ಮಧ್ಯಪ್ರದೇಶದಲ್ಲಿ ಪುಟ್ಟ ಬಾಲಕನೊಬ್ಬ ಟ್ರಕ್ ಓಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ತಂದೆಯೇ ಮಗನಿಗೆ ಟ್ರಕ್ ಓಡಿಸಲು ಕೊಟ್ಟಿದ್ದು, ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಕೇಸ್ ದಾಖಲಿಸಿದ್ದಾರೆ.

ಅಪ್ರಾಪ್ತ ಮಕ್ಕಳು ಗಾಡಿ ಓಡಿಸಿದ ಪರಿಣಾಮ ಅನೇಕರು ಜೀವ ಕಳೆದುಕೊಂಡು ಹಲವು ಉದಾಹರಣೆಗಳು ನಮ್ಮ ಮುಂದಿವೆ. ಮುಂಬೈನಲ್ಲಿ ಅಪ್ರಾಪ್ತನೋರ್ವ ಪೋರ್ಶೆ ಕಾರು ಓಡಿಸಿ ಮೂವರ ಬಲಿ ಪಡೆದ ಘಟನೆ ಇನ್ನೂ ಮಾಸಿಲ್ಲ. ಆದರೂ ಕೆಲವು ಪೋಷಕರು ಅಪ್ರಾಪ್ತ ಮಕ್ಕಳಿಗೆ ಗಾಡಿ ಓಡಿಸಲು ನೀಡಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಕಾರು ಬೈಕ್‌ಗಳನ್ನು ಓಡಿಸಿ ಅಪ್ರಾಪ್ತರು ಆಗಾಗ ಪೊಲೀಸರ ಕೈಗೆ ತಗಲಾಕೊಳ್ಳುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ಕಡೆ ಸೈಕಲ್‌ನಷ್ಟು ಉದ್ದ ಇಲ್ಲದ ಪುಟ್ಟ ಬಾಲಕ ಟ್ರಕ್ ಓಡಿಸುತ್ತಿದ್ದಾನೆ. ಬಾಲಕ 8 ಚಕ್ರಗಳ ಭಾರಿ ಗಾತ್ರದ ತನಗಿಂತ ಸಾವಿರ ಪಟ್ಟು ಹೆಚ್ಚು ತೂಕದ ಗಾಡಿಯೊಂದನ್ನು ಓಡಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದ್ದು, ವೀಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ಈ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ. ತಂದೆಯೊಬ್ಬ ತನ್ನ ಅಪ್ರಾಪ್ತ ಮಗನ ಕೈಗೆ ಟ್ರಕ್‌ನ ನಿಯಂತ್ರಣವನ್ನು ನೀಡಿದ್ದಾನೆ. ಇದಾದ ಬಳಿಕ ಬಾಲಕ ಹೈವೇಯಲ್ಲಿ ವೇಗವಾಗಿ ಟ್ರಕ್ಕನ್ನು ಓಡಿಸಿದ್ದಾನೆ. ಬಳಿಕ ಮಗ ಗಾಡಿ ಓಡಿಸುತ್ತಿರುವುದನ್ನು ತಂದೆ ವೀಡಿಯೋ ಮಾಡಿದ್ದಾನೆ. ವೀಡಿಯೋದಲ್ಲಿ ಪುಟ್ಟ ಬಾಲಕ ಕ್ಯಾಮರಾದತ್ತ ಟಾಟಾ ಮಾಡ್ತಾ ಗಾಡಿ ಓಡಿಸುವುದನ್ನು ನೀವು ನೋಡಬಹುದಾಗಿದೆ. ವಾಹನ ದಟ್ಟಣೆಯಿಂದ ಕೂಡಿದ ಹೆದ್ದಾರಿಯಲ್ಲಿ ಮಗನ ಕೈಗೆ ಆಟದ ಸಾಮಾನಿನಂತೆ ಭಾರಿ ಗಾತ್ರದ ಟ್ರಕ್‌ನ ಸ್ಟೇರಿಂಗ್ ನೀಡಿರುವುದನ್ನು ನೋಡಿ ಜನ ಆಘಾತಗೊಂಡಿದ್ದಾರೆ.

ವೀಡಿಯೋ ವೈರಲ್ ಆಗುತ್ತಿದ್ದಂತೆ ಬಾಲಕನ ಕೈಗೆ ಗಾಡಿ ಕೊಟ್ಟ ತಂದೆಯ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಇದು ಜಮ್ಮು ಕಾಶ್ಮೀರದ ಮೂಲದ ಟ್ರಕ್ ಆಗಿದ್ದು, ಬಾಲಕನ ತಂದೆಯ ವಿರುದ್ಧ ಕೇಸು ದಾಖಲಾಗಿದೆ ಎಂದು ವರದಿಯಾಗಿದೆ. ಅನೇಕರು ಬಾಕನ ತಂದೆಯ ಡ್ರೈವಿಂಗ್ ಲೈಸೆನ್ಸ್ ಕ್ಯಾನ್ಸಲ್ ಮಾಡುವಂತೆ ಆಗ್ರಹಿಸಿದ್ದಾರೆ. ಕೆಲವರು ಗಾಡಿ ನಂಬರ್ ನೋಡಿ ಆತ ಕಾಶ್ಮೀರಿ ಮೂಲದ ಚಾಲಕ ಆಗಿದ್ದು, ಚಾಲಕನ ಹೆಸರು ಇಮ್ರಾನ್ ಖಾನ್ ಎಂಬುದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

Scroll to load tweet…

ಕೆಲವು ಅನುಭವಿ ಕಾರು ಚಾಲಕರಿಗೆ ಲೋಡೆಡ್ ಟ್ರಕ್‌ನ್ನು ಹ್ಯಾಂಡಲ್ ಮಾಡುವುದಕ್ಕೆ ಆಗುವುದಿಲ್ಲ, ಹೀಗಿರುವಾಗ ಇಲ್ಲಿ ಪುಟ್ಟ ಬಾಲಕನಿಗೆ ತಂದೆಯೇ ಟ್ರಕ್‌ ಚಾಲನೆಗೆ ಅದು ಹೆದ್ದಾರಿಯಲ್ಲಿ ಕೊಟ್ಟಿದ್ದು ಎಷ್ಟು ಸರಿ ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ. ಈತ ಭಾರತದ ಅತ್ಯಂತ ಕಿರಿಯ ಟ್ರಕ್ ಚಾಲಕ ಎನಿಸಬಹುದು ಆದರೆ ಆತನ ಪಕ್ಕದಲ್ಲಿರುವ ಲೈಸೆನ್ಸ್ ಹೊಂದಿರುವ ವ್ಯಕ್ತಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒಬ್ಬರು ಆಗ್ರಹಿಸಿದ್ದಾರೆ. ಈತನಿಗೆ ಕೆಳಗಿರುವ ಲೀವರ್ ಮೇಲೆ ಕಾಲಿಡುವುದಕ್ಕೆ ಹೇಗೆ ಸಾಧ್ಯವಾಯ್ತು ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಅನೇಕರು ಕೂಡಲೇ ಬಾಲಕನ ತಂದೆಯ ಬಂಧನಕ್ಕೆ ಆಗ್ರಹಿಸಿದ್ದಾರೆ.

ಈ ರೀತಿ ಮಕ್ಕಳ ಕೈಗೆ ಭಾರಿ ಗಾತ್ರದ ಗಾಡಿಯನ್ನು ಕೊಟ್ಟರೆ ರಸ್ತೆಯಲ್ಲಿ ಸಾಗುವ ಉಳಿದವರ ಗತಿ ಏನು ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಹಾಗೆಯೇ ಕೆಲವರು ಅಮೆರಿಕಾದಲ್ಲಿ 10 ವರ್ಷದ ಬಾಲಕ ಕಾರು ಚಾಲನೆ ಮಾಡುತ್ತಾನೆ, 15 ವರ್ಷದ ಬಾಲಕ ಡಾಕ್ಟರ್ ಆಗುತ್ತಾನೆ ಹಾಗಿದ್ರೆ ನಾವು ಮಾಡಿದ್ರೆ ಏನು ತಪ್ಪು ಎಂದು ಕೆಲವರು ಈ ಘಟನೆಯನ್ನು ಸಮರ್ಥಿಸಿಕೊಳ್ಳುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಒಬ್ಬರು ಹಾಗಿದ್ರೆ ನನ್ನ ಬೈಪಾಸ್ ಸರ್ಜರಿಯನ್ನು ಡಾಕ್ಟರ್‌ನ ಮಗು ಮಾಡಬೇಕು ಎಂದು ಬಯಸುತ್ತೇನೆ ಎಂದು ಒಬ್ಬರು ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ.

View post on Instagram

ಈ ಸಂದರ್ಭದಲ್ಲಿ 2007ರ ಘಟನೆಯೊಂದನ್ನು ನೆನಪಿಸಿಕೊಳ್ಳಬಹುದಾಗಿದೆ. ಭಾರತೀಯ ಮೂಲದ ವೈದ್ಯ ಡಾ. ಕೆ ಮುರುಗೇಶನ್ ಎಂಬುವವರು ಗಿನ್ನೆಸ್ ಪುಟದಲ್ಲಿ ಮಗನ ಹೆಸರು ಸೇರಿಸುವ ಉದ್ದೇಶದಿಂದ ತಮ್ಮ 15 ವರ್ಷದ ಮಗನ ದಿಲೀಪ್ ರಾಜ್ ಕೈನಲ್ಲಿ ಸೀ ಸೆಕ್ಷನ್ ಮಾಡಿಸಿದ್ದರು. ಇದು ಭಾರಿ ಟೀಕೆಗೆ ಗುರಿಯಾಗಿತ್ತು. ಅವರು ಮಗನ ಈ ಕೆಲಸವನ್ನು ಗಿನ್ನೆಸ್‌ಗಾಗಿ ರೆಕಾರ್ಡ್ ಕೂಡ ಮಾಡಿಕೊಂಡಿದ್ದರು. ಈ ಬಗ್ಗೆ ಪ್ರಕರಣವೂ ದಾಖಲಾಗಿತ್ತು.