ಭಾರತದ ಟಾಪ್ ಆಹಾರ ಉತ್ಪನ್ನ ಬ್ರ್ಯಾಂಡ್ ಯಾವುದು? ಈ ಪ್ರಶ್ನೆಗೆ ಸರ್ವೇ ಉತ್ತರ ನೀಡಿದೆ. ವಿಶೇಷ ಅಂದರೆ ಟಾಪ್ ಫುಡ್ ಬ್ರ್ಯಾಂಡ್ ಪಟ್ಟಿಯಲ್ಲಿ ಕರ್ನಾಟಕದ ನಂದಿನಿ 4ನೇ ಸ್ಥಾನ ಪಡೆದುಕೊಂಡಿದೆ. ಹಾಗಾದರೆ ಟಾಪ್ 5 ಪಟ್ಟಿಯಲ್ಲಿ ಯಾರಿದ್ದಾರೆ.
ಬೆಂಗಳೂರು (ಜೂ.30) ಭಾರತದಲ್ಲಿ ಆಹಾರ ಉತ್ಪನ್ನಗಳ ಪೈಕಿ ಸಾವಿರಾರು ಬ್ರ್ಯಾಂಡ್‌ಗಳಿವೆ. ಪ್ರತಿ ರಾಜ್ಯದಲ್ಲಿ ಆಯಾಯಾ ಬ್ರ್ಯಾಂಡ್ ಜನಪ್ರಿಯವಾಗಿದೆ. ವಿದೇಶಿ ಉತ್ಪನ್ನಗಳ ನಡುವೆಯೂ ಭಾರತೀಯ ಬ್ರ್ಯಾಂಡ್ ಜನಪ್ರಿಯತೆ, ಗುಣಮಟ್ಟದಲ್ಲೂ ಟಾಪ್ ಕ್ಲಾಸ್ ಎನಿಸಿಕೊಂಡಿದೆ. ಇದೀಗ ಯುಕೆ ಮೂಲದ ಬ್ರ್ಯಾಂಡ್ ಫಿನಾನ್ಸ್ ಕನ್ಸಲ್ಟೆನ್ಸಿ ಭಾರತದ ಟಾಪ್ ಫುಡ್ ಬ್ರ್ಯಾಂಡ್ ಯಾವುದು ಎಂದು ಸಮೀಕ್ಷೆ ನಡೆಸಿದೆ. ಕರ್ನಾಟಕದ ಹೆಮ್ಮೆಯ ಹಾಲು ಹಾಲಿನ ಉತ್ಪನ್ನದ ಬ್ರ್ಯಾಂಡ್ ನಂದಿನ 4ನೇ ಸ್ಥಾನ ಪಡೆದುಕೊಂಡಿದೆ. ಟಾಪ್ 5 ಫುಡ್ ಉತ್ಪನ್ನಗಳ ಪಟ್ಟಿಯಲ್ಲಿ ನಂಬರ್ 1 ಸ್ಥಾನ ಯಾರಿಗೆ ಅನ್ನೋ ಕುತೂಹಲಕ್ಕೂ ಉತ್ತರ ಸಿಕ್ಕಿದೆ.
ಭಾರತದ ಫುಡ್ ಬ್ರ್ಯಾಂಡ್ ಪಟ್ಟಿಯಲ್ಲಿ ನಂ.1 ಯಾರು?
ಬ್ರ್ಯಾಂಡ್ ಫಿನಾನ್ಸ್ ನಡೆಸಿದ ಸರ್ವೆಯಲ್ಲಿ ಭಾರತದ ಟಾಪ್ ಫುಡ್ ಬ್ರ್ಯಾಂಡ್ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಅಮೂಲ್ ಡೈರಿ ಪಡೆದುಕೊಂಡಿದೆ. ಬರೋಬ್ಬರಿ 4.1 ಬಿಲಿಯನ್ ಅಮೆರಿಕನ್ ಡಾಲರ್ ಬ್ರ್ಯಾಂಡ್ ವ್ಯಾಲ್ಯೂನೊಂದಿಗೆ ಅಮೂಲ್ ಮೊದಲ ಸ್ಥಾನ ಪಡೆದುಕೊಂಡಿದೆ. ಕರ್ನಾಟಕದಲ್ಲಿ ಅಮೂಲ್ ಹಾಗೂ ನಂದಿನ ನಡುವೆ ತಿಕ್ಕಾಟ ನಡೆಯತ್ತಿದ್ದರೂ ದೇಶಾದ್ಯಂತ ಅಮೂಲ್ ಬ್ರ್ಯಾಂಡ್ ನಂ.1 ಎನಿಸಿಕೊಂಡಿದೆ.
ಭಾರತದ ಟಾಪ್ 5 ಫುಡ್ ಬ್ರ್ಯಾಂಡ್ ಪಟ್ಟಿ
1 ) ಅಮೂಲ್
2 ) ಮದರ್ ಡೈರಿ
3 ) ಬ್ರಿಟಾನಿಯಾ
4 ) ನಂದಿನಿ
5 ) ಡಾಬುರ್
ಗುಜರಾತ್ ಮೂಲಕ ಹಾಲು ಹಾಗೂ ಹಾಲಿನ ಉತ್ಪನ್ನ ಬ್ರ್ಯಾಂಡ್ ಆಗಿರುವ ಅಮೂಲ್ ದೇಶದಲ್ಲೇ ಟಾಪ್ ಫುಡ್ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ. ಇನ್ನು ಕಳೆದ ವರ್ಷ 3ನೇ ಸ್ಥಾನದಲ್ಲಿದ್ದ ದೆಹಲಿ ಮೂಲದ ಮದರ್ ಡೈರಿ 1.15 ಬಿಲಿಯನ್ ಅಮರಿಕನ್ ಡಾಲರ್ ಮಾರುಕಟ್ಟೆ ಮೌಲ್ಯದೊಂದಿಗೆ 2ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ವಾಡಿಯಾ ಗ್ರೂಪ್ ಒಡೆತನದಲ್ಲಿರುವ ಬ್ರಿಟಾನಿಯಾ 3ನೇ ಸ್ಥಾನದಲ್ಲಿದ್ದರೆ, ಕರ್ನಾಟಕದ ನಂದಿನಿ ನಾಲ್ಕು ಹಾಗೂ ಬರ್ಮನ್ ಕುಟುಂಬದ ಡಾಬುರ್ ಉತ್ಪನ್ನ ಭಾರತದ ಟಾಪ್ 5 ಫುಡ್ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ.
ಭಾರತದ ಫುಡ್ ಬ್ರ್ಯಾಂಡ್‌ನಲ್ಲಿ ಅಮೂಲ್ ನಂಬರ್ 1 ಆಗಿದ್ದರೆ, ಭಾರತದ 100 ಟಾಪ್ ಬ್ರ್ಯಾಂಡ್ ಪಟ್ಟಿಯಲ್ಲಿ ಅಮೂಲ್ 17ನೇ ಸ್ಥಾನ ಪಡೆದುಕೊಂಡಿದೆ. 2024ರಲ್ಲಿ 41ನೇ ಭಾರತದ ಟಾಪ್ ಬ್ರ್ಯಾಂಡ್ ಎಂದು ಗುರುತಿಸಿಕೊಂಡಿದ್ದ ಮದರ್ ಡೈರಿ 2025ರಲ್ಲಿ 35ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ನಂದಿನ ಉತ್ತಮ ಮಾರುಕಟ್ಟೆ ಹೊಂದಿದೆ. ಇದರ ನಡುವೆ ಮೆಟ್ರೋ ನಿಲ್ದಾಣಗಳಲ್ಲಿ ಅಮೂಲ್ ಮಳಿಗೆ ತೆರೆಯಲು ಮುಂದಾಗಿದೆ ಅನ್ನೋ ಪ್ರಕ್ರಿಯೆ ಭಾರಿ ಕೋಲಾಹಲ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಬೆಮೂಲ್ ಅಧ್ಯಕ್ಷ ಡಿಕೆ ಸುರೇಶ್ ಇತ್ತೀಚೆಗೆ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ಭೇಟಿಯಾಗಿ ನಂದಿನಿ ಮಳಿಗೆ ಕುರಿತು ಪತ್ರ ನೀಡಿದ್ದರು. ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮಳಿಗೆಗೆ ಅವಕಾಶ ನೀಡುವಂತೆ ಪತ್ರದಲ್ಲಿ ಮನವಿ ಮಾಡಿದ್ದರು. ನಂದಿನಿ ಬ್ರ್ಯಾಂಡ್ ಮತ್ತಷ್ಟು ವಿಸ್ತರಣೆ ಮಾಡಲು ಇದು ನೆರವಾಗಲಿದೆ. ರಾಜ್ಯದಲ್ಲಿರುವ ಹಲವು ವೇದಿಕೆಗಳನ್ನು ಪರಿಮಾಮಕಾರಿಯಾಗಿ ಬಳಸಿಕೊಳ್ಳಬೇಕು. ಮೆಟ್ರೋ ಕೂಡ ಒಂದು ವೇದಿಕೆಯಾಗಿದ್ದು, ಇದಕ್ಕೆ ಅವಕಾಶ ನೀಡಬೇಕು ಎಂದು ಡಿಕೆ ಸುರೇಶ್ ಮನವಿ ಮಾಡಿದ್ದರು. ನಂದಿನಿ ಹಾಗೂ ಅಮೂಲ್ ಕುರಿತು ಕರ್ನಾಟಕದಲ್ಲಿ ಹಲವು ಪ್ರತಿಭಟನೆಗಳು ನಡೆದಿದೆ. ಇತ್ತ ನಂದಿನಿ ಪ್ರಾಡಕ್ಟ್ ದೇಶ ವಿದೇಶಗಳಲ್ಲೂ ತನ್ನ ಉತ್ಪನ್ನಗಳನ್ನು ವಿಸ್ತರಿಸಿದೆ
