ಸ್ವಪ್ನಾ ಆರೋಪದ ಬೆನ್ನಲ್ಲೇ ಕೇರಳದಲ್ಲಿ ಹೈಡ್ರಾಮಾ!
* ಆರೋಪಿ ಬೆದರಿಸಲು ಅಧಿಕಾರ ದುರ್ಬಳಕೆ: ವಿಪಕ್ಷ
* ಸ್ವಪ್ನಾ ಆರೋಪದ ಬೆನ್ನಲ್ಲೇ ಕೇರಳದಲ್ಲಿ ಹೈಡ್ರಾಮಾ
* ಸಹೋದ್ಯೋಗಿ ಅಪಹರಿಸಿದ್ದಾಗಿ ಸ್ವಪ್ನಾ ಆರೋಪ
ಪಾಲಕ್ಕಾಡ್(ಜೂ.09): ಕೊಲ್ಲಿ ರಾಷ್ಟ್ರಗಳಿಂದ ಕೇರಳಕ್ಕೆ ಅಕ್ರಮವಾಗಿ ಚಿನ್ನ ಕಳ್ಳಸಾಗಣೆ ಮಾಡಿದ ಪ್ರಕರಣದಲ್ಲಿ ಸ್ವತಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗಿಯಾಗಿರುವುದಾಗಿ ಸ್ವಪ್ನಾ ಸುರೇಶ್ ಸ್ಫೋಟಕ ಆರೋಪ ಮಾಡಿದ ಬೆನ್ನಲ್ಲೇ ಕೇರಳದಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ಮುಖ್ಯಮಂತ್ರಿ ವಿರುದ್ಧ ಹೇಳಿಕೆ ನೀಡಿದ ಬೆನ್ನಲ್ಲೇ ತಮ್ಮ ಸಹೋದ್ಯೋಗಿಯನ್ನು ಅಪಹರಿಸಲಾಗಿದೆ ಎಂದು ಸ್ವಪ್ನಾ ಬುಧವಾರ ಆರೋಪಿಸಿದ್ದಾರೆ.
‘ಚಿನ್ನದ ಕಳ್ಳಸಾಗಣೆ ಸಹ-ಆರೋಪಿಯಾದ ಸರಿತ್ ಪಿ.ಎಸ್. ಅವರನ್ನು ಅಪರಿಚಿತ ವ್ಯಕ್ತಿಗಳು ಅವರ ಮನೆಯಿಂದ ಹಾಡುಹಗಲಲ್ಲೇ ಅಪಹರಿಸಿದ್ದಾರೆ. ಬುಧವಾರ ಮುಂಜಾನೆ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ ಕೆಲ ನಿಮಿಷಗಳ ನಂತರವೇ ಈ ಅಪಹರಣ ನಡೆಸಿದೆ’ ಎಂದು ಸ್ವಪ್ನಾ ಆರೋಪಿಸಿದ್ದಾರೆ. ಈ ಹಿಂದೆ, ಸ್ವಪ್ನಾ ಗಂಭೀರ ಆರೋಪ ಮಾಡುವ ಮುನ್ನ ತಮಗೆ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಹೇಳಿದ್ದರು.
ಅಪಹರಣವಲ್ಲ, ವಿಚಾರಣೆ:
ಸ್ವಪ್ನಾ ಆರೋಪಿಸಿದಂತೆ ಎಚ್‌ಆರ್‌ಡಿಎಸ್‌ನ ಸಿಬ್ಬಂದಿ ಸರಿತ್ ಅವರನ್ನು ಅಪಹರಿಸಿಲ್ಲ, ರಾಜ್ಯ ಗುಪ್ತಚರ ಅಧಿಕಾರಿಗಳು ಲೈಫ್ ಮಿಶನ್ ಯೋಜನೆಗೆ ಸಂಬಂಧಿತ ಇನ್ನೊಂದು ಪ್ರಕರಣದ ವಿಚಾರವಾಗಿ ವಿಚಾರಣೆಗೆ ಕರೆದೊಯ್ದಿದ್ದರು ಎಂಬುದು ತಿಳಿದುಬಂದಿದೆ.
ಈ ಕುರಿತು ವಿಚಾರಣೆ ಬಳಿಕ ಮಾತನಾಡಿದ ಸರಿತ್, ‘ವಿಜಿಲನ್ಸ್ ಅಧಿಕಾರಿಗಳು ಯಾವುದೇ ಪೂರ್ವ ನೊಟೀಸ್ ನೀಡದೇ ಬಲಪೂರ್ವಕವಾಗಿ ಮನೆಗೆ ಬಂದು ಕರೆದೊಯ್ದಿದ್ದಾರೆ. ಚಪ್ಪಲಿಯನ್ನು ಧರಿಸಲು ಅವಕಾಶ ಕೊಡದೇ ಎಳೆದೊಯ್ದಿದ್ದಾರೆ. ವಿಚಾರಣೆ ವೇಳೆ ಲೈಫ್ ಮಿಶನ್ ಯೋಜನೆಗೆ ಸಂಬಂಧಿತ ಪ್ರಕರಣದ ಬಗ್ಗೆ ಕೇಳದೇ, ಯಾರ ಸೂಚನೆಯ ಮೇರೆಗೆ ಸ್ವಪ್ನಾ ಸ್ಫೋಟಕ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಪದೇ ಪದೇ ಪ್ರಶ್ನಿಸಿದ್ದಾರೆ’ ಎಂದು ದೂರಿದ್ದಾರೆ.
ಆರೋಪ ರಾಜಕೀಯ ಪ್ರೇರಿತವಲ್ಲ:
ಸಿಎಂ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತವಾದದ್ದು ಎನ್ನಲಾದ ಬೆನ್ನಲ್ಲೇ, ಸ್ವಪ್ನಾ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಕುಟುಂಬದ ಸದಸ್ಯರು ಹಾಗೂ ಆಪ್ತರು ಶಾಮೀಲಾಗಿರುವ ಬಗ್ಗೆ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದು, ರಾಜಕೀಯ ಅಥವಾ ವೈಯಕ್ತಿಕ ಪ್ರೇರಿತ ಆರೋಪವಲ್ಲ. ಕೋರ್ಚ್ ಎದುರು ಸತ್ಯ ಸಂಗತಿ ತಿಳಿಸಿದ್ದೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಚಿನ್ನದ ಕಳ್ಳಸಾಗಣೆಯಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಪಾದನೆ ಎದುರಿಸುತ್ತಿರುವುದು ರಾಜಕೀಯ ಭ್ರಷ್ಟಾಚಾರ ಇನ್ನಷ್ಟು ಕೆಳಮಟ್ಟಕ್ಕಿಳಿದಿರುವುದನ್ನು ಸೂಚಿಸುತ್ತದೆ. ಕಾಂಗ್ರೆಸ್ ಹಾಗೂ ಸಿಪಿಎಂ ಜಂಟಿಯಾಗಿ ಕೇರಳದಲ್ಲಿ ಕಳ್ಳಸಾಗಣೆ, ಭ್ರಷ್ಟಾಚಾರ ನಡೆಸುತ್ತಿದ್ದು ಬಯಲಾಗಿದೆ. ಕೆಲವು ಚಿನ್ನದ ತುಂಡುಗಳಿಗಾಗಿ ದೇಶದ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿದ್ದು ಖಂಡನೀಯ.
- ರಾಜೀವ್ ಚಂದ್ರಶೇಖರ್, ಕೇಂದ್ರ ಸಚಿವ