Asianet Suvarna News Asianet Suvarna News

ಕೇರಳ ಚಿನ್ನ ಸ್ಮಗ್ಲಿಂಗ್‌ ಕೇಸ್‌ಗೆ ಸ್ಫೋಟಕ ಟ್ವಿಸ್ಟ್‌, ಸ್ವಪ್ನಾ ಸುರೇಶ್‌ ಶಾಕಿಂಗ್ ಆರೋಪ: ಸಿಎಂ, ಪತ್ನಿ, ಪುತ್ರಿಗೆ ಕುತ್ತು!

* ವಿಧಾನಸಭಾ ಚುನಾವಣೆಗೂ ಮುನ್ನ ಕೇರಳ ರಾಜಕೀಯದಲ್ಲಿ ಭಾರೀ ಸಂಚಲನ

* ಭಾರೀ ಸಂಚಲನ ಮೂಡಿಸಿದ್ದ ಕೊಲ್ಲಿ ರಾಷ್ಟ್ರಗಳಿಂದ ಅಕ್ರಮವಾಗಿ ಚಿನ್ನ ಕಳ್ಳಸಾಗಣೆ ಮಾಡಿದ ಪ್ರಕರಣ

* ಈ ಪ್ರಕರಣದಲ್ಲಿ ಬಿಗ್‌ ಟ್ವಿಸ್ಟ್‌, ಆರೋಪಿಯಿಂದ ಶಾಕಿಂಗ್ ಆರೋಪ

Kerala Gold Smuggling Case Accused Claims Pinarayi Vijayan Involvement pod
Author
Bangalore, First Published Jun 8, 2022, 4:37 AM IST

ಕೊಚ್ಚಿ(ಜೂ.08): ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಕೇರಳ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಕೊಲ್ಲಿ ರಾಷ್ಟ್ರಗಳಿಂದ ಅಕ್ರಮವಾಗಿ ಚಿನ್ನ ಕಳ್ಳಸಾಗಣೆ ಮಾಡಿದ ಪ್ರಕರಣ, ಇದೀಗ ಮತ್ತೆ ಸ್ಫೋಟಗೊಂಡಿದ್ದು, ನೇರವಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಕುಟುಂಬವನ್ನು ಆವರಿಸಿಕೊಂಡಿದೆ. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ವಿಜಯನ್‌, ಅವರ ಪತ್ನಿ, ಪುತ್ರಿ, ಓರ್ವ ಸಚಿವ ಹಾಗೂ ಹಲವು ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್‌ ಸ್ಫೋಟಕ ಆರೋಪ ಮಾಡಿದ್ದಾರೆ.

ಸ್ವಪ್ನಾ ಮಾಡಿರುವ ಆರೋಪ ಅತ್ಯಂತ ಗಂಭೀರ ಸ್ವರೂಪದ್ದು ಎಂದಿರುವ ವಿಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ ಸಿಎಂ ಹುದ್ದೆಯಲ್ಲಿ ಮುಂದುವರೆಯುವ ನೈತಿಕ ಹೊಣೆಯನ್ನು ವಿಜಯನ್‌ ಕಳೆದುಕೊಂಡಿದ್ದು, ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿವೆ. ಆದರೆ ತಮ್ಮ ಮೇಲಿನ ಆರೋಪವನ್ನು ಆಧಾರರಹಿತ ಮತ್ತು ರಾಜಕೀಯ ಪ್ರೇರಿತ ಎಂದು ವಿಜಯನ್‌ ಸ್ಪಷ್ಟಪಡಿಸಿದ್ದಾರೆ.

ಸ್ಫೋಟಕ ಆರೋಪ:

ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್‌, ತಮ್ಮ ಜೀವಕ್ಕೆ ಬೆದರಿಕೆ ಇರುವ ಕಾರಣ ತಾವು ಪ್ರಕರಣ ಕುರಿತ ಎಲ್ಲಾ ಮಾಹಿತಿ ಬಹಿರಂಗಪಡಿಸುವುದಾಗಿ ಹೇಳಿ ಸೋಮವಾರ ಮತ್ತು ಮಂಗಳವಾರ ಸ್ಥಳೀಯ ನ್ಯಾಯಾಧೀಶರ ಮುಂದೆ ಹಾಜರಾಗಿ ವಿಸ್ತೃತ ಹೇಳಿಕೆ ಸಲ್ಲಿಸಿದ್ದಾರೆ. ಅದರಲ್ಲಿ ‘ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ವಿಜಯನ್‌, ಅವರ ಪತ್ನಿ ಕಮಲಾ ವಿಜಯನ್‌, ಪುತ್ರಿ ವೀಣಾ ವಿಜಯನ್‌, ರಾಜ್ಯ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ನಳಿನಿ ನಿಟ್ಟೊ, ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ಸಿ.ಎಂ. ರವೀಂದ್ರನ್‌ ಹಾಗೂ ಮಾಜಿ ಶಿಕ್ಷಣ ಸಚಿವ ಹಾಗೂ ಹಾಲಿ ಶಾಸಕರಾದ ಕೆ.ಟಿ. ಜಲೀಲ್‌ ಶಾಮೀಲಾಗಿದ್ದಾರೆ’ ಎಂದು ಆರೋಪಿಸಿದ್ದಾರೆ.

‘2016ರಲ್ಲಿ ವಿಜಯನ್‌ ಮೊದಲ ಬಾರಿಗೆ ಯುಎಇ ತೆರಳಿದ್ದರು. ಆಗ ಅವರ ಪ್ರಧಾನ ಕಾರ್ಯದರ್ಶಿಯಾಗಿದ್ದ ಶಿವಶಂಕರ್‌ ಸೂಚನೆಯಂತೆ ಸಿಎಂ ಯುಎಇ ಭೇಟಿಗೆ ಎಲ್ಲಾ ವ್ಯವಸ್ಥೆ ಮಾಡಿದ್ದೆ. ಸಿಎಂ ಭೇಟಿ ಮಾರನೇ ದಿನ ಶಿವಶಂಕರ್‌ ನನಗೆ ಕರೆ ಮಾಡಿ, ಮುಖ್ಯಮಂತ್ರಿಗಳು ಒಂದು ಬ್ಯಾಗ್‌ ಮರೆತುಬಂದಿದ್ದಾರೆ. ಕೂಡಲೇ ಅದನ್ನು ದುಬೈಗೆ ತಲುಪಿಸುವಂತೆ ಸೂಚಿಸಿದರು. ಆ ಬ್ಯಾಗ್‌ ಅನ್ನು ರಾಯಭಾರ ಕಚೇರಿಯಲ್ಲಿ ಸ್ಕಾ್ಯನ್‌ ಮಾಡಿದಾಗ ಅದರಲ್ಲಿ ಹಣ ತುಂಬಿದ್ದು ತಿಳಿದು ಬಂದಿತು’ ಎಂದು ಸ್ವಪ್ನ ಆರೋಪಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ‘ಹಲವಾರು ಬಾರಿ ಭಾರತದಲ್ಲಿನ ಯುಎಇ ಕಾನ್ಸುಲೇಟ್‌ ಜನರಲ್‌ ಅವರ ಮನೆಯಿಂದ ವಿಜಯನ್‌ ಮನೆಗೆ ಬಿರಿಯಾನಿ ಪಾತ್ರೆ ಸಾಗಿಸಲಾಗಿದೆ. ಈ ಪಾತ್ರೆಗಳಲ್ಲಿ ಬಿರಿಯಾನಿ ಜೊತೆಗೆ ಲೋಹದ ವಸ್ತುಗಳು ತುಂಬಿದ್ದವು’ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಸಿಎಂ ಮನೆಗೆ ರಾಯಭಾರ ಕಚೇರಿಯಿಂದ ಚಿನ್ನ ಕಳ್ಳಸಾಗಣೆಯಾಗಿತ್ತು ಎಂದು ಆರೋಪಿಸಿದ್ದಾರೆ. ಜೊತೆಗೆ ಮುಂಬರುವ ದಿನಗಳಲ್ಲಿ ಇನ್ನಷ್ಟುಮಾಹಿತಿ ಬಹಿರಂಗ ಪಡಿಸುತ್ತೇನೆ ಎಂದು ಸ್ವಪ್ನಾ ಹೇಳಿದ್ದಾರೆ.

Follow Us:
Download App:
  • android
  • ios