ಕೊಚ್ಚಿಯಲ್ಲಿ  ಏಷ್ಯಾನೆಟ್ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಅರ್ಜುನ್ ಬಾಬು ಪೊಲೀಸರಿಗೆ ಶರಣಾಗಿದ್ದಾನೆ.

ತಿರುವನಂತಪುರ:ಕೊಚ್ಚಿಯಲ್ಲಿ ಏಷ್ಯಾನೆಟ್ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಅರ್ಜುನ್ ಬಾಬು ಪೊಲೀಸರಿಗೆ ಶರಣಾಗಿದ್ದಾನೆ. ಈತನ ನೇತೃತ್ವದಲ್ಲಿ ಎಸ್‌ಎಫ್‌ಐ ಕಾರ್ಯಕರ್ತರು ಜನವರಿ 3 ರಂದು ಸಂಜೆ ಕೊಚ್ಚಿಯಲ್ಲಿರುವ ಏಷ್ಯಾನೆಟ್ ಕಚೇರಿಗೆ ನುಗ್ಗಿದ ದಾಂಧಲೆ ನಡೆಸಿದ್ದರು. ಡ್ರಗ್ ಮಾಫಿಯಾಕ್ಕೆ ಸಂಬಂಧಿಸಿದಂತೆ ಸುಳ್ಳು ವರದಿ ಮಾಡಿದ್ದಾರೆ ಎಂದು ಆರೋಪಿಸಿ ಎಸ್‌ಎಫ್‌ಐ ಗೂಂಡಾಗಳು ನ್ಯೂಸ್ ಚಾನೆಲ್ ಕಚೇರಿಗೆ ನುಗ್ಗಿ, ಕಚೇರಿ ಸಿಬ್ಬಂದಿಯನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದರು. 

ಈ ಘಟನೆಗೆ ಪ್ರೆಸ್ ಕ್ಲಬ್ ಇಂಡಿಯಾ, ಎನ್‌ಡಿಬಿಐ ಖಂಡನೆ ವ್ಯಕ್ತಪಡಿಸಿದ್ದವು. ಹಲವು ಪತ್ರಕರ್ತರ ಸಂಘಟನೆಗಳು ಘಟನೆ ಖಂಡಿಸಿ ಕೇರಳದಲ್ಲಿ ಪ್ರತಿಭಟನೆ ನಡೆಸಿದ್ದವು. ಇದಲ್ಲದೇ ಕೇರಳ ವಿಧಾನಸಭೆಯಲ್ಲಿಯೂ ಈ ವಿಚಾರ ಪ್ರಸ್ತಾಪಿಸಿ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಭಾರಿ ಒತ್ತಡ ಕೇಳಿ ಬಂದ ಹಿನ್ನೆಲೆಯಲ್ಲಿ ಈಗ ಆರೋಪಿ ಅರ್ಜುನ್ ಬಾಬು ಪೊಲೀಸರಿಗೆ ಶರಣಾಗಿದ್ದಾನೆ. 

ಘಟನೆ ಹಿನ್ನೆಲೆ 

ಮಲೆಯಾಳಂ ಏಷ್ಯಾನೆಟ್ ನ್ಯೂಸ್ ಚಾನೆಲ್ ಡ್ರಗ್ ಮಾಫಿಯಾ ಬಗ್ಗೆ ನವೆಂಬರ್ 10, 2022 ರಂದು 'ನಾರ್ಕೋಟಿಕ್ಸ್ ಎ ಡರ್ಟಿ ಬಿಸಿನೆಸ್' (Narcotics is a dirty business) ಎಂಬ ಸರಣಿ ಕಾರ್ಯಕ್ರಮವನ್ನು ಪ್ರಸಾರ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ಸಂತ್ರಸ್ತೆ 14 ವರ್ಷದ ಬಾಲಕಿಯ ಹೇಳಿಕೆಯನ್ನು ಮರುಸೃಷ್ಟಿಸುವ ಸಲುವಾಗಿ ಬೇರೊಂದು ಬಾಲಕಿಯನ್ನು ಬಳಸಿಕೊಳ್ಳಲಾಗಿತ್ತು. (ಫೋಕ್ಸೋ ಕೇಸುಗಳಲ್ಲಿ ಸಂತ್ರಸ್ತೆಯರ ಹೆಸರು ಗುರುತು ತೋರಿಸುವ ಹಾಗಿಲ್ಲ ಎಂಬ ಕಾರಣ ಚಾನೆಲ್ ಈ ನಿರ್ಧಾರ ಮಾಡಿತ್ತು) ಇದನ್ನೇ ಎಸ್‌ಎಫ್‌ಐ ಕಾರ್ಯಕರ್ತರೂ ಇದೊಂದು ಫೇಕ್‌ನ್ಯೂಸ್ ಎಂದು ಆರೋಪಿಸಿ ಶುಕ್ರವಾರ ಸಂಜೆ ಕೊಚ್ಚಿ ಏಷ್ಯಾನೆಟ್ ನ್ಯೂಸ್ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ಬೆದರಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿದೆ. ಇದಾದ ಬಳಿಕ ಪಕ್ಷೇತರ ಶಾಸಕ ಪಿಸಿ ಅನ್ವರ್ ನೀಡಿದ ಸುಳ್ಳು ದೂರಿನ ಮೇರೆಗೆ ಭಾನುವಾರ ಬೆಳಗ್ಗೆ ಕೋಳಿಕ್ಕೋಡ್‌ನಲ್ಲಿರುವ ಏಷ್ಯಾನೆಟ್ ನ್ಯೂಸ್ ಕಚೇರಿಗೆ ಪೊಲೀಸರು ದಾಳಿ ನಡೆಸಿದ್ದರು.

ಏಷ್ಯಾನೆಟ್ ಚಾನೆಲ್ ಮೇಲೆ ಎಸ್‌ಎಫ್‌ಐ ಹಾಗೂ ಪೊಲೀಸ್ ದಾಳಿಗೆ NDBA ಖಂಡನೆ

ಕೋಳಿಕ್ಕೋಡ್‌ನಲ್ಲಿರುವ ಏಷ್ಯಾನೆಟ್ ನ್ಯೂಸ್ ಚಾನೆಲ್ ಮೇಲೆ ಪೊಲೀಸರು ದಾಳಿ ನಡೆಸಿ ಶೋಧ ನಡೆಸಿರುವುದರ ಹಿಂದೆ ತೀವ್ರ ರಾಜಕೀಯ ಒತ್ತಡವಿರುವುದು ತಿಳಿದು ಬಂದಿದೆ. ಈ ಶೋಧನೆಯ ಹಿಂದೆ ಉನ್ನತ ಮಟ್ಟದ ರಾಜಕೀಯ ಒತ್ತಡವಿತ್ತು. ಗೃಹ ಇಲಾಖೆಯ ಉನ್ನತಾಧಿಕಾರಿಗಳ ತೀವ್ರ ಒತ್ತಡದಿಂದಾಗಿ ಕೋಳಿಕ್ಕೋಡ್ ನಗರ ಪೊಲೀಸರು ಕಾನೂನು ಕ್ರಮಗಳ ಗಣನೆಗೆ ತೆಗೆದುಕೊಳ್ಳದೇ ಚಾನೆಲ್‌ನ ಪ್ರಾದೇಶಿಕ ಕಚೇರಿಯಲ್ಲಿ ತಪಾಸಣೆ ನಡೆಸಿದರು ಎಂದು ಏಷ್ಯಾನೆಟ್ ನ್ಯೂಸ್‌ಗೆ ತಿಳಿದು ಬಂದಿದೆ.

ಏಷ್ಯಾನೆಟ್ ಕಚೇರಿ ಮೇಲೆ ದಾಳಿ : ಕೇರಳ ಸದನದಲ್ಲಿ ಸರ್ಕಾರದ ವಿರುದ್ಧ ಕಿಡಿಕಾರಿದ ಪ್ರತಿಪಕ್ಷಗಳು

ಕೇರಳದ ಪ್ರತಿಪಕ್ಷ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (United Democratic Front Secretary) ಕಾರ್ಯದರ್ಶಿ ಜಾನಿ ನೆಲ್ಲೂರ್ (Johnny Nellore) ಅವರು ಕೋಝಿಕ್ಕೋಡ್‌ನ ಏಷ್ಯಾನೆಟ್ ನ್ಯೂಸ್ ಕಚೇರಿಯಲ್ಲಿ ಪೊಲೀಸ್ ತಪಾಸಣೆಯನ್ನು ಫ್ಯಾಸಿಸ್ಟ್ ಕೃತ್ಯ ಎಂದು ಬಣ್ಣಿಸಿದ್ದಾರೆ. ಏಷಿಯಾನೆಟ್ ನ್ಯೂಸ್ ಕೊಚ್ಚಿ ಕಚೇರಿ ಮೇಲೆ ಶುಕ್ರವಾರ ನಡೆದ ಎಸ್‌ಎಫ್‌ಐ ದಾಳಿಯನ್ನು ಬಿಜೆಪಿ ಮತ್ತು ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ಕೂಡ ಖಂಡಿಸಿದ್ದಾರೆ. ಮಾಧ್ಯಮ ಕಚೇರಿಗೆ ನುಗ್ಗಿ ಪತ್ರಕರ್ತರನ್ನು ಭಯಭೀತಗೊಳಿಸುವುದು ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವ ಮಾರ್ಗವಲ್ಲ ಎಂದು ಬಿಜೆಪಿ ಕೇರಳ ಉಸ್ತುವಾರಿ ಹಾಗೂ ಮಾಜಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ (Prakash Javadekar )ಹೇಳಿದ್ದಾರೆ. ಮಾಧ್ಯಮ ಸ್ವಾತಂತ್ರ್ಯದ ಮೇಲಿನ ಹಿಂಸಾಚಾರವನ್ನು ಸಹಿಸಲು ಸಾಧ್ಯವಿಲ್ಲ ಎಂದು ಜಾವಡೇಕರ್ ಹೇಳಿದ್ದಾರೆ.