ಅಂಗನವಾಡಿಯಲ್ಲಿ ಉಪ್ಪಿಟ್ಟು ಬದಲು ಬಿರಿಯಾನಿ ಬೇಕೆಂದು ಕೇಳಿದ ಬಾಲಕನ ವೀಡಿಯೋ ವೈರಲ್ ಆಗಿದೆ. ಈ ವೀಡಿಯೋಗೆ ಕೇರಳದ ಮಕ್ಕಳ ಕಲ್ಯಾಣ ಸಚಿವೆ ವೀಣಾ ಜಾರ್ಜ್ ಸ್ಪಂದಿಸಿ, ಮೆನುವಿನಲ್ಲಿ ಬದಲಾವಣೆ ಮಾಡುವ ಭರವಸೆ ನೀಡಿದ್ದಾರೆ.

ಅಂಗನವಾಡಿಯಲ್ಲಿ ಪುಟ್ಟ ಮಕ್ಕಳಿಗೆ ಮೊಟ್ಟೆ, ಚಿಕ್ಕಿ, ಹಾಲು ಮುಂತಾದ ಪೌಷ್ಠಿಕ ಆಹಾರವನ್ನು ನೀಡುವುದು ಗೊತ್ತೆ ಇದೆ. ಮಕ್ಕಳಲ್ಲಿ ಅಪೌಷ್ಠಿಕತೆ ನಿವಾರಿಸುವುದಕ್ಕಾಗಿ ಅಂಗನವಾಡಿಗಳಲ್ಲಿ ಮಕ್ಕಳಿಗೆ ಆಯಾ ರಾಜ್ಯ ಸರ್ಕಾರಗಳ ವತಿಯಿಂದ ಈ ಪೌಷ್ಠಿಕತೆಯಿಂದ ಸಮೃದ್ಧವಾದ ಆಹಾರವನ್ನು ನೀಡಲಾಗುತ್ತದೆ. ಅಂಗನವಾಡಿಯಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕಿ ಹಾಗೂ ಆಯಾಗಳು ಅಲ್ಲಿಗೆ ಬರುವ ಪುಟ್ಟ ಮಕ್ಕಳಿಗೆ ಈ ಆಹಾರವನ್ನು ನೀಡುತ್ತಾರೆ. ಆದರೆ ಮನೆಯಲ್ಲಿ ಊಟ ಮಾಡುತ್ತಿದ್ದ ವೇಳೆ ಅಂಗನವಾಡಿ ಬಾಲಕನೋರ್ವ ನನಗೆ ಉಪ್ಪಿಟ್ಟು ಬೇಡ ಚಿಕನ್‌ ಫ್ರೈ ಹಾಗೂ ಬಿರಿಯಾನಿ ಬೇಕು ಎಂದು ತನ್ನ ತೊದಲು ಭಾಷೆಯಲ್ಲಿ ನುಡಿದಿದ್ದು, ಇದನ್ನು ಅಮ್ಮ ರೆಕಾರ್ಡ್ ಮಾಡಿಕೊಂಡಿದ್ದರು. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೊತೆಗೆ ಇದಕ್ಕೆ ಸಂಬಂಧಿಸಿದ ಕೇರಳ ರಾಜ್ಯ ಸರ್ಕಾರದ ಮಕ್ಕಳ ಕಲ್ಯಾಣ ಸಚಿವರಾದ ವೀಣಾ ಜಾರ್ಜ್ ಕೂಡ ಈ ವೀಡಿಯೋಗೆ ಸ್ಪಂದಿಸಿದ್ದಾರೆ. 

ತ್ರಜೂಲ್ ಶಂಕರ್ ಎಂಬ ಅಂಗನವಾಡಿ ಬಾಲಕ ತನಗೆ ಅಂಗನವಾಡಿಯಲ್ಲಿ ಉಪ್ಪಿಟ್ಟು ಬೇಡ ಬಿರ್ನಾನಿ(ಬಿರಿಯಾನಿ) ಹಾಗೂ ಪೊರಿಚಾ ಕೋಜಿ(ಚಿಕನ್ ಕರಿ) ಬೇಕು ಎಂದು ಮನೆಯಲ್ಲಿ ಊಟ ಮಾಡಿಸುತ್ತಿದ್ದ ವೇಳೆ ಅಮ್ಮನ ಬಳಿ ಹೇಳಿದ್ದಾನೆ. ಇದನ್ನು ಅವರು ರೆಕಾರ್ಡ್ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಈ ವೀಡಿಯೋ ನೋಡಿದ ನೆಟ್ಟಿಗರಿಂದಲೂ ಈ ಬಾಲಕನ ಮನವಿಗೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿತ್ತು. ಅನೇಕರು ಬಾಲಕನ ಮನವಿಯಂತೆ ಅಂಗನವಾಡಿಯ ಮೆನು ಚೇಂಜ್ ಮಾಡುವಂತೆ ಮನವಿ ಮಾಡಿದ್ದರು. 

ಮಗುವಿನ ಮುದ್ದು ಮುದ್ದಾದ ಮಾತಿಗೆ ಅನೇಕರ ಮನಕರಗಿದ್ದು, ಮಗುವಿಗೆ ಶಾಲೆಯಲ್ಲಿ ಬಿರಿಯಾನಿ ನೀಡುವಂತೆ ಮನವಿ ಮಾಡಿದ್ದಾರೆ. ಈ ವೀಡಿಯೋದ ನಂತರ ಅನೇಕರು ಅಂಗನವಾಡಿಯ ಮೆನುವನ್ನು ಸರ್ಕಾರ ಬದಲಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ವೀಡಿಯೋವನ್ನು ಮಿಲಿಯನ್‌ಗಟ್ಟಲೇ ಜನ ವೀಕ್ಷಿಸಿದ್ದು, ಅನೇಕ ಮೀಡಿಯಾಗಳು ಮಗುವಿನ ತಾಯಿಯನ್ನು ಕೂಡ ಮಾತನಾಡಿಸಿದ್ದಾರೆ. ಈ ವೇಳೆ ಅವರು ವೀಡಿಯೋ ಈ ರೀತಿ ವೈರಲ್ ಆಗಿದ್ದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ವೀಡಿಯೋ ಶೀಘ್ರದಲ್ಲೇ ಕೇರಳ ಮಕ್ಕಳ ಕಲ್ಯಾಣ ಸಚಿವೆ ವೀಣಾ ಜಾರ್ಜ್ ಗಮನ ಸೆಳೆದಿದ್ದು, ಅವರು ಕೂಡ ಮಗು ಶಂಕರ್‌ನ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. 

ಅಲ್ಲದೇ ಮಗುವಿನ ಮನವಿಯಂತೆ ಅಂಗನವಾಡಿಯ ಮೆನುವಿನಲ್ಲಿ ತುಸು ಬದಲಾವಣೆ ಮಾಡಿ ಬಿರಿಯಾನಿಯನ್ನು ಕೂಡ ಸೇರಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ. ಮಗುವಿನ ಕೋರಿಕೆಯನ್ನು ಗಮನದಲ್ಲಿಟ್ಟುಕೊಂಡು ಬಿರಿಯಾನಿಯನ್ನು ಮೆನುವಿಗೆ ಸೇರಿಸುವುದಾಗಿ ಅವರು ಹೇಳಿದ್ದಾರೆ. ಸಚಿವರ ಈ ಸ್ಪಂದನೆಗೆ ಅನೇಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕೇರಳದ ಅಂಗನವಾಡಿಯಲ್ಲಿ ಈಗಾಗಲೇ ಅಂಗನವಾಡಿಯಲ್ಲಿ ಮಕ್ಕಳಿಗೆ ಹಾಲು ಹಾಗೂ ಮೊಟ್ಟೆಯನ್ನು ನೀಡಲಾಗುತ್ತಿದೆ. 

View post on Instagram