ಮಾಜಿ ಗೃಹ ಸಚಿವರ ಪುತ್ರ ಅರೆಸ್ಟ್
ಮಾಜಿ ಗೃಹ ಸಚಿವರ ಪುತ್ರನನ್ನು ಅರೆಸ್ಟ್ ಮಾಡಲಾಗಿದೆ. ನಾಲ್ಕು ದಿನಗಳ ಕಾಲ ಇಡಿ ವಶಕ್ಕೆ ಒಪ್ಪಿಸಲಾಗಿದೆ
ಬೆಂಗಳೂರು (ಅ.30): ಡ್ರಗ್ಸ್ ದಂಧೆ ಪ್ರಕರಣದ ಸಂಬಂಧ ಕೇರಳದ ಮಾಜಿ ಗೃಹ ಸಚಿವ ಬಾಲಕೃಷ್ಣನ್ ಕೊಡಿಯೇರಿ ಪುತ್ರ ಬಿನೇಶ್ ಕೊಡಿಯೇರಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.)ದ ಅಧಿಕಾರಿಗಳು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ನಾಲ್ಕು ದಿನಗಳ ಕಾಲ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣದ ಸಂಬಂಧ ಪ್ರಮುಖ ಆರೋಪಿ ಮೊಹಮ್ಮದ್ ಅನೂಪ್ ಜತೆ ನಂಟು ಹೊಂದಿದ ಆರೋಪದಡಿ ವಿಚಾರಣೆಗೆ ಹಾಜರಾಗುವಂತೆ ಇ.ಡಿ. ನೊಟೀಸ್ ಜಾರಿ ಮಾಡಿತ್ತು. ಅದರಂತೆ ವಿಚಾರಣೆಗೆ ಗುರುವಾರ ಹಾಜರಾಗಿದ್ದರು. ಈ ವೇಳೆ ಬಿನೇಶ್ ಉತ್ತರ ಸಮರ್ಪಕವಾಗಿಲ್ಲದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ನಂತರ ಇ.ಡಿ. ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ ನಾಲ್ಕು ದಿನಗಳ ಕಾಲ ಇ.ಡಿ. ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಬೇರೆಯವರಿಂದ ಪರೀಕ್ಷೆ ಬರೆಸಿ ರಾಜ್ಯಕ್ಕೆ ಫಸ್ಟ್ ಬಂದಿದ್ದ ಟಾಪರ್ ಅರೆಸ್ಟ್ ...
ನಗರದ ಕಮ್ಮನಹಳ್ಳಿಯಲ್ಲಿ ರೆಸ್ಟೋರೆಂಟ್ ತೆರೆಯಲು ಅನೂಪ್‌ಗೆ ಬಿನೇಶ್ 50 ಲಕ್ಷ ರು. ಹಣಕಾಸಿನ ನೆರವು ನೀಡಿದ್ದ. ಅಲ್ಲದೇ, ಡ್ರಗ್ಸ್ ವ್ಯವಹವಾರದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ಅನೂಪ್, ಅನಿಕಾ ಸೇರಿದಂತೆ ಹಲವು ಆರೋಪಿಗಳು ಪರಪ್ಪನ ಆಗ್ರಹಾರ ಜೈಲಿನಲ್ಲಿದ್ದಾರೆ.
ಕಳೆದ 20 ದಿನಗಳ ಹಿಂದೆ ಇ.ಡಿ. ಅಧಿಕಾರಿಗಳು ಬಿನೇಶ್ ಕರೆಸಿ ವಿಚಾರಣೆಗೊಳಪಡಿಸಿದ್ದರು. ಡ್ರಗ್ಸ್ ಜಾಲದಲ್ಲಿ ಬಂಧಿತನಾಗಿರುವ ಡ್ರಗ್ ಪೆಡ್ಲರ್ ಅನೂಪ್ ನೀಡಿರುವ ಮಾಹಿತಿ ಮೇರೆಗೆ ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ನೋಟಿಸ್ ಜಾರಿಗೊಳಿಸಿ ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಅಕ್ರಮ ಹಣ ವರ್ಗಾವಣೆ ಸಂಬಂಧ ಮಾಹಿತಿ ಕಲೆ ಹಾಕಿರುವ ಇ.ಡಿ. ಅಧಿಕಾರಿಗಳು ಬಿನೀಶ್‌ನ ಬ್ಯಾಂಕ್ ಖಾತೆ ವಿವರ, ಹಣಕಾಸು ವಹಿವಾಟು, ವಿದೇಶಕ್ಕೆ ಪ್ರಯಾಣಿಸಿರುವ ದಾಖಲೆಗಳ ಕುರಿತು ಮಾಹಿತಿ ಪಡೆದುಕೊಂಡಿದ್ದರು.