ಕಾಶ್ಮೀರದ ದಾಲ್ ಸರೋವರದಲ್ಲಿ ಅಗ್ನಿ ದುರಂತ, ಹೌಸ್ ಬೋಟ್ ಹೊತ್ತಿ ಉರಿದು 3 ಪ್ರವಾಸಿಗರು ಸಾವು!
ಭಯೋತ್ಪಾದನೆ ಕರಿನೆರಳು ನಿಧಾನವಾಗಿ ದೂರವಾಗಿ, ಪ್ರವಾಸೋದ್ಯಮಕ್ಕೆ ತೆರೆದುಕೊಳ್ಳುತ್ತಿದ್ದ ಕಾಶ್ಮೀರದಲ್ಲೀಗ ಅಗ್ನಿ ಅವಘಡ ಸಂಭವಿಸಿದೆ. ಜನಪ್ರಿಯ ಪ್ರವಾಸಿ ತಾಣವಾದ ದಾಲ್ ಸರೋವರದಲ್ಲಿ ಬೆಂಕಿ ದುರಂತ ಸಂಭವಿಸಿ ಹಲವು ಹೌಸ್ ಬೋಟ್ ಹೊತ್ತಿ ಉರಿದಿದೆ. ಈ ದುರ್ಘಟನೆಯಲ್ಲಿ ಮೂವರು ಪ್ರವಾಸಿಗರು ಮೃತಪಟ್ಟಿದ್ದಾರೆ. ಬರೋಬ್ಬರಿ 40 ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಸಂಭವಿಸಿದೆ.
ಶ್ರೀನಗರ(ನ.11) ಜಮ್ಮು ಮತ್ತು ಕಾಶ್ಮೀರದಲ್ಲಿ ಮಹತ್ತರ ಬದಲಾವಣೆಯಿಂದ ಪ್ರವಾಸೋದ್ಯಮ ತ್ವರಿತಗತಿಯಲ್ಲಿ ಅಭಿವೃದ್ಧಿ ಕಾಣುತ್ತಿದೆ. ಭಯೋತ್ಪಾದಕತೆ, ಕಲ್ಲು ತೂರಾಟ, ಪ್ರತಿಭಟನೆ, ಪಾಕ್ ಪರ ಘೋಷಣೆಗಳು ಇದೀಗ ಬಂದ್ ಆಗಿದೆ. ಹೀಗಾಗಿ ಅತ್ಯಂತ ಸುಂದರ ತಾಣವಾಗಿರುವ ಕಾಶ್ಮೀರದಲ್ಲಿ ಇದೀಗ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ನಡುವೆ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣ ದಾಲ್ ಸರೋವದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ದಾಲ್ ಸರೋವರದ ಹೌಸ್ ಬೋಟ್‌ಗಳು ಬೆಂಕಿಗೆ ಆಹುತಿಯಾಗಿದೆ. ಪರಿಣಾಮ ಮೂವರು ಪ್ರವಾಸಿಗರು ಮೃತಪಟ್ಟಿದ್ದಾರೆ. ಇತ್ತ ಅಂದಾಜು 40 ಕೋಟಿ ರೂಪಾಯಿಗೂ ಅಧಿಕ ಮೊತ್ತದ ನಷ್ಟ ಸಂಭವಿಸಿದೆ.
ಇಂದು ಬೆಳಗ್ಗೆ ದಾಲ್ ಸರೋವರದ ಘಾಟ್ ನಂಬರ್ 9ರ ಸಮೀಪದಲ್ಲಿ ಬೆಂಕಿ ದುರಂತ ಸಂಭವಿಸಿದೆ. ಈ ದುರಂತಕ್ಕೆ ಹಲವು ಹೌಸ್ ಬೋಟ್‌ಗಳು ಸುಟ್ಟು ಭಸ್ಮವಾಗಿದೆ. ಇತರ ಬೋಟ್ ಸಿಬ್ಬಂದಿಗಳು, ಅಗ್ನಿಶಾಮಕ ದಳ ಬೆಂಕಿ ಆರಿಸಲು ಸತತ ಪ್ರಯತ್ನ ನಡೆಸಿದೆ. ಮಹಾ ಅಗ್ನಿ ದುರಂತದ ಕಾರಣ ಬೋಟ್‌ನಲ್ಲಿದ್ದ ಮೂವರು ಪ್ರವಾಸಿಗರು ಸುಟ್ಟು ಕರಕಲಾಗಿದ್ದಾರೆ. ಸಫೀನಾ ಅನ್ನೋ ಹೆಸರಿನ ಬೋಟ್‌ನಲ್ಲಿ ಮೂವರು ಬಾಂಗ್ಲಾದೇಶಿ ಪ್ರವಾಸಿಗರು ತಂಗಿದ್ದರು. ಈ ಬೋಟ್‌ನಲ್ಲಿ ದುರಂತ ಸಂಭವಿಸಿದೆ.
ಮೂರು ಮನೆಗಳಿಗೆ ಬೆಂಕಿ; ಪ್ರಾಣ ಲೆಕ್ಕಿಸದೇ ಇಬ್ಬರ ಜೀವ ಉಳಿಸಿದ ಮಹಿಳೆಯರು!
ಒಂದು ಹೌಸ್‌ಬೋಟ್‌ನಲ್ಲಿ ಬೆಂಕಿ ದುರಂತ ಸಂಭವಿಸಿದೆ. ಕ್ಷಣಾರ್ಧದಲ್ಲೇ ಪಕ್ಕದಲ್ಲಿದ್ದ ಹಲವು ಹೌಸ್‌ಬೋಟ್‌ಗಳಿಗೆ ಬೆಂಕಿಯ ಕೆನ್ನಾಲಿಗೆ ಹರಡಿಕೊಂಡಿದೆ. ನೋಡ ನೋಡುತ್ತಿದ್ದಂತೆ ಹಲವು ಬೋಟ್‌ಗಳು ಸಂಪೂರ್ಣ ಹೊತ್ತಿ ಉರಿದಿದೆ. ಸರೋವರದ ನೀರಿನ ಮೇಲಿದ್ದ ಬೋಟ್‌ಗಳು ಸಂಪೂರ್ಣ ಹೊತ್ತಿ ಉರಿದು ಭಸ್ಮವಾಗಿದೆ. ಕನಿಷ್ಠ 5 ಹೌಸ್‌ಬೋಟ್ ಸಂಪೂರ್ಣ ಹೊತ್ತಿ ಉರಿದಿದೆ. ಇನ್ನು ಹಲವು ಬೋಟ್‌ಗಳು ಬಾಗಶಹಃ ಸುಟ್ಟಿದೆ.
ಮೂವರು ಪ್ರವಾಸಿಗರು ಬಾಂಗ್ಲಾದೇಶದ ಮೂಲದವರು ಎಂದು ಪೊಲೀಸರು ಹೇಳಿದ್ದಾರೆ. ಇವರ ಗುರುತು ಪತ್ತೆ ಕಾರ್ಯಗಳು ನಡೆಯುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮಹಾ ದುರಂತಕ್ಕೆ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗರ್ವನರ್ ಮನೋಜ್ ಕೆ ಸಿನ್ಹ ಆಘಾತ ವ್ಯಕ್ತಪಡಿಸಿದ್ದಾರೆ.
ಕಾಶ್ಮೀರದಲ್ಲಿನ ಚಳಿಗಾಲ ಅತೀ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಾರೆ. ಇಂತಹ ವೇಳೆ ದುರ್ಘಟನೆ ನಡೆದಿರುವುದು ದುರಂತ. ಇದರ ಕಾರಣಗಳನ್ನು ಪತ್ತೆ ಹಚ್ಚಲಾಗುತ್ತದೆ. ಬೋಟ್ ಮಾಲೀಕರು, ಸಿಬ್ಬಂದಿಗಳಿಗೆ ಪರಿಹಾರ ನೀಡಲಾಗುತ್ತದೆ ಎಂದು ಮನೋಜ್ ಕೆ ಸಿನ್ಹ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ: ಗಂಗಮ್ಮನಗುಡಿ ಸ್ಪಾಂಜ್ ಫ್ಯಾಕ್ಟರಿಗೆ ಬೆಂಕಿ