ಬುಧವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ ಮತ್ತೊಬ್ಬ ಐಎಎಫ್ ಪೈಲಟ್ ಫ್ಲೈಟ್ ಲೆಫ್ಟಿನೆಂಟ್ ರಿಷಿರಾಜ್ ಸಿಂಗ್ (23) ಆಗಿದ್ದಾರೆ.
ಚಂಡೀಗಢ (ಜು.11): ರಾಜಸ್ಥಾನದ ಚುರು ಬಳಿ ಬುಧವಾರ ಜಾಗ್ವಾರ್ ಫೈಟರ್ ಜೆಟ್ ಅಪಘಾತದಲ್ಲಿ ಸಾವನ್ನಪ್ಪಿದ ಇಬ್ಬರು ಭಾರತೀಯ ವಾಯುಪಡೆಯ (ಐಎಎಫ್) ಪೈಲಟ್‌ಗಳಲ್ಲಿ ಒಬ್ಬರಾದ ಸ್ಕ್ವಾಡ್ರನ್ ಲೀಡರ್ ಲೋಕೇಂದ್ರ ಸಿಂಗ್ ಸಿಂಧು ಒಂದು ತಿಂಗಳ ಹಿಂದೆ ತಂದೆಯಾಗಿದ್ದರು ಮತ್ತು ದುರಂತ ಸಂಭವಿಸುವ ಮೊದಲು ಹರಿಯಾಣದಲ್ಲಿರುವ ಕುಟುಂಬವು ಸಂಭ್ರಮಾಚರಣೆಯಲ್ಲಿ ತೊಡಗಿತ್ತು ಎನ್ನುವುದು ತಿಳಿದುಬಂದಿದೆ.
ಶುಕ್ರವಾರ ಅವರ ಊರಿನಲ್ಲಿ ನಡೆದ ಅಂತ್ಯಸಂಸ್ಕಾರದ ವೇಳೆ ಲೋಕೇಂದ್ರ ಸಿಂಗ್ ಅವರನ್ನು ಕೊನೆಯ ಬಾರಿಗೆ ನೋಡಲು ಅವರ ಒಂದು ತಿಂಗಳ ಪುತ್ರನನ್ನೂ ತಾಯಿ ಎತ್ತಿಕೊಂಡು ಬಂದಿದ್ದರು. ಈ ವೇಳೆ ಲೋಕೇಂದ್ರ ಸಿಂಗ್ ಅವರ ತಂದೆ ಮೊಮ್ಮಗನನ್ನು ಎತ್ತಿ ಹಿಡಿದು ತಂದೆಯ ಶವ ಪೆಟ್ಟಿಗೆಯನ್ನು ಮುಟ್ಟಿಸಿದಾಗ ಅಲ್ಲಿ ಭಾವುಕ ಕ್ಷಣ ನಿರ್ಮಾಣವಾಯಿತು.
ಹರಿಯಾಣದ ರೋಹ್ಟಕ್‌ನ ಖೇರಿ ಸಾಧ್ ಗ್ರಾಮದ ಲೋಕೇಂದ್ರ ಸಿಂಗ್ ಸಿಂಧು ಮಂಗಳವಾರ ಸಂಜೆ ತಮ್ಮ ಕುಟುಂಬದೊಂದಿಗೆ ವೀಡಿಯೊ ಕರೆಯ ಮೂಲಕ ಮಾತನಾಡಿದರು ಮತ್ತು ಘಟನೆ ನಡೆಯುವ ಕೆಲವೇ ಗಂಟೆಗಳ ಮೊದಲು, ಅವರು ತಮ್ಮ ಕುಟುಂಬದೊಂದಿಗೆ ಸಂದೇಶಗಳನ್ನು ವಿನಿಮಯ ಮಾಡಿಕೊಂಡು ಸಾಮಾನ್ಯ ಯೋಗಕ್ಷೇಮದ ಬಗ್ಗೆ ವಿಚಾರಿಸಿದರು.
ಗುರುವಾರ ರೋಹ್ಟಕ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಧು ಅವರ ಕುಟುಂಬ ಸದಸ್ಯರು, ಜೂನ್ 10 ರಂದು ನಿಖರವಾಗಿ ಒಂದು ತಿಂಗಳ ಹಿಂದೆ ಜನಿಸಿದ ಪೈಲಟ್‌ನ ಮಗನ ಜನನವನ್ನು ಕುಟುಂಬವು ಆಚರಿಸುತ್ತಿತ್ತು. ಆದರೆ, ಆತನ ಅಪ್ಪನ ಅದೃಷ್ಟ ಹೀಗಾಗುತ್ತದೆ ಅನ್ನೋದು ಯಾರಿಗೂ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.
ಬುಧವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ ಮತ್ತೊಬ್ಬ ಐಎಎಫ್ ಪೈಲಟ್ ಫ್ಲೈಟ್ ಲೆಫ್ಟಿನೆಂಟ್ ರಿಷಿರಾಜ್ ಸಿಂಗ್ (23) ಆಗಿದ್ದಾರೆ. ಘಟನೆಯ ನಂತರ, ಅಪಘಾತದ ಕಾರಣವನ್ನು ಕಂಡುಹಿಡಿಯಲು ತನಿಖಾ ನ್ಯಾಯಾಲಯವನ್ನು ರಚಿಸಲಾಗಿದೆ ಎಂದು ಐಎಎಫ್ ಹೇಳಿದೆ.
ಜೂನ್ 30 ರಂದು ಸಿಂಧು ಅವರ ಮಗುವಿನ ಜನನಕ್ಕೆ ಸಂಬಂಧಿಸಿದಂತೆ ಅವರ ಕುಟುಂಬವು ಒಂದು ಕಾರ್ಯಕ್ರಮವನ್ನು ಆಯೋಜಿಸಿತ್ತು, ಆ ಸಮಾರಂಭದಲ್ಲಿ ಅವರು ಭಾಗವಹಿಸಿದ್ದರು. ಮರುದಿನ ಅವರು ಮತ್ತೆ ಕರ್ತವ್ಯಕ್ಕೆ ಸೇರಿದರು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.
