ಇದು ಒಂದೇ ನೆಲದಲ್ಲಿ ಹುಟ್ಟಿ ಬೆಳೆದ ಒಂದೇ ರೀತಿಯ ಅನ್ನ ನೀರು ಕುಡಿದ ಒಂದೇ ಹೆಸರಿನ ಇಬ್ಬರು ಕಾಶ್ಮೀರಿ ಮುಸ್ಲಿಂ ಯುವಕರ ಕತೆ. ಹುಟ್ಟಿದ ನೆಲ, ತಿನ್ನುವ ಅನ್ನ ಕರೆಯಲ್ಪಡುವ ಹೆಸರು ಎಲ್ಲವೂ ಒಂದೇ ಆಗಿದ್ದರೂ ಇಬ್ಬರ ಗುಣನಡತೆಯಲ್ಲಿ ಅಜಗಜಾಂತರ ವ್ಯತ್ಯಾಸ

ಶ್ರೀನಗರ: ಇದು ಒಂದೇ ನೆಲದಲ್ಲಿ ಹುಟ್ಟಿ ಬೆಳೆದ ಒಂದೇ ರೀತಿಯ ಅನ್ನ ನೀರು ಕುಡಿದ ಒಂದೇ ಹೆಸರಿನ ಇಬ್ಬರು ಕಾಶ್ಮೀರಿ ಮುಸ್ಲಿಂ ಯುವಕರ ಕತೆ. ಹುಟ್ಟಿದ ನೆಲ, ತಿನ್ನುವ ಅನ್ನ ಕರೆಯಲ್ಪಡುವ ಹೆಸರು ಎಲ್ಲವೂ ಒಂದೇ ಆಗಿದ್ದರೂ ಇಬ್ಬರ ಗುಣನಡತೆಯಲ್ಲಿ ಅಜಗಜಾಂತರ ವ್ಯತ್ಯಾಸ. ಒಬ್ಬ ಭಯೋತ್ಪಾದಕ ಗುಂಪು ಸೇರಿ ಜನರತ್ತ ಗುಂಡಿಕ್ಕಿ ಮರಣಹೋಮ ಮಾಡಿದ್ದರೆ, ಇನ್ನೊಬ್ಬ ಅದೇ ನೆಲದಲ್ಲಿ ಪ್ರವಾಸಿಗರ ರಕ್ಷಿಸಲು ಹೋಗಿ ಪ್ರಾಣ ಬಿಟ್ಟವ. 

ಹೌದು ಮಂಗಳವಾರ ಏಪ್ರಿಲ್ 22ರಂದು ಪಹಲ್ಗಾಮ್‌ ಸುಂದರ ಪ್ರವಾಸಿ ತಾಣ ಬೈಸರನ್ ಹುಲ್ಲುಗಾವಲಿನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಕೇಳಿ ಬಂದ ಆದಿಲ್ ಎಂಬ ಹೆಸರಿನ ಇಬ್ಬರ ಕತೆ ಇದೆ. ಅದರಲೊಬ್ಬ ಭಯೋತ್ಪಾದಕ ಅದಿಲ್ ಹುಸೈನ್ ಥೋಕರೆ ಆಗಿದ್ದರೆ ಮತ್ತೊಬ್ಬ ಕುದುರೆ ಸವಾರಿ ಮಾಡುತ್ತಾ ಪ್ರವಾಸಿಗರ ಕರೆದೊಯ್ಯುವ ಸೈಯದ್ ಅದಿಲ್ ಹುಸೈನ್ ಶಾ. ಮಂಗಳವಾರ ಮಧ್ಯಾಹ್ನದ ನಂತರ ಪೆಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಇಬ್ಬರು ವಿದೇಶಿಗರು ಸೇರಿದಂತೆ 26 ಪ್ರವಾಸಿಗರ ಬಲಿ ಪಡೆದಿತ್ತು. ಇತ್ತೀಚಿನ ವರ್ಷಗಳಲ್ಲಿ ಕಾಶ್ಮೀರದಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿಗಳಲ್ಲಿ ಇದು ಒಂದಾಗಿದೆ. 

ಭಯೋತ್ಪಾದಕರ ಗುಂಡಿನ ದಾಳಿಗೆ ಬಲಿಯಾದವರಲ್ಲಿ ಕಾಶ್ಮೀರದ 28 ವರ್ಷದ ಸೈಯದ್ ಆದಿಲ್ ಹುಸೇನ್ ಷಾ ಕೂಡ ಒಬ್ಬರು, ಪೋನಿ ಗೈಡ್ (ಕುದುರೆ ಸವಾರ) ಆಗಿ ಕೆಲಸ ಮಾಡುತ್ತಿದ್ದ ಅವರು ಪಹಲ್ಗಾಮ್ ಪರ್ವತ ಪ್ರದೇಶದತ್ತ ಕುದುರೆಯ ಮೂಲಕ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದರು. ಗುಂಡಿನ ಚಕಮಕಿ ಪ್ರಾರಂಭವಾದಾಗ, ಅವರ ಕುಟುಂಬದ ಏಕೈಕ ಜೀವನಾಧಾರವಾಗಿದ್ದ ಆದಿಲ್ ಅಲ್ಲಿಂದ ಪಲಾಯನ ಮಾಡಲಿಲ್ಲ. ಬದಲಾಗಿ, ಪ್ರವಾಸಿಗರು ಅಡಗಿಕೊಳ್ಳಲು ಸಹಾಯ ಮಾಡಲು ಪ್ರಯತ್ನಿಸಿದರು ಮತ್ತು ಉಗ್ರರಿಂದ ಬಂದೂಕನ್ನು ಕಸಿದುಕೊಳ್ಳಲು ಸಹ ಪ್ರಯತ್ನಿಸಿದರು. ಆದರೆ ಉಗ್ರರು ಪ್ರವಾಸಿಗರ ರಕ್ಷಿಸಲು ಬಂದ ಆತನನ್ನೇ ಉಗ್ರರು ಆತನ ಎದೆ ಮತ್ತು ಗಂಟಲಿಗೆ ಹಲವು ಬಾರಿ ಗುಂಡಿಕ್ಕಿ ಕೊಂದು ಹಾಕಿದ್ದರು. ತಮ್ಮ ಕುಟುಂಬದ ಏಕೈಕ ದುಡಿಮೆಗಾರನಾಗಿದ್ದ ಅದಿಲ್‌ನ ಸಾವು ಅವರ ಕುಟುಂಬವನ್ನು ಕಂಗೆಡಿಸಿದೆ. ನನ್ನ ಮಗನೂ ಹುತಾತ್ಮನೇ ಆತ ಬೇರೆಯವರ ರಕ್ಷಿಸಲು ಹೋಗಿ ಪ್ರಾಣ ಬಿಟ್ಟ ಎಂದು ಅದಿಲ್‌ನ ತಂದೇ ಹೈದರ್ ಶ ಮಗನ ಸಾವಿನ ದುಃಖದ ನಡುವೆಯೇ ಹೇಳಿಕೊಂಡು ಭಾವುಕರಾಗಿದ್ದಾರೆ. 

ಇದನ್ನೂ ಓದಿ:

ನಮಗೆ ಸಂಜೆ 6 ಗಂಟೆಗೆ ನನ್ನ ಮಗ ಹಾಗೂ ಸಂಬಂಧಿ ಆಸ್ಪತ್ರೆಯಲ್ಲಿದ್ದಾರೆ ಎಂಬ ವಿಚಾರ ತಿಳಿಯಿತು. ಆತನನ್ನು ನೋಡಲು ಹೋದ ಜನ ನಮಗೆ ಮಾಹಿತಿ ನೀಡಿದ್ದರು. ಇತ್ತ ಮಗನ ಕಳೆದುಕೊಂಡ ಆದಿಲ್‌ನ ತಾಯಿ ಸಮಾಧಾನಗೊಳ್ಳುವ ಸ್ಥಿತಿಯಲ್ಲೇ ಇಲ್ಲ. ಅವನು ಬೆಳಗ್ಗೆ ಕೆಲಸಕ್ಕೆ ಹೋದವನು ಹಿಂತಿರುಗಲಿಲ್ಲ. ಅವನು ಇತರರನ್ನು ಉಳಿಸಲು ಪ್ರಯತ್ನಿಸಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ. ಆತ ನನಗಾಗಿ, ಈ ಮನೆಗಾಗಿ ಸಂಪಾದಿಸುತ್ತಿದ್ದ. ನನ್ನ ಗಂಡ ಅನಾರೋಗ್ಯದಿಂದ ಬಳಲುತ್ತಿದ್ದಾನೆ, ನಮಗೆ ವಯಸ್ಸಾಗಿದೆ. ದಿನಕ್ಕೆ 300 ರೂ ಸಂಪಾದಿಸ್ತಿದ್ದ ಅದಿಲ್ಲ ನಮ್ಮ ಕುಟುಂಬವನ್ನು ನಡೆಸುತ್ತಿದ್ದ ನಮಗೆ ಔಷಧಿ ತಂದು ನೀಡುತ್ತಿದ್ದ, ಆತನ ದುಡಿಮೆಯಲ್ಲಿ ನಾವು ಊಟ ಮಾಡುತ್ತಿದ್ದೆವು.ಅವನು ನನ್ನ ಹಿರಿಯ ಮಗ ನಮಗ್ಯಾರು ಗತಿ ಎಂದು ಅದಿಲ್ ತಾಯಿ ಕಣ್ಣೀರು ಹಾಕಿದ್ದಾರೆ. 

ಅದಿಲ್‌ಗೆ ಆರೋಗ್ಯ ಸರಿ ಇರಲಿಲ್ಲ, ಅರ್ಧ ದಿನ ರಜೆ ತೆಗೆದುಕೊಂಡು ಮನೆಗೆ ಬೇಗ ಬರಬೇಕೆಂದು ಆತ ನಿರ್ಧರಿಸಿದ್ದ ಅದರೆ ಆತ ಮತ್ತೆಂದು ಬರಲಿಲ್ಲ. ನಮಗೆ ಆತ ಬಂದೂಕು ಕಸಿಯಲು ಯತ್ನಿಸಿದಾಗ ಅವರು ಗುಂಡಿಕ್ಕಿದರು ಎಂದು ತಿಳಿಯಿತು. ಆತನ ಎದೆಯಲ್ಲಿ ಮೂರು ಬುಲೆಟ್ ಹಾಗೂ ಕತ್ತಿನಲ್ಲಿ ಒಂದು ಬುಲೆಟ್ ಇತ್ತು ಎಂದು ಸೋದರಿ ರವೀಶಾ ಹೇಳಿದ್ದಾರೆ. ಇದು ಪ್ರವಾಸಿಗನ ರಕ್ಷಿಸಿದ ಅದಿಲ್ ಕತೆ.

ಆದರೆ ಇನ್ನೊಬ್ಬ ಅದಿಲ್ (ಅದಿಲ್ ಹುಸೈನ್ ಥೋಕರೆ) ಪಹಲ್ಗಾಮ್‌ ದಾಳಿಯ ಮೂವರು ಪ್ರಮುಖ ಆರೋಪಿಗಳಲ್ಲಿ ಒಬ್ಬರೆಂದು ಪೊಲೀಸರು ಗುರುತಿಸಿದ ಅದಿಲ್ ಹುಸೈನ್ ಥೊಕರೆ. ಈ ಹತ್ಯಾಕಾಂಡದ ಪ್ಲಾನ್ ಮಾಡಿದ್ದ ಇನ್ನಿಬ್ಬರು ಪಾಕಿಸ್ತಾನಿ ಉಗ್ರರ ಜೊತೆ ಈತ ಕೈಜೋಡಿಸಿದ್ದ. ಈ ದಾಳಿಯನ್ನು ಯೋಜಿಸುವ ಮತ್ತು ಕಾರ್ಯಗತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಾಶಿಮ್ ಮೂಸಾ ಅಲಿಯಾಸ್ ಸುಲೇಮಾನ್ ಮತ್ತು ಅಲಿ ಭಾಯ್ ಅಲಿಯಾಸ್ ತಲ್ಹಾ ಭಾಯ್ ಎಂಬ ಇಬ್ಬರು ಪಾಕಿಸ್ತಾನಿ ಪ್ರಜೆಗಳ ಜೊತೆಗೆ, ಈ ಆದಿಲ್ ಥೋಕರ್ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಭದ್ರತಾ ಪಡೆಗಳು ಮಾಹಿತಿ ನೀಡಿವೆ. 

ಇದನ್ನೂ ಓದಿ :ಪಹಲ್ಗಾಮ್‌ ದಾಳಿಯ ನಂತರ ಕಾಶ್ಮೀರಿ ಮುಸ್ಲಿಂ ಯುವಕನೋರ್ವನ ವೀಡಿಯೋ ಸಖತ್ ವೈರಲ್: ಆತ ಹೇಳಿದ್ದೇನು

ವರದಿಗಳ ಪ್ರಕಾರ, ಉಗ್ರ ಆದಿಲ್ ಥೋಕರ್ ಮೂಲತಃ ಶ್ರೀನಗರದಿಂದ ದಕ್ಷಿಣಕ್ಕೆ 50 ಕಿ.ಮೀ ದೂರದಲ್ಲಿರುವ ಬಿಜ್‌ಬೆಹರಾದ ಗುರ್ರೆ ಗ್ರಾಮದವನು. 2018 ಇಲ್ಲಿಂದ ಪಾಕಿಸ್ತಾನಕ್ಕೆ ದಾಟಿದ ಆತ ಆದರೆ ಕಳೆದ ವರ್ಷ ಕಣಿವೆ ರಾಜ್ಯಕ್ಕೆ ಮರಳಿದ್ದ. ಪಾಕಿಸ್ತಾನದ ಲಷ್ಕರ್ ಈ ತೊಯ್ಬಾ ಉಗ್ರ ಸಂಘಟನೆಯ ವಿದೇಶಿ ಹೋರಾಟಗಾರರಿಗೆ ಸ್ಥಳೀಯ ಮಾರ್ಗದರ್ಶಿಯಾಗಿ ಈತ ಕೆಲಸ ಮಾಡುತ್ತಿದ್ದ. 

ಜಮ್ಮು ಮತ್ತು ಕಾಶ್ಮೀರ ಪೊಲೀಸರು ಈ ಮೂವರು ಶಂಕಿತರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಅವರನ್ನು ಬಂಧಿಸಲು ವಿಶ್ವಾಸಾರ್ಹ ಮಾಹಿತಿ ನೀಡಿದವರಿಗೆ 20 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ. ಅವರನ್ನು ಪತ್ತೆಹಚ್ಚಲು ಭದ್ರತಾ ಪಡೆಗಳು ಅನಂತ್‌ನಾಗ್ ಮತ್ತು ಪಹಲ್ಗಾಮ್‌ನಾದ್ಯಂತ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿವೆ. ಇಂದು ಮುಂಜಾನೆ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮತ್ತೊಬ್ಬ ಆರೋಪಿ ಆಸಿಫ್ ಶೇಖ್ ಮನೆಯೊಂದಿಗೆ ಅದಿಲ್ ಮನೆಯನ್ನು ಕೂಡ ಸ್ಪೋಟಕ ಬಳಸಿ ಧ್ವಂಸ ಮಾಡಲಾಗಿದೆ.