ಕೇರಳ: ಸಹಪಾಠಿಗಳ ಫೋಟೋ ಅಶ್ಲೀಲ ಎಡಿಟ್ ಮಾಡಿ ಜಾಲತಾಣಕ್ಕೆ ಅಪ್ಲೋಡ್ ಮಾಡ್ತಿದ್ದ ಬಾಲಕ
ಎಐ ತಂತ್ರಜ್ಞಾನ ಬಳಸಿ ಶಾಲಾ ಮಕ್ಕಳ ಅಶ್ಲೀಲ ಫೋಟೋ ಚಿತ್ರಿಸಿ ಅದನ್ನು ಸೋಶಿಯಲ್ ಮೀಡಿಯಾಗಳಿಗೆ ಅಪ್‌ಲೋಡ್ ಮಾಡುತ್ತಿದ್ದ 14 ವರ್ಷದ ಅಪ್ರಾಪ್ತ ಬಾಲಕನನ್ನು ಕೇರಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಲ್ಪೆಟ್ಟಾ: ಎಐ ತಂತ್ರಜ್ಞಾನ ಬಳಸಿ ಶಾಲಾ ಮಕ್ಕಳ ಅಶ್ಲೀಲ ಫೋಟೋ ಚಿತ್ರಿಸಿ ಅದನ್ನು ಸೋಶಿಯಲ್ ಮೀಡಿಯಾಗಳಿಗೆ ಅಪ್‌ಲೋಡ್ ಮಾಡುತ್ತಿದ್ದ 14 ವರ್ಷದ ಅಪ್ರಾಪ್ತ ಬಾಲಕನನ್ನು ಕೇರಳ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಂದು ತಿಂಗಳ ಸುದೀರ್ಘ ಕಾರ್ಯಾಚರಣೆಯ ನಂತರ ಈ ಬಾಲಕನನ್ನು ಪೊಲೀಸರು ಬಲೆಗೆ ಕೆಡವಿದ್ದಾರೆ. ವಯನಾಡ್ ಸೈಬರ್ ಪೊಲೀಸ್ ಇನ್ಸ್‌ಪೆಕ್ಟರ್ ಶಾಜು ಜೊಸೇಫ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.
ಆರೋಪಿ ಬಾಲಕ ಶಾಲೆಯ ವಾಟ್ಸಾಪ್ ಗ್ರೂಪ್‌ನಿಂದ ವಿದ್ಯಾರ್ಥನಿಯರ ಫೋಟೋ ತೆಗೆದುಕೊಂಡು ಅದನ್ನು ಎಐ ತಂತ್ರಜ್ಞಾನ ಬಳಸಿ ಎಡಿಟ್ ಮಾಡಿ ವಿರೂಪಗೊಳಿಸುತ್ತಿದ್ದ. ಬರೀ ಇಷ್ಟೇ ಅಲ್ಲದೇ ಈತ ಸಾಮಾಜಿಕ ಜಾಲತಾಣದಲ್ಲಿ ಹಲವು ನಕಲಿ ಐಡಿಗಳನ್ನು ಹೊಂದಿದ್ದು, ಅವುಗಳ ಮೂಲಕ ವಿದ್ಯಾರ್ಥಿನಿಯರ ಅಶ್ಲೀಲ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದ, ಈ ಪ್ರಕರಣದಲ್ಲಿ ಸಂತ್ರಸ್ತೆಯಾದ ಬಾಲಕಿ ಹಾಗೂ ಆಕೆಯ ಗೆಳತಿಯರ ಫೋಟೋಗಳನ್ನು ಈ ಕಿಡಿಗೇಡಿ ಬಾಲಕ ಪೋಸ್ಟ್ ಮಾಡಿದ್ದ, ಅಲ್ಲದೇ ಅವರಿಗೆ ಬೆದರಿಕೆ ಒಡ್ಡಿದ್ದ.
ಬಹಳ ಸ್ಮಾರ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಬಾಲಕ ತನ್ನ ಈ ಕಿಡಿಗೇಡಿ ಕೆಲಸಗಳನ್ನು ಮಾಡಿ ಸಿಕ್ಕಿಬೀಳದಂತೆ ತಡೆಯಲು ವಿಪಿಎನ್(virtual private network) ಹಾಗೂ ಚಾಟ್‌ಬಾಟ್ ಬಳಸುತ್ತಿದ್ದ. ಪ್ರಕರಣದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಮುಖ್ಯಸ್ಥರು ತಮ್ಮ ಮಕ್ಕಳ ಮೇಲೆ ಒಂದು ಕಣ್ಣಿಡುವಂತೆ ಹಾಗೂ ಅವರ ಸೋಶೀಯಲ್ ಮೀಡಿಯಾ ಚಟುವಟಿಕೆಗಳ ಬಗ್ಗೆ ಗಮನಿಸುವಂತೆ ಸೂಚಿಸಿದ್ದಾರೆ.
ವಾಣಿಜ್ಯ ಸಿಲಿಂಡರ್ ದರ ದಿಢೀರ್ 209 ರೂ. ಏರಿಕೆ: ಇಂದಿನಿಂದಲೇ ಜಾರಿ
ಈ ಪ್ರಕರಣ ಬೇಧಿಸಲು ಪೊಲೀಸರು ಇನ್ಸ್ಟಾಗ್ರಾಮ್ ಟೆಲಿಗ್ರಾಮ್ ಮುಂತಾದ ಸೋಶಿಯಲ್ ಮೀಡಿಯಾಗಳ ಸಹಾಯ ಪಡೆದಿದ್ದರು. ಜೊತೆಗೆ ಬಾಲಕನ ಮೊಬೈಲ್ ಫೋನ್ ಟ್ರೇಸ್ ಮಾಡಿದ್ದರು. ಬಾಲಕ ಅಪ್ರಾಪ್ತನಾಗಿರುವುದರಿಂದ ಆತನನ್ನು ಬಂಧಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಬಾಲಕನ ಸಾಮಾಜಿಕ ಹಿನ್ನೆಲೆಯ ವರದಿಯನ್ನು ಸಕ್ಷಮ ನ್ಯಾಯಾಲಯದ ಮುಂದೆ ಸಲ್ಲಿಸಲಾಗುವುದು. ಅಪ್ರಾಪ್ತ ಆರೋಪಿಯನ್ನು ಬಾಲಾಪರಾಧ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಎಐ ತಂತ್ರಜ್ಞಾನ ಬಳಸಿ ಯಾರ ಫೋಟೋವನ್ನು ಹೇಗೆ ಬೇಕಾದರೂ ಎಡಿಟ್ ಮಾಡಬಹುದಾಗಿದೆ. ಮಕ್ಕಳು ವಯಸ್ಸಾದ ನಂತರ ಹೇಗೆ ಕಾಣುತ್ತಾರೆ. ವಯಸ್ಸಾದವರು ಯೌವ್ವನದಲ್ಲಿ ಹೇಗಿದ್ದರು? ಹೀಗೆ ನಿಮಗೆ ಹೇಗೆ ಬೇಕೋ ಹಾಗೆ ಆಯ್ಕೆಗಳನ್ನು ಎಐಗೆ ನೀಡಿದರೆ ಅವುಗಳು ಫೋಟೋಗಳನ್ನು ಚಿತ್ರಿಸಿ ನೀಡುತ್ತದೆ.