ಆಗಸ್ಟ್ 4ರಂದು ಅರವಿಂದ್ ಕೇಜ್ರಿವಾಲ್ ದೊಡ್ಡ ಮಟ್ಟದ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ನಿರ್ಬಂಧಿತ ಪ್ರಧಾನಿ ನಿವಾಸಕ್ಕೆ ಮಾರ್ಚ್ ಮಾಡುವುದಾಗಿ ಘೋಷಿಸಿದ್ದಾರೆ. ಕಾಕ್ರೋಚ್ ಹೋರಾಟ ತಣ್ಣಗಾದ ಬೆನ್ನಲ್ಲೇ 3 ಬೇಡಿಕೆ ಮುಂದಿಟ್ಟು ಕೇಜ್ರಿವಾಲ್ ಹೋರಾಟಕ್ಕೆ ಸಜ್ಜಾಗಿದ್ದಾರೆ.
ನವದೆಹಲಿ( ಜ.01) ಕಾಕ್ರೋಚ್ ಜನತಾ ಪಾರ್ಟಿ ಹೋರಾಟ ತಣ್ಣಗಾಗಿದೆ. ಮತ್ತೆ ಹೋರಾಟ ಮಾಡುವುದಾಗಿ ಎಚ್ಚರಿಸಿದರೂ ಸದ್ಯಕ್ಕೆ ಪ್ರತಿಭಟನೆ ಕಾವು ಪಡೆದುಕೊಂಡಿಲ್ಲ. ಆದರೆ ಕಾಕ್ರೋಚ್ ಹೋರಾಟ ನಿರೀಕ್ಷಿತ ಮಟ್ಟ ತಲುಪಿಲ್ಲ. ಇದೀಗ ಆಮ್ ಆದ್ಮಿ ಪಾರ್ಟಿ ಮೂರು ಪ್ರಮುಖ ಬೇಡಿಕೆ ಮುಂದಿಟ್ಟು ಪ್ರಧಾನಿ ನಿವಾಸಕ್ಕೆ ಮಾರ್ಚ್ ಮಾಡುವುದಾಗಿ ಘೋಷಿಸಿದ್ದಾರೆ. ಆಗಸ್ಟ್ 4 ರಂದು ಭಾರಿ ಹೈಡ್ರಾಮ ನಡೆಯಲಿದೆ. ಕಾರಣ ಪ್ರಧಾನಿ ನಿವಾಸ ನಿರ್ಬಂಧಿತ ಪ್ರದೇಶವಾಗಿದೆ. ನಿವಾಸದ ಮುಂದೆ ಮಾರ್ಚ್ ಮಾಡಲು, ಪ್ರತಿಭಟನೆ ಮಾಡಲು ಅವಕಾಶವಿಲ್ಲ. ಹೀಗಾಗಿ ಮತ್ತೊಂದು ಸುತ್ತಿನ ಪೊಲೀಸ್ ಆ್ಯಕ್ಷನ್ ದೇಶಾದ್ಯಂತ ಸುದ್ದಿಯಾಗಲಿದೆ.
ಕೇಜ್ರಿವಾಲ್ ಹೋರಾಟ ಯಾಕೆ?
ದೆಹಲಿ ಮಾಜಿ ಸಿಎಂ, ಆಪ್ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಈ ಹೋರಾಟ ಇ20 ಪೆಟ್ರೋಲ್ ವಿರುದ್ಧವಾಗಿದೆ. ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿ ವಿರೋಧಿಸಿ ಅರವಿಂದ್ ಕೇಜ್ರಿವಾಲ್ ಪ್ರತಿಭಟನೆ ನಡೆಸಲಿದ್ದಾರೆ. ಈ ಕುರಿತು ಈಗಾಗಲೇ ಸಭೆಗಳನ್ನು ನಡೆಸಲಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಟೌನ್‌ಹಾಲ್ ಸಭೆಯನ್ನು 7 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಉತ್ತಮ ಬೆಂಬಲ ವ್ಯಕ್ತವಾಗಿದೆ. ಆಗಸ್ಟ್ 4ರ ಮಧ್ಯಾಹ್ನ 12 ಗಂಟೆಗೆ 100 ಕಾರ್ಯಕರ್ತರು, ಮುಖಂಡರ ಜೊತೆ ಪ್ರಧಾನಿ ನಿವಾಸಕ್ಕೆ ಮಾರ್ಚ್ ಮಾಡುವುದಾಗಿ ಘೋಷಿಸಿದ್ದಾರೆ.
ಕೇಜ್ರಿವಾಲ್ ಮೂರು ಬೇಡಿಕೆ ಏನು?
- ಗ್ರಾಹಕರು ಪೆಟ್ರೋಲ್ ಬಂಕ್‌ನಲ್ಲಿ ಇಂಧನ ತುಂಬಿಸಿಕೊಳ್ಳುವಾಗ ಶುದ್ಧ ಪೆಟ್ರೋಲ್, ಇ20 ಮಿಶ್ರಿತ ಪೆಟ್ರೋಲ್ ಆಯ್ಕೆ ನೀಡಬೇಕು.
- ಪೆಟ್ರೋಲ್ ಬೆಲೆಯನ್ನು 84 ರೂಪಾಯಿಗೆ ಇಳಿಕೆ ಮಾಡಬೇಕು
- ಎಥೆನಾಲ್ ಬೆಲೆಯನ್ನು ಇಳಿಕೆ ಮಾಡಬೇಕು
ಈ ಮೂರು ಬೇಡಿಕೆ ಮುಂದಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್ ಆಗಸ್ಟ್ 4 ರಂದು ಪ್ರಧಾನಿ ನಿವಾಸಕ್ಕೆ ಮಾರ್ಚ್ ಮಾಡಲಿದ್ದಾರೆ. ಕೇಜ್ರಿವಾಲ್ ಚಲೋ ಪ್ರಧಾನಿ ನಿವಾಸದ ಆವರಣ ಪ್ರವೇಶಿಸಲು ಸಾಧ್ಯವಿಲ್ಲ. ಹೈಲೆವೆಲ್ ಸೆಕ್ಯೂರಿಟಿ ನೀಡಿರುವ ಕೆಲ ಪ್ರದೇಶಗಳಲ್ಲಿ ಪ್ರಧಾನಿ ನಿವಾಸ ಕೂಡ ಒಂದಾಗಿದೆ. ಇಲ್ಲಿ ಯಾವುದೇ ರೀತಿಯ ಪ್ರತಿಭಟನೆ, ಮಾರ್ಚ್‌ಗೆ ಅವಕಾಶವಿಲ್ಲ. ಹೀಗಾಗಿ ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲಿದ್ದಾರೆ. ಇದು ಮತ್ತೊಂದು ಸುತ್ತಿನ ಘರ್ಷಣೆಗೆ ಕಾರಣಾಗಲಿದೆ. ಪ್ರಧಾನಿ ನಿವಾಸ ನಿರ್ಬಂಧಿತ ಪ್ರದೇಶ ಅನ್ನೋದು ಇತ್ತೀಚೆಗೆ ಪ್ರತಿಭಟನೆ ಮಾಡಿದ ರಾಹುಲ್ ಗಾಂಧಿ ಹಾಗೂ ಇದೀಗ ಪ್ರತಿಭಟನೆ ಮಾಡಲು ಹೊರಟಿರುವ ಅರವಿಂದ್ ಕೇಜ್ರಿವಾಲ್‌ಗೂ ತಿಳಿದಿದೆ. ಆದರೆ ಪ್ರಧಾನಿ ನಿವಾಸದ ಮುಂದೆ ರಾಹುಲ್ ಗಾಂಧಿ ನಡೆಸಿದ ಪ್ರತಿಭಟನೆ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸದ್ದು ಮಾಡಿತ್ತು. ಇದೀಗ ಕೇಜ್ರಿವಾಲ್ ಕೂಡ ಇದೇ ರೀತಿಯ ಹೋರಾಟಕ್ಕೆ ಸಜ್ಜಾಗಿದ್ದಾರೆ ಎನ್ನಲಾಗಿದೆ.
