ಐಜಿಪಿ ರೂಪಾ ಖಡಕ್‌ ವಾರ್ನಿಂಗ್‌ ಬೆಚ್ಚಿದ ಖಾಸಗಿ ಆಸ್ಪತ್ರೆ: 24 ಲಕ್ಷ ರೂ. ವಾಪಸ್!

ಹೆಚ್ಚುವರಿಯಾಗಿ ಪಡೆದಿದ್ದ .24 ಲಕ್ಷ ವಾಪಸ್‌!| ಐಜಿಪಿ ರೂಪಾ ಖಡಕ್‌ ವಾರ್ನಿಂಗ್‌ ಬೆಚ್ಚಿದ ಖಾಸಗಿ ಆಸ್ಪತ್ರೆ| ಆರ್‌.ಆರ್‌.ನಗರದ ಖಾಸಗಿ ಆಸ್ಪತ್ರೆಯಿಂದ ಕೊರೋನಾ ಸೋಂಕಿತರಿಂದ ಹೆಚ್ಚಿನ ಹಣ ವಸೂಲಿ| ರೂಪಾ, ಹರ್ಷಗುಪ್ತ ತಂಡದ ದಾಳಿ ವೇಳೆ ವಂಚನೆ ಪತ್ತೆ| ಕಠಿಣ ಕ್ರಮದ ಎಚ್ಚರಿಕೆ ಬೆನ್ನಲ್ಲೇ 22 ಮಂದಿಯಿಂದ ಹೆಚ್ಚುವರಿಯಾಗಿ ಸಂಗ್ರಹಿಸಿದ್ದ ಶುಲ್ಕ ವಾಪಸ್‌| ಸಾರ್ವಜನಿಕರಿಂದ ಮೆಚ್ಚುಗೆಯ ಸುರಿಮಳೆ

Private Hospital Returns Additional 24 Lakh Rupees Money after the warning by IGP D Poopa

ಬೆಂಗಳೂರು(ಜು.28): ಕ್ರಿಮಿನಲ್‌ ಕೇಸ್‌ ದಾಖಲಿಸುವುದಾಗಿ ಹಿರಿಯ ಐಎಎಸ್‌ ಅಧಿಕಾರಿ ಹರ್ಷಗುಪ್ತ ಮತ್ತು ಐಜಿಪಿ ಡಿ.ರೂಪಾ ನೇತೃತ್ವದ ತಂಡ ಎಚ್ಚರಿಕೆ ನೀಡಿದ ಬೆನ್ನಲ್ಲೇ ಕೊರೋನಾ ಚಿಕಿತ್ಸೆ ಸಲುವಾಗಿ 22 ಮಂದಿ ಸೋಂಕಿತರಿಂದ ಹೆಚ್ಚುವರಿಯಾಗಿ ಪಡೆದಿದ್ದ .24 ಲಕ್ಷ ಹಣವನ್ನು ರಾಜರಾಜೇಶ್ವರಿ ನಗರ ಸಮೀಪದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದು ಸೋಮವಾರ ಮರಳಿಸಿದೆ.

ಸರ್ಕಾರದ ನಿಗದಿತ ದರಕ್ಕಿಂತ ಹೆಚ್ಚಿನ ಹಣ ಸುಲಿಗೆ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ರೂಪಾ ಅವರು ಎಚ್ಚರಿಕೆ ನೀಡಿದ್ದಾರೆ.

ಮಿಸ್ ದಾವಣೆಗೆರೆ ಆಗಿದ್ರು ಈ ಖಡಕ್ ಐಪಿಎಸ್ ಅಧಿಕಾರಿ!

ನಮ್ಮ ತಂಡಕ್ಕೆ ಮೂರು ಖಾಸಗಿ ಆಸ್ಪತ್ರೆಗಳ ಹೊಣೆಗಾರಿಕೆ ವಹಿಸಿದ್ದಾರೆ. ಸೋಂಕಿತರ ಚಿಕಿತ್ಸೆ ಸಲುವಾಗಿ ಸರ್ಕಾರದ ಸೂಚನೆಗಳು ಆಸ್ಪತ್ರೆಗಳು ಕಡ್ಡಾಯವಾಗಿ ಪಾಲಿಸಬೇಕು. ಪ್ರತಿ ಆಸ್ಪತ್ರೆಗಳ ಮೇಲೆ ನಿಗಾ ವಹಿಸಲಾಗಿದೆ. ಆ ಪೈಕಿ ಒಂದು ಆಸ್ಪತ್ರೆಯಲ್ಲಿ ಸೋಂಕಿತರಿಗೆ ಹಣ ವಸೂಲಿ ಪ್ರಕರಣವು ದಾಖಲೆ ಸಮೇತ ಪತ್ತೆಯಾಗಿದೆ ಎಂದು ರೂಪಾ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ದಾಖಲೆಗಳು ಪತ್ತೆ:

ಹಣ ವಸೂಲಿ ಬಗ್ಗೆ ಆಸ್ಪತ್ರೆ ವಿರುದ್ಧ ಹಲವು ದೂರುಗಳು ಬಂದಿದ್ದವು. ಕೊರೋನಾ ಚಿಕಿತ್ಸೆಗೆ ದಾಖಲಿಸಿಕೊಳ್ಳುವ ಮುನ್ನವೇ .1 ರಿಂದ 2 ಲಕ್ಷ ಹಣವನ್ನು ಮುಂಗಡವಾಗಿ ಅವರು ಪಡೆಯುತ್ತಿದ್ದರು. ಸಂಪೂರ್ಣ ಚಿಕಿತ್ಸೆಗೆ .4-5 ಲಕ್ಷ ವೆಚ್ಚವಾಗಲಿದೆ ಎಂದು ರೋಗಿಗಳಿಗೆ ಆಸ್ಪತ್ರೆ ಸಿಬ್ಬಂದಿ ಹೇಳಿದ್ದರು. ಇದರಿಂದ ಸೋಂಕಿತರು ಸಂಕಷ್ಟಕ್ಕೆ ಸಿಲುಕಿದ್ದರು. ಈ ದುಬಾರಿ ಹಣ ವಸೂಲಿ ಬಗ್ಗೆ ಮಾಹಿತಿ ತಿಳಿದ ಕೂಡಲೇ ಆಸ್ಪತ್ರೆಗೆ ನಮ್ಮ ತಂಡ ತೆರಳಿ ಪರಿಶೀಲಿಸಿದಾಗ ಹಣ ವಸೂಲಿ ಸಂಬಂಧ ದಾಖಲೆಗಳು ಸಿಕ್ಕಿದ್ದವು ಎಂದು ರೂಪಾ ಹೇಳಿದರು.

ಕೂಡಲೇ ಆಸ್ಪತ್ರೆ ಸಿಬ್ಬಂದಿಗೆ ಹೆಚ್ಚುವರಿ ಹಣವನ್ನು ರೋಗಿಗಳಿಗೆ ಮರಳಿಸಬೇಕು. ಅಲ್ಲದೆ ಸೋಂಕಿತರಿಗೆ ಸರ್ಕಾರದ ವೆಚ್ಚದಲ್ಲಿ ಉಚಿತ ಚಿಕಿತ್ಸೆ ನೀಡಬೇಕು. ಇಲ್ಲದೆ ಹೋದರೆ ಕ್ರಿಮಿನಲ್‌ ಕೇಸ್‌ ದಾಖಲಿಸುವುದಾಗಿ ಎಚ್ಚರಿಕೆ ನೀಡಲಾಯಿತು. ಈಗ ಆಸ್ಪತ್ರೆ, ತಾನು ಪಡೆದಿದ್ದ ಹಣವನ್ನು 22 ಸೋಂಕಿತರಿಗೆ ಮರಳಿಸಿದೆ. ಇನ್ನುಳಿದ ನಾಲ್ಕೈದು ಮಂದಿಯ ಬ್ಯಾಂಕ್‌ ದಾಖಲೆಗಳಲ್ಲಿ ವ್ಯತ್ಯಾಸವಾಗಿದೆ. ಆದಷ್ಟುಶೀಘ್ರವೇ ಅವರಿಗೆ ಸಹ ಹಣ ಜಮೆಯಾಗಲಿದೆ ಎಂದು ವಿವರಿಸಿದರು.

ಶಶಿಕಲಾಗೆ ರಾಯಲ್ ಟ್ರೇಟ್'ಮೆಂಟ್; IGP ರೂಪಾ ಖಡಕ್ ತಿರುಗೇಟು

ಕೊರೋನಾ ಚಿಕಿತ್ಸೆ ಹೆಸರಿನಲ್ಲಿ ಹಣ ಸುಲಿಗೆ ಮಾಡದಂತೆ ಮೂರು ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾವಹಿಸಲು ಹಿರಿಯ ಐಎಎಸ್‌ ಹರ್ಷಗುಪ್ತ ಹಾಗೂ ಐಜಿಪಿ ಡಿ.ರೂಪಾ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ.

ಟ್ವೀಟರ್‌ನಲ್ಲಿ ಅಭಿನಂದನೆಗಳ ಸುರಿಮಳೆ

ಕೊರೋನಾ ಸೋಂಕಿತರಿಂದ ಹಣ ಸುಲಿಗೆ ಮಾಡಿದ್ದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ಬಿಸಿ ಮುಟ್ಟಿಸಿದ ಖಡಕ್‌ ಅಧಿಕಾರಿ ಡಿ,ರೂಪಾ ಅವರಿಗೆ ಟ್ವಿಟರ್‌ನಲ್ಲಿ ಅಭಿನಂದನೆಗಳ ಸುರಿಮಳೆಯಾಗಿವೆ. ಖಾಸಗಿ ಆಸ್ಪತ್ರೆ ಸೋಂಕಿತರಿಗೆ ಹಣ ಮರಳಿಸಿರುವ ಬಗ್ಗೆ ರೂಪಾ ಅವರು, ಟ್ವೀಟ್‌ ಮಾಡಿದ್ದರು. ಇದಕ್ಕೆ ನೂರಾರು ಮಂದಿ ಪ್ರತಿಕ್ರಿಯಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನನ್ನ ತಾಯಿಗೆ ಕೊರೋನಾ ಸೋಂಕು ದೃಢಪಟ್ಟಿತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸುವಾಗ .2 ಲಕ್ಷ ಮುಂಗಡವಾಗಿ ಕಟ್ಟಿಸಿಕೊಂಡಿದ್ದರು. ಒಟ್ಟಾರೆ ಚಿಕಿತ್ಸೆಗೆ .2.18 ಲಕ್ಷ ವೆಚ್ಚವಾಗಿದೆ. ಈಗ ಮುಂಗಡವಾಗಿ ಪಡೆದಿದ್ದ ಹಣವು ಆಸ್ಪತ್ರೆಯವರು ಮರಳಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಧನ್ಯವಾದಗಳು.

- ಸೋಂಕಿತ ಮಹಿಳೆ ಪುತ್ರ

ನನಗೆ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗುವ ವೇಳೆ ಮುಂಗಡ ಹಣ ಪಾವತಿಸಲು ತುಂಬಾ ಕಷ್ಟವಾಯಿತು. ಬಳಿಕ ಸರ್ಕಾರದ ವತಿಯಿಂದ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಆಸ್ಪತ್ರೆಗೆ ಆಗಮಿಸಿದ್ದ ಅಧಿಕಾರಿಗಳು ಹೇಳಿದ್ದರು. ಈಗ ನಾನು ಪಾವತಿಸಿದ್ದ ಮುಂಗಡ ಹಣವು ಆಸ್ಪತ್ರೆ ಮರಳಿಸಿದೆ.

-ಸೋಂಕಿತ ವ್ಯಕ್ತಿ

ಕೊರೋನಾ ಚಿಕಿತ್ಸೆಗೆ ಸೋಂಕಿತರಿಂದ ಪಡೆದಿದ್ದ ಮುಂಗಡ ಹಣವನ್ನು ಮರಳಿಸಿ ಆಸ್ಪತ್ರೆ ಉಚಿತ ಚಿಕಿತ್ಸೆ ನೀಡಿದೆ. ಇದರಿಂದ ಜನ ಸಾಮಾನ್ಯರಿಗೆ ಬಹಳ ಉಪಯೋಗವಾಗಿದೆ. ಐಎಎಸ್‌ ಅಧಿಕಾರಿ ಹರ್ಷಗುಪ್ತ, ಬಿಬಿಎಂಪಿ ಎಇಇ ಅಶೋಕ್‌ ಗೌಡ ಒಳಗೊಂಡ ನಮ್ಮ ತಂಡದ ಪರಿಶ್ರಮ ಸಾರ್ಥಕವಾಗಿದೆ. ಸೋಂಕಿತರ ಚಿಕಿತ್ಸೆಗೆ ಸರ್ಕಾರದ ಸೂಚನೆಗಳನ್ನು ಖಾಸಗಿ ಆಸ್ಪತ್ರೆಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ಆಸ್ಪತ್ರೆಗಳ ಮೇಲೆ ನಿಗಾವಹಿಸಲಾಗಿದ್ದು, ಹೆಚ್ಚುವರಿ ಹಣ ವಸೂಲಿ ಮಾಡಿದರೆ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಲಾಗುತ್ತದೆ.

-ಡಿ.ರೂಪಾ, ಐಜಿಪಿ

Latest Videos
Follow Us:
Download App:
  • android
  • ios