- Home
- Karnataka Districts
- ಬೆಳಗಾವಿಯಲ್ಲಿ ಎಟಿಎಂ ಬೂತ್ ಉಂಟು, ಬಾಕ್ಸ್ ಇಲ್ಲ; ಕಳ್ಳರ ರಾಬರಿ ಐಡಿಯಾ ನೋಡಿ, ಪೊಲೀಸರೇ ಗಾಬರಿ!
ಬೆಳಗಾವಿಯಲ್ಲಿ ಎಟಿಎಂ ಬೂತ್ ಉಂಟು, ಬಾಕ್ಸ್ ಇಲ್ಲ; ಕಳ್ಳರ ರಾಬರಿ ಐಡಿಯಾ ನೋಡಿ, ಪೊಲೀಸರೇ ಗಾಬರಿ!
ಬೆಳಗಾವಿಯ ಹೊಸ ವಂಟಮೂರಿ ಗ್ರಾಮದಲ್ಲಿ ನಡೆದ ವಿಚಿತ್ರ ಎಟಿಎಂ ಕಳ್ಳತನ! ಖದೀಮರು ತಳ್ಳು ಗಾಡಿಯಲ್ಲಿ ಸಂಪೂರ್ಣ ಮಷಿನ್ ಹೊತ್ತೊಯ್ದರು. ಪೊಲೀಸರನ್ನೇ ದಂಗಾಗಿಸಿದ ಈ ಘಟನೆಯ ವಿವರ ತಿಳಿಯಲು ಕ್ಲಿಕ್ ಮಾಡಿ.

ಕಳ್ಳರ ರಾಬರಿ ಐಡಿಯಾ ನೋಡಿ ಪೊಲೀಸರೇ ಗಾಬರಿ
ಬೆಳಗಾವಿ (ಡಿ.02): ರಾಜ್ಯದಲ್ಲಿ ಎಟಿಎಂ (ATM) ಕಳ್ಳತನ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿರುವ ನಡುವೆಯೇ, ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಕಳ್ಳತನ ಮಾಡಲು ಬಂದ ಖದೀಮರು ಬಳಸಿದ ನೂತನ ಮತ್ತು ವಿಚಿತ್ರ ಐಡಿಯಾ ಕಂಡು ಪೊಲೀಸರೇ ದಂಗಾಗಿದ್ದಾರೆ.
ಕಳ್ಳರು ಎಟಿಎಂ ಮಷಿನ್‌ನ ಸಂಪೂರ್ಣ ಘಟಕವನ್ನು ಕಟ್ ಮಾಡದೆ, ಸೀದಾ ತಳ್ಳು ಗಾಡಿಯಲ್ಲಿ ಹೊತ್ತುಕೊಂಡು ಹೋಗಿ ಪರಾರಿಯಾಗಿರುವ ಘಟನೆ ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ನಡೆದಿದೆ.
ಘಟನೆ ವಿವರ:
ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡಿರುವ ಹೊಸ ವಂಟಮೂರಿ ಗ್ರಾಮದ ಬಳಿಯಿರುವ ಇಂಡಿಕ್ಯಾಶ್ (Indicash) ಎಟಿಎಂ ಕೇಂದ್ರಕ್ಕೆ ಮೂವರು ಖದೀಮರು ಮಂಗಳವಾರ ತಡರಾತ್ರಿ ಕನ್ನ ಹಾಕಿದ್ದಾರೆ.
ಬ್ಲಾಕ್ ಸ್ಪ್ರೇ ಪ್ರಯೋಗ: ಕಳ್ಳರು ಮೊದಲು ಎಟಿಎಂ ಕೊಠಡಿಯೊಳಗೆ ಪ್ರವೇಶಿಸಿ, ಕಳ್ಳತನದ ಶಬ್ದವಾದರೆ ಅಲಾರಾಂ ಸದ್ದು ಮಾಡದಂತೆ ಎಟಿಎಂ ಮಷಿನ್‌ನಲ್ಲಿರುವ ಸೆನ್ಸಾರ್‌ಗಳ ಮೇಲೆ ಮತ್ತು ಸಿಸಿಟಿವಿ ಕ್ಯಾಮೆರಾಗಳ ಮೇಲೆ ಬ್ಲ್ಯಾಕ್ ಸ್ಪ್ರೇ ಬಳಸಿ ಮುಚ್ಚಿದ್ದಾರೆ. ಇದರಿಂದ ಕಳ್ಳತನದ ಪ್ರಕ್ರಿಯೆಯ ಶಬ್ದವು ಅಲಾರಾಂ ಟ್ರಿಗರ್ ಮಾಡಲಿಲ್ಲ ಮತ್ತು ಅವರ ಚಲನವಲನ ಸ್ಪಷ್ಟವಾಗಿ ದಾಖಲಾಗದಂತೆ ನೋಡಿಕೊಂಡರು.
ತಳ್ಳು ಗಾಡಿಯ ಐಡಿಯಾ:
ನಂತರ, ಎಟಿಎಂ ಮಷಿನ್‌ನ ಸಂಪೂರ್ಣ ಘಟಕವನ್ನು ಅದರ ಬುಡದಿಂದ ಕಿತ್ತು ತೆಗೆದ ಖದೀಮರು, ತಾವು ಮೊದಲೇ ಸಿದ್ಧಪಡಿಸಿ ತಂದಿದ್ದ ತಳ್ಳು ಗಾಡಿ ಅಥವಾ ಟ್ರಾಲಿಯಲ್ಲಿ ಅದನ್ನು ಇಟ್ಟಿದ್ದಾರೆ. ಯಾವುದೇ ಸಂಶಯ ಬಾರದಂತೆ, ಅವರು ಸುಮಾರು 200 ಮೀಟರ್ ದೂರದವರೆಗೆ ಎಟಿಎಂ ಮಷಿನ್ ಇದ್ದ ತಳ್ಳುಗಾಡಿಯನ್ನು ತಳ್ಳಿಕೊಂಡು ಹೋಗಿದ್ದಾರೆ.
ವಾಹನದಲ್ಲಿ ಎಸ್ಕೇಪ್:
ಕಳ್ಳರು ಸಾಮಾನ್ಯ ಕಾರ್ಮಿಕರಂತೆ ಸ್ವಲ್ಪ ದೂರು ನಡೆದುಕೊಂಡು ಬಂದು ಆ ನಂತರ, ಪೂರ್ವಯೋಜಿತವಾಗಿ ನಿಲ್ಲಿಸಿದ್ದ ತಮ್ಮ ವಾಹನದಲ್ಲಿ ಭಾರೀ ಎಟಿಎಂ ಮಷಿನ್ ಅನ್ನು ಹೇರಿಕೊಂಡು, ತಳ್ಳುಗಾಡಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಈ ಇಡೀ ಕೈ ಚಳಕವು ಸ್ಥಳದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.
ಪೊಲೀಸರ ಪರಿಶೀಲನೆ:
ಕಳ್ಳತನವಾಗಿರುವ ಎಟಿಎಂನಲ್ಲಿ ಒಂದು ಲಕ್ಷಕ್ಕೂ ಅಧಿಕ ಹಣ ಇತ್ತು ಎನ್ನಲಾಗಿದೆ. ಮುಂಜಾನೆ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಕಾಕತಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ
ಖದೀಮರು ಬಳಸಿರುವ ಕಳ್ಳತನದ ಹೊಸ ಐಡಿಯಾ ಕಂಡು ಪೊಲೀಸರೇ ಅಚ್ಚರಿಗೊಂಡಿದ್ದಾರೆ. ತನಿಖೆಯ ಭಾಗವಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.
ರಾಜ್ಯ ಹೆದ್ದಾರಿಗಳ ಪಕ್ಕದಲ್ಲಿರುವ ಎಟಿಎಂಗಳಿಗೆ ಭದ್ರತೆಯನ್ನು ಹೆಚ್ಚಿಸುವ ಅನಿವಾರ್ಯತೆಯನ್ನು ಈ ಘಟನೆ ಮತ್ತೊಮ್ಮೆ ಒತ್ತಿಹೇಳಿದೆ. ಪೊಲೀಸರು ಈಗ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ವಾಹನ ಮತ್ತು ಗುರುತನ್ನು ಪತ್ತೆ ಹಚ್ಚುವ ಪ್ರಯತ್ನದಲ್ಲಿದ್ದಾರೆ.

