Asianet Suvarna News Asianet Suvarna News

ಕರ್ನಾಟಕ ಶೀಘ್ರ ದೇಶದ ಕೊರೋನಾ ಹಾಟ್‌ಸ್ಪಾಟ್‌: ರಾಜ್ಯಕ್ಕೆ ಹೊಸ ಆತಂಕ!

ಕರ್ನಾಟಕ ಶೀಘ್ರ ದೇಶದ ಕೊರೋನಾ ಹಾಟ್‌ಸ್ಪಾಟ್‌!| ನಿತ್ಯ 5000 ಕೇಸ್‌ ದಾಖಲಾಗುತ್ತಿರುವ ರಾಜ್ಯಕ್ಕೆ ಹೊಸ ಆತಂಕ| ಹೊಸ ಕೇಸು, ಸರಾಸರಿ ಸೋಂಕು, ಸರಾಸರಿ ಪರೀಕ್ಷೆ ಆಧರಿಸಿ ವಿಶ್ಲೇಷಣೆ

Karnataka May Become Coronavirus Hotspot Of India
Author
Bangalore, First Published Jul 28, 2020, 8:23 AM IST

ನವದೆಹಲಿ(ಜು.28): ಕಳೆದ ಕೆಲ ದಿನಗಳಿಂದ ಪ್ರತಿನಿತ್ಯ 5000ಕ್ಕೂ ಹೆಚ್ಚು ಹೊಸ ಕೊರೋನಾ ಕೇಸು ದೃಢಪಡುತ್ತಿರುವ ಕರ್ನಾಟಕ, ಶೀಘ್ರವೇ ದೇಶದ ಕೊರೋನಾ ಹಾಟ್‌ಸ್ಪಾಟ್‌ ಆಗುವ ಅಪಾಯ ಎದುರಿಸುತ್ತಿದೆ ಎಂದು ವರದಿಯೊಂದು ಹೇಳಿದೆ. ಕರ್ನಾಟಕದೊಂದಿಗೆ ನೆರೆಯ ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಮತ್ತು ಬಿಹಾರ ಕೂಡ ಇಂಥದ್ದೇ ಭೀತಿಯಲ್ಲಿವೆ ಎಂದು ವರದಿ ಹೇಳಿದೆ.

ಹೆಚ್ಚಿನ ಜನಸಂಖ್ಯೆ ಹೊಂದಿರುವ ದೇಶದ 20 ರಾಜ್ಯಗಳಲ್ಲಿ, ದೈನಂದಿನ ಪರೀಕ್ಷೆಯಲ್ಲಿ ಹೆಚ್ಚುತ್ತಿರುವ ಸರಾಸರಿ ಸೋಂಕಿತರ ಸಂಖ್ಯೆ, ದೈನಂದಿನ ಹೊಸ ಕೇಸುಗಳ ಪತ್ತೆ ಮತ್ತು ಪ್ರತಿ 10 ಲಕ್ಷ ಮಂದಿಗೆ ಅತಿ ಕಡಿಮೆ ಪರೀಕ್ಷೆ ಪ್ರಮಾಣ ಪರಿಶೀಲಿಸಿ ರಾಷ್ಟ್ರೀಯ ಆಂಗ್ಲದೈನಿಕವೊಂದು ಹೊಸ ಸಂಭವನೀಯ ಹಾಟ್‌ಸ್ಪಾಟ್‌ಗಳನ್ನು ಅಂದಾಜಿಸಿದೆ.

ಹೆಚ್ಚಿನ ಹಣ ವಸೂಲಿ: ಆಸ್ಪತ್ರೆಗಳಿಗೆ ಅಲೋಕ್‌ ಖಡಕ್‌ ಎಚ್ಚರಿಕೆ!

ಕಳೆದ 4 ತಿಂಗಳಿನಿಂದಲೂ ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿ ಟಾಪ್‌ 3 ಸ್ಥಾನದಲ್ಲಿದ್ದ ಮಹಾರಾಷ್ಟ್ರ, ದೆಹಲಿ ಮತ್ತು ತಮಿಳುನಾಡಿನಲ್ಲಿ ಕೂಡ ಈ ಮೇಲ್ಕಂಡ ಅಂಶಗಳು ಸಮಾನವಾಗಿದ್ದವು ಎಂಬುದು ಗಮನಾರ್ಹ. ಆದರೆ ಕಳೆದ 1 ತಿಂಗಳಿನಿಂದ ಹಲವು ರಾಜ್ಯಗಳು ಮೇಲ್ಕಂಡ 3 ಅಂಶಗಳ ಪೈಕಿ ಸೋಂಕು ಪರೀಕ್ಷೆ ಪ್ರಮಾಣದಲ್ಲಿ ಅತ್ಯಂತ ಕಳಪೆ ಸಾಧನೆ ಮಾಡುತ್ತಾ ಸಾಗಿವೆ. ಅವುಗಳೆಂದರೆ ಆಂಧ್ರ, ಕರ್ನಾಟಕ, ಬಂಗಾಳ, ಬಿಹಾರ, ಕೇರಳ, ಜಾರ್ಖಂಡ್‌, ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಒಡಿಶಾ. ಈ ಪೈಕಿ ಆಂಧ್ರ, ಕರ್ನಾಟಕ, ಬಂಗಾಳ ಮತ್ತು ಬಿಹಾರ ಅತ್ಯಂತ ಗಂಭೀರ ಅಂಕಿ- ಸಂಖ್ಯೆಗಳ ಮೂಲಕ ಹೊಸ ಕೊರೋನಾ ಹಾಟ್‌ಸ್ಪಾಟ್‌ ಆಗಿ ಹೊರಹೊಮ್ಮುವ ಸುಳಿವುಗಳನ್ನು ನೀಡಿವೆ ಎಂದು ಪತ್ರಿಕೆ ತಿಳಿಸಿದೆ.

11.5 ದಿನಕ್ಕೆ ಕರ್ನಾಟಕದಲ್ಲಿ ಕೊರೋನಾ ಡಬಲ್‌

ಕೊರೋನಾ ದ್ವಿಗುಣ ವೇಗದಲ್ಲಿ ಆಂಧ್ರಪ್ರದೇಶವು ದೇಶದಲ್ಲೇ ಕಳಪೆ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಕೇರಳ ಮತ್ತು ಕರ್ನಾಟಕ ರಾಜ್ಯಗಳಿವೆ. ಒಂದೇ ತಿಂಗಳಲ್ಲಿ ಆಂಧ್ರದಲ್ಲಿ ಕೇಸು ದ್ವಿಗುಣ ಪ್ರಮಾಣವು 13.2 ದಿನದಿಂದ 7 ದಿನಕ್ಕೆ ಇಳಿದಿದೆ. ಇನ್ನು ಕೇರಳದ ಪ್ರಮಾಣ 28ರಿಂದ 11ದಿನಕ್ಕೆ ಮತ್ತು ಕರ್ನಾಟಕದ ಪ್ರಮಾಣ 17ರಿಂದ 11.5 ದಿನಕ್ಕೆ ಇಳಿದಿದೆ. ಇನ್ನು ಜಾರ್ಖಂಡ್‌ನಲ್ಲಿ 30.9 ದಿನದಿಂದ 12.9 ದಿನಕ್ಕೆ, ಬಿಹಾರದಲ್ಲಿ 27.9 ದಿನದಿಂದ 12.9 ದಿನಕ್ಕೆ ಇಳಿದಿದೆ.

ಐಜಿಪಿ ರೂಪಾ ಖಡಕ್‌ ವಾರ್ನಿಂಗ್‌ ಬೆಚ್ಚಿದ ಖಾಸಗಿ ಆಸ್ಪತ್ರೆ: 24 ಲಕ್ಷ ರೂ. ವಾಪಸ್!

ಪಾಸಿಟಿವ್‌ ಪ್ರಮಾಣದಲ್ಲಿ ದೇಶದಲ್ಲೇ ಕರ್ನಾಟಕ ನಂ.2

ಪ್ರತಿ 100 ಮಂದಿಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಿದಾಗ ಸರಾಸರಿ ಎಷ್ಟುಮಂದಿಯಲ್ಲಿ ಸೋಂಕು ದೃಢಪಡುತ್ತದೋ ಅದನ್ನು ಕೊರೋನಾ ಪಾಸಿಟಿವ್‌ ದರ ಎನ್ನಲಾಗುತ್ತಿದೆ. ಇದರಲ್ಲಿ ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದ್ದು, ಶೇ.21 ಮಂದಿಯಲ್ಲಿ ಸೋಂಕು ಕಂಡುಬಂದಿದೆ. ನಂತರದ ಸ್ಥಾನದಲ್ಲಿ ಕರ್ನಾಟಕ ಇದ್ದು, ಶೇ.16.7 ಜನರಲ್ಲಿ ಕೊರೋನಾ ಪತ್ತೆಯಾಗುತ್ತಿದೆ.

ಪರೀಕ್ಷೆ ಪ್ರಮಾಣ:

ಆಂಧ್ರಪ್ರದೇಶದಲ್ಲಿ ಪ್ರತಿ 10 ಲಕ್ಷ ಜನರಿಗೆ 30556, ಕರ್ನಾಟಕದಲ್ಲಿ 17375 ಜನರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದು ರಾಷ್ಟ್ರೀಯ ಸರಾಸರಿಯಾದ 12222ಕ್ಕಿಂತ ಸಾಕಷ್ಟುಹೆಚ್ಚಿದೆ. ಇನ್ನು ಕೇವಲ 3699 ಜನರ ಪರೀಕ್ಷೆ ಮೂಲಕ ಬಿಹಾರ ಅತ್ಯಂತ ಕಳಪೆ ಸಾಧನೆ ಮಾಡಿದೆ. ಉಳಿದಂತೆ ಜಾರ್ಖಂಡ್‌ನಲ್ಲಿ 6775, ಬಂಗಾಳದಲ್ಲಿ 8143 ಜನರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಸೋಂಕು ಏರಿಕೆ ಪ್ರಮಾಣ ಭಾರತ ನಂ.1

ನವದೆಹಲಿ: ಕಳೆದೊಂದು ವಾರದಿಂದ ಭಾರೀ ಪ್ರಮಾಣದಲ್ಲಿ ಸೋಂಕು ಏರಿಕೆಯಾಗುವ ಮೂಲಕ, ಅತಿ ಹೆಚ್ಚು ಸೋಂಕು ಏರಿಕೆ ಪ್ರಮಾಣದಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನಕ್ಕೆ ಏರಿದೆ ಎಂದು ಬ್ಯ್ಲೂಬಂರ್ಗ್‌ ಕೊರೋನಾ ಟ್ರಾಕರ್‌ ವರದಿ ಹೇಳಿದೆ. ಕಳೆದೊಂದು ವಾರದಲ್ಲಿ ಸೋಂಕು ಏರಿಕೆ ಪ್ರಮಾಣ ಶೇ.20 ತಲುಪಿದ್ದೇ ಇದಕ್ಕೆ ಕಾರಣ. ಭಾರತದಲ್ಲಿ ನಿತ್ಯ ಸೋಂಕು ಪತ್ತೆ ಪ್ರಮಾಣ ಏರಿಕೆಯಾಗಿದ್ದು ಕೂಡಾ ಇದಕ್ಕೆ ಕಾರಣವಾಗಿದೆ. ಆದರೆ ಈ ಏರಿಕೆಯ ಹೊರತಾಗಿಯೂ ಒಟ್ಟಾರೆ ಪರೀಕ್ಷೆ ಪ್ರಮಾಣದಲ್ಲಿ ಬ್ರೆಜಿಲ್‌ ಮತ್ತು ಭಾರತ ಅತ್ಯಂತ ಹಿಂದುಳಿದಿವೆ. ಅಮೆರಿಕದಲ್ಲಿ ಪ್ರತಿ 1000 ಜನರಿಗೆ 153 ಜನರಿಗೆ, ರಷ್ಯಾದಲ್ಲಿ 184 ಜನರಿಗೆ ಪರೀಕ್ಷೆ ಮಾಡುತ್ತಿದ್ದರೆ, ಭಾರತದಲ್ಲಿ 11.8 ಮತ್ತು ಬ್ರೆಜಿಲ್‌ನಲ್ಲ 11.93 ಜನರಿಗೆ ಮಾತ್ರ ಪರೀಕ್ಷೆ ನಡೆಸಲಾಗುತ್ತಿದೆ.

ಕರ್ನಾಟಕಕ್ಕೆ ಆತಂಕ ತಂದ ಅಂಶಗಳು

ಕೇಸು ದ್ವಿಗುಣ: 17ರಿಂದ 11.5 ದಿನಕ್ಕೆ ಇಳಿಕೆ

ಸರಾಸರಿ ಸೋಂಕಿತರು: ಶೇ.3.2ರಿಂದ ಶೇ.16.7ಕ್ಕೆ ಏರಿಕೆ

ಪರೀಕ್ಷೆ ಪ್ರಮಾಣ: ಪ್ರತಿ 10 ಲಕ್ಷಕ್ಕೆ 17375

ಇತರೆ ಸಂಭಾವ್ಯ ಹಾಟ್‌ಸ್ಪಾಟ್‌ಗಳು

ಬಿಹಾರ, ಬಂಗಾಳ, ಆಂಧ್ರಪ್ರದೇಶ

Follow Us:
Download App:
  • android
  • ios