ತಿರುವನಂತಪುರಂ(ಜು.09): ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಕೇರಳ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿದ್ದು, ಬೇಕಾಬಿಟ್ಟಿ ತಿರುಗಾಡುವವರಿಗೆ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ಕಮಾಂಡೋಗಳನ್ನು ಬಳಸಿಕೊಳ್ಳುತ್ತಿದೆ.

ಹೌದು, ಇಲ್ಲಿನ ಕರಾವಳಿ ಭಾಗಗಳಲ್ಲಿ ಇರುವ ಹಳ್ಳಿಗಳಲ್ಲಿ ಇದರ ಅನುಭವವಾಗಿದ್ದು, ಪೂಂತೂರಾ ಹಳ್ಳಿಯ ವಿವಿಧ ವಾರ್ಡ್‌ಗಳಲ್ಲಿ ಆಂಬುಲೆನ್ಸ್, ಪೊಲೀಸ್ ಹಾಗೂ ಕಮಾಂಡೋಗಳ ವಾಹನ ಓಡಾಟ ಕಂಡು ಬಂದಿದ್ದು, ಧ್ವನಿವರ್ಧಕಗಳ ಮೂಲಕ ಜನರಿಗೆ ಜಾಗೃತಿ ಹಾಗೆಯೇ ಎಚ್ಚರಿಕೆ ನೀಡುವ ಕೆಲಸ ಮಾಡಿವೆ. ಒಂದು ವೇಳೆ ಸುಖಾಸುಮ್ಮನೆ ಓಡಾಡುವವರು ಕಂಡು ಬಂದರೆ ಅವರನ್ನು ಕಮಾಂಡೋಗಳ ನೆರವಿನಿಂದ ಆಂಬುಲೆನ್ಸ್‌ಗಳಲ್ಲಿ ತುಂಬಿಕೊಂಡು ಹೋಗಿ ಕ್ವಾರಂಟೈನ್ ಕೇಂದ್ರಗಳಲ್ಲಿ ಬಿಡಲಾಗುವುದು ಎಂದು ಎಚ್ಚರಿಸಿದ್ದಾರೆ.

ರಾಜಧಾನಿ ರಕ್ಷಣೆಗೆ ' ಅಷ್ಟ ದಿಕ್ಪಾಲಕರು'; ಕೊರೊನಾ ತಡೆಗೆ ಸಿಎಂ ಹೊಸ ಪ್ಲಾನ್

ಒಬ್ಬ ವ್ಯಕ್ತಿಯಿಂದ ಆರು ಜನರಿಗೆ ಕೊರೋನಾ ಸೋಂಕು ತಗುಲಿದರೆ ಅಂತವರನ್ನು ಸೂಪರ್ ಸ್ಪ್ರೆಡರ್ಸ್ ಎನ್ನಲಾಗುತ್ತದೆ. ಪೂಂತೂರಾ ಹಳ್ಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೂಪರ್ ಸ್ಪ್ರೆಡರ್ಸ್ ಇರುವುದು ಬೆಳಕಿಗೆ ಬಂದಿದೆ. ಮೀನು ಮಾರುಕಟ್ಟೆಯಿಂದ ಇಲ್ಲಿ ಕೊರೋನಾ ಸೋಂಕು ಹಬ್ಬಲಾರಂಭಿಸಿತು. ಕಳೆದ 5 ದಿನಗಳಲ್ಲಿ ಪೂಂತೂರಾ ಹಳ್ಳಿಯಲ್ಲಿ 600 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದ್ದು, 119 ಮಂದಿಯಲ್ಲಿ ಕೊರೋನಾ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ಮುಖ್ಯಮಂತ್ರಿ ಕಚೇರಿಗಳು ಖಚಿತಪಡಿಸಿವೆ.

ಈ ಹಳ್ಳಿಯಲ್ಲಿ ಬಹುತೇಕ ಕುಟುಂಬಗಳು ಮೀನುಗಾರಿಕೆಯನ್ನೇ ಅವಲಂಬಿಸಿವೆ. ಇದೀಗ ತಿರುವನಂತಪುರ ವ್ಯಾಪ್ತಿಯ ಕರಾವಳಿ ತೀರದಲ್ಲಿ ಮೀನುಗಾರಿಕೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರ ಜತೆಗೆ ಕರಾವಳಿ ಕಾವಲುಪಡೆಗೂ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಪೂಂತೂರಾ ಹಳ್ಳಿಯ ಮನೆಗಳಿಗೆ ಸ್ಯಾನಿಟೈಸಿಂಗ್ ಮಾಡಲಾಗಿದ್ದು, ಇಡೀ ಹಳ್ಳಿಯನ್ನೇ ಸೀಲ್‌ಡೌನ್ ಮಾಡಲಾಗಿದ್ದು, ಪ್ರತಿ ಮನೆಗೆ 5 ಕೆ.ಜಿ ಅಕ್ಕಿಯನ್ನು ನೀಡಲಾಗಿದೆ.