ಅದೃಷ್ಟವಿದ್ದರೆ ಏನೇನು ಸಾಧ್ಯ ಅಲ್ವಾ..? ದಿನಬೆಳಗಾಗುವುದರಲ್ಲಿ ಎಲ್ಲವೂ ಬದಲಾಗಬಲ್ಲದು. ಅದೃಷ್ಟ ಮತ್ತು ದುರಾದೃಷ್ಟ ಕಣ್ಮುಚ್ಚಿ ತೆರೆಯುವುದರಲ್ಲಿ ಬದುಕನ್ನೇ ಬದಲಾಯಿಸಿಬಿಡಬಲ್ಲವು. ಅದೃಷ್ಟದ ಚೀಟಿ ಮಾರಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಲಾಟರಿ ವ್ಯಾಪಾರಿಯ ಅದೃಷ್ಟವಿದ್ದದ್ದು ಮಾತ್ರ ಮಾರಾಟವಾಗದೆ ಉಳಿದ ಟಿಕೆಟ್‌ನಲ್ಲಿ.

ಕೇರಳದ ಕೊಲ್ಲಂನ 46 ವರ್ಷದ ಲಾಟರಿ ಮಾರಾಟಗಾರ ರಾತ್ರಿ ಬೆಳಗಾಗುವುದರಲ್ಲಿ ಕೋಟ್ಯಾಧಿಪತಿಯಾಗಿದ್ದಾರೆ. ಮಾರಾಟವಾಗದೆ ಉಳಿದ ಒಂದು ಟಿಕೆಟ್ ಇವರಿಗೆ ತಂದು ಕೊಟ್ಟಿದ್ದು 12 ಕೋಟಿ. ಕೇರಳ ಸರ್ಕಾರದ ಕ್ರಿಸ್ಮಸ್-ಹೊಸವರ್ಷದ ಬಂಪರ್ ಟಿಕೆಟ್‌ನ ಅದೃಷ್ಟ ಮೊದಲ ಬಹುಮಾನ ಅಡಗಿದ್ದು ಮಾರಾಟವಾಗದೆ ಉಳಿದ ಟಿಕೆಟ್‌ನಲ್ಲಿ.

ರಾತ್ರೋ ರಾತ್ರಿ ಲಕ್ಷಾಧಿಪತಿಗಳಾದ ಭಿಕ್ಷುಕರು..!

ತಮಿಳುನಾಡು ಸಮೀಪದ ತಂಕಾಶಿಯಲ್ಲಿ ವಾಸಿಸುವ ಶರಫುದ್ದೀನ್ ಅವರಿಗೆ ಈ ಬಾರಿಯ ಟಿಕೆಟ್ ಬಹುಮಾನ ಸಿಕ್ಕಿದ್ದು ಮಾರಾಟವಾದರೆ ಮನೆಯಲ್ಲಿ ಉಳಿದ ಟಿಕೆಟ್‌ಗೆ ಎಂದು ಗೊತ್ತಾದಾಗ ಹೇಗಾಗಿರಬಹುದು ನೀವೇ ಯೋಚಿಸಿ.. ಕೊಲ್ಲಂ ಜಿಲ್ಲೆಯ ಆರ್ಯಂಕಾವುನಲ್ಲಿ ಸರ್ಕಾರ ಕೊಟ್ಟ ಚಿಕ್ಕ ಭೂಮಿಯಲ್ಲಿ ವಾಸಿಸುವ ಶರಫುದ್ದೀನ್ ಗಲ್ಫ್‌ನಲ್ಲಿದ್ದವರು. ಕೊರೋನಾ ಸಮಯದಲ್ಲಂತೂ 6 ಜನ ಸದಸ್ಯರಿರುವ ಕುಟುಂಬದೊಂದಿಗೆ ಜೀವನ ಸಾಗಿಸುವುದೇ ಇವರಿಗೆ ಸವಾಲಾಗಿತ್ತು.

ನನಗೊಂದು ಮನೆ ಕಟ್ಟಬೇಕು. ನನ್ನ ಸಾಲವನ್ನೆಲ್ಲ ಮರಳಿಸಬೇಕು. ಚಿಕ್ಕದೊಂದು ಉದ್ಯಮ ಆರಂಭಿಸಬೇಕು ಎನ್ನುತ್ತಾರೆ ಇವರು. 2013ರಲ್ಲಿ ರಿಯಾದ್‌ನಿಂದ ಸ್ವಂತ ಊರಿಗೆ ಮರಳಿದ ಶರಫುದ್ದೀನ್ ಆರ್ಯಂಕಾಪವು ಸುತ್ತಮುತ್ತ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದರು. ತಿರುವನಂತಪುರಂ ಲಾಟರಿ ನಿರ್ದೇಶನಾಲಯದಲ್ಲಿ ಬಂದು ತನ್ನ ಟಿಕೆಟ್ ನೀಡಿದ ಶರಫುದ್ದೀನ್ ಶೇ.30 ಟ್ಯಾಕ್ಸ್ ಬಿಟ್ಟು 7.50 ಕೋಟಿ ರುಪಾಯಿ ಪಡೆಯಲಿದ್ದಾರೆ.