ಕೇರಳದಲ್ಲಿ ಕೋವಿಡ್‌ ಬ್ಲಾಸ್ಟ್‌: ಒಂದೇ ದಿನ 31,445 ಜನರಲ್ಲಿ ಸೋಂಕು ಪತ್ತೆ!

* ನಿನ್ನೆ ದೇಶದ ಸೋಂಕಿನಲ್ಲಿ ಕೇರಳ ಪಾಲು 65%, ಸಾವು 27%

* ಕೇರಳದಲ್ಲಿ ಕೋವಿಡ್‌ ಬ್ಲಾಸ್ಟ್‌

* ಒಂದೇ ದಿನ 31,445 ಜನರಲ್ಲಿ ಕೊರೋನಾ ಸೋಂಕು ಪತ್ತೆ

* ಕೋವಿಡ್‌ ನಿಯಂತ್ರಣಕ್ಕೆ ‘ಕೇರಳ ಮಾದರಿ’ ಪ್ರಚಾರ ಹುಸಿ

Kerala records 31445 fresh Covid infections highest since May 20 pod

ತಿರು​ವ​ನಂತ​ಪು​ರ/ ನವದೆಹಲಿ(ಆ.26): ದೇಶ​ದಲ್ಲಿ ಕೋವಿಡ್‌ ಮೂರನೇ ಅಲೆಗೆ ಮುನ್ನುಡಿ ಬರೆ​ಯು​ತ್ತಿದೆ ಎಂದು ಭಾವಿ​ಸ​ಲಾ​ಗಿ​ರುವ ಕೇರ​ಳ​ದಲ್ಲಿ ಕೋವಿಡ್‌ ಸೋಂಕು ತೀವ್ರ ಪ್ರಮಾಣದಲ್ಲಿ ಉಲ್ಬ​ಣಿಸು​ತ್ತಿ​ದೆ. ಬುಧವಾರ ಒಂದೇ ದಿನ 31,445 ಕೋವಿಡ್‌ ಪ್ರಕ​ರ​ಣ​ಗಳು ದಾಖ​ಲಾ​ಗಿದ್ದು, ಇದು ಕಳೆದ ಮೂರು ತಿಂಗ​ಳಿನ ಗರಿಷ್ಠ ಪ್ರಕ​ರ​ಣ​ಗಳ ಸಂಖ್ಯೆ​ಯಾ​ಗಿ​ದೆ. ದೇಶದ ದೈನಂದಿನ ಒಟ್ಟು ಸೋಂಕಿ​ನ ಪ್ರಕ​ರ​ಣ​ಗ​ಳಲ್ಲಿ ಕೇರ​ಳದ ಪಾಲು ಶೇ.65ರಷ್ಟುಇದೆ.

ಮೊದ​ಲನೇ ಅಲೆ ಹಾಗೂ ಎರ​ಡನೇ ಅಲೆಯನ್ನು ಕೇರ​ಳ​ದಲ್ಲಿ ಸಮ​ರ್ಥ​ವಾ​ಗಿ ನಿಯಂತ್ರಿ​ಸ​ಲಾ​ಗಿ​ತ್ತು ಎಂಬ ಕಾರ​ಣಕ್ಕೆ ‘ಕೇರಳ ಮಾದರಿ ಕೋವಿಡ್‌ ನಿಯಂತ್ರಣ’ ಎಂಬುದು ಜನ​ಜ​ನಿ​ತ​ವಾ​ಗಿತ್ತು. ಆದರೆ ಈಗ ಕೇರಳ ಮಾದರಿ ಯಾವುದೇ ಕೆಲಸ ಮಾಡು​ತ್ತಿಲ್ಲ ಎಂಬುದನ್ನು ಅಂಕಿ ಅಂಶ​ಗಳೇ ಸಾಬೀ​ತು​ಪ​ಡಿ​ಸ​ತೊ​ಡ​ಗಿ​ವೆ.

ಬುಧವಾರ ಮತ್ತೆ ರಾಜ್ಯ​ದಲ್ಲಿ 31,445 ಮಂದಿಗೆ ಕೊರೋನಾ ವೈರಸ್‌ ಹಬ್ಬಿದೆ. ಇದು ಮೇ 20ರ ನಂತ​ರದ ಗರಿಷ್ಠ ಸಂಖ್ಯೆ. ಪಾಸಿ​ಟಿ​ವಿಟಿ ದರವೂ ಶೇ.19 ದಾಟಿ​ದೆ. ವೈರಸ್‌ಗೆ 215 ಮಂದಿ ಬಲಿಯಾಗಿದ್ದಾರೆ. ಇದೇ ವರ್ಷದ ಮೇ 20ರಂದು ಕೇರಳದಲ್ಲಿ 30,491 ಮಂದಿಗೆ ಸೋಂಕು ಹರಡಿತ್ತು.

ದೇಶದ ಶೇ.65ರಷ್ಟು ಕೇಸು ಕೇರ​ಳ​ದ​ಲ್ಲಿ:

ಕೇರ​ಳ​ದಲ್ಲಿ ಮಂಗ​ಳ​ವಾರ ಕೂಡ 24296 ಕೋವಿಡ್‌ ಪ್ರಕ​ರ​ಣ​ಗಳು ದಾಖ​ಲಾ​ಗಿ​ದ್ದವು ಹಾಗೂ 173 ಜನರು ಸಾವ​ನ್ನ​ಪ್ಪಿ​ದ್ದ​ರು. ಮಂಗ​ಳ​ವಾ​ರದ ಅಂಕಿ ಅಂಶ ಒಳ​ಗೊಂಡ ಭಾರ​ತದ ಒಟ್ಟು ಕೋವಿಡ್‌ ಪ್ರಕ​ರ​ಣ​ಗಳ ವರ​ದಿ​ಯನ್ನು ಕೇಂದ್ರ ಸರ್ಕಾರ ಬುಧ​ವಾರ ಬೆಳಗ್ಗೆ ಪ್ರಕ​ಟಿ​ಸಿದ್ದು, ದೇಶ​ದಲ್ಲಿ 37593 ಹೊಸ ಕೋವಿಡ್‌ ಸೋಂಕಿತರು ಪತ್ತೆಯಾಗಿದ್ದಾರೆ. 648 ಸಾವು ಸಂಭ​ವಿ​ಸಿ​ವೆ. ಅಂದರೆ ದೇಶದ ಒಟ್ಟು ಸೋಂಕಿತರಲ್ಲಿ ಕೇರಳ ರಾಜ್ಯದ ಪಾಲು ಶೇ.65ರಷ್ಟಿದ್ದರೆ, ಸಾವಿನಲ್ಲಿ ರಾಜ್ಯದ ಪಾಲು ಶೇ.27ರಷ್ಟಿದೆ.

ದೇಶದಲ್ಲೇ ಅತಿ ಹೆಚ್ಚಿನ ಸೋಂಕು ದಾಖಲಾಗುತ್ತಿದ್ದ ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಕಳೆದ 2 ತಿಂಗಳಿನಿಂದ ಹಂತಹಂತವಾಗಿ ಸೋಂಕು ಮತ್ತು ಸಾವಿನ ಪ್ರಮಾಣ ಇಳಿಯುತ್ತಲೇ ಇದ್ದರೆ, ಕೇರಳದಲ್ಲಿ ಮಾತ್ರ ಅದು ಒಂದು ತಿಂಗಳಿಗೂ ಹೆಚ್ಚಿನ ಅವಧಿಯಿಂದ ನಿತ್ಯವೂ 20000ಕ್ಕಿಂತ ಹೆಚ್ಚಿನ ಕೇಸುಗಳು ದಾಖಲಾಗುತ್ತಲೇ ಇದೆ.

ಇತ್ತೀಚೆಗಷ್ಟೇ ಕೇಂದ್ರ ಆರೋಗ್ಯ ಖಾತೆ ಸಚಿವ ಮನ್‌ಸುಖ್‌ ಮಾಂಡವೀಯ ಅವರೇ ಕೇರಳಕ್ಕೆ ಭೇಟಿ ನೀಡಿ ಕೋವಿಡ್‌ ಸ್ಥಿತಿಗತಿ ಪರಿಶೀಲಿಸಿದ್ದರು, ಜೊತೆಗೆ ತಜ್ಞರ ತಂಡವೊಂದನ್ನು ಕೂಡ ರಾಜ್ಯಕ್ಕೆ ಕಳುಹಿಸಲಾಗಿತ್ತು. ಆದರೂ ರಾಜ್ಯದಲ್ಲಿ ಸೋಂಕು ಇಳಿಕೆಯಾಗದೇ ಏರುಗತಿಯಲ್ಲೇ ಇರುವುದು ಆತಂಕ ಮೂಡಿಸಿದೆ.

ಕಾರಣ ಏನು?

ಓಣಂ ಹಬ್ಬದ ಆಚರಣೆ ಬಳಿಕ ಕೇರಳದಲ್ಲಿ ಕೋವಿಡ್‌ ಮತ್ತಷ್ಟುವ್ಯಾಪಕವಾಗಿ ಹಬ್ಬಿದೆ. ಈ ಬಗ್ಗೆ ಹಿಂದೆಯೇ ತಜ್ಞರು ಎಚ್ಚರಿಸಿದ್ದರು. ಆದರೂ ಅದನ್ನು ಕಡೆಗಣಿಸಲಾಗಿತ್ತು. ಜೊತೆಗೆ, ಬಕ್ರೀದ್‌ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೇರಲಾಗಿದ್ದ ಕೋವಿಡ್‌ ನಿರ್ಬಂಧಗಳನ್ನು ಸರ್ಕಾರ ಸಡಿಲಿಸಿತ್ತು. ಬಳಿಕ ರಾಜ್ಯದಲ್ಲಿ ಪ್ರತಿನಿತ್ಯ 20 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ.

Latest Videos
Follow Us:
Download App:
  • android
  • ios