ಕೇರಳದಲ್ಲಿ 2ನೇ ದಿನವೂ 30 ಸಾವಿರಕ್ಕಿಂತ ಅಧಿಕ ಕೇಸ್ : ಬೆಚ್ಚಿ ಬೀಳಿಸಿದ ಅಂಕಿ ಅಂಶ
- ಕೇರಳದಲ್ಲಿ ಸತತ 2ನೇ ದಿನವೂ 30 ಸಾವಿರಕ್ಕೂ ಅಧಿಕ ದೈನಂದಿನ ಕೊರೋನಾ ಕೇಸ್
- ಗುರುವಾರ ರಾಜ್ಯದಲ್ಲಿ 30,007 ಹೊಸ ಪ್ರಕರಣಗಳು ಪತ್ತೆ
ತಿರುವನಂತಪುರಂ (ಆ.27): ಕೇರಳದಲ್ಲಿ ಸತತ 2ನೇ ದಿನವೂ 30 ಸಾವಿರಕ್ಕೂ ಅಧಿಕ ದೈನಂದಿನ ಕೊರೋನಾ ಕೇಸ್ ಪತ್ತೆ ಆಗಿದೆ. ಗುರುವಾರ ರಾಜ್ಯದಲ್ಲಿ 30,007 ಹೊಸ ಪ್ರಕರಣಗಳು ಪತ್ತೆ ಆಗಿದ್ದು, 162 ಮಂದಿ ಮೃತಪಟ್ಟಿದ್ದಾರೆ. ಇದೇ ವೇಳೆ ಸಕ್ರಿಯ ಪ್ರಕರಣಗಳ ಸಂಖ್ಯೆ 1,81,209ಕ್ಕೆ ಏರಿಕೆ ಆಗಿದೆ. ಪಾಸಿಟಿವಿಟಿ ದರ ಶೇ.18.03ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಇದೇ ವೇಳೆ ಕೇರಳದಲ್ಲಿ ಸೋಂಕು ಹೆಚ್ಚಳಕ್ಕೆ ಕೇಂದ್ರ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ದೇಶದಲ್ಲಿ 1 ಲಕ್ಷಕ್ಕಿಂತಲೂ ಹೆಚ್ಚು ಸಕ್ರಿಯ ಪ್ರಕರಣಗಳು ಕೇರಳದಲ್ಲಿ ಮಾತ್ರವೇ ದಾಖಲುತ್ತಿದ್ದು, 4 ರಾಜ್ಯಗಳಲ್ಲಿ 10 ಸಾವಿರದಿಂದ 1 ಲಕ್ಷದ ಒಳಗೆ ಸಕ್ರಿಯ ಪ್ರಕರಣಗಳಿವೆ. 31 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಕ್ರಿಯ ಪ್ರಕರಣಗಳು 10 ಸಾವಿರಕ್ಕಿಂತಲೂ ಕಡಿಮೆ ಇದೆ.
ಕೇರಳದಲ್ಲಿ ಕೋವಿಡ್ ಬ್ಲಾಸ್ಟ್: ಒಂದೇ ದಿನ 31,445 ಜನರಲ್ಲಿ ಸೋಂಕು ಪತ್ತೆ!
ಕಳೆದವಾರ ದಾಖಲಾದ ಒಟ್ಟು ಪ್ರಕರಣಗಳಲ್ಲಿ ಶೇ.58.4ರಷ್ಟುಪ್ರಕರಣಗಳು ಕೇರಳವೊಂದರಲ್ಲಿಯೇ ದಾಖಲಾಗಿದೆ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಬಲ್ಲಾ ಅಧಿಕಾರಿಗಳ ಜೊತೆ ಪರಿಶೀಲನಾ ಸಭೆ ನಡೆಸಿದ್ದಾರೆ.