ಕೇರಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಆರಂಭಿಕ ಹಂತದಲ್ಲಿ ಯುಡಿಎಫ್ ಮುನ್ನಡೆ ಕಾಯ್ದುಕೊಂಡಿದೆ. ಪಾಲಕ್ಕಾಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಸುರೇಂದ್ರನ್ ಮುನ್ನಡೆ ಸಾಧಿಸಿದ್ದು, ಎಲ್‌ಡಿಎಫ್ ಮತ್ತು ಯುಡಿಎಫ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ತಿರುವನಂತಪುರಂ (ಮೇ 4): ದೇವರ ನಾಡು ಕೇರಳದ ಹಣೆಬರಹ ಇಂದು ನಿರ್ಧಾರವಾಗಲಿದೆ. ಬೆಳಿಗ್ಗೆ 8 ಗಂಟೆಗೆ 43 ಮತ ಎಣಿಕೆ ಕೇಂದ್ರಗಳಲ್ಲಿ ಅಂಚೆ ಮತಗಳ ಎಣಿಕೆಯೊಂದಿಗೆ ಪ್ರಕ್ರಿಯೆ ಆರಂಭವಾಗಿದ್ದು, ಆರಂಭಿಕ ಹಂತದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಸಣ್ಣ ಮುನ್ನಡೆ ಕಾಯ್ದುಕೊಂಡಿದೆ. ರಾಜ್ಯದ ಅತ್ಯಂತ ಹೈ-ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾದ ಪಾಲಕ್ಕಾಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಸುರೇಂದ್ರನ್ ಆರಂಭಿಕ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್‌ನ ರಮೇಶ್ ಪೆಶಾರೋಡಿ ಅವರ ವಿರುದ್ಧ ಶೋಭಾ ಮೇಲುಗೈ ಸಾಧಿಸಿದ್ದು, ಎಲ್‌ಡಿಎಫ್ ಅಭ್ಯರ್ಥಿ ಸದ್ಯಕ್ಕೆ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಕಳೆದ ಮೂರು ಚುನಾವಣೆಗಳಲ್ಲಿ ಇಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಬಿಜೆಪಿಗೆ ಈ ಆರಂಭಿಕ ಟ್ರೆಂಡ್ ಆಶಾದಾಯಕವಾಗಿದೆ.
ಯುಡಿಎಫ್ vs ಎಲ್‌ಡಿಎಫ್: ಜಿದ್ದಾಜಿದ್ದಿನ ಫೈಟ್
ಬೆಳಿಗ್ಗೆ 8:20ರ ಸುಮಾರಿನ ಆರಂಭಿಕ ವರದಿಗಳ ಪ್ರಕಾರ, ಯುಡಿಎಫ್ (UDF) 5 ಕ್ಷೇತ್ರಗಳಲ್ಲಿ ಮುನ್ನಡೆ ಕಂಡಿದ್ದರೆ, ಎಲ್‌ಡಿಎಫ್ (LDF) 3 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಕಳೆದ 10 ವರ್ಷಗಳಿಂದ ಅಧಿಕಾರದಿಂದ ದೂರವಿರುವ ಯುಡಿಎಫ್ ಈ ಬಾರಿ ಹೇಗಾದರೂ ಮಾಡಿ ಮರಳಿ ಗದ್ದುಗೆ ಹಿಡಿಯುವ ವಿಶ್ವಾಸದಲ್ಲಿದೆ.
"ಹೆಚ್ಚಿನ ಬಹುಮತದೊಂದಿಗೆ ನಾವೇ ಗೆಲ್ತೇವೆ" - ಟಿ.ಪಿ. ರಾಮಕೃಷ್ಣನ್
ಎಲ್‌ಡಿಎಫ್ ಸಂಚಾಲಕ ಟಿ.ಪಿ. ರಾಮಕೃಷ್ಣನ್ ಅವರು ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರವೇ ಮುಂದುವರಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ನಾವು ಈ ಬಾರಿ ಮತ್ತಷ್ಟು ದೊಡ್ಡ ಬಹುಮತದೊಂದಿಗೆ ಗೆಲ್ಲುತ್ತೇವೆ. ನಾನು ಪೆರಂಬ್ರ ಕ್ಷೇತ್ರದಿಂದ ಗೆಲ್ಲುವುದು ಖಚಿತ. ಕಾಂಗ್ರೆಸ್ ಮಾಡುವ ಹಕ್ಕು ಪ್ರತಿಪಾದನೆಗಳಿಗೆ ಯಾವುದೇ ಆಧಾರವಿಲ್ಲ" ಎಂದು ಅವರು ಹೇಳಿದ್ದಾರೆ.
"ಹತ್ತು ವರ್ಷಗಳ ಬಳಿಕ ಯುಡಿಎಫ್ ಸರ್ಕಾರ" - ಎಂ. ವಿನ್ಸೆಂಟ್
ವಿಝಿಂಜಂ (ಕೋವಲಂ) ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಎಂ. ವಿನ್ಸೆಂಟ್ ಅವರು ತಾವು ಹ್ಯಾಟ್ರಿಕ್ ಗೆಲುವು ಸಾಧಿಸುವುದು ಮಾತ್ರವಲ್ಲದೆ, 10 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಯುಡಿಎಫ್ ಸರ್ಕಾರ ರಚನೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
2021ರಲ್ಲಿ ಏನಾಗಿತ್ತು?
ಕಳೆದ 2021ರ ಚುನಾವಣೆಯಲ್ಲಿ ಎಲ್‌ಡಿಎಫ್ 140 ಸ್ಥಾನಗಳ ಪೈಕಿ 99 ಸ್ಥಾನಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಜಯ ದಾಖಲಿಸಿತ್ತು. ಕಾಂಗ್ರೆಸ್ ನೇತೃತ್ವದ ಯುಡಿಎಫ್ 41 ಸ್ಥಾನಗಳಿಗೆ ಸೀಮಿತವಾಗಿತ್ತು. ಈ ಬಾರಿ ಆಡಳಿತಾರೂಢ ಸಿಪಿಎಂ ಮೈತ್ರಿಕೂಟ ತನ್ನ ಕೋಟೆ ಉಳಿಸಿಕೊಳ್ಳುತ್ತದೆಯೇ ಅಥವಾ ಕಾಂಗ್ರೆಸ್ ಮೈತ್ರಿಕೂಟ ಅಧಿಕಾರ ಹಿಡಿಯುತ್ತದೆಯೇ ಎಂಬುದು ಮಧ್ಯಾಹ್ನದ ವೇಳೆಗೆ ಸ್ಪಷ್ಟವಾಗಲಿದೆ.


