ಕೇರಳದಲ್ಲಿ ಜುಂಬಾ ಡಾನ್ಸ್ ಈಗ ವಿರೋಧದ ಅಲೆ ಎಬ್ಬಿಸಿದೆ. ಶಾಲೆಯಲ್ಲಿ ಇದನ್ನು ಕಡ್ಡಾಯ ಮಾಡ್ತಿದ್ದಂತೆ ಅನೇಕ ಸಂಘಟನೆಗಳು ವಿರೋಧಿ ಅಭಿಯಾನ ಶುರು ಮಾಡಿವೆ. 

ಕೇರಳ (Kerala)ದಲ್ಲಿ ಮಕ್ಕಳಿಗೆ ಹೇಳಿ ಕೊಡಲಾಗ್ತಿರುವ ಜುಂಬಾ ಡ್ಯಾನ್ಸ್ (Zumba Dance) ಸದ್ಯ ವಿರೋಧಕ್ಕೆ ಕಾರಣವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಜುಂಬಾ ನೃತ್ಯವನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಮಕ್ಕಳನ್ನು ನಶೆಯಿಂದ ಹೊರಗಿಡಲು ಹಾಗೂ ಅವರ ಆರೋಗ್ಯದ ದೃಷ್ಟಿಯಿಂದ ಅವರಿಗೆ ಜುಂಬಾ ಕಲಿಸಲಾಗ್ತಿದೆ. ಆದ್ರೆ ಮೂಲಭೂತ ಇಸ್ಲಾಂಮಿಕ್ ಸಂಘಟನೆಗಳ ಕಣ್ಣು ಕೆಂಪಾಗಿದೆ. ಸರ್ಕಾರದ ಈ ಕ್ರಮವನ್ನು ಸಂಘಟನೆಗಳು ಖಂಡಿಸಿವೆ. ಕೇರಳ ಮಾತ್ರವಲ್ಲ, ಉತ್ತರ ಪ್ರದೇಶದ ಮೌಲ್ವಿಗಳು ಸರ್ಕಾರದ ಈ ಕ್ರಮವನ್ನು ವಿರೋಧಿಸಿದ್ದಾರೆ. ಸರ್ಕಾರ ಶಾಲೆಯಲ್ಲಿ ಫಿಟ್ನೆಸ್ ಬದಲು ಬೇರೇನೋ ಕಲಿಸುತ್ತಿದೆ ಎಂದು ಅವರು ಭಾವಿಸಿದ್ದಾರೆ. ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳು ಜುಂಬಾ ಹೆಸರಿನಲ್ಲಿ ಡ್ಯಾನ್ಸ್ ಮಾಡುವುದು ಅವರಿಗೆ ಇಷ್ಟವಿಲ್ಲ. ತುಂಡುಡುಗೆಯಲ್ಲಿ ಜುಂಬಾ ಡ್ಯಾನ್ಸ್ ಮಾಡಲಾಗುತ್ತದೆ ಎಂದವರು ಭಾವಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೆ ಸರ್ಕಾರ, ಶಾಲೆಯಲ್ಲಿ ಜುಂಬಾ ಡ್ಯಾನ್ಸ್ ಶುರು ಮಾಡಿದೆ. ನಶೆ ವಿರೋಧಿ ಜಾಗೃತಿ ಅಭಿಯಾನದ ಒಂದು ಭಾಗವಾಗಿ ಶಾಲೆಯಲ್ಲಿ ಜುಂಬಾವನ್ನು ಹೇಳಿಕೊಡಲಾಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗಿದೆ. ವಿಸ್ಡಮ್ ಇಸ್ಲಾಮಿಕ್ ಆರ್ಗನೈಸೇಶನ್ನ ಪ್ರಧಾನ ಕಾರ್ಯದರ್ಶಿ ಮತ್ತು ಶಿಕ್ಷಕ ಟಿ.ಕೆ. ಅಶ್ರಫ್, ತುಂಡುಡುಗೆಯಲ್ಲಿ ಇದನ್ನು ಹೇಳಿಕೊಡಲಾಗುತ್ತದೆ. ನಾನು ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನನ್ನ ಮಗ ಈ ಸೆಷನ್ ನಲ್ಲಿ ಪಾಲ್ಗೊಳ್ಳುವುದಿಲ್ಲ ಅಂತ ಫೇಸ್ಬುಕ್ನಲ್ಲಿ ಬರೆದಿದ್ದಾರೆ. ಸಮಸ್ತಾ (ಪ್ರಮುಖ ಮುಸ್ಲಿಂ ಸಂಘಟನೆ) ಮುಖಂಡರಾದ ನಾಸರ್ ಫೈಝಿ ಕೂಡತಾಯ್ ಕೂಡ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾರೆ. ಸರ್ಕಾರಿ, ಶಾಲೆಯಲ್ಲಿ ಜುಂಬಾ ಡಾನ್ಸ್ ಪರಿಚಯಿಸಿದೆ. ಇದು ಚಿಕ್ಕ ಬಟ್ಟೆ ಧರಿಸಿ ಮಾಡುವಂತಹ ನೃತ್ಯ. ದೊಡ್ಡ ಮಕ್ಕಳಿಗೂ ಇದನ್ನು ಕಡ್ಡಾಯ ಮಾಡಿದ್ರೆ ಇದು ಆಕ್ಷೇಪಾರ್ಹ. ಈಗಿರುವ ದೈಹಿಕ ಶಿಕ್ಷಣವನ್ನು ಸುಧಾರಿಸುವ ಬದಲು, ಅಶ್ಲೀಲತೆಯನ್ನು ಹೇರುವುದು ಸರಿಯಲ್ಲ ಎಂದು ಬರೆದಿದ್ದಾರೆ.

ರಾಜ್ಯದ ಶಿಕ್ಷಣ ಮಂತ್ರಿ ನೀಡಿದ ಉತ್ತರ ಏನು? : ರಾಜ್ಯ ಶಿಕ್ಷಣ ಸಚಿವ ವಿ. ಶಿವನ್ಕುಟ್ಟಿ ಅವರು ಫೇಸ್ಬುಕ್ ಪೋಸ್ಟ್ನಲ್ಲಿ ಹಿಜಾಬ್ ಧರಿಸಿ ವಿದ್ಯಾರ್ಥಿಗಳು ಜುಂಬಾ ಮಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಮಕ್ಕಳು ಆಟವಾಡಲು, ನಗಲು, ಆನಂದಿಸಲು ಮತ್ತು ಆರೋಗ್ಯವಾಗಿ ಬೆಳೆಯಲು ಬಿಡಿ ಎಂದಿದ್ದಾರೆ. ಇಂತಹ ಆಕ್ಷೇಪಣೆಗಳು ಮಾದಕ ದ್ರವ್ಯಗಳಿಂದ ಹರಡುವ ವಿಷಕ್ಕಿಂತ ಹೆಚ್ಚು ಅಪಾಯಕಾರಿಯಾದ ವಿಷವನ್ನು ಸಮಾಜದಲ್ಲಿ ಹರಡುತ್ತವೆ. ಮಕ್ಕಳಿಗೆ ಕಡಿಮೆ ಬಟ್ಟೆ ಧರಿಸುವಂತೆ ಎಲ್ಲಿಯೂ ಹೇಳಲಾಗಿಲ್ಲ. ಅವರು ಯೂನಿಫಾರ್ಮ್ನಲ್ಲಿಯೇ ಜುಂಬಾ ಮಾಡ್ತಿದ್ದಾರೆ. ಕೇರಳದಂತಹ ಸಮಾಜದಲ್ಲಿ, ಜನರು ಸಾಮೂಹಿಕ ಸಾಮರಸ್ಯದಿಂದ ಬದುಕುತ್ತಾರೆ, ಅಂತಹ ಆಕ್ಷೇಪಣೆಗಳು ಬಹುಸಂಖ್ಯಾತ ಕೋಮುವಾದವನ್ನು ಪ್ರೋತ್ಸಾಹಿಸುತ್ತವೆ ಎಂದು ಪೋಸ್ಟ್ ಹಾಕಿದ್ದಾರೆ. ಬಿಜೆಪಿ ನಾಯಕ ವಿ. ಮುರಳೀಧರನ್, 'ಧಾರ್ಮಿಕ ಸಂಘಟನೆ ಹೊರಡಿಸಿದ ಫತ್ವಾ ಶಿಕ್ಷಣ ಇಲಾಖೆ ಜುಂಬಾ ಪರ ಅಥವಾ ವಿರುದ್ಧವಾಗಿದೆಯೇ ಎಂದು ನಿರ್ಧರಿಸುವ ಮಾನದಂಡವಾಗಿರಬಾರದು. ಸರ್ಕಾರವು ಸಾರ್ವಜನಿಕರ ಅಭಿಪ್ರಾಯಗಳು ಮತ್ತು ವಿದ್ಯಾರ್ಥಿಗಳ ಕಲ್ಯಾಣಕ್ಕೆ ಆದ್ಯತೆ ನೀಡಬೇಕು ಎಂದಿದ್ದಾರೆ. ಸಿಪಿಐ(ಎಂ) ನಾಯಕಿ ಎಂ.ಎ. ಬೇಬಿ ಸೇರಿದಂತೆ ಅನೇಕ ನಾಯಕರು ಸರ್ಕಾರದ ಕ್ರಮವನ್ನು ಶ್ಲಾಘಿಸಿದ್ದಾರೆ.

ಜುಂಬಾ ಬಂದಿದ್ದು ಎಲ್ಲಿಂದ? : 180ಕ್ಕೂ ಹೆಚ್ಚು ದೇಶಗಳಲ್ಲಿ ಜುಂಬಾ ಡಾನ್ಸ್ ಜನಪ್ರಿಯವಾಗಿದೆ. ಡಾನ್ಸ್, ಎರೋಬಿಕ್ಸ್ ಮಿಶ್ರಣ ಇದಾಗಿದೆ. ಇದು ವ್ಯಕ್ತಿಯನ್ನು ಸಂತೋಷಪಡಿಸುವ ನೃತ್ಯ ಪ್ರಕಾರವಾಗಿದೆ. ಜುಂಬಾ ನೃತ್ಯ 90ರ ದಶಕದಲ್ಲಿ ಆರಂಭವಾಗಿತ್ತು. ಕೊಲಂಬಿಯಾದ ಡಾನ್ಸ್ ಮಾಸ್ಟರ್ ಆಲ್ಬರ್ಟೊ ಒಂದು ದಿನ ತನ್ನ ಏರೋಬಿಕ್ಸ್ ಕ್ಲಾಸ್ ಗೆ ಮ್ಯೂಜಿಕ್ ಟೇಪ್ ತರಲು ಮರೆತಿದ್ದರಂತೆ. ಕಾರಿನಲ್ಲಿ ಬಿದ್ದಿದ್ದ ಲ್ಯಾಟಿನ್ ಸಂಗೀತ ಟೇಪ್ ಬಳಸಿ ಡ್ಯಾನ್ಸ್ ಹೇಳಿಕೊಟ್ಟಿದ್ದರಂತೆ. ಅಲ್ಲಿಂದಲೇ ಈ ಜುಂಬಾ ಹುಟ್ಟಿಕೊಂಡಿತು ಎನ್ನಲಾಗುತ್ತದೆ.