26ನೇ ವಿದೇಶ ಪ್ರವಾಸಕ್ಕೆ ಕೇರಳ ಟೀ ಅಂಗಡಿ ವೃದ್ಧ ದಂಪತಿ ಸಜ್ಜು!
* ದಿನಕ್ಕೆ 300 ರು. ಉಳಿಸಿ ಟ್ರಿಪ್ ಪ್ಲಾನ್
* 26ನೇ ವಿದೇಶ ಪ್ರವಾಸಕ್ಕೆ ಕೇರಳ ಟೀ ಅಂಗಡಿ ವೃದ್ಧ ದಂಪತಿ ಸಜ್ಜು
ತಿರುವನಂತಪುರಂ(ಅ.03): ದೇಶ ಸುತ್ತುವುದು ಬಹುತೇಕರ ಕನಸು. ಆದರೆ ಹಣದ ಕೊರತೆ ಆ ಆಸೆಗೆ ತಣ್ಣೀರು ಎರಚುತ್ತದೆ. ಆದರೆ ಪ್ರವಾಸ(Tour) ಮಾಡಲೇಬೇಕೆಂಬ ಅದಮ್ಯ ಇಚ್ಛೆ ಇದ್ದರೆ ಹಣದ ಕೊರತೆ ದೊಡ್ಡ ವಿಷಯವೇ ಅಲ್ಲ ಎಂದು ಈಗಾಗಲೇ ಸಾಬೀತುಪಡಿಸಿರುವ ಕೇರಳದ(Kerala) ವೃದ್ಧ ಜೋಡಿಯೊಂದು ಇದೀಗ ತಮ್ಮ 26ನೇ ವಿದೇಶ ಪ್ರವಾಸಕ್ಕೆ ಸಜ್ಜಾಗುತ್ತಿದೆ.
ಕೆ.ಆರ್ ವಿಜಯನ್ (71) ಮತ್ತು ಮೋಹನಾ (69) ಜೋಡಿಯೇ ಇದೀಗ ರಷ್ಯಾ ಪ್ರವಾಸಕ್ಕೆ ಸಜ್ಜಾಗಿರುವ ಜೋಡಿ.
27 ವರ್ಷಗಳ ಹಿಂದೆ ದಂಪತಿ ‘ಶ್ರೀ ಬಾಲಾಜಿ ಕಾಫಿ ಹೌಸ್’(Shri Balaji Coffee House) ಅಂಗಡಿ ಆರಂಭಿಸಿದ್ದರು. ಈ ಜೋಡಿ ದಿನದ ಆದಾಯದಲ್ಲಿ(Income) ಕನಿಷ್ಠ 300 ರು. ಉಳಿಸಿ ವಿದೇಶಿ ಪ್ರಯಾಣಕ್ಕೆ ಯೋಜನೆ ರೂಪಿಸುತ್ತದೆ. 2007ರ ವೇಳೆಗೆ ಕೂಡಿಟ್ಟ ಹಣದಲ್ಲಿ ಮೊಟ್ಟಮೊದಲ ವಿದೇಶಿ ಪ್ರಯಾಣದ ಯೋಜನೆ ರೂಪಿಸಿ ಇಸ್ರೇಲ್(Isrel) ಸುತ್ತಿ ಬಂದರು.
ಅದಾದ ನಂತರ ಬ್ರಿಟನ್, ಫ್ರಾನ್ಸ್, ಆಸ್ಪ್ರೇಲಿಯಾ(Australia), ಈಜಿಪ್ಟ್, ಯುಎಇ ಮತ್ತು ಅಮೆರಿಕ ಮತ್ತಿತರ 25 ದೇಶಗಳನ್ನು ಸುತ್ತಿದ್ದಾರೆ. 26ನೇ ದೇಶವಾಗಿ ರಷ್ಯಾಗೆ(Russia) ತೆರಳಲೂ ಯೋಜನೆ ಹಾಕಿಕೊಂಡಿದ್ದಾರೆ. 2019ರಲ್ಲಿ ಇವರ ವಿದೇಶಿ ಪ್ರಯಾಣದ ಸ್ಪೂರ್ತಿಯ ಕತೆ ಜಗಜ್ಜಾಹೀರಾದಾಗ ಸ್ವತಃ ಮಹೀಂದ್ರಾ ಕಂಪನಿ ಮುಖ್ಯಸ್ಥ ಆನಂದ್ ಮಹೀದ್ರಾ(Anand Mahindra) ಆಸ್ಪ್ರೇಲಿಯಾ, ನ್ಯೂಜಿಲೆಂಡ್ ದೇಶಕ್ಕೆ ಪ್ರಯಾಣಕ್ಕೆ ಪ್ರಾಯೋಜಕತ್ವ ನೀಡಿದ್ದರು.