಇದು: ಪ್ರಿಯಾಂಕ ಚತುರ್ವೇದಿ

Add Asianetnews Kannada as a Preferred SourcegooglePreferred

ನವದೆಹಲಿ (ಮೇ.22): ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶ ನ್ಯಾ। ಸೂರ್ಯಕಾಂತ್‌ ಅವರು ಕೆಲವು ನಕಲಿ ಪದವಿ ಪಡೆದ ಯುವಕರನ್ನು ಜಿರಳೆಗಳು ಎಂದು ಕರೆದಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಹಾಗೂ ದೇಶದ ರಾಜಕೀಯ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಜೆನ್‌ಝೀಗಳಿಂದ (ಯುವಕರಿಂದ) ಹುಟ್ಟಿಕೊಂಡಿರುವ ‘ಕಾಕ್ರೋಚ್‌ ಜನತಾ ಪಾರ್ಟಿ’ಗೆ (ಸಿಜೆಪಿ) ಕೆಲವು ವಿಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ. ಆದರೆ ಬಿಜೆಪಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಟಿಎಂಸಿ ನಾಯಕರಾದ ಮಹುವಾ ಮೊಯಿತ್ರಾ, ಕೀರ್ತಿ ಆಜಾದ್‌, ಎಸ್‌ಪಿ ನಾಯಕ ಅಖಿಲೇಶ್‌ ಯಾದವ್‌, ವಕೀಲ ಪ್ರಶಾಂತ್ ಭೂಷಣ್, ಡಿಎಂಕೆ ನಾಯಕಿ ಕನಿಮೋಳಿ, ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಬೆಂಬಲ ವ್ಯಕ್ತಪಡಿಸಿದವರು. ಸಾಮಾಜಿಕ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಸೇರಿದಂತೆ ಹಲವರು ಬೆಂಬಲ ಸೂಚಿಸಿದ್ದಾರೆ.

‘ಒಂದು ಸೋಷಿಯಲ್ ಮೀಡಿಯಾಗೆ ಇಷ್ಟು ಜನರು ಬೆಂಬಲ ಸೂಚಿಸಿರುವುದು ಕೇವಲ ‘ಕೀಟ ಸಂದೇಶ’ ಅಲ್ಲ. ಬೇರೇನೋ ಹೇಳಲು ದೇಶ ಯತ್ನಿಸುತ್ತಿದೆ. ಅದನ್ನು ನಾವು ಕೇಳಬೇಕು’ ಎಂದು ಡಿಎಂಕೆ ನಾಯಕಿ ಕನಿಮೋಳಿ ಹೇಳಿದ್ದಾರೆ.

ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಮಾತನಾಡಿ, ‘ಭಾರತಕ್ಕೆ ಕ್ರಾಂತಿಯ ಅಗತ್ಯವಿದೆ ಮತ್ತು ಜೆನ್‌ಝೀಗಳು ಬದಲಾವಣೆಗೆ ನಾಯಕತ್ವ ವಹಿಸಲು ಪ್ರಾರಂಭಿಸಿದ್ದಾರೆ’ ಎಂದಿದ್ದಾರೆ.

ಎಸ್‌ಪಿ ನಾಯಕ ಅಖಿಲೇಶ್‌ ಯಾದವ್‌ ಟ್ವೀಟ್‌ ಮಾಡಿ, ‘ಬಿಜೆಪಿ ವರ್ಸಸ್‌ ಸಿಜೆಪಿ’ ಎಂದಿದ್ದಾರೆ.

ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ಮಾತನಾಡಿ, ‘ಯುವಕರ ಆಕ್ರೋಶ ಬಿಜೆಪಿ ಮೇಲಿದೆ ಎಂಬುದು ಸ್ಪಷ್ಟ. ಆದರೆ ಸಿಜೆಪಿ ಕಲ್ಪನೆಯು ಬಿರುಗಾಳಿಯಂತೆ ಎದ್ದಿರುವ ಹಿಂದೆ ವಿಪಕ್ಷಗಳ ಬಗ್ಗೆ ಜನರಿಗೆ ಇರುವ ಅಸಮಾಧಾನವೂ ಕಾರಣ. ವಿಪಕ್ಷಗಳ ಬಗ್ಗೆ ಹೆಚ್ಚಿನ ಯುವಕರು ಭರವಸೆ ಕಳೆದುಕೊಳ್ಳುತ್ತಿರುವ ಕಾರಣ ಪ್ರತ್ಯೇಕ ಆಂದೋಲನ ಆರಂಭಿಸಿದಂತಿದೆ’ ಎಂದಿದ್ದಾರೆ.

--

ಸೆಲೆಬ್ರಿಟಿಗಳಿಂದ ಫಾಲೋ

ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್, ನಟರಾದ ಕೊಂಕಣ ಸೇನ್ ಶರ್ಮಾ ಮತ್ತು ಇಶಾ ಗುಪ್ತಾ ಸೇರಿದಂತೆ ಸೆಲೆಬ್ರಿಟಿಗಳು ಸಹ ಸಿಜೆಪಿಯ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಅನ್ನು ಅನುಸರಿಸಲು ಪ್ರಾರಂಭಿಸಿದ್ದಾರೆ.

ಕಾಕ್ರೋಚ್‌ ಜನತಾ ಪಾರ್ಟಿ ಟ್ರೇಡ್‌ಮಾರ್ಕ್‌ಗೆ 3 ಅರ್ಜಿ

ನವದೆಹಲಿ:ಕಾಕ್ರೋಚ್‌ ಜನತಾ ಪಾರ್ಟಿ ಟ್ರೇಡ್‌ಮಾರ್ಕ್‌ಗೆ 3 ಅರ್ಜಿ ಸಲ್ಲಿಕೆ ಆಗಿವೆ. ಟ್ರೇಡ್ ಮಾರ್ಕ್ಸ್ ರಿಜಿಸ್ಟ್ರಿಗೆ ‘COCKROACH JANTA PARTY’ ಹಾಗೂ ‘Cockroach Janta Party’ ಎಂಬ ಟ್ರೇಡ್‌ಮಾರ್ಕ್‌ಗಾಗಿ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಲಾಗಿದೆ. ಇನ್ನು COCKROACH JANTA PARTY ಎಂಬ ಬೇರೆ ಕಂಪನಿ ಕೂಡ ಅರ್ಜಿ ಹಾಕಿದೆ.