ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪಾರಶ್ಯಾಲ ರೈಲು ನಿಲ್ದಾಣದ ಬಳಿ ಭೂಕುಸಿತ ಸಂಭವಿಸಿದೆ. ಇದರಿಂದ ಬಿಲಾಸ್‌ಪುರ-ತಿರುನಲ್ವೇಲಿ ಎಕ್ಸ್‌ಪ್ರೆಸ್ ರೈಲಿನ ಎಂಜಿನ್ ಹಳಿ ತಪ್ಪಿದ್ದು, 6 ಪ್ರಯಾಣಿಕ ರೈಲುಗಳನ್ನು ರದ್ದುಗೊಳಿಸಲಾಗಿದೆ. ಪರ್ಯಾಯ ಎಂಜಿನ್ ಬಳಸಿ ರೈಲು ಸಂಚಾರ ಸರಿಪಡಿಸುವ ಕಾರ್ಯ ನಡೆಯುತ್ತಿದೆ.

ತಿರುವನಂಪುರಂ: ಕೇರಳದಲ್ಲಿ ಕಳೆದ ಕೆಲ ದಿನಗಳಿಂದ ಮಳೆ ಸುರಿಯುತ್ತಿರುವ ಪರಿಣಾಮ ದಕ್ಷಿಣ ಕೇರಳ ಜಿಲ್ಲೆಯ ಪಾರಶ್ಯಾಲ ರೈಲು ನಿಲ್ದಾಣದ ಬಳಿ ಭೂಕುಸಿತ ಸಂಭವಿಸಿದೆ. ಇದರಿಂದ ಬಿಲಾಸ್‌ಪುರ-ತಿರುನಲ್ವೇಲಿ ಎಕ್ಸ್‌ಪ್ರೆಸ್ ರೈಲಿನ ಎಂಜಿನ್ ಹಳಿ ತಪ್ಪಿದ್ದು ರೈಲು ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಭೂಕುಸಿತದಿಂದಾಗಿ 22619 ರೈಲನ್ನು ಬೆಳಗಿನ ಜಾವ 2.19ರ ಸುಮಾರಿಗೆ ನಿಲ್ಲಿಸಲಾಯಿತು. ಆಗ ಎಂಜಿನ್‌ ಹಳಿ ತಪ್ಪಿರುವುದು ಪತ್ತೆಯಾಗಿದೆ. ಈ ವೇಳೆ ರೈಲನ್ನು ಮುಂದಕ್ಕೆ ಕೊಂಡೊಯ್ಯಲು ತಕ್ಷಣವೇ ಪರ್ಯಾಯ ಎಂಜಿನ್‌ ವ್ಯವಸ್ಥೆ ಮಾಡಲಾಯಿತು. ಜತೆಗೆ ಸಿಬ್ಬಂದಿ ರೈಲ್ವೆ ಹಳಿ ದುರಸ್ತಿ ಕಾರ್ಯದಲ್ಲಿ ತೊಡಗಿದರು. ಇನ್ನು ಈ ರೈಲು ಮಾರ್ಗ ಬಂದ್‌ ಆದ ಕಾರಣ ಕೆಲ ಹೊತ್ತು ಸಂಚಾರದಲ್ಲಿಯೂ ವ್ಯತ್ಯಯವಾಗಿತ್ತು. ನೆಯ್ಯಾತ್ತಿಂಕರ ಮತ್ತು ತಿರುನಲ್ವೇಲಿ ನಡುವಿನ ರೈಲು ಮಾರ್ಗದಲ್ಲಿ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಯಿತು. ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ 6 ಪ್ಯಾಸೆಂಜರ್‌ ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಯಿತು.

ಮೈಸೂರಿನಿಂದ ವೀರಾಂಗಣ ಲಕ್ಷ್ಮೀಬಾಯಿ ಜಾನ್ಸಿಗೆ ಒನ್-ವೇ ವಿಶೇಷ ರೈಲು

ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ತೆರವುಗೊಳಿಸಲು, ನೈರುತ್ಯ ರೈಲ್ವೆಯು ಅ. 23 ರಂದು ಮೈಸೂರಿನಿಂದ ವೀರಾಂಗಣ ಲಕ್ಷ್ಮೀಬಾಯಿ ಜಾನ್ಸಿಗೆ ಏಕಮೂಖ ಮಾರ್ಗದ (ಒನ್-ವೇ) ವಿಶೇಷ ಎಕ್ಸ್‌ ಪ್ರೆಸ್‌ ರೈಲನ್ನು ಓಡಿಸಲಿದೆ.

ರೈಲು ಸಂಖ್ಯೆ 06276 ಮೈಸೂರು–ವೀರಾಂಗಣ ಲಕ್ಷ್ಮೀಬಾಯಿ ಜಾನ್ಸಿ ಒನ್-ವೇ ವಿಶೇಷ ಎಕ್ಸ್ ಪ್ರೆಸ್ ರೈಲು ಅ. 23 ರಂದು 2 ಗಂಟೆಗೆ ಮೈಸೂರಿನಿಂದ ಹೊರಟು, 25 ರಂದು ಬೆಳಗ್ಗೆ 10 ಗಂಟೆಗೆ ವೀರಾಂಗಣ ಲಕ್ಷ್ಮೀಬಾಯಿ ಜಾನ್ಸಿ ತಲುಪಲಿದೆ. ಮಾರ್ಗಮಧ್ಯೆ ಈ ರೈಲು ಕೆಎಸ್ಆರ್ ಬೆಂಗಳೂರು, ಧರ್ಮಾವರಂ, ರಾಯಚೂರು, ಸಿಕಂದರಾಬಾದ್, ಕಾಜಿಪೇಟೆ, ಬಲ್ಹಾರ್ಷಾ, ನಾಗ್ಪುರ, ಇಟಾರ್ಸಿ ಮತ್ತು ಭೋಪಾಲ್ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.ಈ ರೈಲು 12 ಸ್ಲೀಪರ್ ಕ್ಲಾಸ್ ಬೋಗಿಗಳು, 6 ಸಾಮಾನ್ಯ ದರ್ಜೆಯ ಬೋಗಿಗಳು ಮತ್ತು ದಿವ್ಯಾಂಗ ಸ್ನೇಹಿ ಕಂಪಾರ್ಟ್ ಮೆಂಟ್ ಹೊಂದಿರುವ 2 ಲಗೇಜ್-ಕಮ್-ಬ್ರೇಕ್ ವ್ಯಾನ್ ಸೇರಿದಂತೆ 20 ಬೋಗಿಗಳನ್ನು ಒಳಗೊಂಡಿದೆ.