ಕೇರಳದ ಮಲ್ಲಪ್ಪುರಂನಲ್ಲಿ ಸುಶಿಕ್ಷಿತ ದಂಪತಿಗಳು ಆಧುನಿಕ ಔಷಧಿ ಮತ್ತು ಚುಚ್ಚುಮದ್ದುಗಳನ್ನು ನಿರಾಕರಿಸಿದ್ದರಿಂದ ಒಂದು ವರ್ಷದ ಮಗು ಜಾಂಡೀಸ್‌ನಿಂದ ಮೃತಪಟ್ಟಿದೆ.
ಮಲ್ಲಪುರಂ: ಮಗು ಜನಿಸಿದ ಕೂಡಲೇ ಮಗುವಿಗೆ ಹಲವು ಚುಚ್ಚುಮದ್ದುಗಳನ್ನು ನೀಡಲಾಗುತ್ತದೆ. ಹೀಗೆ ನೀಡುವ ಚುಚ್ಚುಮದ್ದುಗಳಲ್ಲಿ ಹಲವು ಮಾರಕ ಕಾಯಿಲೆಗಳನ್ನು ತಡೆಗಟ್ಟುವ ಔಷಧಿಗಳಿರುತ್ತವೆ. ಆದರೆ ಕೇರಳದಲ್ಲಿ ಸುಶಿಕ್ಷಿತ ದಂಪತಿಯೇ ಈ ಎಲ್ಲಾ ಆಧುನಿಕ ಔಷಧಿ ಹಾಗೂ ಚುಚ್ಚುಮದ್ದುಗಳನ್ನು ನಿರಾಕರಿಸುವ ಮೂಲಕ ಮಗುವಿನ ಜೀವಕ್ಕೆ ತಾವೇ ಯಮಸ್ವರೂಪಿಗಳಾದಂತಹ ಘಟನೆ ನಡೆದಿದೆ.
ಹೌದು ಕೇರಳದಲ್ಲಿ ಸುಶಿಕ್ಷಿತ ದಂಪತಿಯ ಅಸುಕ್ಷಿತ ನಡೆಯಿಂದಾಗಿ ಒಂದು ವರ್ಷದ ಮಗು ಜೀವ ಬಿಟ್ಟಿದೆ. ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಪೋಷಕರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ವೈದ್ಯರ ಚಿಕಿತ್ಸೆ ಇಲ್ಲದೇ ಪ್ರಾಣ ಬಿಟ್ಟು ಒಂದು ವರ್ಷದ ಮಗು ಜಾಂಡೀಸ್(ಕಾಮಾಲೆ ರೋಗ, ಹಳದಿ ಕಾಯಿಲೆ) ದಿಂದ ಬಳಲುತ್ತಿತ್ತು.
ಕೇರಳದ ಮಲ್ಲಪ್ಪುರಂನಲ್ಲಿ ಈ ಘಟನೆ ನಡೆದಿದೆ. ಪೋಷಕರು ಅಧುನಿಕ ಔಷಧಿಯನ್ನು ನಿರಾಕರಿಸಿದ ಹಿನ್ನೆಲೆ ಮಗುವಿನ ಕಾಯಿಲೆಗೆ ಚಿಕಿತ್ಸೆ ನೀಡಲಾಗಿಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಹೀಗೆ ಪೋಷಕರ ನಿರ್ಲಕ್ಷ್ಯದಿಂದಾಗಿ ಮೃತಪಟ್ಟ ಮಗುವನ್ನು ಇಸೇನ್ ಇರ್ಹಾನ್ ಎಂದು ಗುರುತಿಸಲಾಗಿದೆ. ಈ ಮಗು ಹೀರಾ ಹರೀರಾ ಹಾಗೂ ನವಾಜ್ ಎಂಬುವವರ ಪುತ್ರನಾಗಿದ್ದು, ಇವರು ಮಲ್ಲಪುರಂ ಜಿಲ್ಲೆಯ ಕೊಟ್ಟಕ್ಕಲ್ ನಿವಾಸಿಗಳಾಗಿದ್ದಾರೆ. ಮಗು ಇಸೇನ್ ಇರ್ಹಾನ್ ಜೂನ್ 27ರಂದು ಜಾಂಡೀಸ್‌ನಿಂದ ಮೃತಪಟ್ಟಿದೆ. ಪೊಲೀಸರು ಹಾಗೂ ಆರೋಗ್ಯ ಅಧಿಕಾರಿಗಳು ಮಗುವಿಗೆ ಯಾವುದೇ ರೀತಿಯ ಆಧುನಿಕ ಚಿಕಿತ್ಸೆ ನೀಡಲಾಗಿಲ್ಲ ಎಂದು ಅನುಮಾನ ಪಟ್ಟಿದ್ದಾರೆ.
ಈ ಮಗುವಿನ ತಾಯಿ ಹೀರಾ ಹರೀರಾ ಆಕ್ಯುಪಂಕ್ಚರ್ ಪ್ರಾಕ್ಟಿಸ್ ಮಾಡುವವರಾಗಿದ್ದು, ಅವರು ಈ ಹಿಂದೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆಧುನಿಕ ವೈದ್ಯ ಪದ್ಧತಿಯನ್ನು ವಿರೋಧಿಸಿರುವ ಪೋಸ್ಟ್‌ಗಳು ಈಗ ವೈರಲ್ ಆಗುತ್ತಿದ್ದು, ಈ ವಿಚಾರ ಈಗ ಭಾರಿ ಚರ್ಚೆಯಲ್ಲಿದೆ.
ಮನೆಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ ವೇಳೆ, ಮಗುವಿನ ಪೋಷಕರು ಮಗು ಎದೆಹಾಲು ಸೇವಿಸಿದ ಕೆಲವೇ ಹೊತ್ತಿನಲ್ಲಿ ಜೀವ ಬಿಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ. ಈ ವೇಳೆ ಆರೋಗ್ಯಾಧಿಕಾರಿಗಳು ನಡೆಸಿದ ವಿಚಾರಣೆಯಲ್ಲಿ ಮಗುವಿಗೆ ಯಾವುದೇ ಚುಚ್ಚುಮದ್ದುಗಳನ್ನು ಕೂಡ ನೀಡಿಲ್ಲ ಎಂಬುದು ತಿಳಿದು ಬಂದಿದೆ.
ಮಗುವಿನ ಸಾವಿನ ನಂತರ ಪೋಷಕರು ಮಗುವಿನ ಅಂತ್ಯಕ್ರಿಯೆಯನ್ನು ಮುಂದುವರಿಸಿದರೂ, ಪೊಲೀಸರು ನಂತರ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಏಪ್ರಿಲ್‌ನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ಮಲಪ್ಪುರಂನಲ್ಲಿ 35 ವರ್ಷದ ಅಸ್ಮಾ ಎಂಬ ಮಹಿಳೆ ಮನೆಯಲ್ಲಿಯೇ ಹೆರಿಗೆಯ ಸಮಯದಲ್ಲಿ ಸಾವನ್ನಪ್ಪಿದರು. ಇದಾದ ನಂತರ 'ಮದವೂರ್ ಖಾಫಿಲಾ' ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ಆಕೆಯ ಪತಿ ಸಿರಾಜುದ್ದೀನ್ ಅವರನ್ನು ಪೊಲೀಸರು ಬಂಧಿಸಿದ್ದರು. ಈತನ ವಿರುದ್ಧ ಬಂಧಿಸಿ ಕೊಲೆಯಲ್ಲದ ನರಹತ್ಯೆ ಮತ್ತು ಸಾಕ್ಷ್ಯಗಳನ್ನು ನಾಶಮಾಡಲು ಯತ್ನಿಸಿದ ಆರೋಪ ಹೊರಿಸಲಾಯಿತು. ಈತ ಎರ್ನಾಕುಲಂನ ಪೆರುಂಬವೂರ್‌ನಲ್ಲಿ ಅಸ್ಮಾ ಅವರ ಶವವನ್ನು ರಹಸ್ಯವಾಗಿ ಹೂಳಲು ಯತ್ನಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಈತನೂ ಕೂಡ ತನ್ನ ಚಾನೆಲ್‌ನಲ್ಲಿ ಹೆರಿಗೆಯ ಸಮಯದಲ್ಲಿ ಆಧುನಿಕ ವೈದ್ಯಕೀಯ ಆರೈಕೆಯ ವಿರುದ್ಧ ತಪ್ಪು ಮಾಹಿತಿ ನೀಡಿದ್ದ.
